Quantcast

ಓ ಮೈ ಗಾಡ್..ಮಾತೇ ಹೊರಡಲಿಲ್ಲ

ಬಸವರಾಜ ಪುರಾಣಿಕ ಎಂಬ ಸಿದ್ಧಪುರುಷನ ನೆನಪಲ್ಲಿ

ಲಕ್ಷ್ಮೀಕಾಂತ ಇಟ್ನಾಳ

‘ಲಕ್ಷ್ಮೀಕಾಂತ ನಿಮ್ಮ ಮನಕಲಕುವ ಮನ ಶೋಧಿಸುವ ಜಾಣ್ಮೆ, ಶಬ್ದಗಳಲ್ಲೇ ಎಲ್ಲವನ್ನು ಸೆರೆಹಿಡಿಯುವ ಮಾಂತ್ರಿಕ ಚಿತ್ರಕ ಶೈಲಿ, ಉರ್ದು ಗೀತೆಗಳನ್ನು ಕನ್ನಡೀಕರಿಸುವ ಅದ್ಭುತ ಕೌಶಲ -ಇವೆಲ್ಲ ನನ್ನನ್ನು ಬೆರಗು ಗೊಳಿಸಿವೆ. ನಾನು ಉರ್ದು ಕಾವ್ಯದ ನೇರ ಅಭ್ಯಾಸಿ. ನಿಮಗೆ Hats Off! keep it up!

ನಾನು `ಅವಧಿ’ಯಲ್ಲಿ `ಏಕ ಥಿ ಮೀನಾಕುಮಾರಿ’ ಎಪಿಸೋಡುಗಳನ್ನು ಬರೆಯುತ್ತಿರುವಾಗ ಯಾವುದೋ ಕಂತಿನ ಬರಹಕ್ಕೆ ಜನೆವರಿ 24, 2016ರಂದು ಮೆಚ್ಚಿ ಈ ಕಮೆಂಟ್ ಬರೆದಿದ್ದರು ಬಸವರಾಜ ಪುರಾಣಿಕ.

ಎಂದಿನಂತೆ ಧನ್ಯವಾದ ಹೇಳಿದ್ದೆ. ಅವರು ಯಾರು ಎಂಬುದು ಖಂಡಿತ ಗೊತ್ತಿರಲಿಲ್ಲ. ಆದರೆ ಅವರು ಕಮೆಂಟ್ ಮಾಡಿದ ರೀತಿ ತುಂಬ ಆಪ್ತವೆನಿಸಿತ್ತು. ಏಕೆಂದರೆ ಅವರು ಉರ್ದು ಕಾವ್ಯದ ನೇರ ಅಭ್ಯಾಸಿಯಾಗಿ ಈ ಮಾತು ಹೇಳಿದ್ದು ಬಲು ಆಳಕ್ಕೆ ಇಳಿದಿತ್ತು. ಒಂದು ರೀತಿಯ ಸಾರ್ಥಕ್ಯದ ಸಂತೃಪ್ತತೆ ಆವರಿಸಿತ್ತು.

ಅಷ್ಟೇ. ಗೆಳೆಯರೇ…ಅದೇ ಮೀನಾಕುಮಾರಿಯ ಕಥಾನಕವನ್ನೇ ವಿಸ್ತರಿಸುತ್ತ, ಅವಳ ಗಜಲ್ಗಳನ್ನು ಅನುವಾದಿಸುತ್ತ ಪ್ರವಾಸದೊಂದಿಗೆ ಸುಮಾರು ನೂರೆಂಭತ್ತು ಪುಟಗಳ ಗುರಿಯೊಂದಿಗೆ ಪುಸ್ತಕವನ್ನು ಬರೆಯುತ್ತಿರುವೆ, ಇಲ್ಲಿ…ನನ್ನ ಬಿಡುವಿನಲ್ಲಿ… ಫ್ಲೋರಿಡಾದ ಹಸಿರು ಬೀಡಿನಲ್ಲಿ.

ಮುಂದೊಮ್ಮೆ ಬೆಳಿಗ್ಗೆ ಸರಿಯಾಗಿ ಆರಕ್ಕೆ ನಾನು ಧಾರವಾಡದ ಕರ್ನಾಟಕ ಯುನಿವರ್ಸಿಟಿಯತ್ತ ವಾಕಿಂಗಿಗಾಗಿ ಕಾರು ಹೊರತರುತ್ತಿರುವಾಗ ಫೋನೊಂದು ರಿಂಗಣಿಸಿತು. ಅನ್ ನೌನ್ ನಂಬರು. ಯಾರಿರಬಹುದು ಅಂದುಕೊಳ್ಳುತ್ತಲೇ `ಹಲೋ’ ಎಂದೆ. ಅತ್ತಲಿಂದ “ನೀವು ಲಕ್ಷ್ಮೀಕಾಂತ ಇಟ್ನಾಳ ತಾನೇ?” ಎಂದು ಕೇಳಿತು ದನಿಯೊಂದು… ಹೌದು ಎಂದೆ…“ಎಷ್ಟು ದಿನದಿಂದ ಹುಡುಕುತ್ತಿದ್ದೇನೆ ಮಾರಾಯಾ ನಿಮಗೆ. ಯಾರು ನೀವು? ಏನು ಬರೆಯುತ್ತೀರಿ? ಅದ್ಭುತ !! ಒಂದಾರು ತಿಂಗಳಾದರೂ ಆಗಿರಬಹುದು ನಿಮ್ಮನ್ನು ಹುಡುಕುತ್ತಿದ್ದೇನೆ ! ಕಡೆಗೊಬ್ಬರು `ಅವರು ಧಾರವಾಡದವರು’ ಅಂತಾ… ಯಾರೋ ಹೇಳಿದರು.

