Quantcast

ನಮ್ಮನೇಲಿ ಪುಸ್ತಕ ಸಂಗ್ರಹ ಅಂತ ಏನೂ ಇರ್ಲಿಲ್ಲ..

ರಾಧಿಕಾ ಗಂಗಣ್ಣ 

ಪುಸ್ತಕ ಓದುವ ಹವ್ಯಾಸ ಹೇಗೆ ಬೆಳೆಸಿಕೊಂಡಿರಿ ಅಂತ ಸ್ನೇಹಿತೆ ವೀಣಾ fb ಯಲ್ಲಿ ಕೇಳಿದ್ರು. 

ಹಾಗೇ ಹಿಂತಿರುಗಿ ನೋಡಿದಾಗ ಮನಸ್ಸಿಗೆ ಬಂದಿದ್ದು ಇಷ್ಟು

ನಾನು ಕಥೆ ಕೇಳಿದ್ದು, ಆಸಕ್ತಿ ಬೆಳೆಸಿಕೊಂಡಿದ್ದು ಯಾವಾಗ ಅಂತ ಯೋಚನೆ ಮಾಡಿದರೆ, ಬಹುಶಃ ಚೂರು ಪಾರು ಓದಲು ಬರೆಯಲು ಬಂದಾಗ. ನನಗೆ ಜ್ಞಾಪಕ ಇದ್ದ ಹಾಗೆ ಒಂದನೇ ತರಗತಿಯಲ್ಲಿರುವಾಗಲೇ ನನಗೆ ಸ್ಪಷ್ಟವಾಗಿ ಓದಲು, ಬರೆಯಲು ಬರುತ್ತಿತ್ತು. ನಮ್ಮ ತಂದೆ ಸರ್ಕಾರಿ ಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿದ್ರು.

ಕ್ಲಿಕ್: ರವಿ ಕುಲಕರ್ಣಿ

ಕ್ಲಿಕ್: ರವಿ ಕುಲಕರ್ಣಿ

ದಿವಸ ಬೆಳಿಗ್ಗೆ ಆರು ಗಂಟೆ ಹೊತ್ತಿಗೆ ಕನ್ನಡ ಪತ್ರಿಕೆ ’ಕನ್ನಡ ಪ್ರಭ’ ಪತ್ರಿಕೆ ಬರ್ತಾ ಇತ್ತು. ನಮ್ಮ ತಂದೆ ಓದಲು ಕೂರುತ್ತಿದ್ದರು. ಆಮೇಲೆ ನಮ್ಮಣ್ಣ ಪತ್ರಿಕೆ ಓದುತ್ತಿದ್ದರು. ಕೆಲಸದಿಂದ ಬಿಡುವಾದಾಗ ನಮ್ಮಮ್ಮ ಓದುತ್ತಿದ್ದರು. ಅವರನ್ನು ನೋಡುತ್ತಲೇ ಪತ್ರಿಕೆ ಓದುವ ರೂಢಿ ನಮಗೂ ಬಂತು.

ಕನ್ನಡ ಪ್ರಭದಲ್ಲಿ ಆ ಕಾಲದಲ್ಲಿ ಧಾರಾವಾಹಿ ಬರ್ತಿತ್ತು. ಅದನ್ನು ಓದಲು ಆರಂಭಿಸಿದ ಮೇಲೆ ಪತ್ರಿಕೆ ಓದಲು ನಮ್ಮನೇಲಿ ಸ್ಪರ್ಧೆ! ’ಪೇಪರ್’ ಅಂತ ಕೂಗು ಕೇಳಿದ ತಕ್ಷಣ ನಾನು ಓಡಿ ಹೋಗಿ ಪತ್ರಿಕೆಯಲ್ಲಿ ಧಾರಾವಾಹಿ ಬರುವ ಪುಟವನ್ನು ತೆಗೆದುಕೊಂಡು ಮಿಕ್ಕಿದ ಪುಟಗಳನ್ನು ತಂದೆ ಕೈಯಲ್ಲಿ ಕೊಡ್ತಾ ಇದ್ದೆ! ಅದರಲ್ಲಿ ಬಂದ ಒಂದು Sci-Fi ಕಥೆ ಈಗಲೂ ನೆನಪಿದೆ. ಹಳ್ಳಿಯಿಂದ ಹುಡುಗ ಅವನ ಚಿಕ್ಕಪ್ಪ/ದೊಡ್ಡಪ್ಪನ ಮನೆಗೆ ಬಂದಿರ್ತಾನೆ. ಅದರಲ್ಲಿ ಬೇರೆ ದೇಶದಲ್ಲಿದ್ದ ಚಿಕ್ಕಪ್ಪನ ಮನೆಯ ಗಣೇಶ ಹಬ್ಬದ ಪೂಜೆಯನ್ನು ಅವರು ಟಿ.ವಿ ಯಂತಹ ಯಂತ್ರದ ಮುಂದೆ ಕೂತು ನೋಡ್ತಾ ಇರ್ತಾರೆ.

