Quantcast

ಆಕೆ ಸುಮ್ಮನೇ ನಾಚಿ.. ನಿಡುಸುಯ್ದಳು

prasad shenoy r k

ಪ್ರಸಾದ್ ಶೆಣೈ ಆರ್ ಕೆ

ಒಂದು ತಣ್ಣಗಿನ ಮಳೆ ಪಿಟ ಪಿಟನೇ ಅಂತ ಬೀಳುತ್ತಿರಬೇಕು, ಸ್ನಾನದ ಮನೆಯಲ್ಲಿ ಬಿಸಿ ನೀರು ಮತ್ತೂ ಬಿಸಿಯಾಗಿ ಕುದಿಯುತ್ತಲೇ ಇರಬೇಕು, ಅದನ್ನು ಹಾಯಾಗಿ ನೆತ್ತಿ ಮೇಲೆ ಹೊಯ್ದುಕೊಂಡರೆ ನೆನಪುಗಳ ಸುರ ಹೊನ್ನೆ ಮೈ ಮೇಲೆಲ್ಲಾ ಬರುತ್ತಾಳೆ, ಬಾಯಲ್ಲಿ ತಂತಾನೇ ಹೊಮ್ಮುವ ಹಾಡಿಗೆ ಹಂಡೆಯೂ ತಲೆದೂಗುತ್ತದೆ.. ಸಾಬೂನಿನ ಪರಿಮಳವೂ, ಮತ್ತೂ ಮತ್ತೂ ಹುಟ್ಟುವ ನೊರೆಯೂ ಕುಪ್ಪಳಿಸಿ ಕುಣಿಸುತ್ತದೆ.

ಹಂಡೆ ಸ್ನಾನ, ತಣ್ಣಗಿನ ಮಳೆ, ಸ್ನಾನದ ಕೋಣೆ ತುಂಬಾ ಮುತ್ತಿಕೊಳ್ಳುವ ಬಿಸಿ ಬಿಸಿ ಹಬೆ, ಅದರ ನಡುವೆಯೇ ಕೂತು ಅಮ್ಮನಿಂದ ತಲೆಗೆ ಬಿಸಿನೀರು ಹೊಯ್ದುಕೊಳ್ಳುತ್ತಿರುವ ಪುಟ್ಟ ಹುಡುಗ, ಅದೇ ಸ್ನಾನದ ಕೋಣೆಯಿಂದ ಹೊರಟು ಪಾಚಿಕಟ್ಟಿದ ಅಂಗಳದ ತುಂಬೆಲ್ಲಾ ಹರಡಿ ಕೊನೆಗೆ ಎಲ್ಲಿಗೋ ಹೋಗಿಬಿಡುವ ಗಂಧದ ಸಾಬೂನಿನ ಇಷ್ಟಿಷ್ಟೇ ಅಮಲ ಘಮಲು, ತುಂತುರು ಅಲ್ಲಿ ನೀರ ಹಾಡು… ಎಂದು ನೀಳವಾಗಿ ಕೊರಳ ಗಂಟೆ ಅಲ್ಲಾಡಿಸಿ ಸ್ನಾನಕೋಣೆಯಿಂದ ಕೇಳೋ tundu hykluಅವಳ ಸಣ್ಣಗಿನ ಉಲಿ ಚಂದವೋ ಚಂದ ಈ ಎಲ್ಲಾ ಸೀನುಗಳು ಅಂತ ಮೈ ಮನಸ್ಸು ಸಣ್ಣಗೇ ಸೀನುತ್ತಿರುವ ಈ ಹೊತ್ತಲ್ಲಿ ಹಳೆಯ ಸ್ನಾನದ ಕೋಣೆಯೊಂದರ ಮಗ್ಗುಲಲ್ಲಿ ಕೂತು ಕುವೆಂಪು ಅವರ ಅಜ್ಜಯ್ಯನಂತೆ ಅಭ್ಯಂಜನ ಸ್ನಾನ ಮಾಡಬೇಕು, ಕೊತ ಕೊತ ಕುದಿಯೋ ನೀರನ್ನು ರಪ ರಪನೇ ನೆತ್ತಿಗೆ ಹುಯ್ದುಕೊಳ್ಳಬೇಕು ಅನ್ನೋ ಆಶೆ ಏಕೋ ಅತೀಯಾಗುತ್ತಿದೆ.

