Quantcast

ಈವರೆಗೆ ನಾನು ಯಾರಲ್ಲೂ ಹೇಳದ ಸಂಗತಿಯೊಂದನ್ನು ಹೇಳುತ್ತಿದ್ದೇನೆ..

Man1

                                                                                   ಮಂಜುನಾಥ್ ಕಾಮತ್

ನಾನು ಬಚ್ಚಿಟ್ಟ ಒಂದು ಸತ್ಯವನ್ನಿಲ್ಲಿ ಬಿಚ್ಚಿಡುತ್ತಿದ್ದೇನೆ. ವಿಷಯ ಗೊತ್ತಾದ ಮೇಲೆ ಜನ ಹೇಗೆ ಪ್ರತಿಕ್ರಿಯಿಸುತ್ತಾರೋ ಗೊತ್ತಿಲ್ಲ. ನನ್ನ ಮನೆ, ಕುಟುಂಬವಂತೂ ಬೆಚ್ಚಿಬೀಳುತ್ತೆ. ಪಾಪಪ್ರಜ್ಞೆಗೆ ಒಳಗಾಗುತ್ತೆ. ಹೇಳಿಕೊಳ್ಳದಿದ್ದರೆ ನನಗೆ ಸಮಾಧಾನವಿಲ್ಲ.

ಕುಟುಂಬಕ್ಕಿರುವವನು ನಾನೊಬ್ಬನೇ.  ವೈಕುಂಠ ಕಾಮತ್, ನನ್ನಜ್ಜ. ಅವರ  ಸಂತಾನ ಬೆಳೆಸಬೇಕಾದವನು ನಾನು. ಚಿಕ್ಕಪ್ಪ ದೊಡ್ಡಪ್ಪಂದಿರಿಗೆಲ್ಲಾ ಹೆಣ್ಣು ಮಕ್ಕಳೇ.  ಎರಡು ವರುಷದಲ್ಲಿ ನನಗದೆಷ್ಟು ಜಾತಕಗಳು ಬಂತು ಅಂತೀರಾ. ಯಾವೊಂದೂ ಕೂಡಿ ಬರುತ್ತಿಲ್ಲ. ಕೂಡಿ ಬಂದ ಹತ್ತರಲ್ಲಿ ಯಾವುದೂ ಸೆಟ್ಟಾಗಲಿಲ್ಲ.

Manjannaಇದು ಅವಧಿಯಲ್ಲಿ ನನ್ನ ಮೊದಲ ಅಂಕಣ.

ಜಿ.ಎನ್. ಮೋಹನ್ ಸರ್ ನಮ್ಮನ್ನು ತರಲೆಗಳು ಎಂದೇ ಕರೆಯೋದು.

ಆ ಪದವನ್ನು ಹೊರತು ಪಡಿಸಿ ಉಪನ್ಯಾಸಕನೆಂದೋ, ಯುವ ಬರಹಗಾರನೆಂದೋ ಕರೆದಿದ್ದರೆ ಖುಷಿ ಇರುತ್ತಿರಲಿಲ್ಲ. ನಾಲ್ಕು ಮಂದಿ ತರಲೆಗಳಿಗೆ ಅಂಕಣ ಭಾಗ್ಯ ಒದಗಿಸಿರೋ ‘ಅವಧಿ’ಯ ವೇದಿಕೆಯಲ್ಲಿ ಈವರೆಗೆ ನಾನು ಯಾರಲ್ಲೂ ಹೇಳದ ಸಂಗತಿಯೊಂದನ್ನು ಹೇಳುತ್ತಿದ್ದೇನೆ.

ಓದುಗ ಐದಾರು ಯುವಕರು ಸೇರಿಕೊಂಡು ಒಂದು ಪ್ರಕಾಶನವನ್ನು ಆರಂಭಿಸಿದ್ದೆವು.  ಬಿಳಿಕಲ್ಲು ಪ್ರಕಾಶನ. ಅದರ ಮೊದಲ ಪುಸ್ತಕ. ಪ್ರಿಂಟಾಗಿ ಮಣಿಪಾಲಕ್ಕೆ ಬಂದಿತ್ತು. ಬಹಳ ಉತ್ಸಾಹದಿಂದಲೇ, ಮಗು ಹುಟ್ಟಿತೆಂಬಷ್ಟು ಸಂತೋಷದಲ್ಲಿ ಅದನ್ನು ನೋಡಿ ಮುದ್ದಾಡಬೇಕೆಂಬ ಕನಸಿನಲ್ಲೇ ಬರುತ್ತಿದ್ದೆ. ನನ್ನ ಬುಲೆಟ್ಟು “ರೆಡ್ಡಿ”ಗೆ  ಹೊಸ ಸೈಲೆನ್ಸರನ್ನು ಹಾಕಿಸಿದ್ದೆ. ಅದರ ಸದ್ದನ್ನು ಅನುಭವಿಸುತ್ತಾ ಆಕಾಶದಲ್ಲಿ ಹಾರಿದ ಅನುಭವ.

