Quantcast

ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಲ್ಲ ಅನ್ನಿಸಿದ ವೆಂಕಟಪ್ಪ ನಾಯಕ

ರವಿ ಕುಲಕರ್ಣಿ

ಆಸೆಗಳು ಹಿಡಿದಿಟ್ಟಷ್ಟು ಕೈ ಮೀರಿ ಬೆಳೆಯುತ್ತವೆ ಅಂತೆಯೇ ಮೀತಿಯನ್ನು ದಾಟಿ ಮುಂದುವರೆಯುತ್ತವೆ. ಆಸೆ ಯಾವದಾದರೂ ಆಗಬಹುದು ಅದಕ್ಕೆ ಯಾವ ವಿಷಯದ ಚೌಕಟ್ಟೂ ಇಲ್ಲ. ಇಂತಿಪ್ಪ ಆಸೆಗಳು ಮಲೆನಾಡಿನ ಮಧ್ಯ, ತನ್ನ ಕಟ್ಟುಮಸ್ತು ದೇಹ ಮತ್ತು ಜಗಜಟ್ಟಿತನಕ್ಕೆ ಹೆಸರಾದ ವೆಂಕಟಪ್ಪ ನಾಯಕನನ್ನು ಬಿಟ್ಟಿರುವುದುಂಟೆ? ಹೂವಳ್ಳಿಯ ಈ ವೆಂಕಟಪ್ಪ, ಹೆಂಡತಿಯನ್ನು ಕಾಲಘಟ್ಟದಲ್ಲಿ ಕಳೆದುಕೊಂಡು ಸಂಗಾತಿಯಿಲ್ಲದೆ, ಚಿನ್ನಕ್ಕ ಎಂಬ ಮದುವೆ ವಯಸ್ಸಿಗೆ ಬಂದಿರುವ ಚೆಲುವೆಯ ತಂದೆ. ತನ್ನ ತಾಯಿ ಮತ್ತು ಮಗಳೊಂದಿಗೆ ಹೂವಳ್ಳಿಯಲ್ಲಿ ಜೀವನ ಸಾಗಿಸುತ್ತಿರುವಾತ. ಒಂಟಿ ಜೀವನ, ಸಂಗಾತಿಯ ಸಾಂಗತ್ಯವಿಲ್ಲದೆ ವಿರಹ ವೇದನೆಯಲ್ಲಿ ನರಳುತ್ತಿರುವ ಕುಂಟ ವೆಂಕಟಪ್ಪನಿಗೆ ಬರಡು ಭೂಮಿಯಲ್ಲಿ ಓಯಸಿಸ್ ಕಂಡಂತೆ ನಾಗತ್ತೆಯ ಜೊತೆ ನಾಗಕ್ಕನ ಆಗಮನ ಹಿರಿ ಹಿರಿ ಹಿಗ್ಗುವಂತೆ ಮಾಡುತ್ತದೆ. ಮನದಲ್ಲಿ ಕಾಮದ- ಬಿಲ್ಲು ಚಿತ್ತಾರ ಮೂಡಿಸುತ್ತದೆ. ನಾಗಕ್ಕನ ಸೌಂದರ್ಯಕ್ಕೆ ಮಾರು ಹೋಗಿ ಅವಳನ್ನು ಹೊಂದುವ ಬಯಕೆ ಉತ್ಕಟವಾಗುತ್ತೆ. ಕಾಮಕ್ಕೆ ಕಣ್ಣಿಲ್ಲ ಎನ್ನುವಂತೆ ಮಗಳ ವಾರಿಗೆಯ ನಾಗಕ್ಕನನ್ನು ಮೋಹಿಸುತ್ತಾನೆ. ಮಗನನ್ನು ಕಳೆದುಕೊಂಡು, ಸೊಸೆಯೊಂದಿಗೆ ನೆಲೆ ನಿಲ್ಲುವುದಕ್ಕಾಗಿ ಊರೂರು ಅಲೆಯುತ್ತಾ ಹೂವಳ್ಳಿಗೆ ಬಂದ ನಾಗತ್ತೆಗೆ ಸೊಸೆಯನ್ನು ಯಾರಿಗಾದರೂ ಕೂಡಿಕೆ ಮಾಡಿ ಜೀವನ ಸಾಗಿಸಬೇಕೆಂಬ ಅನಿವಾರ್ಯ ದುರಾಲೋಚನೆಯಲ್ಲಿದ್ದಾಗ, ವೆಂಕಟಪ್ಪ ನಾಗಕ್ಕನ ಮೇಲಿನ ಬಯಕೆಯನ್ನು, ಕಾಮ ವಾಂಛೆಯನ್ನು ವ್ಯಕ್ತಪಡಿಸುವುದು ಮತ್ತು ಅವಳ ಕೂಡಿಕೆಗೆ ನಾಗತ್ತೆಯ ಜೊತೆ ಸೇರಿ ಬೇರೆಯವರಿಗೆ ಅನುಮನಬಾರದಂತೆ ಹರಕೆಯ ನೆಪ ಹೂಡುವುದು ಕಾಮ ಸಹಜ ನಡತೆಯನ್ನು ತೋರಿಸುತ್ತದೆ.

