Quantcast

ನಮ್ಮ ಕಾಲಕ್ಕೆ ಮುಗಿದೋಗಲಿ..

ಲಕ್ಷ್ಮಣ್

ಇಲ್ಲಿ ಕುಳಿತು ಸೊಪ್ಪು ಮಾರುವವರ ಹೆಸರು ಮುನಿ ಎಂಕ್ಟಮ್ಮ.

ಹೊಸೂರು ರಸ್ತೆಯ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಕೆಳಗಿನ ಸರ್ವಿಸ್ ರಸ್ತೆಯ ಬದಿ ಕುಳಿತು ಪ್ರತಿ ದಿನ ಸಂಜೆ ಐದು ಗಂಟೆಯಿಂದ ಕತ್ತಲಾವರಿಸಿಕೊಳ್ಳುವವರೆಗೆ ತಮ್ಮ ತೋಟದಲ್ಲಿ ಬೆಳೆದ ತರಕಾರಿ ಮಾರುತ್ತಾರೆ.

ಈಗ ಅವರು ಕುಳಿತಿರುವ ಜಾಗವಿದೆಯಲ್ಲ ಇನ್ನೊಂದು ವಾರದಲ್ಲಿ ಮೆಟ್ರೊ ರೈಲು ಕಾಮಗಾರಿಯ ನಿಮಿತ್ಯ ತೆರವುಗೊಳಿಸಬೇಕು . ತನಗಿರುವ ಅರ್ಧ ಎಕರೆ ಜಮೀನಿನಲ್ಲಿ ಬೆಳೆದ ತರಕಾರಿ ಮಾರಲು ಇನ್ನೊಂದು ಸರ್ವಿಸ್ ರಸ್ತೆ ಹುಡುಕಬೇಕು, ಈಗ ಕುಳಿತಿರುವ ಜಾಗದಿಂದ ಹಿಂದೆ ಸುಮಾರು ಐದು ಎಕರೆ ಜಮೀನಿನಲ್ಲಿ ಸರ್ಕಾರ ಉದ್ಯಮಿಗಳಿಗೆ ಮೂರು ಎಕರೆ ಮಂಜೂರು ಮಾಡಿ ರೈತರಿಗೆ ಪುಡಿಗಾಸು ಪರಿಹಾರ ನೀಡಿ ಕೈ ತೊಳೆದುಕೊಂಡಿದೆ.

ಉಳಿದ ಒಂದೂವರೆ ಎಕರೆ ಜಮೀನನ್ನು ಹದಿನೈದು ವರ್ಷಗಳ ಹಿಂದೆ ನಾಲ್ಕು ಲಕ್ಷ ರೂಪಾಯಿ ಕೊಟ್ಟು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಖರೀದಿಸಿ ಅಪಾರ್ಟ್ಮೆಂಟ್ ಕಟ್ಟಿಸಿದ್ದಾರೆ. ಮುನಿ ಎಂಕ್ಟಮ್ಮನ ಯಜಮಾನ ಎಲ್ಲಪ್ಪನ ಪಾಲಿಗಿರುವ ಅರ್ಧ ಎಕರೆ ಜಮೀನಿನಲ್ಲಿ ತರಕಾರಿ ಸೊಪ್ಪು ಬೆಳೆದು ದೈನಿಕವ ದೂಡುತ್ತಾರೆ. ಅಂದ ಹಾಗೆ ಈ ಎಲ್ಲಪ್ಪ ಸಮೀಪದ ಗಾರ್ಮೆಂಟಿನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಾನೆ.

ಎರಡು ಮಕ್ಕಳಿವೆ ಒಂದು ಗಂಡು ಒಂದು ಹೆಣ್ಣು ಮಕ್ಕಳನ್ನು ಅವಳು ಸಮೀಪದ ಇಂಗ್ಲೀಷ್ ಮೀಡಿಯಮ್ ಶಾಲೆಗೆ ಸೇರಿಸಿದ್ದಾರೆ. ಇವರು ಕುಳಿತಿರುವ ಕೂಗಳತೆಯ ದೂರದಲ್ಲಿ ಕನ್ನಡ ಶಾಲೆಯಿದೆ. ಆದರೂ ಆಟೋ ಹತ್ತಿಸಿ ಇಂಗ್ಲೀಷ್ ಮೀಡಿಯಮ್ ಶಾಲೆಗೆ ಕಳುಹಿಸುತ್ತಾರೆ.

‘ಅಲ್ಲಮ್ಮ.. ಇಂಗ್ಲೀಷ್ ಮೀಡಿಯಮ್ ಸ್ಕೂಲು ಅಂತೀಯ ಪಾಠ ಕಷ್ಟ ಆಗುತ್ತೆ. ತುಂಬಾ ಹೋಮ್ವರ್ಕ್ ಇರುತ್ತೆ ಹೇಗೆಲ್ಲಾ ನಿಭಾಯಿಸುತ್ತಿಯಮ್ಮ ಎಂದು ಕೇಳಿದ್ದಕ್ಕೆ “ಈ ಕಷ್ಟ ಎಲ್ಲಾ ನಮ್ಮ ಕಾಲಕ್ಕೆ ಮುಗಿದು ಹೋಗಲಿ ಸರ್ ನಾವು ಇಸ್ಕೂಲ್ಗೆ ಓಗಿದ್ರೆ ಈ ಕಸ್ಟಾ ಅನುಭವಸುತಿದ್ವ? ಸಾಯಂಕಾಲ ಒಂದು ಗಂಟೆ ಟ್ಯೂಷನ್ ಕಳಿಸ್ತೀನಿ ಸಾರ” ಅಂತ ಮಾತು ಮುಗಿಸಿ ಹತ್ತು ರೂಪಾಯಿ ಕಟ್ಟು ಕೊತ್ತಂಬರಿ ಸೊಪ್ಪು .. ಅಂತ ಈಗ ತಾನೆ ಗಾರ್ಮೆಂಟ್ ಫ್ಯಾಕ್ಟರಿ ಯಿಂದ ಕೆಲಸ ಮುಗಿಸಿ ಬರುತಿದ್ದ ಹೆಂಗಳೆಯರ ಗಮನಸೆಳೆಯುವ ಯತ್ನ ಮಾಡುತಿದ್ದಾಗ ನಾನು ಮತ್ತು ಇವಳು ಸೊಪ್ಪು ಖರೀದಿಸಿ ಗಾಡಿ ಹತ್ತಿ ಮನೆಯತ್ತ ನಡೆದೆವು.

Add Comment