Quantcast

ನನ್ನದು ಅನಾಥ ಪಂಥ ಮಾರಾಯ್ರೆ..

ರೈಟೂ ಅಲ್ಲದ ಲೆಫ್ಟೂ ಇಲ್ಲದ ಸಣ್ಣ ಕಾಲುಹಾದಿ

ಮೊನ್ನೆ ಮಟಮಟ ಮಧ್ಯಾಹ್ನದ ಸಮಯ. ಮನೆಯ ಕಿಟಕಿಯ ತನಕ ಹರಡಿದ್ದ ಮರದ ಗೆಲ್ಲನ್ನು ಕಡಿಯಲು ಹುಡುಗನೊಬ್ಬನನ್ನು ಕಳುಹಿಸುವೆ ಎಂದು ನಮ್ಮ ಮನೆಯ ಓನರ್ ಫೋನು ಮಾಡಿದ್ದರು.

ಆ ಹುಡುಗನ ಹೆಸರು ಗೊತ್ತಿಲ್ಲದ್ದರಿಂದ ಮರಕಡಿಯುವವನು ಎಂದೇ ನನ್ನ ಮನಸ್ಸಿಗೆ ಬರುತ್ತಿತ್ತು. ಅಷ್ಟರಲ್ಲೇ ಅವನು ಬಂದವನು ಜಾಸ್ತಿ ಏನೂ ಮಾತನಾದದೆ ಮರದ ಬಳಿ ಹೋಗಿ ನೋಡುತ್ತಾ ಪಕ್ಕದ ಮನೆಯ ಕಂಪೌಂಡಿನ  ಮೇಲೆ ಹತ್ತಿ ಸಾಹಸ ಮಾಡಿ ಹೇಗೋ ಮರದ ಕೊಂಬೆಯೊಂದರಲ್ಲಿ ಕುಳಿತುಕೊಳ್ಳುವಷ್ಟರಲ್ಲಿ avadhi-column-nagashree- horiz-editedಸುಸ್ತಾಗಿ ಹೋಗಿದ್ದ. ಅಂತೂ ಅನಿವಾರ್ಯವಾಗಿ ನಾಲ್ಕು ಕೊಂಬೆಗಳನ್ನು ಕಡಿದು, ಅಲ್ಲೇ ಪಕ್ಕದಲ್ಲಿದ್ದ ನನ್ನ ಜೊತೆ ಅವನಿಗೂ ಎರಡು ಸೀನು ಬಂದು “ಡಸ್ಟ್ ಅಲರ್ಜಿ” ಮೇಡಂ ಎಂದು ಹಾಗೆ ಮೂಗು ತಿರುಚಿದ. ಅವನಿಗೆ ಟೀ ಮಾಡಿ ಇನ್ನೇನೋ ಹೇಳಬೇಕೆಂದು ಮಾಡಿದರೆ, ಅವನು ಆಗಲೇ ದುಡ್ಡು ಇಸಕೊಂಡು ಹೋಗಿಯಾಗಿತ್ತು.

ನಮ್ಮೂರ ತುಕ್ರನ ನೆನಪಾಗುತ್ತಿತ್ತು. ತುಂಡು ಬಟ್ಟೆ ತೊಟ್ಟು ಕತ್ತಿಯನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಸರಸರನೆ ಮರ ಹತ್ತಿ ಕಾಯಿ ಕೊಯ್ಯುವುದೋ ಗೆಲ್ಲು ಕಡಿಯುವುದೋ, ಬೇರೇನನ್ನೂ ಹೇಳದೆಯೂ ಎಲ್ಲಾ ಕೆಲಸ ಮಾಡಿಕೊಡುತ್ತಿದ್ದ. ಅವನು ದಣಿದು ಬಂದು ಕಾಯುತ್ತಿದ್ದ ಬೆಲ್ಲದ ತುಂಡಿಗೋ, “ಒಂದು ಚಾ ಕುಡಿದರೆ ಲಾಯಕಿತ್ತು ಅಮ್ಮಾ” ಎಂಬ ಅವನ ಮುಗ್ದ ನಗುವೋ ಕಣ್ಮುಂದೆ ಬರುತ್ತಿತ್ತು.