ನಿಂಗೇನು ಹುಚ್ಚಾ ಅನ್ನಬೇಡಿ, ಹೋಗಿ ಹೋಗಿ ಸ್ನಾನದ ಬಗ್ಗೆ ಬರೆಯೋದಾ? ಅಂತ ಅರೆಗಳಿಗೆಯಲ್ಲೇ ಸ್ನಾನ ಅನ್ನೋ ಅಸಹನೀಯ ನಿತ್ಯ ಕರ್ಮವನ್ನು ಪೂರೈಸುವ ನೀವು ಅಯ್ಯೋ ಅದ್ರೆಲ್ಲೇನೋ ವಿಶೇಷ?!! ಅಂತ ಈ ಬರಹವನ್ನು ಓದಲಿಕ್ಕೇನೇ ಹೋಗಲಿಕ್ಕಿಲ್ಲ, ಆದರೆ ಅಮ್ಮ ಮೈಗೆ ಸೀಗೆ ಪುಡಿ ತಿಕ್ಕಿ ತಿಕ್ಕಿ ಪದ್ಯ ಹೇಳುತ್ತಾ ಮಹಾಮಜ್ಜನ ಮಾಡಿಸುತ್ತಿದ್ದುದು ನೆನಪಾಗುತ್ತದೆ ಅಂತಲೂ, ಬಾಲ್ಯದಲ್ಲಿ ಸುಖ ನೀಡುತ್ತಿದ್ದ ಆ ಸ್ನಾನ ಇದೀಗ ಕಾಲದ ತೆಕ್ಕೆಯಲ್ಲಿ ಲೀನವಾಗಿ ಬಿಟ್ಟಿದೆ. ಅಂತ ಹಳೆ ನೆನಪುಗಳಲ್ಲಿ ಆಗಾಗ ಬಿಸಿ ಬಿಸಿ ಸ್ನಾನದ ಮನೆಯನ್ನು ಹೊಕ್ಕುವವರಿಗೆ, ಒಟ್ಟಾರೆ ಜಳಕದಲ್ಲಿ ಏಸೋಂದು ಪುಳಕವಿತ್ತಾ ಅಂತ ಹೇಳುವ ಮಜ್ಜನ ಪ್ರಿಯರು ನೀವೂ ಆಗಿದ್ದರೆ ನನ್ನನ್ನು ಅರ್ಥಮಾಡಕೊಳ್ಳುತ್ತೀರಿ ಅನ್ನೋ ನಂಬುಗೆಯಿಂದ ಬರೆಯುತ್ತಿದ್ದೇನೆ.

ಸಂಡೆಗೆ ಪುಳಕ ಮಂಡೆಗೆ ಜಳಕ

ಆಗಿದದ್ದು ಈಗಿಲ್ಲ, ಈಗಿದ್ದದ್ದು ಆಗಿರಲಿಲ್ಲ. ಆಗ ಸಾಹಿತ್ಯ ಎಲ್ಲಾ ಮನೆಮನೆಯ ದೀಪ, ಆದರೆ ಈಗ ಅಂತಹ ವಾತಾವರಣವೇನೂ ಇಲ್ಲ. ಈಗ ಸ್ನಾನದ ವಿಚಾರಕ್ಕೆ ಬಂದಾಗಲೂ ಈ ಮಾತೇ ಅನ್ವಯಿಸುತ್ತದೆ. ಆಗಲೂ ಸ್ನಾನ ಇತ್ತು ಈಗಲೂ ಇದೆ. ಆದರೆ ಆ ದಿನಗಳ ಸ್ನಾನದ ನೆನಪೇ ಅತ್ಯಂತ ಮಧುರ, ತುಸು ಹಗುರ. ಸ್ನಾನ ಆಗ ನಿತ್ಯ ಕರ್ಮವಷ್ಟೇ ಆಗಿರಲಿಲ್ಲ. ಮನೋರಂಜನೆಯಾಗಿತ್ತು, ಸ್ನಾನದಿಂದಲೂ ಸಂಬಂಧಗಳು ಬೆಸೆಯುತ್ತಿತ್ತು. ಭಾನುವಾರ ಮನೆ ಮಂದಿಯೆಲ್ಲಾ ಮೈಗೆ ಎಣ್ಣೆ ತಿಕ್ಕಿಸಿಕೊಂಡು ಸಂಡೆಯ ಜಳಕಕ್ಕೆ ಅಣಿಯಾಗುತ್ತಿದ್ದ ವೇಳೆಗಳು ಎಷ್ಟೊಂದು ಚಂದವಿತ್ತು.

