Quantcast

ಆ ಬಟ್ಟೆಗಳಿಗೆ ಬೆಳಕಿನ ಯೋಗವೇ ಇಲ್ಲ..

ಸಂಧ್ಯಾರಾಣಿ 

’ಗಂಡಸು ಋತುಚಕ್ರದ ನೋವನ್ನು ಅನುಭವಿಸಿದ್ದರೆ ಬಹುಶಃ ಈ ಕರ್ಮಕ್ಕೆ ಏನಾದರೂ ಪರಿಹಾರ ಕಂಡು ಹಿಡಿದಿರುತ್ತಿದ್ದರೇನೋ’ – ಪಕ್ಕದ ಮನೆಯ ಜಲಜ ಈ ಮಾತನ್ನು ಹೇಳಿದಾಗ ರಾತ್ರಿ ೯.೩೦ ಆಗಿತ್ತು.

ನಾನು ಮತ್ತು ಅವಳು ಮನೆಯ ಹಿಂದಿನ ಬಟ್ಟೆ ಒಗೆಯುವ ಕಲ್ಲಿನ ಬಳಿ ’ಆ ಬಟ್ಟೆಗಳನ್ನು’ ಒಗೆಯುತ್ತಿದ್ದೆವು.  ಅದೊಂದು ಕ್ವಾರ್ಟರ್ಸ್, ಸಾಲಾಗಿ ಮನೆಗಳು.  ಹಿತ್ತಲುಗಳ ನಡುವೆ ಬೇಲಿ ಇರಲಿಲ್ಲ.  ಹಾಗಾಗಿ ಹೆಣ್ಣು ಮಕ್ಕಳಿಗೆ ’ಪ್ರೈವಸಿ’ ಕನಸಿನ ಮಾತು.  ಹಗಲಲ್ಲಿ ’ಆ’ ಬಟ್ಟೆಗಳನ್ನು ಒಗೆಯುವಂತಿಲ್ಲ,  ರಾತ್ರಿ ಒಗೆದು, ಒಣಗಿ ಹಾಕಿದರೆ, ಬೆಳಗು ಹರಿಯುವ ಮೊದಲೇ ಎದ್ದು ಒಳಗೆ ತಂದು ಬಿಡಬೇಕು.

ಆ ಬಟ್ಟೆಗಳಿಗೆ ಬೆಳಕಿನ ಯೋಗವೇ ಇಲ್ಲ.

ಅದು ಕತ್ತಲ ಬದುಕು.  ’ಆ’ ಬಟ್ಟೆಗಳು ಎಂದಿಗೂ ಸ್ವಚ್ಛ ಅನ್ನಿಸುತ್ತಲೇ ಇರಲಿಲ್ಲ.  ಅವುಗಳಲ್ಲಿ ಇರುತ್ತಿದ್ದ ಒಂದು ಮಣಕು ವಾಸನೆ ಹೋಗುತ್ತಲೇ ಇರಲಿಲ್ಲ.  ಮನೆಯಲ್ಲಿ ಅಮ್ಮ ಎಂದೂ ನನ್ನನ್ನು ಆ ದಿನಗಳಲ್ಲಿ ಹೊರಗೆ ಕೂರಿಸುತ್ತಿರಲಿಲ್ಲ, ಆದರೂ ನನಗೇ ನಾನು ಆ ದಿನಗಳಲ್ಲಿ ಶುದ್ಧಿಯಾಗಿದ್ದೇನೆ ಅನ್ನಿಸುತ್ತಿರಲಿಲ್ಲ.

’ಆ’ ಬಟ್ಟೆಗಳು ಎಂದೂ ಸೇಫ್ ಅನ್ನಿಸುತ್ತಿರಲಿಲ್ಲ.  ಹೈಸ್ಕೂಲು ಹುಡುಗಿಯರು ನಾವು, ನಡೆಯುವಾಗ ಕಿರಿಕಿರಿ, ಕೂತು ಏಳುವಾಗ ಕಿರಿಕಿರಿ, ನಡೆಯುವಾಗ ಹಿಂಸೆ.  ಪದೇಪದೇ ಹಿಂದೆ ತಿರುಗಿ ನೋಡಿಕೊಳ್ಳಬೇಕಾದ ಹೆದರಿಕೆ.  ಅದೃಷ್ಟವಶಾತ್ ಜಲಜಾ ಬಯಸಿದ್ದ ಪರಿಹಾರ ನಿಜವಾಯಿತು. ಸ್ಯಾನಿಟರಿ ಪ್ಯಾಡ್ ಗಳು ಬಂದವು.  ಮೊದಲಿಗೆ ಅದಕ್ಕೆ ದುಡ್ಡು ಹಾಕಲು ಅಮ್ಮನನ್ನು ಒಪ್ಪಿಸುವುದು ಸುಲಭ ಇರಲಿಲ್ಲ.