ಧಾರವಾಡದಲ್ಲಿ ನನಗೆ ಗೊತ್ತಿರುವ ಒಬ್ಬೊಬ್ಬರನ್ನೂ ಕೇಳಿದೆ ಮಾರಾಯಾ? ಹೆಸರು ಕೇಳಿದಂಗಿದೆ… ಆದರೆ ಕಾಂಟ್ಯಾಕ್ಟ ಇಲ್ಲ. ಅಂತಾರೆ… ಅಲ್ರೀ ಅಷ್ಟು ಚಲೋ ಬರೀತಾರ ನಿಮ್ಮೂರಾಗ ಒಬ್ಬರು, ಅವರದೇ ಪರಿಚಯ ಇಲ್ಲಾ ಅಂದ್ರ ಹೆಂಗರೀ ಅಂತ ಬಾಯಿಗೆ ಬಂದಂಗ ಬಯ್ದಿನ್ರೀ… ಒಂದಿಬ್ಬರಿಗಂತೂ! ಮತ್ತ ನಮ್ಮ ವಯಸ್ಸಿನವರಿನವರೀಗ ಎಷ್ಟು ಮಂದಿ ಉಳದಾರ!” ಅಂದು..( ಈ ಸಾಲು ಬರೆಯಲು ನನಗೇ ಮುಜುಗುರವಾಗುತ್ತಿದೆ, ಅದು ನಮ್ಮಂತಹ ಬರಹಗಾರರ ಮೇಲೆ ಅಷ್ಟು ಪ್ರೀತಿ ಅಷ್ಟೇ, ಅನ್ಯಥಾ ಭಾವಿಸದಿರಲು ಕೋರುವೆ, ನಾನಷ್ಟು ದೊಡ್ಡವನಲ್ಲ. ಎನಗಿಂತ ಕಿರಿಯರಿಲ್ಲ ಸಹೃದಯರೇ).

‘ ಹಾಂ…ನೀವೇನು ಹುಡುಗೋ, ವಯಸ್ಸಿನವರೋ, ನನಗೀಗ ಎಂಭತ್ತೈದು ಪ್ಲಸ್, ನೀವೇನು ನನ್ನ ವಾರಿಗೆಯವರೋ ಏನು ? ನೀವೇನು ಪ್ರೊಫೆಸರೋ, ಏನ ಬರೀ ಸಾಹಿತಿಗಳೋ, ರಿಟೈರೋ, ಏನ್ ನೌಕರಿಯವರೋ ಏನ್ ನೀವು? ನಿಮ್ಮ ಬಗ್ಗೆ ನನಗೆ ಇನ್ನೂವರೆಗೂ ಗೊತ್ತಿದ್ದಿಲ್ಲ ಅನ್ನೂದು ನನಗ `ಅಜೀಬ ಅನಸತೈತಿ’, ಎಲ್ಲಿ ಉರ್ದು ಓದಿದೀರಿ ಮಾರಾಯಾ?”….“ನಾನೂ ಭಾಳ ಉರ್ದು ಓದಿಕೊಂಡಿನಿ ಅಂತ ತಿಳಕೊಂಡವ. ಮತ್ತ ಪುಸ್ತಕಾನೂ ಬರದೀನಿ, ಆ ಗುಲ್ಜಾರ ಬಗ್ಗೆ ಬರಿತೀರಲ್ಲ? ಅವರನ್ನು ಭೇಟಿ ಆಗಿ ಬಂದಿರೇನು? ಶಬ್ಬಾಶ್… ನೀವು? …ವಾಹ್! ಆದರೆ ನಾನೂ ಅವರದೊಂದು ಕಥಾ ಪುಸ್ತಕ `ಧುಂವಾ’ ಅನುವಾದ ಮಾಡೇನಿ…ಕನ್ನಡದಾಗ..`ಹೊಗೆ’ ಅಂತಾ…ಓದಿರೇನು? ಅಂದರು.

`ಇಲ್ಲ ಸರ್, ನನ್ನ ನಜರಿಗೆ ಬಿದ್ದಿಲ್ಲ’ ಇಷ್ಟರಲ್ಲಾಗಲೇ ಇವರು ದೊಡ್ಡ ಬರಹಗಾರರಿರಬಹುದು, ಸುಮ್ಮನೆ ಅಭಿಮಾನಿ ಅಲ್ಲ ಎನ್ನಿಸಿ, `ಇಲ್ಲ ಸರ್, ಸಿಕ್ಕರೆ ಓದುವೆ’ ಎಂದೆ. “ನಿಮ್ಮ ಉರ್ದು ಅನುವಾದ, ಕಾವ್ಯವನ್ನು ಕಾವ್ಯವನ್ನಾಗಿಯೇ ಅನುವಾದಿಸುವ ನಿಮ್ಮ ಕೌಶಲ್ಯ, ನಿಮ್ಮ ಚಿತ್ರಿಸುವ ಬರವಣಿಗೆ…ಕತಿ ಕಟ್ತೀರೆಲ್ಲಾ..ಹಾಂ..ಆ ರೀತಿ, ನಿಮ್ಮ ಶಬ್ದ ಭಂಡಾರಕ್ಕೆ ನನಗೆ ಖರೆ ಹೇಳಬೇಕಂದ್ರ ನಿಮ್ಮ ಹುಚ್ಚ್ಅಅಅ ಹಿಡಿದ ಬಿಟ್ಟತಿ ನನಗ…ಯಾರು ನೀವು? ಎಲ್ಲಿಯವರು? ಎಂದು ಕೇಳಿದರು” ನನಗೆ ಅವರ ಮಾತಿನಿಂದ ಗಂಟಲು ಉಕ್ಕಿ ಬಂದು ಮಾತು ಹೊರಡದೇ ಭಾವುಕನಾಗಿದ್ದೆ. ಮಾತೇ ಹೊರಡುತ್ತಿರಲಿಲ್ಲ. ಹೂಂ ಅನ್ನಲೂ ಆಗುತ್ತಿರಲಿಲ್ಲ. ಪುರಾಣಿಕ ಸರ್, `ಹಲೋ ಹಲೋ’ ಅನ್ನುತ್ತಿದ್ದರು… ಕೊನೆಗೆ ಕಷ್ಟುಪಟ್ಟು ನನ್ನನ್ನು ಸಂಭಾಳಿಸಿಕೊಂಡು ಉಕ್ಕಿದ ಭಾವದಲ್ಲಿ `ಹಲೋ’ ಎಂದೆ. ಮತ್ತೆ ಮುಂದುವರೆಯಿತು ನಮ್ಮ ಸಂವಾದ.