ಅದು ಇಂದಿನ reality! ಲೇಖಕರು ಯಾರು ಅಂತ ನೆನಪಿಲ್ಲ. ದೂರದರ್ಶನ ಇಲ್ಲದ ಆ ಕಾಲದಲ್ಲಿ, ನಮ್ಮ ತಂದೆ, ಶಾಲೆಯಿಂದ ಬಂದ ಮೇಲೆ ಪಕ್ಕದ ಮನೆ ಕಿಣಿ ಅವರ ಮನೆಯ Indian Express ಪತ್ರಿಕೆ ಈಸಿಕೊಂಡು ಓದುತ್ತಿದ್ದರು.

 

ಕಿಣಿ ಅಂಕಲ್ ಅವರ ತಂದೆ, ಸುತ್ತ ಮುತ್ತಲಿನ ಮಕ್ಕಳಿಗೆಲ್ಲ ಬೇತಾಳ, ದೆವ್ವದ ಕಥೆಗಳನ್ನು ಹೇಳ್ತಿದ್ರು! ನಮ್ಮ ಚಿಕ್ಕಪ್ಪ ಒಬ್ರಿದ್ರು. ಅವರು ವಾರಪತ್ರಿಕೆ, ಲಂಕೇಶ್ ಪತ್ರಿಕೆ ತರ್ತಾ ಇದ್ರು. ಅದನ್ನು ಓದುತ್ತಿದ್ದೆ. ನಮ್ಮ ತಾಯಿ ಪ್ರಜಾಮತ ತರಿಸ್ತಿದ್ರು. ಅದ್ರಲ್ಲೇ ತುಳಸೀ ದಳ ಕಥೆ ಓದಿದ್ದು! ಓದೋಕ್ಕೆ ಬಂದ ಮೇಲೆ, ಕಥೆ ಓದುವ ಹುಚ್ಚು ಹಿಡಿದ ಮೇಲೆ ತಡೆಯೋರ್ಯಾರು! ಅಕ್ಕ ಪಕ್ಕದ ಮನೆಯಲ್ಲಿ ಎಲ್ಲೇ ಪುಸ್ತಕ ಕಂಡರೂ ತಂದು ಓದುತ್ತಿದ್ದೆ.

ಶಾಲೆಯಲ್ಲಿ ಓದಲು ಪುಸ್ತಕ ಕೊಡ್ತಾ ಇರ್ಲಿಲ್ಲ. ಆದರೆ ಕಥೆ ಪುಸ್ತಕ ತುಂಬಿದ ಒಂದು ಬೀರು ಶಾಲೆಯಲ್ಲಿತ್ತು. ಹೇಮಾವತಿ ಟೀಚರ್ ಅಂತ ಒಬ್ರು ನನ್ನ ತಂದೆ ಸಹೋದ್ಯೋಗಿ ಅದರ ಇನ್ ಛಾರ್ಜ್. ಅವರು ಆಗೀಗ ನನಗೆ ಅಮರಚಿತ್ರ ಕಥೆ ಪುಸ್ತಕ ಕೊಡ್ತಿದ್ರು. ನಾನು ಮಾರ್ನಿಂಗ್ ಶಾಲೆ ಮುಗಿದ ಮೇಲೆ ಶಾಲೆಯಲ್ಲೇ ಇದ್ದುಕೊಂಡು ಕಥೆ ಪುಸ್ತಕಗಳನ್ನು ಓದ್ಕೊಂಡು ಇರ್ತಿದ್ದೆ. ಆಮೇಲೆ ಬೀರು ಇನ್ ಛಾರ್ಜ್ ಸೀತಾಲಕ್ಷ್ಮಿ ಅಂತ ಇನ್ನೊಬ್ರು ಟೀಚರ್ ಗೆ ವರ್ಗಾವಣೆ ಆಯಿತು. ಅವರು ಎಷ್ಟು ಉದಾರ ಮನಸ್ಸು ಅಂದರೆ ಬೀರುವಿನ ಕೀ ನನಗೇ ಕೊಟ್ಟು ಸಾಯಂಕಾಲ ವಾಪಸ್ ಕೊಡು ಅಂತ ಇದ್ರು! ಅವರು ಬರೀ ಅಮರ ಚಿತ್ರ ಕಥೆ ಮಾತ್ರ ಓದು ಅಂದಿದ್ರೂ ನಾನು ಅಲ್ಲಿದ್ದ ಕೆಲವು ಕಾದಂಬರಿಗಳನ್ನೂ ಕೂಡ ಓದಿದ ನೆನಪಿದೆ.