ಮನೆ ಮಕ್ಕಳೆಲ್ಲಾ ಎಣ್ಣೆ ಮೈಗೆ ಸರಿಯಾಗಿ ಹತ್ತಿಕೊಳ್ಳಲು ಇನ್ನೂ ಹೊತ್ತಿದೆಯಲ್ಲಾ ಅಂತ ಅಂಗಳದಲ್ಲಿ ಹಾಯಾಗಿ ಅಡ್ಡಾಗುವಾಗ ಅವರಿಗೆ ಅಂಗಳದ ಪೇರಳೆ ಮರದ ಮೇಲೆ ಗೂಡು ಕಟ್ಟಿದ ಪಿಳಕಾರ ಹಕ್ಕಿ ಕಾಣಿಸುತ್ತಿತ್ತು, ಅದು ದೂರದಿಂದ ಏನನ್ನೋ ಹೊತ್ತು ತಂದು ಮರಿಗಳಿಗೆ ಕೊಡುವುದು, ಮತ್ತೆ ಹಾರಿ ಹೋಗಿ ಬೇಟೆಗೆ ಹೊಂಚು ಹಾಕುವುದು ಇದೆಲ್ಲಾ ನೋಡುತ್ತಾ ನೋಡುತ್ತಾ ಎಳೆ ಕಣ್ಣುಗಳಲ್ಲಿ ಪಕ್ಷಿಗಳ ಬಗ್ಗೆ ಕೂತೂಹಲ ಮೂಡಿ ಪಕ್ಷಿಲೋಕವನ್ನೂ ಮತ್ತೂ ಬೆರಗುಗಣ್ಣಿನಿಂದ ನೋಡುವ ಆಸೆ ಹೆಚ್ಚುತ್ತಿತ್ತು.

ಅಷ್ಟು ಹೊತ್ತಿಗೆ ಮೈಗೆ ತಿಕ್ಕಿದ ಎಣ್ಣೆ ಕರಗಿ ಮೈ ಮನಸ್ಸು ಸ್ನಾನಕ್ಕೆ ಅಣಿಯಾಗುತ್ತಿತ್ತು. ಅಜ್ಜನಿಗೆ ಎಣ್ಣೆ ಹಚ್ಚಿದರೆ, ಅಜ್ಜ ಎಣ್ಣೆ ಪೂರ್ತಿ ಮೈಗೆ ಹತ್ತಿಕೊಳ್ಳಲು ಸಾಕಷ್ಟು ಸಮಯಕೊಟ್ಟು ಆ ಸಮಯದಲ್ಲಿ ಮೊಮ್ಮಕ್ಕಳನ್ನು, ಕೂರಿಸಿ ಏನೇನೋ ಕತೆ ಹೇಳುತ್ತಿದ್ದ. ಸ್ನಾನದ ಮೊದಲು ಮೂಡುತ್ತಿದ್ದ ಅಜ್ಜನ ಕತೆಗಳನ್ನು ಕೇಳುತ್ತಾ ಕೇಳುತ್ತಾ ಮಕ್ಕಳು ಸ್ನಾನದ ವಿಷಯವನ್ನೇ ಮರೆತುಬಿಡುತ್ತಿದ್ದರು. ಕತೆ ಮುಗಿಯೋ ಹೊತ್ತಿಗೆ ಬನ್ರೋ ಸ್ನಾನಕ್ಕೆ ಅಂತ ಸ್ನಾನದ ಕೋಣೆಯಿಂದ ಅಜ್ಜಿಯೋ, ಅಮ್ಮನೋ ಕರೆದಾಗ ಕತೆಯ ಗುಂಗಿನಿಂದ ಹೇಗೆ ಸುಧಾರಿಸಿಕೊಂಡು ಹೊರಬಂದು ನೀಟಾಗಿ ಸ್ನಾನದ ಕೋಣೆಗೆ ಆನಂದದಿಂದಲೋ, ತುಸು ಭಯದಿಂದಲೋ ಹೋಗಿಬಿಡುತ್ತಿದ್ದರು.