ಭೂಮಿಯ ಮೇಲೆ ಕಣ್ಣಿರಲಿಲ್ಲವೆಂದಲ್ಲ. ರಸ್ತೆಯನ್ನೇ ನೋಡುತ್ತಿದ್ದೆ. ಆದರೆ ನನಗದು ಕಂಡಿದ್ದೇ ಇಲ್ಲ. ಏರು ಏರಿದ್ದೇನೆ. ಅಲ್ಲೊಂದು ಕೆರೆಯಿದೆ. ಅದನ್ನೂ ದಾಟಿದ್ದೇನೆ. ಕೆರೆಯ ಆಚೆಗೆ ನಾಗ ಬನವಿದೆ. ಬಲು ಕಾರಣಿಕದ ಬನವಂತೆ.  ಪ್ರತೀ ಭಾನುವಾರವೂ ಅಲ್ಲಿ ಜನ ಸೇರುತ್ತಾರೆ. ತನು ಎರೆಯುತ್ತಾರೆ. ತಂಬಿಲ ಮಾಡಿಸುತ್ತಾರೆ.

ಬಲಕ್ಕಿದ್ದ ಆ ಬನದ ಬಳಿ ಇದ್ದ ಗೌಜಿಯನ್ನು ವಾರೆ ನೋಟದಲ್ಲೇ ನೋಡಿ ಮುಂದಿನ ಸಣ್ಣ ಏರನ್ನು ಏರುತ್ತಿದ್ದೆ. ಎದುರಿನಿಂದ ಬೈಕೊಂದು ಬರುತ್ತಿತ್ತು. ಅದರಲ್ಲಿದ್ದವ ಕೈ ಸನ್ನೆ ಮಾಡಿ ನನಗೇನೋ ಹೇಳಿ ಹೋಗಿಬಿಟ್ಟ. ಅವನು ಹೇಳಿದ್ದು ಅರ್ಥ ಆಗಲಿಲ್ಲ. ಏನೂ ಕಾಣಲಿಲ್ಲ. ಹಿಂತಿರುಗಿ ಅವ ಹೋದ ದಾರಿಯನ್ನೇ ನೋಡಿದೆ. ಅದೇ ತಪ್ಪು, ನಾನು ಮಾಡಿದ್ದು. ಎಳೆ ನಾಗರ ಮರಿಯೊಂದು ನನ್ನ ರೆಡ್ಡಿಯ ಚಕ್ರದಡಿಗೆ ಬಿದ್ದು ಬಿಡ್ತು. ಸತ್ತೇ ಹೋಯ್ತು.

                                    *****
Manj2ಉರಗ ತಜ್ಞ ಗುರುರಾಜ ಸನಿಲರ ಶಿಷ್ಯನಂತೆ ಅವರೊಂದಿಗೆ ಓಡಾಡುತ್ತಿದ್ದವನು ನಾನು. ಸನಿಲ್ ಸರ್  ಹಾವುಗಳ ಬಗ್ಗೆ ಇದ್ದ  ಹೆದರಿಕೆಯನ್ನು ಓಡಿಸುತ್ತಿದ್ದರು. ಧೈರ್ಯ ತುಂಬುತ್ತಿದ್ದರು. ಹಾವುಗಳನ್ನು ಹಿಡಿಯೋಕೆ ಕರೆ ಬಂದಾಗ ನನ್ನನ್ನೂ ಕರೆದೊಯ್ಯುತ್ತಿದ್ದರು. ಹಾವುಗಳನ್ನು ಉಳಿಸುವ ಬಗ್ಗೆ, ಅದಕ್ಕಂಟಿರೋ ದೈವತ್ವ, ನಂಬಿಕೆ, ಮೂಢನಂಬಿಕೆಗಳ ಬಗ್ಗೆ ಪಾಠ ಹೇಳುತ್ತಿದ್ದರು. ವಿಷ ಪೂರಿತ ನಾಗರ ಹಾವುಗಳನ್ನೇ ನನ್ನ ಕೈಯಲ್ಲಿ ಕೊಟ್ಟು ಅದೂ ಮಗೂ ತರಾನೇ ಅನ್ನುತ್ತಿದ್ದರು.