ನಮ್ಮ ಹಾಸ್ಟೆಲ್ ನಲ್ಲಿ ಟಾಯ್ಲೆಟ್ ಫ್ಲೋರ್ ತೊಳೆಯುವುದಕ್ಕೆ ನಂಜಮ್ಮ ಅಂತ ಇದ್ದರು. ದೊಡ್ಡ ಗಂಟಲಿನ ನಂಜಮ್ಮ ಬಂದರೆಂದರೆ ಹಾಸ್ಟೆಲ್ ಸ್ವಚ್ಚವಾದ ಹಾಗೆ ಅನ್ನಿಸುತ್ತಿತ್ತು, ಸ್ವಲ್ಪ ಸಿಡುಕಿದರೂ ತಾಯಿಯಂತಿದ್ದ ನಂಜಮ್ಮನಿಗೆ, ಜಾತಿಯ ಕಾರಣಕ್ಕೆ ಟಾಯ್ಲೆಟ್ ತೊಳೆಯುವುದು ನಿಷಿದ್ದವಾಗಿತ್ತಂತೆ. ಇಂತಹ ಕೆಲಸವನ್ನು ಅವರಿಂದ ಮಾಡಿಸಿದರೆ ಅದರಿಂದ ನಮಗೇ ಪಾಪ ಅಂಟಿಕೊಳ್ಳುತ್ತದೆ ಎಂಬಂತೆ ಅತೀ ಸಂಕೋಚದ ಅವರ ಮುಖದಲ್ಲಿ ಕರುಣಾ ರಸ ಉಕ್ಕಿಸಿದಂತೆ ಮಾತನಾಡುತ್ತಿದ್ದರು. “ನನ್ನ ಪಾಪಗಳೇ ಸಾಕಷ್ಟು ಇರುವಾಗ ಇನ್ನು ನಿಮ್ಮ ಪಾಪವನ್ನು ಕಟ್ಟಿಕೊಳ್ಳುವ ಉಸಾಬರಿ ನನಗೆ ಬೇಡ ನಂಜಮ್ಮ” ಎಂದು ನಕ್ಕಿದ್ದೆ. ಆದರೆ ಪಾಪದ ನಂಜಮ್ಮನಿಗೆ ಹಾಸ್ಟೆಲ್ ಹುಡುಗಿಯರ ಶಾಪ ತಪ್ಪಿರಲಿಲ್ಲ.

ಈಗ ಈ ಹೊತ್ತಲ್ಲಿ ಮರಕಡಿಯುವವನು, ನಂಜಮ್ಮ, ತುಕ್ರನಂತವರು ಯಾವುದೋ ವಿಸ್ಮೃತಿಯಲ್ಲಿ ಗೋಚರಿಸಿದಂತಾಗಿ ಹೇಗೆ ಬರೆದರೂ ಇದನ್ನು ಯಾವ ಲೇಬಲಿನಡಿ ಬರೆಯಬಹುದು ಎಂದು ಗೊಂದಲವಾಗುತ್ತಿದೆ. ನವೋದಯ, ನವ್ಯ, ಪ್ರಗತಿಶೀಲ, ಬಂಡಾಯಗಳೆಲ್ಲಾ ಅಟ್ಟಿಸಿಕೊಂಡು ಬಂದಂತಾಗಿ ಅಂತಹ ನಾಮಾವಳಿಗಳ ಮಾತಿರಲಿ, ಬರೆಯುವುದು ಕವಿತೆಯೋ, ಕತೆಯೋ, ಪ್ರಬಂಧವೋ ಎಂಬ ಗೊಂದಲವೂ ಉಂಟಾಗುತ್ತಿದೆ.

