Quantcast

ಥೇಟು.. ಅವಳ ಹಾಗೆ!!

ಡಾ. ಪ್ರೇಮಲತ ಬಿ.

 

ಥೇಟು… ಅವಳ ಹಾಗೆ!!

ಹೇಳದೇ ಉಳಿದ ಮಾತುಗಳ

ಬಚ್ಚಿಟ್ಟುಕೊಂಡ  ಭಾವಗಳ

ಅವಕಾಶವಿರದೆ ಆರಿದ ತತ್ವಗಳ

ಅಳಿದುಳಿದು ಒಸರಿದ  ಉಗ್ಗಡಗಳ

ಬರೆದಿಟ್ಟುಕೊಂಡು ಮುಚ್ಚಿದ

ಪುಸ್ತಕದಂತೆ ಥೇಟು ಅವಳು

ಒಡಲಾಳದಲಿ ನಿಗಿ ನಿಗಿಸುವ ಕೆಂಡ

ಪಡೆಯದ-ನೀಡದ ಪ್ರೇಮದ ಗುನುಗ

ಜೀರ್ಣಿಸಿಕೊಳ್ಳಲಾಗದ  ಉರಿಯ

ಬೂದಿರಾಶಿಯ ನುಂಗಿ ಬಿಕ್ಕುತ್ತ

ಕಟ್ಟುವ ಕೊರಳು ಸಡಿಲಾಗದೆ

ಬದುಕ ಸಾರ್ಥಕ್ಯವನೇನೂ ಪ್ರಶ್ನಿಸದೆ

ಪುಟ ಪುಟಗಳ ನಡುವೆ ಬೆತ್ತಲಾಗುತ್ತ

ಬದುಕ ಹಿಡಿವ ತಾಕಲಾಟ

ಹೊರಗೆ ಅಂದ-ಚೆಂದದ ಮುಖಪುಟ

ನಡುವೆ ಅಲ್ಲೊಂದು ಹಕ್ಕಿ ಪುಚ್ಚ

ಇಲ್ಲೊಂದು ಒಣಗಿದ ಅರಳಿ ಎಲೆ

ತೀಡಿ ಮಡಚಿ ಒಪ್ಪವಾಗಿಟ್ಟ ಅವನ ಪತ್ರ

ಸಾವಿರ ಸಂತಸದ

ಹರಿದು ಪತ್ರವಾಗದ ಹಾಳೆಗಳು

ಚಂದದ ಪದ್ಯವಾಗಲಿಲ್ಲ

ಅಂದದ  ಚಿತ್ರವಾಗಲಿಲ್ಲ

ಓದುಗನ ಮಸ್ತಕಕ್ಕೆ ಎಟುಕುವ ಕಥೆಯಾಗಲಿಲ್ಲ

ಖಾಲಿ ಖಾಲಿ ಮುಖದಲ್ಲಿ

ಗರಿ ಗರಿ ಪೇಪರಿನಂತ ಮುಗುಳುನಗೆ

ಅವಳು ಮುಚ್ಚಿಟ್ಟು ಧೂಳಾದ ಪುಸ್ತಕ

 

 

Add Comment