ಅಲ್ಲಿಂದ ನಾನೂ ಬದಲಾಗಿದ್ದೆ. ಹಾವುಗಳ ಬಗೆಗಿದ್ದ ಅಂಜಿಕೆ ದೂರವಾಗಿ ಪ್ರೀತಿಸಲು ಆರಂಭಿಸಿದ್ದೆ. ನಾಗರ ಮರಿಗಳಂದ್ರೆ ನನಗಂತೂ ಪಂಚ ಪ್ರಾಣ. ಕೃತಕ ಕಾವನ್ನು ಕೊಟ್ಟು ಮರಿ ಮಾಡಿದ್ದೋ, ಬುಲ್ಡೋಝರ್ ಅಗೆತಕ್ಕೋ ಸಿಕ್ಕಿದ ಮರಿಗಳನ್ನು ಮನೆಗೆ ತಂದು ಆರೈಕೆ ಮಾಡಿ ಪಶ್ಚಿಮ ಘಟ್ಟದ ಕಾಡುಗಳಿಗೆ ಅವನ್ನು ಬಿಟ್ಟು ಬರೋವಾಗ ನಾನೂ ಸನಿಲ್ ಅವರ ಹಿಂಬಾಲಕ. ಮರಿ ನಾಗರಗಳ ಬಾಟಲಿಯಂತೂ ನಾನೇ ಹಿಡಿದುಕೊಳ್ಳುವವನು. ಅವಂದ್ರೆ ನನಗಿಷ್ಟ. ಅವಂದ್ರೆ ನನಗೆ ಚಂದ.  ಪಾಪದ ಪ್ರಾಣಿಗಳು. ನಮ್ಮ ಹೆದರಿಕೆಗೆ ಅವು ಬಲಿಯಾಗುತ್ತಿವೆಯಷ್ಟೆ.

ಹಾವುಗಳ ಬಗ್ಗೆ ಇಂತಹ ಮನಸ್ಥಿತಿ ಇರೋ ನನ್ನಿಂದಾಗಿಯೇ ಒಂದು ಹಾವು ಸತ್ತಿತಲ್ಲ. ಮುಗ್ಧ ಜೀವಿಯೊಂದನ್ನು ಕೊಂದು ಬಿಟ್ಟೆನಲ್ಲ ಎಂಬ ಪಾಪ ಪ್ರಜ್ಞೆ.

ಬೈಕಿನಿಂದ ಇಳಿದೆ. ಚಲನೆಯೇ ಇಲ್ಲದೆ ಎಳೆ ನಾಗರ ಹಾವು ಬಿದ್ದು ಕೊಂಡಿತ್ತು. ಗಾಯ ಎಲ್ಲೂ ಕಾಣುತ್ತಿಲ್ಲ. ಯಾರೂ ನೋಡಿಲ್ಲ. ನಾನೊಬ್ಬನೇ. ಯಾರಾದರೂ ಬರೋಕೆ ಮುಂಚೆ ಪೊದೆಕಡೆ ಎಸೆದು ಬಿಡಬೇಕು. ಜನ ನೋಡಿದ್ರೆ ಬಿಡುತ್ತಾರಾ? ಅದೂ ಕರಾವಳಿ ಜಿಲ್ಲೆಯಲ್ಲಿ.

ನನಗೆ ಸರ್ಪ ಸಂಸ್ಕಾರ, ದೋಷಗಳಲ್ಲೆಲ್ಲ ನಂಬಿಕೆ ಇಲ್ಲ. ನನ್ನ ಬೈಕಿನ ಚಕ್ರದಡಿಗೆ ಸಿಕ್ಕಿ ಸತ್ತು ಬಿದ್ದಿದ್ದಕ್ಕೆ ಪಶ್ಚತ್ತಾಪ ಇದ್ದೇ ಇತ್ತು. ಆದರೆ ನಾನು ಬೇಕೆಂದೇ ಕೊಂದವನಲ್ಲ. ಪ್ರಕೃತಿಯ ನಿಯಮದಂತೆಯೇ ಅದಿಂದು ಸತ್ತಿದೆ ಅಂತ ಮನಸ್ಸನ್ನು ಗಟ್ಟಿ ಮಾಡಿಕೊಂಡು ಕೋಲೊಂದನ್ನು ಮುರಿದು ತರುತ್ತೇನೆ, ಬಿದ್ದುಕೊಂಡಿದ್ದ ನಾಗರ ಮರಿಗೆ ಜೀವ ಬಂದಿದೆ.