 

ನನ್ನ ಗೆಳತಿ ಒಬ್ಬಳು ಹೈಸ್ಕೂಲು ಮುಗಿದದ್ದೇ ಮದುವೆ ಆಗಿದ್ದಳು.  ಅವಳಿಗೆ ಸೋಪ್ ಅಲರ್ಜಿ.  ಅವಳ ಗಂಡ ಅವಳಿಗೆ ಸ್ಯಾನಿಟರಿ ನ್ಯಾಪ್ಕಿನ್ ತಂದುಕೊಟ್ಟಿದ್ದ.  ನಮ್ಮ ಮಟ್ಟಿಗೆ ಅವಳು ಮಹಾರಾಣಿ.  ಕಾಲ ಸ್ವಲ್ಪ ಬದಲಾಯಿತು.  ನ್ಯಾಪ್ಕಿನ್ ನಮ್ಮ ಮನೆಗೂ ಬಂತು.

ಮೊದಲ ಸಲ ಅದನ್ನು ಉಪಯೋಗಿಸಿದಾಗ ಅದು ಕೊಟ್ಟ ಬಿಡುಗಡೆಯನ್ನು ಎಂದೂ ಮರೆಯಲಾರೆ.
ಈಗ ದಿನಗಳು ಬದಲಾಗಿವೆ.  ಹೆಣ್ಣು ಮೊದಲಿಗಿಂತ ಹೆಚ್ಚು ಹೊರಗೆ ಕೆಲಸ ಮಾಡುತ್ತಿದ್ದಾಳೆ.  ಮೊದಲಿಗಿಂತ ಹೆಚ್ಚು ಕೆಲಸಗಳು, ಜವಾಬ್ದಾರಿಗಳು ಅವಳ ತಲೆ ಮೇಲಿವೆ.  ಅವಳು ‘perfect woman’ ಆಗಲು ಪ್ರತಿದಿನ ಹೊಸಹೊಸ ಮಾನದಂಡಗಳು ಬರುತ್ತಿವೆ.  ಈಗ ಆಫೀಸಿನಲ್ಲಿ ತಿಂಗಳಿಗೆ ಮೂರು ದಿನಗಳು ರಜೆ ಬೇಕು, ಹೊರಗೆ ಬರುವ ಹಾಗಿಲ್ಲ, ಮನೆಯಲ್ಲೇ ಕೂರುತ್ತೇನೆ ಎಂದರೆ, ಕೇಳುವವರಿಗಿರಲಿ, ಹೇಳುವವರಿಗೇ ನಾಚಿಕೆ ಆಗುತ್ತದೆ.

 

ಇಂದಿನ ಹೆಣ್ಣಿನ ಬದುಕಿನಲ್ಲಿ ನ್ಯಾಪ್ಕಿನ್ ಕೊಡುವ ನೆಮ್ಮದಿ ಹಿಂದೆ ಆ ಬಟ್ಟೆಗಳನ್ನು ಉಪಯೋಗಿಸಿದವರಿಗೆ ಮಾತ್ರ ಚೆನ್ನಾಗಿ ಅರ್ಥ ಆಗುತ್ತದೆ.  ಅದು ದೈಹಿಕ ಹಿಂಸೆಯಿಂದ ಬಿಡುಗಡೆ, ಆ ಕೆಟ್ಟ ವಾಸನೆಯಿಂದ ಬಿಡುಗಡೆ, ಸೋಂಕಿನಿಂದ ಬಿಡುಗಡೆ, ಹೆಚ್ಚು ದೂರ ನಡೆಯಬೇಕಾಗಿ ಬಂದರೆ ಆಗುವ ಯಾತನೆಯಿಂದ ಬಿಡುಗಡೆ, ಬಟ್ಟೆ ಒಗೆಯುವಾಗ ಯಾರಾದರೂ ಬಂದರೆ ಅವಮಾನದಿಂದ ಹಿಡಿಯಾಗುತ್ತಿದ್ದ ಸಂಕಟದಿಂದ ಬಿಡುಗಡೆ.

ಹೆಂಗಸರ ಮಟ್ಟಿಗೆ ಸ್ಯಾನಿಟರಿ ಪ್ಯಾಡ್ ಕಳೆದ ಶತಮಾನದ ಮಹತ್ವದ ಸಂಶೋದನೆಗಳಲ್ಲಿ ಒಂದು ಎಂದರೆ ದಯವಿಟ್ಟು ನಗಬೇಡಿ. ನ್ಯಾಪ್ಕಿನ್ ಗಿಂತ ಮೊದಲು ಮತ್ತು ನ್ಯಾಪ್ಕಿನ್ ನಂತರ ಬದುಕಿರುವವರಿಗೆ ಮಾತ್ರ ಈ ಮಾತಿನ ಸತ್ಯ ಅರಿವಾಗುತ್ತದೆ.  ಇಂತಹ ಸ್ಯಾನಿಟರಿ ಪ್ಯಾಡ್ ಮೇಲೆ ಸರಕಾರ ೧೨% ತೆರಿಗೆ ಹಾಕಿತು.