ಭಾರತ-ಭಾರತಿ ಎಲ್ಲ ಪುಸ್ತಕಗಳನ್ನು ಓದಿದ್ದು ಕೂಡಾ ಶಾಲೆಯ ಪುಸ್ತಕ ಭಂಡಾರದಿಂದಲೇ. ನಮ್ಮ ಪಕ್ಕದ್ಮನೆಯಲ್ಲಿ ಒಬ್ಬರು ಚಂದಮಾಮ, ಬೊಂಬೆಮನೆ ಪುಸ್ತಕಗಳನ್ನು ಬೈಂಡ್ ಮಾಡಿ ಇಟ್ಕೊಂಡಿದ್ರು. ಶಾಲೆಗೆ ರಜಾ ಬಂದಾಗ ಅವನ್ನು ಓದಲು ಕೊಡ್ತಾ ಇದ್ರು. ನಮ್ಮನೇಲಿ ನಮ್ಮ ತಂದೆ ಯಾವಾಗ್ಲೋ ಸಾಹಿತ್ಯ ಸಮ್ಮೇಳನದಲ್ಲಿ ತಂದಿದ್ದ ಒಂದು ಪುಸ್ತಕ ಇತ್ತು. “ಬಕುಳ ಹೂ ದಂಡೆ” ಅಂತ. ಅದನ್ನು ಮತ್ತೆ ಮತ್ತೆ ಓದುತ್ತಾ ಇದ್ದೆ. “ತಟ್ಟು ಚಪ್ಪಾಳೆ ಪುಟ್ಟ ಮಗು” ಪುಸ್ತಕದ ಕವನಗಳನ್ನು ನನ್ನದೇ ಶೈಲಿಯಲ್ಲಿ ಯಾವಾಗ್ಲೂ ಓದ್ಕೋತಾ ಇದ್ದೆ. ಇನ್ನೊಂದು, ’ಬಾಲ ರಾಮಾಯಣ’ ಅಂತ ಒಂದು ಪುಸ್ತಕ ಇತ್ತು. ನಮ್ಮಮ್ಮ ಆಚೆ ಹೋಗಿ ಆಟ ಆಡೋ  ಹಾಗಿಲ್ಲ ಅಂತ ಮನೆಯಲ್ಲೇ ಕೂಡಿ ಹಾಕಿದರೆ, ಆ ಪುಸ್ತಕವನ್ನು ತಿರುವಾಕಿ, ಮಗುಚಾಕಿ ಓದುತ್ತಾ ಇದ್ದೆ. ಆಗಿನ್ನೂ ಪ್ರೈಮರಿ ಶಾಲೆಯಲ್ಲಿದ್ದೆ.  ಅದನ್ನು ಓದಿದ್ದಾಗಲೆಲ್ಲ,  ರಾಮ, ಸೀತೆಯನ್ನು ಕಾಡಿಗೆ ಕಳಿಸಬಾರದಿತ್ತು ಅನಿಸ್ತಿತ್ತು!.