tundu hykluಬೇಸಿಗೆಯ ನಡು ಮಧ್ಯಾಹ್ನದ ಬಿಸಿಲು. ಡಾಂಬರು ರಸ್ತೆ ಕಾವಲಿಯಂತಿತ್ತು. ಕೋಲು ಹಿಡಿದು ನಿಂತಿದ್ದ ನನ್ನನ್ನು ಕಂಡು ಒಂದೆರಡು ಬೈಕುಗಳು ನಿಂತವು. ನನಗೆ ಅದೇ ಸಂಕಟ. ನಾಗರ ಮರಿ ಚಲಿಸೋಕೆ ಶುರು ಮಾಡಿದ್ದನ್ನು ಕಂಡು ಒಮ್ಮೆ ಅಯ್ಯಮ್ಮ ಅನ್ನಿಸಿತು. ಸಮಾಧಾನದ ದೀರ್ಘ ಉಸಿರೊಂದನ್ನು ಬಿಟ್ಟು ಗಾಳಿಯನ್ನು ಒಳಗೆ ಎಳೆದುಕೊಂಡದ್ದಷ್ಟೆ. ಮುಂದೆ ಹೋಗಿದ್ದ ಮರಿ ಸಿಕ್ಕಾಪಟ್ಟೆ ಒದ್ದಾಡಲು ಆರಂಭಿಸಿತು. ನನಗೋ ಕಸಿವಿಸಿ. ಸುತ್ತ ನೆರೆದವರ ಸಂಖ್ಯೆ ಐವತ್ತು ದಾಟಿತ್ತು.

ಹಿಡಿದಿದ್ದ ಕೋಲಿನಲ್ಲೇ ನೆರಳಿಗೆ ಹಾಕೋಣವೆಂದು ಮುಂದಾದೆ. ದೊಡ್ಡ ದನಿಯೊಂದು ನನ್ನನ್ನು ಹೆದರಿಸಿತು. ಹತ್ತಿರ ಹೋಗಬೇಡ ಎಂದು ಗದರಿಸಿತು. ಹಾವಿನ ಬಗ್ಗೆ ವೈಜ್ಞಾನಿಕ ಮನೋಭಾವನೆ ಇದ್ದರೂ ಅಷ್ಟು ಜನರ ಮುಂದೆ ಅದನ್ನು ಪ್ರಕಟಿಸಲು ನಾನು ಸೋತೆ. ಕೊನೆಗೆ ಅಡ್ಡದಿಡ್ಡ ಒದ್ದಾಡುತ್ತಿದ್ದ ಹಾವೇ ರಸ್ತೆಯ ಅಂಚಿಗೆ ಬಂದು ಪಕ್ಕದ ಮೋರಿಯೊಳಗೆ ಬಿತ್ತು. ಅಲ್ಲಿ ತಂಪಿತ್ತು. ಇನ್ನು ಹಾವು ಚಲಿಸಬಹುದೆಂದುಕೊಂಡೆ. ಆದರೆ ಇದ್ದ ಚಲನೆಯನ್ನೂ ಕಳೆದುಕೊಂಡಿತು.

ಜನಸಂಖ್ಯೆ ನೂರನ್ನು ಮೀರಿತು. ಅದೇ ಹೊತ್ತಿಗೆ ಬಂದ ಲೋಕಲ್ ಬಸ್ಸೊಂದು ದೇವರೇ ಸತ್ತಿರುವಾಗ ಮುಂದೆ ಹೋಗೋದು ಹೇಗೆಂದು ಅಲ್ಲೇ ನಿಂತು ಬಿಟ್ಟಿತು. ನೆರೆದವರೆಲ್ಲ ಹಣ ಬಿಚ್ಚಲು ಶುರು. ಯಾವನೋ ಒಬ್ಬ ಸ್ವಯಂ ಪ್ರೇರಣೆಯಿಂದ ಅದನ್ನು ಸಂಗ್ರಹಿಸುತ್ತಿದ್ದ. ಹತ್ತಿಪ್ಪತ್ತರ ನೋಟಷ್ಟೇ ಅಲ್ಲ ಐನೂರು ಸಾವಿರಗಳೂ ಆತ ಹಿಡಿದಿದ್ದ ಬೈರಾಸಿನೊಳಗೆ ಬಿದ್ದಿದ್ದವು.