ಮೊನ್ನೆ ರಾಜಸ್ಥಾನದ ಮರುಭೂಮಿಯಿಂದ ಮರಳಿ ಬಂದು ಅನ್ಯಮನಸ್ಕಳಾಗಿ ಕುಳಿತಾಗ ನಂಜಮ್ಮ ತುಕ್ರರಿಗಿಂತ ಹೆಚ್ಚು ಸಂಕಟದಲ್ಲಿರುವ ಮರಳುಗಾಡಿನ ಅಲೆಮಾರಿ ಜನರ ನೆನಪು ಸುರುಳಿಸುರುಳಿಯಾಗಿ ಹತ್ತುತ್ತಿತ್ತು. ಸುಡುಗಾಡಿನ ಹಾಗಿರುವ ಮರುಭೂಮಿಯ ಧಗೆಯಲ್ಲಿ ಈಗ ಮರಳ ಮೇಲೆ ಅನಾಯಾಸವಾಗಿ ಮಲಗಿರಬಹುದಾದ ಆ ಜನರು ಮತ್ತೆ ಇದೆಲ್ಲವೂ ಬರೀ ನನ್ನ ಹಳಹಳಿಕೆಯಷ್ಟೆಯಲ್ಲವೇ ಎಂಬ ದುಃಖವೂ ಆಗುತ್ತಿದೆ.

ಹೀಗೆಲ್ಲಾ ಅನ್ನಿಸುವಾಗ ಪ್ರೀತಿಯ ಹಿರಿಯ ಲೇಖಕ ಕೆ.ವಿ ತಿರುಮಲೇಶರ ‘ಅರಬ್ಬಿ’ ಕವನ ಸಂಕಲನವನ್ನು ಕೈಗೆತ್ತಿಕೊಂಡು ಓದುತ್ತಿದ್ದೆ. ಪುಸ್ತಕದ ಮುಖಪುಟದಲ್ಲಿ ಮರುಭೂಮಿಯ ಮೇಲೆ ಸಾಲು ಒಂಟೆಗಳು ಬದುಕಿನ ನಿಶ್ಚಲ ಅನಿಶ್ಚಿತತೆಯಲ್ಲಿ ಸಾಗುವಂತಿದ್ದ ಚಿತ್ರವಿತ್ತು. ಅದನ್ನು ನೋಡುತ್ತಾ ಕವಿತೆಗಳನ್ನು ಪ್ರವೇಶಿಸುವ ಎಂದುಕೊಂಡರೆ  ತಿರುಮಲೇಶರ ಮುನ್ನುಡಿಯ ಗುಂಗಿನಿಂದ ಹೊರಬರುವುದಕ್ಕೆ ಕೆಲಕಾಲ ಬೇಕಾಯಿತು!