ನೋಡಿ ಆಗ ಒಂದು ಸ್ನಾನದ ನೆಪದಿಂದ ಮನೆ ತುಂಬಾ ಕತೆ ಹುಟ್ಟಿಕೊಳ್ಳುತ್ತಿದ್ದವು.. ಅದರಲ್ಲೇ ಮಕ್ಕಳ ಕಲ್ಪನಾ ಶಕ್ತಿಯೂ ಬೆಳೆಯುತ್ತಿತ್ತು.. ಗೂಡು ಕಟ್ಟಿದ bathಹಕ್ಕಿಯ ದಿನಚರಿ ಕಾಣಿಸುತ್ತಿತ್ತು.. ಅಜ್ಜ ಅಜ್ಜಿಯ ಮುದ್ದು ಪ್ರೀತಿ ಸಿಗುತ್ತಿತ್ತು… ಮೈಗೆ ಎಣ್ಣೆ ತಿಕ್ಕಿ ಏನಾದರೂ ಕೆಲಸ ಮಾಡಿದ್ರೆ ಎಣ್ಣೆ ಮೈಗೆ ಹತ್ತಿಕೊಳ್ತದೆ ಅಂತ ಮನೆ ಮಂದಿ ಎಣ್ಣೆ ಹಚ್ಚಿ ಯಾವತ್ತೂ ಮಾಡಲು ಆಗದಿದ್ದ ಕೆಲ ಮನೆಕೆಲಸಗಳನ್ನು ಎಣ್ಣೆ ಹಚ್ಚಿದ ಆ ದಿನದ ಜೋಶ್ನಲ್ಲಿ ಮಾಡಿ ಮುಗಿಸುತ್ತಿದ್ದರು…
ಇನ್ನು ಸ್ನಾನ ಮಾಡಿದಾಗ ಏನೆಲ್ಲಾ ಹಾಡು, ಬಾಕಿ ಇದ್ದ ಹೋಂವರ್ಕ್, ಯಾರಿಗೋ ಕೊಡಲು ಬಾಕಿ ಇದ್ದ ಸಾಲ, ಕಾಲೇಜಿನಲ್ಲಿ ಓದುತ್ತಿದ್ದಾಗ ಸಿಕ್ಕ ಬಿಎಸ್ಸಿ ಹುಡುಗಿ ನಿನ್ನೆ ಮತ್ತೆ ಸಿಕ್ಕು ನಕ್ಕಿದ್ದು.. ಇನ್ಯಾರದ್ದೋ ತಿಳಿ, ತಿಳಿ ನೆನಪು..

ಅಬ್ಬಾ ಒಂದು ಸ್ನಾನದಿಂದ ಏನೆನೆಲ್ಲಾ ಸಿಕ್ಕಿಬಿಡುತ್ತಿತ್ತಲ್ಲಾ? ಮೊನ್ನೆ ಮಲೆನಾಡ ಗೆಳತಿ ಹತ್ತಿರ ಸ್ನಾನದ ವಿಷಯ ಪ್ರಸ್ತಾಪಿಸೋವಾಗ ಆಕೆ ಸುಮ್ಮನೇ ನಾಚಿ.. ಮಲೆನಾಡಲ್ಲೂ ಈಗ ಹಳೆ ಸ್ನಾನದ ಮನೆಗಳೂ, ಹಿಂದಿದ್ದ ಸ್ನಾನದ ಸಂಸ್ಕೃತಿ ಕಣ್ಮರೆಯಾಗುತ್ತಿದೆ ಅಂತ ನಿಡುಸುಯ್ದಳು. ಹೌದು. ಮಹಾನಗರ, ಪೇಟೆ ಮಂದಿಗಳಿಗೆ ಸ್ನಾನ ಅರೆಘಳಿಗೆ ಮುಗಿದುಹೋಗುವ ಅಸಹನೀಯ ಕರ್ಮ. ಇನ್ನು ಸ್ನಾನದ ಹಿಂದಿರುವ ಸುಗಂಧಮಯ ಭಾವ ಆ ಬ್ಯುಸಿ ಬದುಕಿನ ಹೆಣಗಾಟದಲ್ಲಿ ಅವರಿಗೆ ಹೇಗೆ ಕಾಡಬೇಕು? ಅನ್ನಿಸಿತು.

