Quantcast

ಸ್ಯಾನಿಟರಿ ಪ್ಯಾಡ್: ಗುಡ್ ಆಂಡ್ ಬ್ಯಾಡ್

ಪ್ರಸಾದ್ ನಾಯ್ಕ್

ಅಂಗೋಲಾದಿಂದ 

ಕೆಲ ತಿಂಗಳುಗಳ ಹಿಂದೆ ರಾಷ್ಟ್ರೀಯ ಟೆಲಿವಿಷನ್ ಸುದ್ದಿವಾಹಿನಿಯೊಂದರಲ್ಲಿ ನಿತಿನ್ ಗಡ್ಕರಿಯವರ ಸಂದರ್ಶನವೊಂದನ್ನು ವೀಕ್ಷಿಸುತ್ತಿದ್ದೆ. ಮಾತಿನ ಓಘದಲ್ಲೇ ಸಂದರ್ಶಕರು ಗಡ್ಕರಿಯವರನ್ನು ಕೇಳಿಯೇ ಬಿಟ್ಟರು: “ನಿಮ್ಮ ಪಕ್ಷದ ಶಾಸಕರಿಗೆ, ರಾಜಕಾರಣಿಗಳಿಗೆ ಕಿವಿಮಾತೊಂದನ್ನು ಹೇಳುವುದಿದ್ದರೆ ಏನನ್ನು ಹೇಳಬಯಸುವಿರಿ?”. ಈ ಪ್ರಶ್ನೆಗೆ ಗಡ್ಕರಿಯವರ ಉತ್ತರವು ಬಲು ಸೊಗಸಾಗಿತ್ತು. “ದಯವಿಟ್ಟು ತೆಪ್ಪಗಿರಿ ಎಂದು ಹೇಳಬಯಸುತ್ತೇನೆ. ಏಕೆಂದರೆ ಇವರುಗಳು ಬಾಯಿ ತೆರೆದಾಗಲೆಲ್ಲಾ ಎಡವಟ್ಟು ಮಾಡಿಕೊಳ್ಳುತ್ತಾರೆ”, ಎಂದು ನಗುತ್ತಾ ನುಡಿದಿದ್ದರು ಗಡ್ಕರಿಯವರು.

ಇಂಥಾ ಎಡವಟ್ಟುಗಳು ಕಳೆದ ಮೂರು ವರ್ಷಗಳಿಂದ ನಡೆಯುತ್ತಲೇ ಬಂದಿವೆ. ಏನೋ ಹೇಳಲು ಹೋಗಿ ಇನ್ನೇನೋ ಆಗುವುದು, ಮಹಾಬುದ್ಧಿವಂತಿಕೆಯ ಕೆಲಸಗಳಿಗೆ ಕೈಹಾಕಿ ಕೈಸುಟ್ಟುಕೊಳ್ಳುವುದು… ಹೀಗೆ ಇವುಗಳೆಲ್ಲಾ ಇವರಿಗೆ ಹೊಸತೇನೂ ಅಲ್ಲ. ಸದ್ಯಕ್ಕೆ ಈ ಸ್ಯಾನಿಟರಿ ನ್ಯಾಪ್ಕಿನ್ ಕಹಾನಿ ಇದಕ್ಕೊಂದು ಹೊಸ ಉದಾಹರಣೆ.