ಎಲ್ಲಾ ಹೆಣ್ಣುಮಕ್ಕಳೂ ಪಕ್ಷದ ಭೇದ ಮರೆತು ಅದನ್ನು ಪ್ರತಿಭಟಿಸಬೇಕಿತ್ತು.  ಅದನ್ನು ತೆಗೆಯಲು ಒತ್ತಡ ಹೇರಬೇಕಾಗಿತ್ತು.  ಆದರೆ ಓದಿಕೊಂಡ ಹೆಣ್ಣುಮಗಳೊಬ್ಬಳು ತನ್ನೆಲ್ಲಾ sensitivity ಮರೆತು ತನ್ನ ಪಕ್ಷದ ಪರವಾಗಿ ನಿಲ್ಲುತ್ತಿದ್ದೆನೆನ್ನುವ ಭ್ರಮೆಯಲ್ಲಿ ’ಪ್ಯಾಡ್ ಗಿಂತ ಬಟ್ಟೆ ಬಳಸುವುದು ಒಳ್ಳೆಯದು ಎಂದಳು ನೋಡಿ, ಆಕೆಯ ವಿದ್ಯೆ, ತಿಳುವಳಿಕೆ ಎಲ್ಲದರ ಮೇಲೆ ಅನುಮಾನ ಬರುತ್ತಿದೆ.  ಜಿಎಸ್ ಟಿ ಕೊಡಲಾಗದಿದ್ದರೆ ಮನೆಯಲ್ಲೇ ಅಡಿಗೆ ಮಾಡಿಕೊಂಡು ತಿನ್ನಿ ಎಂದ ಮತ್ತೊಬ್ಬ ಮಹಿಳಾಮಣಿಯ ನುಡಿಗಳಿಗಿಂತ, ನ್ಯಾಪ್ಕಿನ್ ತೆಗೆದುಕೊಳ್ಳಲಾಗದಿದ್ದರೆ ಬಟ್ಟೆಬಳಸಿ ಎಂದ ಈಕೆಯ ದನಿಯಲ್ಲಿ ಹೆಚ್ಚು ಕ್ರೌರ್ಯ ಕಾಣಿಸುತ್ತಿದೆ.

ಈಗ ಹೆಣ್ಣುಮಕ್ಕಳು ಹಿಂದೆಂದಿಗಿಂತಲೂ ಬೇಗ ಋತುಮತಿಯರಾಗುತ್ತಿದ್ದಾರೆ.  ಸಣ್ಣಸಣ್ಣ ಮಕ್ಕಳಿಗೆ ಬಟ್ಟೆ ಬಳಸುವುದನ್ನು ಹೇಳಿಕೊಡುವುದಿರಲಿ, ನ್ಯಾಪ್ಕಿನ್ ಬಳಸುವುದು ಹೇಗೆ ಎಂದು ಹೇಳುವುದೇ ಅರ್ಥವಾಗುತ್ತಿಲ್ಲ.  ಆ ಮಕ್ಕಳ ಮುಂದೆ ನ್ಯಾಪ್ಕಿನ್ ಗಳು ಬಹುರಾಷ್ಟ್ರೀಯ ಕಂಪನಿಯ ಹೇರುವಿಕೆ ಎಂದು ಯಾವ ಬಾಯಲ್ಲಿ ಹೇಳುವುದು?

ಇಂದಿಗೂ ಕಿಲೋಮೀಟರ್ ಗಟ್ಟಲೆ ನಡೆದು ಶಾಲೆಗೆ ಹೋಗುವ ಹಳ್ಳಿಯ ಹೆಣ್ಣುಮಕ್ಕಳಿಗೆ ’ಬಟ್ಟೆಬಳಸಿ, ದೇಶಭಕ್ತಿ ಬೆಳಸಿ’ ಎಂದು ಹೇಳಲೆ?  ಬೆಳಗ್ಗೆ ಹೊತ್ತು ಮೂಡಿದಾಗ ಮನೆಬಿಟ್ಟು, ಹೊತ್ತು ಮುಳುಗಿದ ಮೇಲೆ ಮನೆ ಸೇರುವ ಲಕ್ಷ ಲಕ್ಷ ಹೆಣ್ಣುಮಕ್ಕಳಿಗೆ ಆ ದಿನಗಳಲ್ಲಿ ಬಟ್ಟೆ ತೆಗೆದುಕೊಂಡು ಹೋಗಿ’ ಎಂದು ಹೇಳಬಲ್ಲೆವೆ?

ಕನಿಷ್ಠ ನಮ್ಮ ಸಂಕಷ್ಟದ ವಿಷಯಗಳಲ್ಲಾದರೂ ಒಟ್ಟಾಗಿ ನಿಲ್ಲೋಣ, ರಾಜಕೀಯವನ್ನು ದೂರ ಇಡೋಣ.
ರಾಜಕೀಯದಲ್ಲಿರುವುದೆಂದರೆ ಎಚ್ಚರವಾಗಿರುವುದು, ಮುಂದಾಳಾಗಿರುವುದು, ಗುಲಾಮರಾಗಿರುವುದಲ್ಲ.

#Shame on you madam!

3 Comments

  1. Umavallish
    July 10, 2017
  2. Anonymous
    July 9, 2017
  3. Kiran Gajanur
    July 9, 2017

Add Comment