ಈಗ ನಾನು ಹೇಳುತ್ತಿದ್ದೆ. `ಸರ್, ನಾನು ಉರ್ದುವನ್ನು ಹವ್ಯಾಸವನ್ನಾಗಿ ಓದಿದವನು, ಉರ್ದುವೆಂದರೆ ನನಗೆ ಮೊದಲಿನಿಂದಲೂ ತುಂಬ ಇಷ್ಟ. ಹೀಗಾಗಿ ಕನ್ನಡ ಕಾವ್ಯಕ್ಕಿಂತಲೂ ತುಸು ಹೆಚ್ಚು ಹಿಂದಿ, ಉರ್ದು ಓದಿದ್ದೇನೆ ಸರ್, ನೀವು ಅಂದುಕೊಂಡಷ್ಟು ದೊಡ್ಡವನಲ್ಲ. ಅದೇನೇ ಇದ್ದರೂ ಅದು ನಿಮ್ಮ ಪ್ರೀತಿ ಮಾತ್ರ ಸರ್, ನನ್ನ ಬಗ್ಗೆ ಹೇಳಬೇಕೆಂದರೆ ನಾನು ಈಗ ತಾನೇ ನೌಕರಿಯಿಂದ ರಿಟೈರ್ ಆಗಿದ್ದೇನೆ. ನೌಕರಿಯಲ್ಲಿ ಹೆಚ್ಚು ಸಮಯ ಸಿಗದೇ ಬರೀ ಓದಿಗೆ ಸೀಮಿತವಾಗಿದ್ದೆ. ಮತ್ತೆ ಆಗಾಗ ಟೈಮ್ ಸಿಕ್ಕಾಗ ಗುಲ್ಜಾರ, ಗಾಲಿಬ್, ಮಂಟೋ, ಟಾಗೋರ್, ಹರಿವಂಶರಾಯ್ ಬಚ್ಚನ್ ಕಾವ್ಯದಲ್ಲಿ ಹೆಚ್ಚು ತೊಡಗಿಕೊಂಡಿದ್ದೆ. ಹೀಗಾಗಿ ಅನುವಾದದ ಹುಚ್ಚು ಹಚ್ಚಿಕೊಂಡೆ ಸರ್..

ಈಗ ಸೋಷಿಯಲ್ ಮೀಡಿಯಾಗಳಲ್ಲಿ ಬರೆಯುತ್ತಿರುತ್ತೇನೆ. ಸಂಧ್ಯಾರಾಣಿ ಅಂತಾ ಒಬ್ಬ ತುಂಬ ಭಾವದುಂಬಿ ಬರೆಯುವ ಸಂವೇದನೆಯ ಲೇಖಕಿ ಇದ್ದಾರೆ. ಭಾರತಿ, ಕುಸುಮಾ ಅಂತಾ ತುಂಬ ಚನ್ನಾಗಿ ಬರೀತಿರ್ತಾರ… ಅದು ಹೇಗೋ ಸಂಧ್ಯಾರಾಣಿಯವರ ಫೇಸಬುಕ್ ನಲ್ಲಿ ಅವಧಿ ಆನಲೈನ್ ಮ್ಯಾಗಜಿನ್ ಪರಿಚಯವಾಗಿ ಅಲ್ಲಿ ಬರೆಯುತ್ತಿರುತ್ತೇನೆ.

‘ಹಾಂ…ಸಂಧ್ಯಾರಾಣಿ ಅಂದ್ಯಲ್ಲಾ … ಅವರೇ ಮಾರಾಯಾ ನಿಮ್ಮ ನಂಬರು ಕೊಟ್ಟಿದ್ದು, ಈ ಗೋಪಾಲ ವಾಜಪೇಯಿ,ದೊಡ್ಡ ಮನಸ್ಯಾ… ದೇವರು ಅಂತವರನ್ನ ಭಾಳ ದಿನಾ ಬಿಡಾಂಗಿಲ್ಲ… ಅವರ ಸಂತಾಪ ಸಭೆಯೊಳಗೆ ನೀನು ಬರದಿದ್ದೆಲ್ಲಾ, ` ಎತ್ತದಿರು ಇನ್ನೂ ನನ್ನ ಗೆಳೆಯನ ಶವವನ್ನು… ನೋವಲ್ಲಿ ನರಳಿದಂತಿದೆ, ನೋಡಿ ಇದೆ ಜೀವವಿನ್ನೂ…”ಗುಲ್ಜಾರದು, ನೀ ಮಾಡಿದ ಅನುವಾದ ಅವತ್ತು ನಾನೇ ಓದಿ ಭಾವುಕನಾಗಿದ್ದೆ.

ಆವಾಗ ಗೊತ್ತಾತು, ನಿನ್ನ ಕಾಂಟ್ಯಾಕ್ಟ್ ನಂಬರು ಇಸಿದುಕೊಂಡೆ. ಇಂದು ಬೆಳಗಾಗುವುದನ್ನೇ ಕಾದು, ಇವತ್ತು ಫೋನ್ಯಾಗ ಸಿಕ್ಕಿ ನೋಡಪಾ…ಅಂದರು. ಅಷ್ಟರಲ್ಲಿ ಅವರ ವ್ಯಕ್ತಿತ್ವದ ಅರಿವಾಗುತ್ತಿದ್ದ ನಾನು ತುಂಬ ಮುಜುಗುರದಿಂದ ಹೇಳಿದೆ. “ನೀವು ತಿಳಿದಂತೆ ನಾನು ಅಷ್ಟು ದೊಡ್ಡವನಲ್ಲ ಸರ್” ಎಂದೆ. “ಸುಮ್ಮನಿರಪ್ಪ… ಗುಲಾಬಿಗೆ ಗೊತ್ತಿರುವುದಿಲ್ಲ ಅದೇನು ಅಂತಾ…ಅದನ್ನು ನೀನು ನಿರ್ಧರಿಸುವುದಲ್ಲ. ನಿನ್ನ ಓದುಗ ನಿರ್ಧರಿಸುತ್ತಾನೆ.” ಎಂದರು….(ದಯಮಾಡಿ ಇದು ಆತ್ಮರತಿ ಎಂದು ಭಾವಿಸದಿರಲು ನಮ್ರವಾಗಿ ಕೋರುವೆ, ಇದು ಅವರೊಂದಿಗೆ ಆದ ಹುಬಹುಃ ಸಂವಾದ)