ಸ್ಯಾನಿಟರಿ ಪ್ಯಾಡ್ ಗಳಿಗಿಂತ ತುಂಡು ಬಟ್ಟೆಗಳು ಹೆಚ್ಚು `ಹೈಜೆನಿಕ್’ ಎಂಬುದನ್ನು ಹೀಗೆ ಹೇಳಿದವರು ಅದ್ಯಾವ ರೀತಿಯಲ್ಲಿ ಸಮರ್ಥಿಸಿಕೊಳ್ಳುವರೋ ಗೊತ್ತಿಲ್ಲ. `ಹೈಜೆನಿಕ್’ ಹಾಗಿರಲಿ, ಇದು `ಪ್ರಾಕ್ಟಿಕಲ್’ ಕೂಡ ಅಲ್ಲ ಅನ್ನುವುದು ಶುದ್ಧ ಕಾಮನ್ ಸೆನ್ಸ್ ವಿಚಾರ. ಹೆಣ್ಣು ಮನೆಯ ನಾಲ್ಕು ಗೋಡೆಗಳ ಆವರಣದಿಂದ ಹೊರಬಂದು ದಶಕಗಳೇ ಸಂದಿವೆ. ಮನೆ-ಆಫೀಸು ಸಂಭಾಳಿಸುವುದರಿಂದ ಹಿಡಿದು ಹಿಮಾಲಯ ಹತ್ತುವವರೆಗೂ, ಅಂತರಿಕ್ಷಯಾನದವರೆಗೂ ಎಲ್ಲದರಲ್ಲೂ ಮಹಿಳೆಯರು ಸೈ ಅನ್ನಿಸಿಕೊಂಡಿದ್ದಾರೆ. ಇನ್ನು ದೇಶದ ರಕ್ಷಣಾ ಪಡೆಗಳಲ್ಲಿ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯುಕ್ತಿಗೊಳಿಸುವ ಬಗ್ಗೆ ಮಾತುಗಳೂ ಕೇಳಿಬಂದಿವೆ. ಹೀಗೆಲ್ಲಾ ಇರುವಾಗ ಮಾಸಿಕ ಋತುಚಕ್ರದ ವಿಚಾರದಲ್ಲಿ ಮತ್ತೆ ಬಟ್ಟೆಯ ಚುಂಗಿಗೇ ಜೋತುಬೀಳಬೇಕೆಂಬ ಹಾಸ್ಯಾಸ್ಪದ ಮಾತುಗಳಿಗೆ ಏನು ಹೇಳಬೇಕೆಂಬುದೇ ತಿಳಿಯುತ್ತಿಲ್ಲ.

ಹಿಂದಿಯಲ್ಲಿ `ಹವಾ ಮೇ ಬಾತ್ ಕರ್ನಾ’ ಎಂಬ ಮಾತೊಂದಿದೆ. ನೇರವಾಗಿ ಭಾಷಾಂತರಿಸುವುದಾದರೆ `ಗಾಳಿಯಲ್ಲಿ ಮಾತನಾಡುವುದು’. ಅಂದರೆ ಹಿನ್ನೆಲೆ, ಸತ್ಯ ಮತ್ತು ಪ್ರಾಯೋಗಿಕತೆಗಳ ಅರಿವಿಲ್ಲದೆ ಮಾತಿನಲ್ಲೇ ಗಾಳಿಗೋಪುರವನ್ನು ಕಟ್ಟುವುದು. ಅಮ್ಮ, ಅಜ್ಜಿಯಂದಿರು ಬಳಸುವ ಬಟ್ಟೆಗಳ ಬಗ್ಗೆ ಹೇಳಿದವರು ಟ್ಯಾಂಪನ್ ಗಳ ಬಗ್ಗೆಯೂ ಹೇಳಿದ್ದರಿಂದ ಇದನ್ನು ಬರೆಯಬೇಕಾಗಿ ಬರುತ್ತಿದೆ.

ಸ್ಯಾನಿಟರಿ ಪ್ಯಾಡ್ ಗಳು ಪರಿಸರ ಸ್ನೇಹಿಯಾಗಿಲ್ಲದಿರಬಹುದು. ಟ್ಯಾಂಪನ್ ನಿಸ್ಸಂದೇಹವಾಗಿ ಸ್ಯಾನಿಟರಿ ಪ್ಯಾಡ್ ಗಳಿಗಿಂತ ವಾಸಿ ಎಂಬುದು ಸತ್ಯವೂ ಆಗಿರಬಹುದು. ಹಾಗೆಂದು ಏಕಾಏಕಿ `ಟ್ಯಾಂಪನ್’ ಗಳನ್ನು ಬಳಸಿ ಎಂದು ಸಾರ್ವಜನಿಕವಾಗಿ ಹೇಳುವುದು ಕಷ್ಟ.