ತಿರುಮಲೇಶರು,, ಕರ್ಕ್ ಕಾರ್ಡ್ ಎಂಬ ತತ್ವಜ್ಞಾನಿ, ಲೇಖಕನ ಕುರಿತು ಹೇಳುತ್ತಾ, “Once you label me, you negate me”-  ಹೀಗಂದ ಕರ್ಕ್ ಕಾರ್ಡ್ ಸ್ವತಃ ‘ಅಸ್ತಿತ್ವವಾದಿ’ ಎಂಬ ವರ್ಗೀಕರಣಕ್ಕೆ ಗುರಿಯಾದ ಬಗ್ಗೆ ಹೇಳುತ್ತಾರೆ. ವರ್ಗೀಕರಣವೋ ಲೇಬಲೀಕರಣವೋ ಇಲ್ಲದೆ ಮಾತಾಡಲು ಗೊತ್ತಿಲ್ಲದ ಮನುಷ್ಯರು, ಅವರನ್ನು ದೂರಿ ಉಪಯೋಗವಿಲ್ಲದ ಈ ಲೋಕ, ಮತ್ತು ಅದೊಂದು ಲೋಕದ ವಿದ್ಯಮಾನವನ್ನು ಅರ್ಥಮಾಡಿಕೊಳ್ಳುವ ಬಗೆಯೆಂದು ಹೇಳುತ್ತಾರೆ. ತಿರುಮಲೇಶರನ್ನು  ಯಾವ ಲೇಬಲಿನಡಿಯಲ್ಲೂ ಭರಿಸಿಕೊಳ್ಳದೆ ಓದುತ್ತಿದ್ದೆ. ದೇಶ, ಕಾಲದ ಹಂಗನ್ನು ಮೀರಿ ಮನುಕುಲದ ಒಟ್ಟಾರೆ ವಿಸ್ಮಯ ವೈಚಿತ್ರ್ಯವನ್ನು ಎಲ್ಲೋ ಕುಳಿತು ಧ್ಯಾನಸ್ಥ ಮೌನಿಯಂತೆ ಆ ಕ್ಷಣಕ್ಕೆ ತೋಚಿದ ಮಾತು ಮತ್ತು ಮೌನದ ಬಗ್ಗೆ ಅರಹುತ್ತಾ,  ನದಿ ಮೂಲದಂತೆ ಕವಿತೆಯ ಮೂಲ ಹುಡುಕಬಾರದು ಎಂದು ತಿರುಮಲೇಶರು ಮುಂದೆ ಕೂತು ಹೇಳಿದಂತೆ ಅನ್ನಿಸುತ್ತಿತ್ತು

“ಎಲ್ಲಾ ಕವಿಗಳಿಗೂ ನಾನು ಕೃತಜ್ಞನಾಗಿದ್ದೇನೆ, ಯಾಕೆಂದರೆ ನಾನು ಮಾತಾಡುವ ಭಾಷೆ ಅವರದು- ನನ್ನದೇ ಭಾಷೆ ಇಲ್ಲದ ಕಾರಣ. ನಾನು ಮಾತಾಡಿದ ತಕ್ಷಣ ಅದು ನನ್ನದಾಗುತ್ತದೆ” ಎನ್ನುವ ತಿರುಮಲೇಶರು ನಾನು ಯಾರು ನೀನು ಯಾರು ಎಂಬ ಸರಳ ನಿಜವನ್ನೂ ಲೇಬಲೀಕರಣದ ಮೂಲ ಭ್ರಮೆಯ ಸತ್ಯವನ್ನೂ ಕಳಚುವಂತೆ ಕೇಳಿಸುತ್ತಿತ್ತು.

Arabbi- KV Thirumaleshಯೋಗರಾಜ ಭಟ್ಟರ ಚಿತ್ರವೊಂದರಲ್ಲಿ, ನಾಯಕನಿಗೆ ಲೋಕದ ಘನ ಸಂಗತಿಗಳೆಲ್ಲಾ ಗುಜರಿ ಸಾಮಗ್ರಿಗಳಂತೆ ಭಾಸವಾಗಿ ಎಲ್ಲ ಪದಗಳ ಹಿಂದೆ “ಗಳು, ಗಳು” ಎಂದು ಸೇರಿಸುತ್ತಾನೆ. ಆ ನಾಯಕನಂತೆ ನನಗೆ, ಈ ಬ್ರಾಹ್ಮಣರುಗಳು, ಮುಸ್ಲಿಮರುಗಳು, ದಲಿತರುಗಳು ಸಮಾನತೆಗಳು, ಆಧುನಿಕೋತ್ತರುಗಳು, ಬಂಡವಾಳಶಾಹಿಗಳು, ಬಂಡಾಯಶಾಹಿಗಳು, ವಸಾಹತುಶಾಹಿಗಳು, ಕರ್ಮಠರುಗಳು, ಪುರೋಹಿತಶಾಹಿಗಳು ಎಂಬೆಲ್ಲಾ ಘನ ಸಂಗತಿಗಳು ನಗೆಪಾಟಲಿನಂತೆ ಕಾಣುತ್ತಿದೆ.