…ಹಾಗಾದರೆ ನೀವು ಯಾವ ವೃತ್ತಿಯಿಂದ ನಿವೃತ್ತರಾದಿರಿ ಹಾಗಾದರೆ… ಎಂದು ಕೇಳಿದಾಗ ನಾನು ಪಿಡ್ಬ್ಲುಡಿ ಖಾತೆಯಲ್ಲಿ ಅಧಿಕಾರಿ ಇಂಜಿನೀಯರಾಗಿ ಸೇವೆಯಿಂದ ನಿವೃತ್ತನಾಗಿದ್ದು ಹೇಳಿದಾಗ, ತಕ್ಷಣ ಯಾವು ಕಾಲೇಜಿನಿಂದ ಬಿಈ ಮುಗಿಸಿದಿರೀ? ಎಂದು ಲೋಕಾಭಿರಾಮವಾಗಿ ಕೇಳಿದರು. ನಾನು ಬಾಗಲಕೋಟೆ ಅಂದೆ. ಬಾಗಲಕೋಟೆನ?..ಯಾವ್ ಈಯರ್? ಅಂದರು. 1980ರಲ್ಲಿ ಎಂದೆ. ಅಂದರೆ ನಿಮಗೆ ಇವ್ರು ಗೊತ್ತಿರಬೇಕಲ್ಲ? ಅಂತಾ ನನ್ನ ಕೆಲ ಕ್ಲಾಸಮೇಟುಗಳ ಹೆಸರು ಹೇಳಿದರು. ಹೌದು ಗೊತ್ತು ಎಂದೆ. ಮತ್ತೆ ನಿಮಗೆ ಅಲ್ಲಿ ಪುರಾಣಿಕ ಅಂತಾ ಯಾರಾದರೂ ಪರಿಚಯವಿರಬೇಕಲ್ಲ?

ಯಾವುದೋ ಘಟನೆಯೊಂದು ನೆನಪಾಯಿತು. `ಆಗ ನಾವು ಗೋವಾ ಟ್ರಿಪ್ಗೆ ಹೋಗಿದ್ದೆವು. ಅಲ್ಲಿ ಬಾಗಲಕೋಟೆಯ ಬಿಎ ತರಗತಿಯ ಒಬ್ಬ ಗೆಳೆಯ ಪುರಾಣಿಕ ಅಂತಾ ಇದ್ದ. ಅಂವ ಗೋವಾದಲ್ಲಿ ಇಸ್ಪೀಟ್ ಆಟದಲ್ಲಿ ಸೋತು, ನನ್ನ ಹತ್ತಿರ ಸುಮಾರು ನೂರೈವತ್ತು ರೂಪಾಯಿ ಸಾಲ ತಗೊಂಡಿದ್ದ. ಬಾಗಿಲುಕೋಟೆಯಲ್ಲಿ ತುಂಬ ಶ್ರೀಮಂತ ಕುಟುಂಬವಾಗಿದ್ದರಿಂದ ನಾನು ಅವರಿವರ ಹತ್ತಿರ ಇಸಿದು ಅಡ್ಜೆಸ್ಟ ಮಾಡಿ ಕೊಟ್ಟಿದ್ದೆ. ನಂತರ ಸ್ವಲ್ಪ ದಿನವಾದ ಮೇಲೆ ಕೇಳಲಾಗಿ, `ನೀವು ಯಾರೆಂದು ನನಗೆ ಗೊತ್ತೇ ಇಲ್ಲ’ ಎಂದು ಕೆಲವು ಜನ ಹುಡುಗರೊಂದಿಗೆ ನನಗೆ ದಬಾಯಿಸಿ ಕಳುಹಿಸಿದ್ದ. ಆ ಘಟನೆ ನೆನಪಾಗಿ ಅವರೇ ಏನೋ ಎಂದು “ಇಲ್ಲ ಸರ್ ನನಗೆ ಅಲ್ಲಿ ಪುರಾಣಿಕ ಅಂತ ಯಾರೂ ನನಗೆ ಗೊತ್ತಿನವರು ಇರಲಿಲ್ಲ” ಎಂದೆ.

ನಿಮಗೆ ಕಲಿಸುತ್ತಿರುವ ಯಾರಾದರೂ ಪ್ರೊಫೆಸರ್ ಇಂತವರು ಇದ್ದರೇ? ಎಂದರು. ನನಗೆ ನೆನಪಿಸಿಕೊಂಡಂತೆ ತಕ್ಷಣ, ಹಾಂ…ಸರ್ ಬಸವರಾಜ್ ಪುರಾಣಿಕ್’ ಅಂತ ನಮ್ಮ ಪ್ರಿನ್ಸಿಪಾಲರು ಇದ್ದರು ಸರ್, ಯಾಕೆ? ಎಂದೆ. “ಅವನೇ ಮಾರಾಯಾ ನಾನು” ಎಂದರು.

`ಓ ಮೈ ಗಾಡ್ …” ಮಾತೇ ಹೊರಡದೇ ದಿಙ್ಮೂಢನಾಗಿದ್ದೆ.

ಓಃಓಹೋಓಓ…! ಸರ್ ನೀವಾ? ನನ್ನ ಗುರುಗಳು…ಖಂಡಿತ ನಂಬಲಾಗುತ್ತಿಲ್ಲ. ನಾನು ನಿಮ್ಮ ಮನೆಯಲ್ಲೇ ಪ್ರಪ್ರಥಮವಾಗಿ ಗಾಲಿಬನನ್ನು ಓದಿದ್ದು, ಅಲ್ಲಿ ನೀವು ಬೆಂಗಳೂರಿಗೆಲ್ಲ ಹೋದಾಗ, ಬೇರೆ ಕಾಲೇಜುಗಳಿಗೆ ವಿಜಿಟರ್ ಎಂದು ಹೋದಾಗ ನಿಮ್ಮ ಮನೆಯಲ್ಲೇ ರಾಯಕರರೊಂದಿಗೆ ನಾನೇ ಇರುತ್ತಿದ್ದೆ. ನೀವು ಯಾವುದನ್ನು ಕೀಲಿ ಹಾಕುತ್ತಿರಲಿಲ್ಲ. ನಿಮ್ಮ ಲೈಬ್ರರಿಯನ್ನೂ….”’ಹೇಳುತ್ತಲೇ ಇದ್ದೆ.