ಅಸಲಿಗೆ ನಮ್ಮಲ್ಲಿ ಬಹಳಷ್ಟು ಜನರಿಗೆ ಟ್ಯಾಂಪನ್ ಗಳೆಂದರೆ ಏನೆಂದೇ ಗೊತ್ತಿಲ್ಲ. ನಾನು ನಮ್ಮೂರಿಗೆ ಹೋಗಿ ಹತ್ತಾರು ಜನರನ್ನು ಒಗ್ಗೂಡಿಸಿ “ಇಂದಿನಿಂದ ಟ್ಯಾಂಪನ್ ಬಳಸಿ ಮಾರಾಯ್ರೇ” ಎಂದುಬಿಟ್ಟರೆ ಬಹುಪಾಲು ಮಹಿಳೆಯರು ಪೆಚ್ಚಾಗಿ ಸುಮ್ಮನೆ ಒಬ್ಬರನ್ನೊಬ್ಬರು ನೋಡಿದರೂ ಅಚ್ಚರಿಯಿಲ್ಲ. ಇನ್ನು ಪರಿಸರ ಸ್ನೇಹಿಯೂ, ಜೇಬು ಸ್ನೇಹಿಯೂ ಆದ ಶಿ-ಕಪ್ ಗಳದ್ದೂ ಇದೇ ಕತೆ. ಇವುಗಳ ಕಾರ್ಯಕ್ಷಮತೆಯ ಬಗ್ಗೆ ಎರಡು ಮಾತಿಲ್ಲ. ಆದರೆ ಇವುಗಳ ಬಗ್ಗೆ ಜನಸಾಮಾನ್ಯರಿಗೆ ಎಷ್ಟು ಮಾಹಿತಿಯಿದೆ, ಮಾರುಕಟ್ಟೆಯಲ್ಲಿ ಲಭ್ಯತೆಯ ಸ್ಥಿತಿ ಹೇಗಿದೆ, ಇವುಗಳ ಬಗ್ಗೆ ಅಗತ್ಯ ಜಾಗೃತಿ, ತರಬೇತಿ ಮತ್ತು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಯಾವ್ಯಾವ ಕಾರ್ಯಯೋಜನೆಗಳನ್ನು ಹಂತಹಂತವಾಗಿ ಹಮ್ಮಿಕೊಳ್ಳಬಹುದು ಎಂಬುದರ ಬಗ್ಗೆ ಕೊಂಚವಾದರೂ ಅರಿವೋ, ದೂರದೃಷ್ಟಿಯೋ ಇರುವುದು ಮುಖ್ಯ.

ಅಸಲಿಗೆ ನಮ್ಮ ನಡುವಿನ ಬಹಳಷ್ಟು ರಾಜಕಾರಣಿಗಳು ಹಳ್ಳಿಗಳನ್ನು ಮರೆತೇಬಿಟ್ಟಂತಿದೆ. ಈ ಹಿಂದಿನ `ಕ್ಯಾಶ್ ಲೆಸ್ ಇಂಡಿಯಾ’ ಎಂಬ ಉದ್ಘೋಷಣೆಯಲ್ಲೂ ಇದು ನಿಜವಾಗಿತ್ತು. ಟ್ಯಾಂಪನ್ ಅಥವಾ ಕಪ್ ಗಳನ್ನು ಆನ್ಲೈನ್ ಮೂಲಕವಾಗಿ ತರಿಸಿಕೊಳ್ಳಬಹುದು ಎಂಬ ಮಾತ್ರಕ್ಕೆ ಅವುಗಳಿಗೆ ಜೈ ಎನ್ನಲಾರದು. ಭಾರತದ ಹಲವಾರು ದುರ್ಗಮ ಹಳ್ಳಿಗಳಲ್ಲಿ ಅಂತಜರ್ಾಲವು ಹಾಗಿರಲಿ, ಇನ್ನೂ ವಿದ್ಯುಚ್ಛಕ್ತಿಯೇ ನೆಟ್ಟಗೆ ತಲುಪಿಲ್ಲ. ಋತುಚಕ್ರ, ಮಾಸಿಕ ನೋವು ಇತ್ಯಾದಿಗಳ ಬಗ್ಗೆ ಮುಕ್ತವಾಗಿ ಮಾತನಾಡಲಾಗದಂತಹ ಪರಿಸ್ಥಿತಿಗಳು ಇಂದಿಗೂ ಹಳ್ಳಿಗಳಲ್ಲಿವೆ.