ಪ್ರಶ್ನೆ ಪತ್ರಿಕೆಯಲ್ಲಿ ಒಂದು ವಾಕ್ಯದಲ್ಲಿ ಉತ್ತರಿಸಿ ಎಂದಿದ್ದರೆ, ಹತ್ತು ಅಂಕದ ಪ್ರಶ್ನೆಗೆ ಉತ್ತರಿಸುವ ಉದ್ದುದ್ದ ಪಾಯಿಂಟ್ಸ್ ಗಳ ವ್ಯರ್ಥ ಸಮರ್ಥನೆಗಳಂತೆ ತೋರುತ್ತಿದೆ. ಶಂಕರ, ಮಧ್ವ, ಬುದ್ಧ, ಅಂಬೇಡ್ಕರ್, ಗಾಂಧಿ, ಕ್ರಿಸ್ತನೆಂದು, ಅವರು ಆಡಿದ ಮಾತುಗಳ ಅನ್ವರ್ಥ, ಗೂಡಾರ್ಥ, ದ್ವಂದ್ವಾರ್ಥ, ವಿಶೇಷಾರ್ಥ, ಅನರ್ಥಗಳು ಇವರಿಗೆ ತಿಳಿದಿಲ್ಲವೆಂದು ಅವರು, ಅವರಿಗೆ ತಿಳಿದಿಲ್ಲವೆಂದು ಇವರು ಹೊಂದಿಸಿ ಬರೆಯಲಾಗದೆ, ಬಿಟ್ಟ ಸ್ಥಳಗಳನ್ನೂ ತುಂಬಿಸಲಾಗದೆ ಕೊನೆಗೆ ಧರ್ಮ, ಸಾಹಿತ್ಯ, ಇನ್ನೇನೋ ಮೂಲ ಸಮಸ್ಯೆಯನ್ನು ಮರೆತು ಪ್ರಶ್ನೆ ಪತ್ರಿಕೆಯ ಕೊನೆಯಲ್ಲಿ ಪ್ರಬಂಧವನ್ನು ಬರೆಯುವಂತೆ  ಬರೆದು ಸುಮ್ಮನೆ ಧ್ವನಿಯಿಲ್ಲದ ಮಾತುಗಳಂತೆ ಕೇಳಿಸುತ್ತಿವೆ.

ಮೊನ್ನೆ ಸ್ನೇಹಿತರೊಬ್ಬರು “ನೀವು ಯಾವ ಕಡೆ ರೈಟಾ ಲೆಫ್ಟಾ” ಎಂದು ಕೇಳುತ್ತಿದ್ದರು. “ನಮ್ಮದು ಬಲವೂ ಅಲ್ಲ ಎಡವೂ ಅಲ್ಲದ ಅನಾಥ ಪಂಥ ಮಾರಾಯ್ರೆ”, ಎಂದು ಹೇಳಿದ್ದೆ. ಒಂದು ಕಾಲದಲ್ಲಿ ಪ್ರಗತಿಶೀಲ, ಬಂಡಾಯದ ಬಾವುಟ ಹಿಡಿದುಕೊಂಡು, ಲೈಬ್ರರಿಗಳಲ್ಲೋ, ಇನ್ಯಾರೋ ಪ್ರೊಫೆಸರ್ ಗಳು ಕೊಡುತ್ತಿದ್ದ ದಪ್ಪದಪ್ಪದ ಸಿಟ್ಟಿನ  ಪುಸ್ತಕಗಳು ಕಣ್ಣಲ್ಲಿ ಬರಿಯ ಕ್ರಾಂತಿ ಮೂಡಿಸಿದ್ದವು.