ಹರಕೆಯ ಕಾರ್ಯಕ್ಕೆ ಹಳೆಮನೆಯ ಸುಬ್ಬಣ್ಣ ಹೆಗ್ಗಡೆಯಲ್ಲಿ ಹಂದಿಯ ಸಹಾಯ ಯಾಚಿಸುವುದು ವೆಂಕಟಪ್ಪನ ಸಮಯೋಚಿತತೆ. ನಂತರ ಅಂದು ರಾತ್ರಿ, ನೆಂಟರಿಷ್ಟರು ಹೋದ ತರುವಾಯ ನಾಗತ್ತೆಯ ಸಹಕಾರ ಹಾಗೂ ಸಂಚಿನಿಂದ ನಾಗಕ್ಕನ ಜೊತೆ ಅವಳಿಗರಿವಿಲ್ಲದೆ ಸಂಧಿಸುವುದು ಮತ್ತು ಹಸಿದ ಹೆಬ್ಬುಲಿಯಂತೆ ಭೋಗಿಸುವದು, ವೆಂಕಟಪ್ಪನ ಕಾಮಕ್ರೂರತೆಯ ಪ್ರದರ್ಶನ! ನಾಗಕ್ಕನೋ ಮುಗ್ದತೆಯ ಉತ್ತುಂಗ. ಅತ್ತೆಯ ಅಸಂಭದ್ಧ ಮಾತನ್ನು ನಂಬಿದ ನಾಗಕ್ಕ, ತನ್ನ ಗಂಡನೇ ಮೈ ತಳೆದು ಬಂದಿರುವನೆಂದು ತಿಳಿದು ವೆಂಕಟಪ್ಪನಿಗೆ ಸಹಕರಿಸಿ ತಾನೂ ಸುಖಿಸುವುದು ವಿಪರ್ಯಾಸ. ಮರುದಿನ ಗೆಳತಿಯೊಂದಿಗೆ ತೋಟಕ್ಕೆ ಹೋದಾಗ, ರಾತ್ರಿಯ ವಿಚಿತ್ರವನ್ನು ವಿವರಿಸಿದಾಗ ಅವಳು ಸತ್ತಿರುವ ವ್ಯಕ್ತಿ ಬದುಕಿ ಬರುವುದಿಲ್ಲವೆಂದು, ನಡೆದಿದ್ದೆಲ್ಲವೂ ಕನಸೆಂದು ಸಮಾಧಾನಿಸುತ್ತಾಳೆ. ಮರುದಿನದ ರಾತ್ರಿ, ಗೊಂದಲದ ಗೂಡಾಗಿದ್ದ ನಾಗಕ್ಕ, ಅತ್ತೆ ಕೊಟ್ಟ ಕಳ್ಳನ್ನು ಕುಡಿಯದೆ ಚೆಲ್ಲಿ ಬಿಡುತ್ತಾಳೆ. ಇತ್ತ ಅತ್ತೆ, ತಾನು ಸೇವಿಸಿದ ಕಳ್ಳಿನ ಪ್ರಭಾವದಿಂದಾಗಿ ಬೇಗನೆ ನಿದ್ದೆ ಹೋಗುತ್ತಾಳೆ. ಚಂಚಲ ಮನಸ್ಕಲಾಗಿದ್ದ ನಾಗಕ್ಕ ನಿದ್ದೆ ಬರದೆ ಮನೆಯಿಂದ ಹೊರ ಹೋಗುತ್ತಾಳೆ. ಅದೇ ಸಮಯಕ್ಕೆ, ನಾಗಕ್ಕನ ದೇಹಸಿರಿಯನ್ನು ಮತ್ತೆ ಅನುಭವಿಸುವ ಆಸೆಯಿಂದ ಬಂದ ವೆಂಕಟಪ್ಪ, ನಾಗತ್ತೆಯನ್ನು ನಾಗಕ್ಕನೆಂದು ತಪ್ಪಾಗಿ ತಿಳಿದು ಸಂಧಿಸುತ್ತಾನೆ. ಹೊರಹೋಗಿದ್ದ ನಾಗಕ್ಕ ತಿರುಗಿ ಬಂದಾಗ ತೆರೆದಿಟ್ಟು ಹೋಗಿದ್ದ ಬಾಗಿಲು, ಮುಚ್ಚಿರುವದನ್ನು ಕಂಡು ಆಶ್ಚರ್ಯ ಪಟ್ಟು, ಇದು ಕನಸೋ ನನಸೋ ಎಂದು ಯೋಚನೆಯಲ್ಲಿಯೇ ಹೊರ ಕಟ್ಟೆಯಲ್ಲಿ ಕುಳಿತಾಗ, ಯುದ್ದದಲ್ಲಿ ಜಯಶೀಲನಾಗಿ ಬಳಲಿದಂತೆ ಮನೆಯ ಆಚೆ ಬಂದಾಗ ನಾಗಕ್ಕನನ್ನು ಕಂಡು ದಿಕ್ಕು ತೋಚದವನಂತೆ ಗರ ಬಡಿದಹಾಗೆ ನಿಲ್ಲುತ್ತಾನೆ. ಇನ್ನು ವೆಂಕಟಪ್ಪನನ್ನು ಮನೆಯಿಂದಾಚೆ ಬರುವುದನ್ನು ಕಂಡು ನಾಗಕ್ಕನೂ ಮೂರ್ಛೆ ಹೋಗುವುದು ಸಾಂಧರ್ಬಿಕತೆಯ ಅಂಶ.