’ಬಹಾದ್ದೂರ್ ಗಂಡ’ ಅಂತ ಒಂದು ನಾಟಕದ ಪುಸ್ತಕ ಇತ್ತು. ಸ್ವಲ್ಪ ಧೈರ್ಯವಂತ, ಹೆಣ್ಣು, ಗಂಡಿಗಿಂತ ಕಡಿಮೆಯಿಲ್ಲ ಅನ್ನುವ ಭಾವನೆಯುಳ್ಳ ಹೆಣ್ಣು ಮಗಳ ಕಥೆ.  ಮದುವೆಯಾದಮೇಲೆ ಅವಳಿಗೆ ’ತಗ್ಗಿ ಬಗ್ಗಿ ನಡೆಯುವ ಬುದ್ಧಿ’ ಕಲಿಸುವ ಬಗ್ಗೆ ಆ ನಾಟಕ. ಅದನ್ನು ಓದಿದಾಗಲೆಲ್ಲ ನನಗೇನೋ ಕಸಿವಿಸಿ. ಆ ಹುಡುಗಿಯ ಧೈರ್ಯ, ಸ್ಥೈರ್ಯ ಯಾಕೆ ಬೇರೆಯವರಿಗೆ ಒಪ್ಪಿಗೆಯಾಗ್ತಿಲ್ಲ, ಅವಳನ್ನು ಬದಲು ಮಾಡಲು ಯಾಕೆ ಪ್ರಯತ್ನಿಸ್ತಾರೆ ಅಂತ. ಇದು ಬಿಟ್ರೆ ನಮ್ಮನೇಲಿ ಪುಸ್ತಕ ಸಂಗ್ರಹ ಅಂತ ಏನೂ ಇರ್ಲಿಲ್ಲ.

ನಮ್ಮ ದೊಡ್ಡಮ್ಮನ ಮಕ್ಕಳು CK Circulating Library ಮೆಂಬರ್ ಆಗಿದ್ರು. ಅವರ ಮನೆಗೆ ಹೋದರೆ ಆಗಿನ ಕಾಲದ ಖ್ಯಾತ ಕಾದಂಬರಿಕಾರರ ಪುಸ್ತಕಗಳು ಎಲ್ಲ ಸಿಕ್ತಿದ್ವು. ಅವರ ಮನೆಯಲ್ಲಿ ಸದಾರಮೆ, ಭಟ್ಟಿ ವಿಕ್ರಮಾದಿತ್ಯ ಪುಸ್ತಕಗಳು ಇದ್ವು. ಅದನ್ನು ಓದಲು ಕೊಡ್ತಾ ಇರ್ಲಿಲ್ಲ. ಆದರೂ ಕದ್ದು ಓದಿದ್ದೇನೆ   ದೊಡ್ಡಮ್ಮನ ಮಗನಿಗೆ ಪತ್ತೆದಾರಿ ಕಾದಂಬರಿ ಓದಲು ಇಷ್ಟ. ನರಸಿಂಹಯ್ಯನವರ ಎಲ್ಲ ಕಾದಂಬರಿಗಳನ್ನು middle school ನಲ್ಲಿರೋವಾಗ್ಲೇ ಓದಿ ಮುಗಿಸಿದ್ದೆ.

ಏಳನೇ ತರಗತಿಯಲ್ಲಿದ್ದಾಗ ಸಹಪಾಠಿಯೊಬ್ಬ ’ಅಜೇಯ’ ಪುಸ್ತಕ ಕೊಟ್ಟಿದ್ದ. ಅದೇ ಬಹುಶಃ ನಾನು ಓದಿದ ಮೊದಲ ದೊಡ್ಡ ಪುಸ್ತಕ. ಸುಧಾ, ತರಂಗಗಳಲ್ಲಿ ಬರುತ್ತಿದ್ದ ನೇಮಿಚಂದ್ರ ಅವರ ಕಥೆಗಳೂ ನನಗೆ ಅಚ್ಚು ಮೆಚ್ಚು. ಹೈಸ್ಕೂಲಿನಲ್ಲಿ ಪಾಠವಾಗಿದ್ದ ಕುವೆಂಪು ಅವರ ’ಕಥೆಗಾರ ಮಂಜಣ್ಣ’ ಇನ್ನೂ ನೆನಪಿನಲ್ಲಿದೆ. ನನ್ನ ಅಕ್ಕ ಕಾಲೇಜಿನ ಲೈಬ್ರರಿಯಿಂದ ಕುವೆಂಪು, ಕಾರಂತ, ಅನಂತಮೂರ್ತಿ ಅವರ ಕಾದಂಬರಿಯನ್ನು ತರ್ತಾ ಇದ್ರು. ಅದನ್ನೂ ಓದುತ್ತಿದ್ದೆ. ಪಿ.ಯು.ಸಿ ಗೆ ಬಂದಾಗ ಮನೆ ಹತ್ತಿರದ ಸರ್ಕಾರಿ ಗ್ರಂಥಾಲಯದ ಮೆಂಬರ್ ಆದಮೇಲೆ ಕಾರಂತರ ಕಾದಂಬರಿಗಳು ಕೆಲವು ಓದಿದೆ. ಕರ್ವಾಲೋ ಪುಸ್ತಕ ಕಾಲೇಜಿನಲ್ಲಿ ಪಠ್ಯವಾಗಿತ್ತು. ಅದರಿಂದಾಗಿ ತೇಜಸ್ವಿಯವರ ಪುಸ್ತಕಗಳ ಮೇಲೆ ಆಸಕ್ತಿ ಮೂಡಿತು.