ಒಂದು ಕಡೆ ಎಡಪಂಥದವರು ಇನ್ನೊಂದು ಕಡೆ ಬಲಪಂಥದವರ ಜೊತೆ ಗುದ್ದಾಡಿ, ನಿಜಕ್ಕೂ ನನ್ನದು ಅನಾಥಪಂಥವಾಗಿ ಹೋಗಿತ್ತು. ಕೆಲವುಕಡೆ ಅರ್ಥವಾಗದ ಸಿದ್ಧಾಂತಗಳು ಅರ್ಥವಾದಂತೆ ಅನ್ನಿಸಿ ಸಣ್ಣ ಗೊಂದಲದ ನಡುವೆಯೂ ಹೇಗೋ ಓದುತ್ತಿದ್ದೆ. ನನ್ನ ಪುಟಾಣಿ ತಲೆಯಲ್ಲಿ, ನೋವಿನ ಎಳೆಯಲ್ಲೂ ಮಂದಹಾಸದಂತೆ ಮೂಡುವ  ಪ್ರೇಮಮಯಿ ಮನುಷ್ಯ, ಅವನ ಕನಸಿನಂತಹ ಉರು ಕೇರಿಗಳು, ಚಂದದ ಒಂದು ನವಿರು ಮನಸ್ಸು ನನ್ನನ್ನು ಕೇಳದೆಯೇ ಬಿಟ್ಟು ಹೋಗಿದ್ದವು.

ಜಗತ್ತೆಲ್ಲಾ ನೋವಿನ ಗುಪ್ಪೆಯಂತೆ, ಧಾರ್ಮಿಕರೆಲ್ಲರೂ ಮತಿಗೆಟ್ಟವರಂತೆ ಕಾಣಿಸುತ್ತಿದ್ದರು. ಸಾಹಿತ್ಯ ಎಂದರೆ ಸಣ್ಣಗಿನ ತಲೆನೋವಿನ ಹಾಗೆ ಅನ್ನಿಸುತ್ತಿತ್ತು. ಯಾರು ಏನೇ ಅಂದರೂ  ಅದು ಸರಿ ಎನಿಸುವ ಚಂದದ ವಯಸ್ಸಿನ ತಬ್ಬಲಿತನವನ್ನು ಆಗ, ಇನ್ನೂ ಚಂದದ ಕಾವ್ಯಗಳು ಪೊರೆಯಬೇಕಿತ್ತು. ಕರ್ವಾಲೊ ಮಂದಣ್ಣ, ಒಡಲಾಳದ ಸಾಕವ್ವ, ನಾಯಿಗುತ್ತಿಯಂತ ಇನ್ನೂ ಅನೇಕರು ನನ್ನನ್ನು ಸಲಹಿ ಪ್ರೀತಿ ಮೂಡಿಸಬೇಕಿತ್ತು,

ಮರಿ ಚಿಂತಕಿಯಂತೆ ನಡೆಯುತ್ತಿದ್ದ ಆ ಕಾಲದ ಗತವೈಭವಗಳನ್ನು ನೆನೆಸಿಕೊಂಡರೆ ಈಗ ನಗು ಬರುತ್ತಿದೆ. ಈಗ ಎಳೆಯ ಹುಡುಗ ಹುಡುಗಿಯರು ನನ್ನ ಹಾಗೆಯೇ ತಲೆ ಕೆಡಿಸಿಕೊಂಡು ಬದುಕಿನ ಪ್ರೀತಿಯನ್ನು ಮರೆತು ಸಂಘರ್ಷದಲ್ಲಿ ಓಡಾಡುವುದನ್ನು ನೋಡುವಾಗ ಅತ್ತ ದರಿ ಇತ್ತ ಪುಲಿಯ ನಡುವೆ ಏನಾದರೂ ಸಿಕ್ಕರೆ ಹೋಗಿ ಬದುಕಿಕೊಳ್ಳಿರೋ ಎಂದು ಕೂಗಿ ಹೇಳಬೇಕೆನಿಸುತ್ತಿದೆ.