ಎಷ್ಟಂದರೂ ನಾನು ಬಾಹುಬಲಿಯ ಊರಿನವನು ಕಾರ್ಕಳದ ಬಾಹುಬಲಿಗೆ ಹೋದ ವರುಷ ತಾನೇ ಗಡದ್ದು ಮಜ್ಜನವಾದಾಗ ನಾವೆಲ್ಲಾ ಉತ್ಕಟ ಸಂಭ್ರಮದಲ್ಲಿದ್ದೆವು. ಏನಪ್ಪ ನಿಮಗೇನೇ ಮಹಾಮಸ್ತಕಾಭಿಷೇಕ ಆದ ಹಾಗೇ ಆಡ್ತೀರಲ್ಲಾ? ಅಂತ ದೂರದೂರಿನ ಗೆಳೆಯನೊಬ್ಬ ನೆಟ್ಟಗೇ ಮೂದಲಿಸಿದ್ದ.
ಹೌದು ಅವನಿಗೇ ಮಜ್ಜನವಾದರೆ ನಮ್ಮ ಮೈ ಮನಸ್ಸೂ ಸಂತುಷ್ಟವಾಗಿ ಮಿಂದ ಹಾಗಾಗುತ್ತದೆ. 12 ವರುಷಕ್ಕೊಮ್ಮೆ ಅವನಿಗೆ ಸಂಭ್ರಮದಿಂದ ಮಾಡಿಸುವ ಜಳಕದ ಪುಳಕಕ್ಕೆ ಊರಿಗೂರೇ ಮಿಂದುಬಿಡುತ್ತದೆ.

ಮಜ್ಜನ ಅನ್ನೋ ಪರಿಕಲ್ಪನೆಯ ಬಗ್ಗೆ, ಆ ತುಂಬು ಸಡಗರದ ಬಗ್ಗೆ ಕೇಳುತ್ತಲೇ ಬಾಹುಬಲಿಯ ಮಸ್ತಕಾಭಿಷೇಕವನ್ನು ಬೆರಗುಗಣ್ಣಿನಿಂದಲೇ ನೋಡೋ ಇಲ್ಲಿನ ಪುಟ್ಟ ಬಾಲಕನೂ ಮನೆಗೆ ಹೋಗಿ ಬಾಹುಬಲಿಯೇ ತಾನು ಎಂದು ತನ್ನೊಳಗೇ ಕಲ್ಪಿಸಿಕೊಂಡು ಸ್ನಾನ ಮಾಡುತ್ತಾನೆ. ಹಾಗಾಗಿ ಸ್ನಾನ, ಮಜ್ಜನ ಅಂತೆಲ್ಲಾ ವಿಷಯ ಬಂದಾಗ ನಾನು ತುಂಬಿಕೊಳ್ಳುತ್ತೇನೆ ಎಂದಾಗ ದೂರದೂರಿನ ಗೆಳೆಯ ಚೂರುಚೂರೇ ಕರಗಿಹೋದ. ಇಷ್ಟೆಲ್ಲಾ ಬರೆಯೋ ಹೊತ್ತಿಗೆ ಮಳೆ ಜಾಸ್ತಿಯಾಗಿತ್ತು, ದೂರದಿಂದ ಬಾಹುಬಲಿಯ ಮೊಗ ಇಷ್ಟೇ ಇಷ್ಟು ಕಾಣುತ್ತಿತ್ತು.

ಬೋರೆಂದು ಬರುತ್ತಿದ್ದ ಮಳೆರಾಯ ಅವನನ್ನು ಬಲು ಆಸ್ಥೆಯಿಂದ ಸ್ನಾನ ಮಾಡಿಸುತ್ತಿದ್ದ.

2 Comments

  1. shama nandibetta
    August 12, 2016
  2. Sangeeta Kalmane
    August 12, 2016

Add Comment