ಇನ್ನು ಸ್ಯಾನಿಟರಿ ಪ್ಯಾಡ್ ಗಳನ್ನು ಖರೀದಿಸಿದರೆ ಎರಡು ಹೊತ್ತಿನ ಊಟಕ್ಕೂ ಕಲ್ಲು ಬೀಳುತ್ತದೆ ಎಂಬ ಕಾರಣದಿಂದ ಹೆಣ್ಣುಮಕ್ಕಳು `ದೊಡ್ಡವರಾಗುತ್ತಿದ್ದಂತೆಯೇ’ ಅವರನ್ನು ಶಾಲೆಯಿಂದ ಬಿಡಿಸುವ ಘಟನೆಗಳು ಇಂದಿಗೂ ನಡೆಯುತ್ತಿವೆ. ಭಾರತದ ದೇಸಿ ಸ್ಯಾನಿಟರಿ ಪ್ಯಾಡ್ ಗಳ ಲೋಕದಲ್ಲಿ ಹೊಸ ಕ್ರಾಂತಿಯನ್ನೇ ತಂದ ಕೊಯಮತ್ತೂರಿನ ಅರುಣಾಚಲಂ ಮುರುಗನಾಥಮ್ ರವರ ಯಶಸ್ಸಿನ ಹಿಂದಿನ ಪ್ರಮುಖ ಕಾರಣಗಳೆಂದರೆ ಬಹುರಾಷ್ಟ್ರೀಯ ಕಂಪೆನಿಗಳ ಸ್ಯಾನಿಟರಿ ಪ್ಯಾಡ್ ಗಳಿಗಿಂತ ತೀರಾ ಕಡಿಮೆ ಬೆಲೆಯಲ್ಲಿ ಅವುಗಳನ್ನು ಉತ್ಪಾದಿಸಿ ಅವುಗಳನ್ನು ಜನಸಾಮಾನ್ಯರಿಗೆ ನೀಡಿದ್ದು ಮತ್ತು ಈ ಮೂಲಕ ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶವನ್ನೂ ಸೃಷ್ಟಿಸಿದ್ದು.

ಎಲ್ಲದಕ್ಕಿಂತಲೂ ಮುಖ್ಯವಾಗಿ ಮಾಧ್ಯಮದ ಕ್ಯಾಮೆರಾಗಳು ತಪ್ಪಿಯೂ ತಲೆಹಾಕದಿದ್ದ ಹಳ್ಳಿಗಳಲ್ಲಿ ಪಿ. ಸಾಯಿನಾಥ್ ಹೇಗೆ ದನಿಯಾಗದ ಕತೆಗಳನ್ನು ಹುಡುಕುತ್ತಾ ಹೋದರೋ ಹಾಗೆಯೇ ಅರುಣಾಚಲಂ ಮುರುಗನಾಥಮ್ ಕೂಡ ಹಳ್ಳಿಗಳ ಮೂಲೆಮೂಲೆಗಳನ್ನು ತಲುಪಿದ್ದರು. ಹಳ್ಳಿಗಳಲ್ಲಿದ್ದ ಗ್ರಾಮೀಣ ಸಮುದಾಯಗಳೊಂದಿಗೆ, ಕೆಲ ಸರ್ಕಾರೇತರ ಸಂಸ್ಥೆಗಳೊಂದಿಗೆ ಕೈಜೋಡಿಸಿ ಸ್ಯಾನಿಟರಿ ಪ್ಯಾಡ್ ಗಳನ್ನು ಕೈಗೆಟಕುವ ಬೆಲೆಯಲ್ಲಿ ಹಳ್ಳಿಯ ಮಹಿಳೆಯರಿಗೆ ತಲುಪಿಸಿದರು. ಈ ಮೂಲಕವಾಗಿ ಆರೋಗ್ಯ ಮತ್ತು ನೈರ್ಮಲ್ಯದ ನಿಟ್ಟಿನಲ್ಲಿ ಅವರು ಅರ್ಥಪೂರ್ಣ ಹೆಜ್ಜೆಯನ್ನಿಟ್ಟಿದ್ದರು.

ಅದಕ್ಕೆ ಬದಲಾಗಿ ವೆಬ್ ಸೈಟ್ ಒಂದನ್ನು ತೆರೆದು `ಇಲ್ಲಿ ದೇಸಿ ಸ್ಯಾನಿಟರಿ ಪ್ಯಾಡ್ ಗಳನ್ನು ಮಾಡಿಟ್ಟಿದ್ದೇನೆ, ಬೇಕಿದ್ದವರು ಇಸ್ಕೊಳ್ರಪ್ಪಾ’ ಎಂದು ಕೈಕಟ್ಟಿ ಕುಳಿತಿದ್ದರೆ ಅವರ ಮತ್ತು ಅವರ ತಂಡಗಳು ತಯಾರಿಸಿದ ಸ್ಯಾನಿಟರಿ ಪ್ಯಾಡ್ ಗಳು ಅವರ ಹಳ್ಳಿಯಾಚೆಗೂ ತಲುಪುತ್ತಿರಲಿಲ್ಲವೆಂಬುದು ಇಲ್ಲಿ ನೆನಪಿನಲ್ಲಿಡಬೇಕಾದ ಅಂಶ. ಇವುಗಳು ಹಂತಹಂತವಾಗಿ ನಡೆಯಬೇಕಾದ ಮಹಾತ್ವಾಕಾಂಕ್ಷಿ ಯೋಜನೆಗಳೇ ಹೊರತು ರಾತ್ರೋರಾತ್ರಿ ಆಗುವಂಥವುಗಳೇನಲ್ಲ.