ಅವರೊಬ್ಬ ಲೀಜೆಂಡ್. ಇಡೀ ಬಾಗಲಕೋಟೆಯ ಬಿಈ ಸಮುಚ್ಛಯವಲ್ಲದೇ ಆರ್ಟ್ಸ, ಕಾಮರ್ಸ, ಸಾಯನ್ಸ್ ಕಾಲೇಜುಗಳನ್ನೊಳಗೊಂಡ ಕ್ಯಾಂಪಸನಲ್ಲಿ ಸುಮಾರು ನೂರು ಎಕರೆಯ ಆ ಬಯಲಿನಲ್ಲಿ ಇವರು ಕ್ಯಾಂಪಸ್ ಒಳ ಬಂದರೆ ಒಬ್ಬೊಬ್ಬರೂ ಖಾಲಿ… ಆ ರಸ್ತೆ, ಗ್ರೌಂಡು, ಬಯಲು, ಕಾರಿಡಾರಿನಿಂದ ಎಲ್ಲರೂ ಗಾಯಬ್! ಎದ್ದು ಬಿದ್ದು ಓಡುತ್ತಿದ್ದರು. ಅಂಥ ಪರಮ ಶಿಸ್ತಿನ ಜೀವ!

ಅಷ್ಟೇ ಸರಳ ಜೀವಿ ಕೂಡ. ರಾಯಕರ್ ಎಂಬುವ ನನ್ನ ಹಿರಿಯ ಸಹಪಾಠಿಯೊಬ್ಬರಿದ್ದರು. ಬಾಗಿಲುಕೋಟೆಯ ಹೌಸಿಂಗ್ ಕಾಲನಿಯಲ್ಲಿ ಮನೆಹೊಂದಿದ್ದ ಪುರಾಣಿಕ ಸರ್, ಹೊರಗೆ ಕೆಲಸದ ಮೇಲಿದ್ದಾಗ ನಾನು ಮತ್ತು ರಾಯಕರ್ ಅವರ ಮನೆಯಲ್ಲಿ ಇರುತ್ತಿದ್ದೆವು.

ನನಗೆ ಗಾಲಿಬ್ ಪರಿಚಯವಾಗಿದ್ದು ಅವರದೇ ಲೈಬ್ರರಿಯ ಪುಸ್ತಕಗಳಿಂದ. ಶೇಕ್ಷಪಿಯರ್, ಟಾಲಸ್ಟಾಯ್, ಟ್ಯಾಗೋರ್ ಅವರ ಮನೆಯಲ್ಲಿದ್ದಾಗ ಕೇವಲ ನಾನ್ ಟೆಕ್ಷ್ಟ್ ಗಳನ್ನೇ ಓದುವ ಹವ್ಯಾಸ ನನಗೆ. ನಿರದ ಸಿ ಚೌಧರಿ ಗೊತ್ತಲ್ಲ? `ದಿ ಕಾಂಟಿನೆಂಟ್ ಆಫ್ ಸರ್ಸಿ’ (ಷಂಡರ ಖಂಡ) ಬರೆದ ಲೇಖಕ. ಇಂತಹ ಮೇಧಾವಿಗಳ ಕುರಿತು ಅವರ ಬಾಯಿಂದಲೇ ಕೇಳಬೇಕು.

ಕಾಲೇಜಿನ ಟೆಸ್ಟ ಸಂದರ್ಭಗಳಲ್ಲೂ ನಾನು ಇಂತಹ ಉರ್ದು ಶಾಯರಿ, ಗಜಲ್. ಅಂತ ಮೇಧಾವಿಗಳ ಪುಸ್ತಕಗಳಲ್ಲೇ ಇರುತ್ತಿದ್ದೆ. ಅದೊಂದು ತಿನಿಸಿನ ಸಂಗ್ರಾಹಾಗಾರದಂತೆ ಅನಿಸಿತ್ತು ನನಗೆ. ಅವರು ನಮ್ಮೊಡನಿದ್ದಾಗಲೂ ಎಷ್ಟೊಂದು ಪ್ರೀತಿಯಿಂದ ನಮ್ಮೊಂದಿಗೆ ಕುಳಿತು ಟೀ ಕಾಫಿ ಕುಡಿಯುತ್ತಿದ್ದರು. ತಮ್ಮ ಅಂದಿನ ಕಾಲದಲ್ಲಿ ಅಪರೂಪದಲ್ಲಿ ಅಪರೂಪವಾದ ಅಮೇರಿಕೆಯ ಅನುಭವ ಕಟ್ಟಿಕೊಡುತ್ತಿದ್ದರು. ಬಲು ಆತ್ಮೀಯ ಜೀವ.

ಕಾಲೇಜಿನಿಂದ ಪಾಸ್ ಔಟ್ ಆದ ಮೇಲೆ ಗುಜರಾತ್, ಗೋವಾ, ಕರ್ನಾಟಕದ ಲೋಕೋಪಯೋಗಿ, ನೀರಾವರಿ, ಜಿಲ್ಲಾ ಪಂಚಾಯತ ಎಂದು ಕಳೆದುಹೋಗಿದ್ದ ನನಗೆ ಬೇರೆ ಸಹಪಾಠಿಗಳ ಒಟನಾಟವೂ ಬಹುತೇಕ ತಪ್ಪಿಹೋಗಿತ್ತು. ಹೀಗಾಗಿ `ಪ್ರೊ. ಬಸವರಾಜ ಪುರಾಣಿಕ’ ಎಂಬ ಮೇರು ಸದೃಶದ ವ್ಯಕ್ತಿಯೊಬ್ಬರು ನನ್ನ ಗೆಳೆತನದ ಪರಿಧಿಯಲ್ಲಿ ಇರುವುದು ಊಹಿಸಲೂ ಸಾಧ್ಯವಾಗಿರದ ಸಂಗತಿಯಾಗಿತ್ತು. `ನನಗೆ ನಾನೇ ದಿಙ್ಮೂಢತೆಯಲ್ಲಿ ಪ್ರಶ್ನಿಸಿಕೊಂಡಿದ್ದೆ. “ಓಹ್, ಇವರಿನ್ನೂ ಇದ್ದಾರೆಯೇ!!!”’ ಆಶ್ಚರ್ಯದೊಂದಿಗೆ ನಾಚಿಕೆ ಎನಿಸಿತ್ತು.