ಡಿಗ್ರಿ ಓದುವಾಗ ರಘುನಾಥ್ ಅಂತ ಒಬ್ರು ಕನ್ನಡ ಲೆಕ್ಚರರ್ ಇದ್ರು. ಅವರು ಕನ್ನಡ ಪಾಠವನ್ನು ಎಷ್ಟು ರಸವತ್ತಾಗಿ ಮಾಡ್ತಾ ಇದ್ರು ಅಂದ್ರೆ ನಮಗೆಲ್ಲ ಕನ್ನಡದಲ್ಲಿರುವ ಕೃತಿಗಳನ್ನೆಲ್ಲ ಓದದೆ ಇದ್ರೆ ಜೀವನ ನಷ್ಟ ಅನ್ನುವ ಭಾವನೆ ಬರೋ ಹಾಗೆ  ಮಾಡ್ತಾ ಇದ್ರು. ದೇವನೂರು ಅವರ ’ಅಮಾಸ’ ಪಠ್ಯವಾಗಿತ್ತು. ಕೆಲಸಕ್ಕೆ ಸೇರಿದ ಮೇಲೆ ಸ್ನೇಹಿತರೊಬ್ಬರು ’ಶಿಕಾರಿ’ ಪುಸ್ತಕ ಕೊಟ್ಟಿದ್ರು. ಅದನ್ನು ಓದಿದ ಮೇಲೆ ಕಾದಂಬರಿಗಳನ್ನು ಓದಲು ಮತ್ತಷ್ಟು ಆಸಕ್ತಿ ಮೂಡಿತು. ಪುಸ್ತಕ ಪ್ರದರ್ಶನಗಳಿಗೆ ತಪ್ಪದೇ ಹೋಗುತ್ತಿದ್ದೆ. ಬಂಡಿ ಪುಸ್ತಕಗಳನ್ನು ತರುತ್ತಿದ್ದೆ. ಅದನ್ನು ಮನೆಮಂದಿಯೆಲ್ಲ ಪೈಪೋಟಿಯ ಮೇಲೆ ಓದುತ್ತಿದ್ದೆವು. ಈಗಲೂ ಅದು ಮುಂದುವರೆದಿದೆ.

ಅನನ್ಯಳಿಗೂ ಓದುವ ರುಚಿ ಹತ್ತಿದೆ. ಕೆಂಡ ಸಂಪಿಗೆ, ಅವಧಿ, ಚುಕ್ಕುಬುಕ್ಕು, ನರೇಂದ್ರ ಪೈ ಅವರ ಜಾಲ ತಾಣ  https://narendrapai.blogspot.in/ ಹೊಸ-ಹಳೆಯ ಪುಸ್ತಕಗಳನ್ನು ಪರಿಚಯಿಸುವ ಮೂಲಕ ಓದುವ ಹಸಿವನ್ನು ಹೆಚ್ಚಿಸಿವೆ. ಸ್ನೇಹಿತ ಅನೂಪ್ ಆರಂಬಿಸಿರುವ whatsapp ಆಕೃತಿ ಪುಸ್ತಕದ ಗುಂಪಿನಲ್ಲಿ ಗುರುಪ್ರಸಾದ್ ಅನೇಕ ಪುಸ್ತಕಗಳನ್ನು ಪರಿಚಯಿಸುತ್ತಾರೆ. ಕಳೆದೊಂದು ವರ್ಷದಿಂದ,  ಕೆಲವು ಸಾಹಿತ್ಯಾಸಕ್ತ ಸ್ನೇಹಿತರು ಕೂಡಿ ಆರಂಭಿಸಿರುವ ’ಅಭ್ಯಾಸ’ ಗುಂಪಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ. FB ಮೂಲಕ ಅನೇಕ ಸಾಹಿತ್ಯಾಸಕ್ತ ಸ್ನೇಹಿತರು ಓದುವ  ಪುಸ್ತಕಗಳ ಪರಿಚಯವಾಗುತ್ತದೆ. ಹೀಗೇ ನಿರಂತರವಾಗಿ ಸಾಗಿದೆ ಓದಿನ ಬಂಡಿ  🙂

One Response

  1. Guruprasad
    March 22, 2017

Add Comment