ಅಯ್ಯೋ ನನ್ನ ಗತಿಯೇ. ಅಲ್ಲಿ ನೆರೆದವರು ನನ್ನನ್ನು ಪಾಪಿ ತರ ನೋಡದಿದ್ದರೂ, ವಿಚಿತ್ರವಾಗಿತ್ತು ಅವರ ನೋಟ. ನಲ್ವತ್ತರ ಆಸು ಪಾಸಿನ ವ್ಯಕ್ತಿಯೊಬ್ಬರು ನನ್ನ ಬಳಿ ಬಂದರು. “ಇನ್ನು ಹೇಗೆ ಮಾಡೋಣ?” ಎಂದು ಕೇಳಿದರು. ಸರ್ಪ ಸಂಸ್ಕಾರದ ಮಾತು ಅನ್ನೋದು ಅರಿವಾಯಿತು. ಸಂಸ್ಕಾರ ಮಾಡಿಸೋದಷ್ಟೇ ಅಲ್ಲ ನಲ್ವತ್ತೆಂಟನೇ ದಿನಕ್ಕೆ ಸಮಾರಾಧನೇನೂ ಆಗಬೇಕು. ನಿಮಗೊಬ್ರಿಗೇನೇ ಹೊರೆ ಬೇಡ. ಊರವರೂ ಸೇರುತ್ತೇವೆ ನಿಮ್ಮ ಕೆಲಸದಲ್ಲಿ. ಸಿಂಪಲ್ ಪೂಜೆ, ಸಿಂಪಲ್ ಊಟ. ನಿಜಕ್ಕೂ ನಾನು ಸಂಕಟಕ್ಕೆ ಬಿದ್ದೆ.

ಗುರುರಾಜ್ ಸನಿಲರಿಗೆ ಮೊದಲೇ ಫೋನು ಮಾಡಿದ್ದೆ. ಬ್ರಹ್ಮಾವರದ ಬಳಿ ಹಾವು ಹಿಡಿಯೋಕೆ ಹೋಗಿದ್ದವರು. ಅಲ್ಲಿ ಹಿಡಿದಾದ ಮೇಲೆ ಬರುತ್ತೇನೆ ಅಂದಿದ್ದರು. ಹಾವು ಸತ್ತಿದೆಯೋ, ಬದುಕಿಸೋಕೆ ಆಗುತ್ತದೆಯೋ ನೋಡೋಣ. ಸನಿಲ್ ಸರ್ ಬರಲಿ. ಆಮೇಲೆ ಮಾತಾಡೋಣವೆಂದು ಮಾತು ಮರೆಸಿದೆ. ಮತ್ತೆ ಮೂರು ಬಾರಿ ಬಳಿ ಬಂದರು. ತಡೆದು ನಿಲ್ಲಿಸಿದೆ.

ಸನಿಲ್ ಸರ್ ಬಂದರು. ಮೋರಿಯಲ್ಲಿ ಬಿದ್ದಿದ್ದ ಹಾವನ್ನು ಎತ್ತಿ ನೋಡಿದರು. ಇಲ್ಲ ಸತ್ತು ಹೋಗಿದೆ. ಹಾವಿಗೆ ಗಾಯ ಆಗಿರಲಿಲ್ಲ. ಚಕ್ರದ ಅಡಿಗೆ ಬಿದ್ದ ಮರಿಯ ಶ್ವಾಸ ನಾಳ ಚಪ್ಪಟೆಯಾಗಿ ಅಂಟಿಕೊಂಡಿರಬೇಕು. ಹಾಗೆ ಉಸಿರಾಡಲು ಆಗದೆ ಅದು ಒದ್ದಾಡಿದ್ದು. ರಸ್ತೆಯ ಬಿಸಿಗೆ ಮತ್ತಷ್ಟು ಚಡಪಡಿಸಿರಬೇಕು.