ಅವರೊಡನೆಯ ಬಾಂಧವ್ಯದ ಸೆಕೆಂಡ ಇನಿಂಗ್ಷ ಹೀಗೆ ಶುರುವಾಗಿತ್ತು. ಅಪ್ರತಿಮ ಮೇಧಾವಿ ಪ್ರೊಫೆಸರ್, ನಮ್ಮ ಕಾಲೇಜಿನ ಪ್ರಿನ್ಸಿಪಾಲರು ನನಗೆ ಈಗ ಗೆಳೆಯರಾಗಿ ಸಿಕ್ಕಿದ್ದರು. `ಅಪ್ಪನಂತಹ ವಾತ್ಷಲ್ಯ, ತಾಯಿಯಂತಹ ಪ್ರೀತಿ’… ಆಗಾಗ ಫೋನು ಮಾಡಿ ಕುಶಲ ವಿಚಾರಿಸುತ್ತಿದ್ದರು. ಏನು ಬರೆಯುತ್ತಿದ್ದೀರಿ ಎಂದೆಲ್ಲಾ ವಿಚಾರಿಸಿಕೊಳ್ಳುತ್ತಿದ್ದರು, ಕೂಡಲೇ ಸಲಹೆಗಳನ್ನು ನೀಡುತ್ತಿದ್ದರು. ಏನಾದರೂ ಬರೆದರೆ ನನಗೆ ಮೊದಲು ಮೇಲ್ ಹಾಕು ಎಂದು ಗಾಲಿಬನ ಲೇಖನ, ಗಾಲಿಬನ ಗಜಲ್ ಅನುವಾದಗಳನ್ನು ತರಿಸಿಕೊಂಡು ಓದಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.

ರಾಯಚೂರಿನ ಗೆಳೆಯ ದಸ್ತಗೀರಸಾಬ್ ದಿನ್ನಿಯವರು ಗಾಲಿಬನ ಕುರಿತು ಸಂಪಾದನ ಕೃತಿಯೊಂದನ್ನು ಹೊರತರಲು ಲೇಖನವೊಂದಕ್ಕಾಗಿ ನನಗೆ ಸಂಪರ್ಕಿಸಿದ್ದರು. ದಸ್ತಗೀರರು ಮತ್ತೆ ಯಾರಾದರೂ ಆ ತರಹ `ಕಾಬಿಲ್’ ಇದ್ದವರ ಹೆಸರು ನೀಡಲು ಸೂಚಿಸಿದಾಗ ಮೊದಲು ನೆನಪಾಗಿದ್ಧೇ ಪುರಾಣಿಕ ಸರ್. ಅವರೊಂದಿಗೆ ವಿಳಾಸ ನೀಡಿ, ಅವರೂ ಕೂಡ ಗಾಲಿಬನ ಮೇಲೊಂದು ಲೇಖನ ಬರೆಯಲು ಒತ್ತಾಯಿಸಿದ್ದೆ.

ತೀರ ಮೊನ್ನೆ 1956? ರಲ್ಲಿ ಧಾರವಾಡದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದ ವಿಷಯ ತಿಳಿಸಿ, ಅದನ್ನು ಕುವೆಂಪು ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಅದರ ಕಾರ್ಯದರ್ಶಿಗಳು ಚನ್ನವೀರ ಕಣವಿಯಾಗಿದ್ದರು. ಅದರ ಗೌರವಾಧ್ಯಕ್ಷತೆಯನ್ನು ಡಿ ಸಿ ಪಾವಟೆಯವರು ವಹಿಸಬೇಕಾಗಿತ್ತು. ಆದರೆ ಆ ಸಮಯದಲ್ಲಿ ಅವರು ವಿದೇಶಕ್ಕೆ ತೆರಳಿದ್ದರಿಂದ ಉಪ ಕುಲಪತಿ ಹುದ್ದೆಯ ಇನ್ ಚಾರ್ಜ ಇದ್ದ ಶ್ರಿ ನಂದಿಮಠ ವಹಿಸಿದ್ದರು. ಹೀಗಾಗಿ ನಂದಿಮಠರ ಕುರಿತು ಸಂಪಾದನ ಕೃತಿ ಹೊರತರುತ್ತಿದ್ದು, ಕಣವಿಯವರನ್ನು ಸಂಪರ್ಕಿಸಿ ಅಂದಿನ ದಿನ ನಂದಿಮಠ, ಕುವೆಂಪು, ಕಣವಿಯವರು ಮಾತನಾಡುತ್ತಿರುವ ಅಥವಾ ವೇದಿಕೆ ಮೇಲಿರುವ ಫೋಟೋಗಳನ್ನು ಸಂಗ್ರಹಿಸಿ ನೀಡಲು ತಿಳಿಸಿದ್ದರು.

ಅದೇ ಕೆಲಸದ ಮೇಲೆ ನಾಡೋಜ ಕಣವಿಯವರನ್ನು, ಕರ್ನಾಟಕ ವಿಶ್ವವಿದ್ಯಾಲಯದ ಪ್ರಸರಾಂಗದ ಉಪನಿರ್ದೇಶಕರಾದ ಚಂದ್ರಶೇಖರ ರೊಟ್ಟಿಗವಾಡರನ್ನು ಸಂಪರ್ಕಿಸಿ ಅವುಗಳನ್ನು ಪಡೆಯಲು ನನ್ನೆಲ್ಲ ಪ್ರಯತ್ನಪಟ್ಟರೂ ಅಗಾಧ ಸಮಯದ ಪ್ರವಾಹದಲ್ಲಿ ಅವುಗಳು ಸಿಗದೇ ಹೋದವು. ಚಂದ್ರಶೇಖರರಂತೂ ವಿಶೇಷ ಆಸ್ಥೆಯಿಂದಲೇ ಹುಡುಕಿದರೂ ಸಿಗಲಾರದಾದವು.

