Quantcast

ಅವಳು ‘ಅನಲೆ’

ಜಿ.ಎನ್. ಮೋಹನ್

ಈ ಸಿನಿಮಾ ಮೂಲಕ ಸಂಜ್ಯೋತಿ ಸಮಾಜದ ಸ್ಟೀರಿಯೋಟೈಪ್ ಆಲೋಚನೆಯನ್ನ ಮುರಿಯುವ ಪ್ರಯತ್ನ ಮಾಡುತ್ತಿದ್ದಾರೆ.

ನಾವೆಲ್ಲ ಮಹಿಳೆಯರನ್ನು ಎಷ್ಟು ಟೈಪಿಫೈ ಮಾಡಿದೀವಿ ಅಂದ್ರೆ ಸ್ವಾತಂತ್ರ್ಯದ ಒಂದು ಸಣ್ಣ ಹೆಜ್ಜೆಯಾಗಿ ಹೆಣ್ಣೊಬ್ಬಳು ಸ್ಕೂಟರ್ ಓಡಿಸಿದರೆ ಅದನ್ನೇ ಅರಗಿಸಿಕೊಳ್ಳದ ಸಮಾಜ ಇನ್ನು ಆಕೆ ಬೈಕ್ ಓಡಿಸಿದರೆ ಅದಕ್ಕೆ ಸಿಗುವ ಪಟ್ಟ, ವಿಶೇಷಣ ಇವೆಲ್ಲ ಬೇರೆಯೇ ಇವೆ. ಇದರ ನಡುವೆ ಸಂಜ್ಯೋತಿ ಬುಲೆಟ್ ಓಡಿಸೋದು ಸಹ ಇಂತಹ ಸ್ಟೀರಿಯೋಟೈಪ್‍ನ ಮುರಿಯೋ ಕ್ರಿಯೆಯಾಗಿ ನನಗೆ ಕಾಣುತ್ತೆ. ಈಕೆ ಫ್ರೀಡಂ ಪಾರ್ಕ್ ನಲ್ಲಿ ಕುಳಿತು ಪ್ರತಿಭಟನೆ ಮಾಡೋದು, ರೋಹಿತ್ ವೇಮುಲನ ಬಗ್ಗೆ ನಾಟಕ ರಚಿಸೋದು ಹೇಗೋ ಈಕೆ ಬುಲೆಟ್ ರೈಡ್ ಮಾಡೋದು ಕೂಡಾ ಹಾಗೇ ಒಂದು ಪ್ರತಿಭಟನೆಯಾಗಿಯೇ ನನಗೆ ಕಾಣುತ್ತೆ.

ಇಲ್ಲಿ ಕೂಡ ಸಂಜ್ಯೋತಿ ಈ ಸಿನಿಮಾ ಮೂಲಕ ಸಮಾಜದ ಮತ್ತೊಂದು ಸ್ಟೀರಿಯೋಟೈಪ್‍ನ ಮುರಿದಿದ್ದಾರೆ. ತಮ್ಮ ಈ ಬಗೆಯ ಅನುಭವಗಳನ್ನು, ಆಲೋಚನೆಗಳನ್ನು ತೆರೆಯ ಮೇಲೆ ತಂದಿದ್ದಾರೆ ಅಂತ ನನಗನ್ನಿಸುತ್ತೆ.

‘ಅನಲ’ ಎಷ್ಟು ಸಿನಿಮಾ ಆಗಿದೆ, ಆಗಿಲ್ಲ ಅನ್ನೋದಕ್ಕಿಂತ ನನಗೆ ಮುಖ್ಯ ಅನಿಸೋದು, ಈ ಚಿತ್ರ ಪ್ರತಿಯೊಬ್ಬರ ಮನಸ್ಸಿನಲ್ಲಿ ಒಂದು ಆಲೋಚನೆಯ ಕಿಡಿಯನ್ನು ಹೊತ್ತಿಸಿದೆ, ಇದು ‘ಅನಲ’ದ ಬಹಳ ದೊಡ್ಡ ಯಶಸ್ಸು ಅಂತ ನನಗನ್ನಿಸುತ್ತೆ.