ಸತ್ತಿದೆಯಾದರೂ ಪ್ರಯೋಗಿಸಿ ನೋಡೋಣವೆಂದು ಪಕ್ಕದ ಅಂಗಡಿಯಿಂದ ಸ್ಟ್ರಾ ಒಂದನ್ನು ನನ್ನಿಂದ ತರಿಸಿದರು. ಹಾವಿನ ಬಾಯೊಳಗಿಟ್ಟು ಊದಿ ನೋಡಿದರು. ಇಲ್ಲ. ಸಮಯ ಮೀರಿತ್ತು. ಹಾವು ಸತ್ತು ಹೋಗಿತ್ತು.
******

Maj4ಘಟನೆಯಾಗಿ ವಾರ ಕಳೆಯಿತು. ಸಂಸ್ಕಾರದ ಮಾತಾಡಿದ್ದ ಆ  ವ್ಯಕ್ತಿ ನನ್ನನ್ನು ಸುಲಭಕ್ಕೆ ಬಿಡುವಂತೆ ಕಾಣಲಿಲ್ಲ. ನನ್ನ ನಂಬರ್ರನ್ನು ಕೊಂಡಿದ್ದ ಅವರು ಅದೆಷ್ಟು ಕಾಡಿದರೆಂದರೆ ಪ್ರತೀ ದಿನ ನನಗೆ ಫೋನು “ಏನಾಯ್ತು? ಏನ್ಮಾಡಿದ್ರಿ? ನಮ್ಮಲ್ಲೇ ಎಲ್ಲದಕ್ಕೂ ವ್ಯವಸ್ಥೆ ಇದೆ, ಇಲ್ಲೇ ಮಾಡಿ, ಸುಲಭವಾಗುತ್ತೆ. ಹೆಚ್ಚೇನೂ ಖರ್ಚಿಲ್ಲ” ಅಂತ ಸತಾಯಿಸಿ ಶುದ್ಧ ವ್ಯಾಪಾರಕ್ಕೆ ಇಳಿದಿದ್ದರು.

ನನಗೆ ಸಹಿಸಲಾಗಲಿಲ್ಲ. ಕೊನೆಗೆ “ನಾನು ವ್ಯವಸ್ಥೆ ಮಾಡಿಯಾಗಿದೆ. ನಿಮಗೆ ಅಷ್ಟೊಂದು ಕಾಳಜಿ ಇದೆಯೆಂದಾದರೆ ಮೊನ್ನೆ ಸಂಗ್ರಹವಾದ ಹಣವಿದೆಯಲ್ಲ. ಅದರಿಂದ ನೀವೇ ಒಂದು ನಾಗ ಶಾಂತಿ ಮಾಡಿಸಿಬಿಡಿ” ಎಂದು ಫೋನಿಟ್ಟು ಬಿಟ್ಟೆ. ಹಾವುಗಳು ಸ್ವತಃ ಹೆದರಿದರೆ ಮಾತ್ರ ಕಚ್ಚುವಂತವು.ಆದರೆ ಮನುಷ್ಯ ಹೆದರಿದವರನ್ನು ಕಚ್ಚಿಯೇ ಬಿಡುತ್ತಾನೆ. ಬಲಿ ಪಶುವಾಗಿ ಮಾಡುತ್ತಾನೆ. ಆ ಮೇಲೆ ಅವರ ಫೋನು ಬರಲಿಲ್ಲ.

ಪ್ರಕೃತಿಯಲ್ಲಿ ಹಾವುಗಳು ಮುಂಗುಸಿಗೋ, ಪಕ್ಷಿಗಳಿಗೋ ಆಹಾರ. ಆದರೆ ನಾಗರ ಹಾವುಗಳು ಮಾತ್ರ ಜನರ ಅಜ್ಞಾನಕ್ಕೆ ಆಹಾರವಾಗುತ್ತಿವೆ. ಹಾವು ಸತ್ತು  ಒಂದು ವರುಷವಾಯಿತು. ನಾನಂತೂ ಸಂಸ್ಕಾರ, ಸಮಾರಾಧನೆ ಮಾಡಲಿಲ್ಲ.  ಸತ್ತ ಹಾವನ್ನು ದೂರದ ಕಾಡೊಂದರಲ್ಲಿ ಹಾಗೇ ಬಿಟ್ಟುಬಂದಿದ್ದೆ. ಎಲ್ಲಿಗೆ ಸಲ್ಲಬೇಕೋ ಅಲ್ಲಿಗೇ ಸಲ್ಲಲಿ ಎಂಬ ಸಮಾಧಾನದೊಂದಿಗೆ ಮರಳಿದ್ದೆ.

5 Comments

 1. Anonymous
  August 20, 2016
 2. ರಾಜೇಶ್
  August 19, 2016
 3. Anonymous
  August 18, 2016
 4. C P Nagaraja
  August 18, 2016
 5. asha
  August 17, 2016

Add Comment