ಇದನ್ನು ಅವರಿಗೆ ಹೇಳಬೇಕೆಂದರೆ ನನ್ನ ಅಮೇರಿಕೆ ಪ್ರವಾಸದ ಗಡಿಬಿಡಿ, ಪ್ಯಾಕಿಂಗ್, ಪ್ರಯಾಣ, ಜೆಟ್ ಲ್ಯಾಗ, ಇಲ್ಲಿಯ ವೀಕೆಂಡ್ ಪ್ರವಾಸಗಳು, ಇತ್ಯಾದಿಗಳಲ್ಲಿ ಬ್ಯುಸಿಯಾಗಿದ್ದೆ. ಒಂದು ವಾರದಿಂದ ತುಂಬ ಕಾಡುತ್ತಿದ್ದರು, ಕೊನೆಗೆ ತಡೆಯದೇ ಅದೇ ವಿಷಯದ ಕುರಿತು ಮಾತನಾಡಲು ತೀರ ಮೊನ್ನೆಯ ಸೋಮವಾರ ಅಂದರೆ ಅವರು ನಮ್ಮನ್ನಗಲುವ ಒಂದು ದಿನ ಮುಂಚೆ ನಾನು ಅವರಿಗೆ `ಹೇಗಿದ್ದೀರಿ ಸರ್?’ ಎಂದು ಮೇಲ್ ಕಳುಹಿಸಿದ್ದೆ. ಪ್ರತಿ ಸಾರಿ ತಕ್ಷಣ ಉತ್ತರಿಸುವ ಗುರುಗಳು ಇನ್ನೂ ಉತ್ತರಿಸದೇ ಇದ್ದದ್ದು ತುಸು ಆತಂಕಕ್ಕೆ ಕಾರಣವಾಗಿತ್ತು. ದೂರದ ಫ್ಲೋರಿಡಾದಲ್ಲಿ ಕುಳಿತು ಅವರ ಶಿಷ್ಯನಾಗಿ ಸಣ್ಣ ಕೋರಿಕೆಯೊಂದನ್ನು ಈಡೇರಿಸದೇ ಹೋದೆನಲ್ಲ ಎಂಬ ಅಳಲು ಕಾಡತೊಡಗಿತ್ತು.

2017ರ ಸಾಹಿತ್ಯ ಸಂಭ್ರಮದಲ್ಲಿ ಅವರದೊಂದು ಗೋಷ್ಠಿ ಇತ್ತು. ಅಂದಿನ ದಿನ ಹುಬ್ಬಳ್ಳಿವರೆಗೆ ಟ್ರೇನಿನಲ್ಲಿ ಬರುವುದಾಗಿ ತಿಳಿಸಿ, ಹುಬ್ಬಳ್ಳಿಯಿಂದ ಧಾರವಾಡಕ್ಕೆ ಲಿಫ್ಟ ಮಾಡಲು ಹಾಗೂ ನಾನು ಲಾಡ್ಜಿಂಗ್ ವ್ಯವಸ್ಥೆ ಮಾಡಿರುತ್ತಾರೆ ಎಂದು ತಿಳಿಸಿದರೂ ಬೇಡ, ನಾನು ನಿನ್ನ ಮನೆಯಲ್ಲಿಯೇ ಇರುತ್ತೇನೆ. ನಿನ್ನ ತಕರಾರೇನಾದರೂ ಇದೆಯೇ? ಎಂದಿದ್ದರು. ಅವರಂತಹ ಮೇಧಾವಿಯೊಬ್ಬರು ಮನೆಗೆ ಬರುತ್ತೇನೆ ಎಂದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ.

ಹೆಚ್ಚಾಗಿ ಧಾರವಾಡಕ್ಕೆ ಬಂದಾಗ ಗುರುಗಳು ಯಾವಾಗಲೂ ಹನುಮಂತ ಕಾಖಂಡಕಿ ಅವರ ಮನೆಯಲ್ಲಿಯೇ ಮುಕ್ಕಾಂ ಹೂಡುತ್ತಿದ್ದುದು ಆ ಮೇಲೆ ತಿಳಿದು ಬಂದಿತ್ತು. ಆದರೆ ಅನಾರೋಗ್ಯದ ಕಾರಣದಿಂದ ಗುರುಗಳು ಈ ಗೋಷ್ಠಿಗೆ ಬರಲು ಸಾಧ್ಯವಾಗಿರಲಿಲ್ಲ. ನಾನು ಫೋನು ಮಾಡಿ ಅವರ ಆರೋಗ್ಯ ವಿಚಾರಿಸಿದ್ದೆ. ಇನ್ನು ನಾನು ಬೇರೆ ಊರುಗಳಿಗೆ ಪ್ರಯಾಣಿಸಬಾರದೆಂದು ನಿರ್ಧರಿಸಿರುವೆ. ಈ ಸಾರೆ ನೀನು ಬೆಂಗಳೂರಿಗೆ ಬಂದಾಗ ಮುದ್ದಾಂ ಬಂದು ಹೋಗು…ನಿನ್ನನ್ನು ನೋಡಿ ಮಾತಾಡಿದಂಗ ಆಗುತ್ತದೆ. ಆದರೆ ನನಗೂ ಈ ಸಮಯದಲ್ಲಿ ಬೆಂಗಳೂರಿಗೆ ಒಮ್ಮೆ ಹೋಗಿದ್ದರೂ ಅದ್ಯಾವುದೋ ಕೆಲಸದ ಗಡಿಬಿಡಿಯಲ್ಲಿ ಅವರ ಮನೆಗೆ ಹೋಗಿ ಗುರುಗಳ ದರುಶನ ಪಡೆಯುವುದಾಗಲಿಲ್ಲ.

ಇದನ್ನು ವಿಶ್ವನಾಥ ಸರ್ ರೊಂದಿಗೆ ಹಂಚಿಕೊಂಡಿದ್ದೆ. (ಮೇಧಾವಿಗಳ ಸಹಿ ಸಂಗ್ರಹ, ಅಂಚೆಚೀಟಿ ಮುಂತಾದ ಹವ್ಯಾಸದ ಹಿರಿಯ ಜೀವ, ವಿಶ್ವನಾಥ)…ಬದುಕಿನ ಬೆಟ್ಟದೇರುಗಳಲ್ಲಿ ಪುರಾಣಿಕ ಗುರುಗಳನ್ನು ಕಂಡು ಅವರೊಂದಿಗೆ ಸಾಹಿತ್ಯದ ಕುರಿತು ಮಾತನಾಡುವ ನನ್ನ ಅದಮ್ಯ ಆಶೆಯ ಹಂಬಲ ಕೈಗೂಡಲೇ ಇಲ್ಲ. ಈ ಕೊರಗು ಬಹುಶಃ ಬಲು ದಿನ ನನ್ನನ್ನು ಖಂಡಿತ ಕಾಡಲಿದೆ.