ಇಲ್ಲಿ ಆಗಿನಿಂದ ಮಾತಾಡಿದ ಎಲ್ಲರ ಮಾತುಗಳನ್ನು ಕೇಳಿದೀನಿ. ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ತಿದಾರೆ. ಕತೆಯ ವಸ್ತುವಿನ ಆಚೆಗೂ ಮುಟ್ಟು – ಮೈಲಿಗೆಗಳವರೆಗೂ ಚರ್ಚೆ ವಿಸ್ತಿರಿಸಿಕೊಳ್ತಲ್ಲ, ಈ ಸಿನಿಮಾದ ಗಟ್ಟಿತನ ಇರೋದೇ ಇದರಲ್ಲಿ. ನನ್ನ ಪ್ರಕಾರ, ಒಂದು ಸೃಜನಶೀಲ ಕೃತಿ ಮಾಡಬೇಕಿರೋದು ಇದೇ ಕೆಲಸ; ಅದು ನಮ್ಮೊಳಗನ್ನು ನೋಡಿಕೊಳ್ಳೋಕೆ ಅವಕಾಶ ಮಾಡಿಕೊಡಬೇಕು. ಅದನ್ನು ಸಂಜ್ಯೋತಿ ಇಲ್ಲಿ ಮಾಡಿದ್ದಾರೆ.

ಇದು ಕೇವಲ ಟೀ ಮಾಡಿಕೊಡುವ ಪ್ರಶ್ನೆ ಅಲ್ಲ. ನನಗೆ ಮೊದಲಿನ ಸಂವಾದ ಮತ್ತು ಕೇಸರಿ ಹರವೂ ಮಾತಾಡಿದ್ದು ಇದೆಲ್ಲವನ್ನೂ ನೋಡಿದಾಗ ಎಲ್ಲೋ ನಾವಿದನ್ನು ಟೀ ಮಾಡಿಕೊಡೋದು, ಮತ್ತೆ ಬೇರೆ ಮನೆಕೆಲಸಗಳಿಗೆ ಮಿತಿಗೊಳಿಸ್ತಿದೀವಿ ಅಂತ ಅನ್ನಿಸ್ತಿದೆ. ನನ್ನ ಪ್ರಕಾರ ಇದರ ಮೂಲಕ ಸಂಜ್ಯೋತಿ ಈ ವಿಷಯವನ್ನು ದೊಡ್ಡ ಕ್ಯಾನ್ವಾಸಿಗೆ ತೆಗೆದುಕೊಂಡು ಹೋಗಿದ್ದಾರೆ. ಮಹಿಳೆ ಮತ್ತು ಪುರುಷ ಅಂತ ನಾವೇನು ಟೈಪ್ಸ್ (ಮಾದರಿ) ಸೃಷ್ಟಿ ಮಾಡಿದ್ದೀವಿ ಅದನ್ನ ಬ್ರೇಕ್ ಮಾಡುವ ಹಂತಕ್ಕೆ ಇಲ್ಲಿ ಪ್ರಶ್ನೆಗಳನ್ನು ತೆಗೆದುಕೊಂಡು ಹೋಗಲಿಕ್ಕೆ ಅವರು ಪ್ರಯತ್ನಿಸ್ತಾ ಇದಾರೆ ಅಂತ ಅನ್ನಿಸುತ್ತೆ. ಮನೆಯ ಒಳಗಿನ ಹಿಪೋಕ್ರಸಿಗೆ ಮಾತ್ರವಲ್ಲ, ಮನಸಿನ ಒಳಗಿನ ಹಿಪೋಕ್ರಸಿಗೆ ಕನ್ನಡಿ ಹಿಡಿಯೋ ಥರ ‘ಅನಲ’ ನಮ್ಮ ಮನಸಿನ ಒಳಗೆ ಹೋಗಿ ಒಂದು ಸಿಸಿಟಿವಿ ಹಾಕ್ತಿದೆಯಲ್ಲ ಅದು ಗುಡ್.