ಜಿಂಕೆಯ ಮಾಂಸ ತಿಂದ ಹುಲಿಗೆ ಬೇರೆಯ ಆಹಾರ ರುಚಿಸುವುದೇ? ತಾನೂ ಸುಖಿಸಿದ್ದು ನಡುವಯಸ್ಸಿನ ನಾಗತ್ತೆ ಎಂದು ತಿಳಿದಾಗ ಆಗುವ ಅಸಹ್ಯ ಭಾವನೆ, ಪೈಶಾಚಿತನದಲ್ಲೂ ರಸಿಕತೆಯನ್ನು ವ್ಯಕ್ತಪಡಿಸುವ ಆ ಮನೋಭಾವ, ಅವನ ಸೌಂದರ್ಯ ಆರಾಧನೆಗೆ ಹಿಡಿದ ಕೈಗನ್ನಡಿಯಂತೆ ತೋರುವುದು. ಈ ಅಚಾತುರ್ಯದ ಘಟನೆಯ ವ್ಯಥೆಯಲ್ಲಿದಾಗಲೇ ಸಾಲ ವಸೂಲಿಗಾಗಿ ಬಂದ ಸಾಬಿಯನ್ನು, ವೆಂಕಟಪ್ಪ ತನ್ನ ಸ್ವಾಭಾವಿಕ ಗಡುಸುತನದಿಂದ ಅವನನ್ನು ಹಾಗೂ ಅವನ ಯಜಮಾನನ್ನು ಬೈದು, ಬೆದರಿಸಿ ಹೊರಗಟ್ಟುವನು. ದನಕಾಯೋರು ಬಿಟ್ಟರೂ, ದನ ಸಾಕಿದವರಿಗೆ ಬಿಡುಗಡೆಯಿಲ್ಲ ಎನ್ನುವಂತೆ ಸಾಲಗಾರರ ಸಂಚು, ವತ್ತಡಕ್ಕೆ ಬಲಿಯಾಗಿ ಅಸಹಾಯಕತೆಯಿಂದ ಮಗಳನ್ನು ಮುದುಕ ಭರಮೈ ಗೌಡನಿಗೆ ಮದುವೆಯ ನಿಶ್ಚಯ ಮಾಡುತ್ತಾನೆ. ಇತ್ತ ಕಡೆ, ಅವನ ಮಗಳು ಚಿನ್ನಕ್ಕ, ಚಿಕ್ಕಂದಿನಿಂದ ಪ್ರೀತಿಸುತ್ತಿದ್ದ ಮುಕುಂದಯ್ಯನೊಂದಿಗೆ ಐತನ ಹೆಂಡತಿ ಪೀಂಚಲು ಸಹಾಯದಿಂದ ಮದುವೆ ಮನೆಯಿಂದ ಓಡಿಹೋಗುತ್ತಾಳೆ. ಮಗಳ ಈ ಅನಿರೀಕ್ಷಿತ ನಡೆಗೆ, ವೆಂಕಟಪ್ಪ ಸಾಲಗಾರ ಭಯ ಮತ್ತು ಮರ್ಯಾದೆಗೆ ಅಂಜಿ ಹೃದಯಾಘಾತದಿಂದ ಪ್ರಾಣ ಕಳೆದುಕೊಳ್ಳುವನು.

ವೆಂಕಟಪ್ಪನದು ಇಲ್ಲಿ, ಕಿರಿ ವಯಸ್ಸಿನ ವಿಧವೆಯನ್ನು ಮೋಹಿಸುವ, ಮಾಡಿದ ಅಚಾತುರ್ಯಕ್ಕೆ ವ್ಯಸನ ಪಡುವ, ಸಾಲಗಾರರನ್ನು ಹೆದರಿಸುವ ಮತ್ತು ಅವರಿಗೆ ಹೆದರುವ ಹಾಗೂ ಮಗಳನ್ನು ಕಳೆದುಕೊಂಡ ತಂದೆಯಾಗಿ ಸಂಕಟಪಡುವಂತ ಸಂಕೀರ್ಣ ಪಾತ್ರ.

(ನಾಟಕಕ್ಕೆ ಅನ್ವಯಿಸಿದಂತೆ ಮಾತ್ರ.)

 

5 Comments

 1. Shivanna
  March 18, 2016
 2. ಮೌನಯೋಗಿ
  January 21, 2016
 3. Roseanna
  December 23, 2015
 4. Radhika
  March 23, 2015

Add Comment