ಗುರುಗಳು ನಮ್ಮೊಡನೆ ಇಲ್ಲದಿದ್ದರೂ ಅವರ ಕೃತಿಗಳ ಮೂಲಕ ನಮ್ಮೊಂದಿಗೆ ಇದ್ದಾರೆ ಅನ್ನುವುದೇ ಈ ಹೊತ್ತಿನಲ್ಲಿ ನನಗೆ ನಾನೇ ಸಮಾಧಾನಿಸಿಕೊಳ್ಳುವ ಸಂಗತಿ. ಅವರ ಕೃತಿಗಳನ್ನು ಹುಡುಕಿ ಹೆಕ್ಕಿ, ಓದುವ ಕೆಲಸ ನನ್ನಿಂದಾಗಬೇಕಾಗಿದೆ. ಅದನ್ನಾದರೂ ಮಾಡಿ ಅವರಿಗೊಂದು ಅಶ್ರುತರ್ಪಣದ ಶೃದ್ಧಾಂಜಲಿಯನ್ನು ಹೀಗಾದರೂ ಸಲ್ಲಿಸಬಯಸುತ್ತದೆ ಮನಸ್ಸು….

ಬಸವರಾಜ ಪುರಾಣಿಕ ಎಂಬ `ಸಿದ್ಧಪುರುಷ’ ಎಲ್ಲಿದ್ದರೂ ನೆಮ್ಮದಿಯಾಗಿರಲಿ.

ಗುರುಗಳೇ, ತಾವು ಗೋಪಾಲ ವಾಜಪೇಯಿ ಅವರ ಶೃದ್ಧಾಂಜಲಿ ಸಭೆಗಾಗಿ, ಸಂಧ್ಯಾರಾಣಿಯವರಿಂದ ತರಿಸಿಕೊಂಡು, ಓದಿ ಮೆಚ್ಚಿದ ಗುಲ್ಜಾರರ ಈ ಹಾಡನ್ನು ತಮಗಾಗಿ ಇಂದು ಅರ್ಪಿಸುತ್ತ… ನಿಮಗೆ ನನ್ನ ಕೊನೆಯ ನಮಸ್ಕಾರ ಸರ್…

ವಿದಾಯ

ಮೂಲ ಗುಲ್ಜಾರ್
ಅನು: ಲಕ್ಷ್ಮೀಕಾಂತ ಇಟ್ನಾಳ (ಜೈಹೋ-ಗುಲ್ಜಾರರ ಹಾಡುಗಳು)

ಎತ್ತದಿರು ಇನ್ನೂ ನನ್ನ ಗೆಳೆಯನ ಶವವನ್ನು
ಬೆಚ್ಚಗಿದೆ ಇನ್ನೂ ಈ ಮಣ್ಣು, ದೇಹವು ಇನ್ನೂ

ಸಿಲುಕಿದೆಯೇನೋ ಉಸಿರು ತೆರೆದು ನೋಡಿರೋ ಇನ್ನೂ
ತುಟಿವರೆಗೂ ಬಂದ ಮಾತು, ಆಡಲಿ ಇರು ಇನ್ನೂ

ನೋವಲ್ಲಿ ನರಳಿದಂತಿದೆ, ನೋಡಿ ಇದೆಯೇ ಜೀವವಿನ್ನೂ
ಎತ್ತದಿರು ಇನ್ನೂ ನನ್ನ ಗೆಳೆಯನ ಶವವನ್ನು…

ಎಬ್ಬಿಸಿರೋ ಅವನ ತಬ್ಬಿ ಹೇಳೋಣ ವಿದಾಯವಿನ್ನೂ
ಇದೆಂಥ ಬೀಳ್ಕೊಡುವುದು, ಇದೆಂಥ ಪದ್ಧತಿಯ ಮಣ್ಣು

ಎದೆಯ ಪ್ರತಿ ಗಾಯವೂ ಹಸಿಯಾಗಿವೆ ಇನ್ನೂ

ಎತ್ತದಿರು ಇನ್ನೂ ನನ್ನ ಗೆಳೆಯನ ಶವವನ್ನು
ಬೆಚ್ಚಗಿದೆ ಇನ್ನೂ ಈ ಮಣ್ಣು, ದೇಹವೂ ಇನ್ನೂ…

26 Comments

 1. Prashant
  July 7, 2017
 2. Mamtha Kulkarni
  June 24, 2017
  • ಲಕ್ಷ್ಮೀಕಾಂತ ಇಟ್ನಾಳ
   June 25, 2017
 3. Dr Maya nadkarni
  June 24, 2017
  • ಲಕ್ಷ್ಮೀಕಾಂತ ಇಟ್ನಾಳ
   June 25, 2017
 4. N.Ramesh Kamath
  June 23, 2017
  • ಲಕ್ಷ್ಮೀಕಾಂತ ಇಟ್ನಾಳ
   June 25, 2017
 5. Bharathi B V
  June 23, 2017
  • ಲಕ್ಷ್ಮೀಕಾಂತ ಇಟ್ನಾಳ
   June 25, 2017
 6. Deepak Puranik
  June 23, 2017
  • ಲಕ್ಷ್ಮೀಕಾಂತ ಇಟ್ನಾಳ
   June 25, 2017
 7. Anonymous
  June 23, 2017
  • ಲಕ್ಷ್ಮೀಕಾಂತ ಇಟ್ನಾಳ
   June 23, 2017
  • Anonymous
   June 23, 2017
   • ಲಕ್ಷ್ಮೀಕಾಂತ ಇಟ್ನಾಳ
    June 25, 2017
  • ಲಕ್ಷ್ಮೀಕಾಂತ ಇಟ್ನಾಳ
   June 23, 2017
   • ಲಕ್ಷ್ಮೀಕಾಂತ ಇಟ್ನಾಳ
    June 25, 2017
  • Dastageer Dinni
   June 23, 2017
   • Vishvanath Hiremath
    June 24, 2017
    • ಲಕ್ಷ್ಮೀಕಾಂತ ಇಟ್ನಾಳ
     June 25, 2017
   • ಲಕ್ಷ್ಮೀಕಾಂತ ಇಟ್ನಾಳ
    June 25, 2017
    • K VISWANATHA
     June 25, 2017
     • ಲಕ್ಷ್ಮೀಕಾಂತ ಇಟ್ನಾಳ
      June 28, 2017
      • Avadhi
       June 29, 2017
       • ಲಕ್ಷ್ಮೀಕಾಂತ ಇಟ್ನಾಳ
        June 29, 2017

Add Comment