ಹಿಂದಿನವರು ಮಾಸಿಕ ನೋವಿನ ದಿನಗಳಲ್ಲಿ ಹತ್ತಿಯ ಬಟ್ಟೆಯನ್ನೋ, ಸೀರೆಯ ಹರಿದ ತುಂಡೊಂದನ್ನೋ ಕಟ್ಟಿಕೊಳ್ಳಲು ಬಳಸಿದ್ದರೆ ಅದಕ್ಕೆ ಕಾರಣಗಳೂ ಇದ್ದವು. ಆಥರ್ಿಕ ಕಾರಣಗಳೂ ಸೇರಿದಂತೆ ಈ ಬಗ್ಗೆ ಹೆಚ್ಚಿನ ಅರಿವೂ, ಬೇರೆ ಆಯ್ಕೆಗಳೂ ಅವರಲ್ಲಿರಲಿಲ್ಲ. ಹೀಗಾಗಿ ಸಮಥರ್ಿಸಿಕೊಳ್ಳುವ ಅವಸರದಲ್ಲಿ ಎಲ್ಲವನ್ನೂ ಸುಖಾಸುಮ್ಮನೆ `ಓಲ್ಡ್ ಈಸ್ ಗೋಲ್ಡ್’ ಎನ್ನಲಾಗುವುದಿಲ್ಲ.

ಸ್ಯಾನಿಟರಿ ಪ್ಯಾಡ್ ಗಳೂ ಕೂಡ ಏಕಾಏಕಿ ಪ್ರಸಿದ್ಧಿಗೆ ಬಂದವೇನಲ್ಲ. ಸ್ಯಾನಿಟರಿ ಪ್ಯಾಡ್ ಗಳು ಹೊಸದಾಗಿ ಮಾರುಕಟ್ಟೆಗೆ ಬಂದಾಗ ಅವುಗಳನ್ನು ಒಪ್ಪಿಕೊಳ್ಳಲು, ಮೆಡಿಕಲ್ ಶಾಪ್ ಗಳಿಂದ ಖರೀದಿಸಲು, ಪ್ರಯೋಗಿಸಿ ನೋಡಲು ಎಷ್ಟೆಲ್ಲಾ ಮುಜುಗರವಾಗುತ್ತಿತ್ತು ಎಂಬುದು ಎಲ್ಲರಿಗೂ ಗೊತ್ತು. (ಇದು ಕಾಂಡೋಮ್ ಗಳ ವಿಚಾರದಲ್ಲೂ ಸತ್ಯ) ಆದರೆ ಕ್ರಮೇಣ ಈ ಪ್ಯಾಡ್ ಗಳು ನಿತ್ಯಬಳಕೆಗೆ ಅದೆಷ್ಟು ಅನುಕೂಲ ಎಂಬ ಸತ್ಯವು ತಿಳಿದು, ಒಬ್ಬರಿಂದೊಬ್ಬರಿಗೆ ಸಲಹೆಗಳು ವಿನಿಮಯವಾಗುತ್ತಾ, ಮೇಲಾಗಿ ಜಾಹೀರಾತುಗಳೂ ಬೆನ್ನುಬೆನ್ನಿಗೆ ಬಂದು ಇವುಗಳು ಬಹುತೇಕ ಸಾಮಾನ್ಯವೆಂಬಂತಾದವು. ಇಂದು ಮುಟ್ಟಿನ ಸಮಸ್ಯೆಗಳ ಬಗ್ಗೆ ಎಲ್ಲರೂ ಕೂಡ ಮುಕ್ತವಾಗಿ ಮಾತನಾಡದಿರಬಹುದು. ಆದರೆ ಸೂಪರ್ ಮಾಕರ್ೆಟ್ ಗಳಲ್ಲಿ ಸ್ಯಾನಿಟರಿ ಪ್ಯಾಡ್ ಗಳ ಪ್ಯಾಕೆಟ್ಟುಗಳನ್ನು ಇತರ ವಸ್ತುಗಳಂತೆ ಟ್ರಾಲಿಗಳಲ್ಲಿರಿಸಿ ಶಾಪಿಂಗ್ ಮಾಡಲು ಯಾರಿಗೂ ಮುಜುಗರವಿಲ್ಲ. ಅಷ್ಟರ ಮಟ್ಟಿಗೆ ಇದೊಂದು ಧನಾತ್ಮಕ ಬೆಳವಣಿಗೆ!