ನಂಜಮ್ಮ, ತುಕ್ರ, ಮರ ಕಡಿಯುವವನು, ರಾಜಸ್ಥಾನದ ಅಲೆಮಾರಿಗಳು, ನವ್ಯ, ಪ್ರಗತಿಶೀಲ ಎಲ್ಲವೂ ಒಂದು ಹಣೆಪಟ್ಟಿ ಇಲ್ಲದೆ ಬದುಕಲು ಸಾದ್ಯವಾಗುತ್ತಿಲ್ಲ. ಅಲ್ಲಿಯವರು ಇಲ್ಲಿ, ಇಲ್ಲಿಯವರು ಅಲ್ಲಿ, ಮೇಲಿನವರು ಕೆಳಗೆ, ಕೆಳಗಿನವರು ಮೇಲೆ ಸಂಚರಿಸುತ್ತಾ ಅಲ್ಲಲ್ಲೇ ಬಲಿಷ್ಠರಾಗುತ್ತಿದ್ದಾರೆ. ಎಲ್ಲರೂ ಎಲ್ಲಾ ಕೆಲಸಗಳನ್ನು ಮಾಡಬಹುದು, ಆದರೆ ತುಕ್ರನ ಪ್ರೀತಿಯಂತಲ್ಲ, ಮುಗ್ಧ ನಂಜಮ್ಮನಂತಲ್ಲ, ಅದೇ ಬಲಿಷ್ಠತೆಯಲ್ಲಿ ಕವಲುಗಳಾಗಿ ನಿಚ್ಚಳವಾದ ಹಣೆಪಟ್ಟಿಯ ಜೊತೆಗಷ್ಟೆ. ಒಂದು ಸಡಿಲತೆಯೊಂದಿಗೆ ಅದರಷ್ಟೇ, ಅಥವಾ ಅದಕ್ಕಿಂತಲೂ ಹೆಚ್ಚಾಗಿ ಬಿಗಿಗೊಳ್ಳುತ್ತಾ ಅಲ್ಲಲ್ಲೇ ತಮ್ಮ ತಮ್ಮ ಗೂಡು ಕಟ್ಟುತ್ತಿದ್ದಾರೆ. ನಾವು ಮಲಗಿ ನಿದ್ದೆಯಲ್ಲೇ ಹಣೆಪಟ್ಟಿಯನ್ನು ಕಳಚಿ ಹೆಸರಿಲ್ಲದೆ ಬಾಳುವ ಕನಸು ಕಾಣ ಬೇಕಷ್ಟೆ.

ಕೊಂಬೆಗಳನ್ನು ಕಡಿದ ಬೋಳು ಮರ ಮುಂದಿನಿಂದ  ನೋಡಿದರೆ ಎಡಕ್ಕೆ ಸೊಟ್ಟಗೆ ಬಾಗಿ ತುಂಬು ನಗುವಿನ ಅಜ್ಜಿಯ ಪ್ರೀತಿಯಂತೆ ಬೀಸುವ ಗಾಳಿಗೆ ಅಲ್ಲಾಡುತ್ತಿದೆ., ಹಿಂಭಾಗದಲ್ಲಿ ಅಸ್ತಿತ್ವವೇ ಇಲ್ಲದಂತೆ ಕಾಣುವ ಮರದ ಕೆಳಗೆ ತಿರುಮಲೇಶರ ಪುಸ್ತಕವನ್ನು ಓದುತ್ತಾ ಕುಳಿತಿದ್ದೇನೆ. ಅಲ್ಲಿಯೇ ಕೆಳಗೆ ಹಣೆಪಟ್ಟಿ ಕಟ್ಟಿಕೊಂಡವರು, ಅಂಟಿಕೊಳ್ಳಲೂ ಆಗದೆ, ಕಿತ್ತುಕೊಳ್ಳಲೂ ಆಗದೆ ಜೊತಾಡುತ್ತಿರುವವರು, ಹೆಸರು ಹುಡುಕುವವರು, ಇರುವವರು, ಇಲ್ಲದವರು ಎಲ್ಲರನ್ನೂ ನೋಡುತ್ತಾ  ಹಾಗೆಯೇ ಕುಳಿತಿದ್ದೇನೆ.

Add Comment