ದೇಹ ಮತ್ತು ಲೈಂಗಿಕತೆಗಳ ವಿಚಾರದಲ್ಲಿ ನಮ್ಮಲ್ಲಿನ್ನೂ ಮುಕ್ತ ಚಚರ್ೆಗಳಾಗಿಲ್ಲ. ಈ ನಿಟ್ಟಿನಲ್ಲಿ ಇಂಥದ್ದೊಂದು ಆರೋಗ್ಯಕರ ಚರ್ಚೆಯನ್ನು ಹುಟ್ಟುಹಾಕಿದ `ಅವಧಿ’ಯ ನಡೆಯು ಸ್ವಾಗತಾರ್ಹ.

ಪರಿಸರದ ಬಗ್ಗೆ ಕಾಳಜಿಯನ್ನಿಟ್ಟುಕೊಂಡು ಹೇಳಿಕೆಯನ್ನು ಕೊಡುವ ಧುರೀಣರು ಬದಲಿ ಪರಿಹಾರದತ್ತಲೂ ಯೋಚಿಸಿ ಜನಸಾಮಾನ್ಯರೊಂದಿಗೆ, ಸ್ಥಳೀಯ ಸಂಸ್ಥೆಗಳೊಂದಿಗೆ ಪಕ್ಷಾತೀತರಾಗಿ ಕೈಜೋಡಿಸಲಿ. ಗ್ರಾಮೀಣ ಪ್ರದೇಶಗಳಲ್ಲಿ, ಶಾಲಾಕಾಲೇಜುಗಳಲ್ಲಿ, ಬೆಳೆಯುತ್ತಿರುವ ಮಕ್ಕಳಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕೆಲಸಗಳು ಆರಂಭವಾಗಲಿ. ಸದುದ್ದೇಶದ ಯೋಜನೆಗಳಿಗೆ ಜನಬೆಂಬಲವು ಸಿಕ್ಕೇ ಸಿಗುತ್ತದೆ. ನೈಜ ಸಮಸ್ಯೆಗಳನ್ನು ಒಪ್ಪಿಕೊಂಡು ಅವುಗಳನ್ನು ಪರಿಹರಿಸುವಲ್ಲಿ ಮತ್ತು ಮಾನವೀಯ ಸಂವೇದನೆಗಳ ವಿಚಾರದಲ್ಲಿ ಸಾಹಿತಿ, ಚಿತ್ರನಟ, ರಾಜಕಾರಣಿ, ಸೆಲೆಬ್ರಿಟಿ ಇತ್ಯಾದಿ ಹಣೆಪಟ್ಟಿಗಳನ್ನು ತೊರೆದು ಶುದ್ಧ ಮಾನವರಾಗಿ ವ್ಯವಹರಿಸುವುದೇ ಒಳಿತು. ಆಗ ಸಾರ್ವಜನಿಕ ಹೇಳಿಕೆಗಳು ಹೇಳಿದವರ ವ್ಯಕ್ತಿತ್ವಕ್ಕೆ ರಂಗು ತರುವುದಲ್ಲದೆ ಆಡುವ ಮಾತಿಗೂ ತೂಕವನ್ನು ತರುತ್ತವೆ.

ಯಾವುದನ್ನೋ ಸಮರ್ಥಿಸಿಕೊಳ್ಳಬೇಕು ಎನ್ನುವ ಭರದಲ್ಲಿ ಎಲ್ಲದಕ್ಕೂ ಕೋಲೆಬಸವನಂತೆ ತಲೆಯಾಡಿಸಿದರೆ ಪೇಚಿಗೊಳಗಾಗುವುದು ಖಾತ್ರಿ. ಅಂಥಾ ಪರಿಸ್ಥಿತಿಗಳಲ್ಲಿ ಅದ್ಯಾರೇ ಆಗಿರಲಿ, ಗಡ್ಕರಿಯವರು ಹೇಳಿದಂತೆ ತೆಪ್ಪಗಿರುವುದೇ ವಾಸಿ.

 

2 Comments

  1. ಭಾರತಿ ಬಿ ವಿ
    July 10, 2017
    • Prasad
      July 11, 2017

Add Comment