ಕಲಬುರಗಿಯ ಬಂದೇನವಾಜ್ ದರ್ಗಾದ ‘ವಾಲ್ ಆಫ್ ಸಾರೋ’ ಎದುರು ತಮ್ಮ ಬದುಕಿನ ನೋವು-ದುಃಖವನ್ನು ಸಾಮೂಹಿಕವಾಗಿ ತೋಡಿಕೊಳ್ಳುವ ಮಹಿಳೆಯರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದುವೆಯ ನಂತರ ಪತಿ ಕೊಲ್ಲಿ ರಾಷ್ಟ್ರಗಳಿಗೆ ಉದ್ಯೋಗ ಅರಸಿ ಹೋದಾಗ ಕುಟುಂಬ ಮತ್ತು ಸಮಾಜವನ್ನು ಒಟ್ಟಾಗಿ ನಿಭಾಯಿಸುವ, ಎದುರಿಸುವ ಹೊಣೆಗಾರಿಕೆಗೆ ಬೀಳುವ ಮಹಿಳೆಯರ ಮಾನಸಿಕ ಒತ್ತಡ ಅವರನ್ನು ಅಸ್ವಸ್ಥರನ್ನಾಗಿಸುವ ರೀತಿ.. ಇವನ್ನೆಲ್ಲ ನೋಡಿದಾಗ ಈ ರೀತಿಯ ಮಹಿಳೆಯ ನೋವುಗಳಿಗೆ ಒಂದು ಅಭಿವ್ಯಕ್ತಿ ಬೇಕಾಗಿದೆ ಮತ್ತು ನಾವು ಮಾತಾಡ್ತಿರೋ ವಿಷಯ ಸರಳ ಅಲ್ಲ ಅಂತ ನನಗನ್ನಿಸುತ್ತೆ.

ಈ ಸಿನಿಮಾ ಒಂದು ದಿನದ ಘಟನೆ ಅಥವಾ ಒಂದು ದಿನದ ಬದಲಾವಣೆ ಅಥವಾ ಮನಸ್ಥಿತಿಯ ಕುರಿತಾಗಿ ಸಂಜ್ಯೋತಿ ಇಲ್ಲಿ ಮಾತಾಡ್ತಿದಾರೆ. ಆದರೆ ಇದನ್ನೇ ಮನೆಯ ಅಂಗಳದಿಂದ ಆಚೆ ತೆಗೆದುಕೊಂಡು ಹೋದ್ರೆ ಈ ರೀತಿಯ ಸಾಕಷ್ಟು ನೋವುಗಳನ್ನು ನೋಡುವ ಮತ್ತು ಸಾಲುಗಳ ನಡುವಿನ ಓದು ಸಾಧ್ಯವಾಗುವ ಅವಕಾಶ ಇದೆ.

‘ಆಯಿ ರಿಟೈರ್ ಹೋತಾ ಹೈ’ ಅನ್ನೋ ಮರಾಠಿ ನಾಟಕದಲ್ಲಿ ಒಂದು ದಿನ ಇದ್ದಕ್ಕಿದ್ದ ಹಾಗೆ ಅಮ್ಮ ನಾನಿವತ್ತು ರಿಟೈರ್ ಆದೆ, ನಾಳೆಯಿಂದ ನನಗೆ ಮನೆಕೆಲಸ ಇಲ್ಲ ಅಂತ ಘೋಷಿಸ್ತಾಳೆ. ಹಾಗಾದ ಮಾರನೇ ದಿನದಿಂದಲೇ ಇಡೀ ಮನೆ, ಮನಸ್ಸುಗಳು, ಅಕ್ಕ ಪಕ್ಕದ ಮನೆಗಳು ಎಲ್ಲವೂ ಅಸ್ತವ್ಯಸ್ತ ಆಗಿ ಹೋಗ್ತವೆ. ಮಹಿಳೆಯ ‘ಗುರುತಿಸಲಾರದ ಶ್ರಮ’ದಿಂದ ಆಕೆ ಒಂದು ದಿನ ನಿವೃತ್ತಿ ಪಡೆದ ತಕ್ಷಣ ಇಡೀ ಸಾಮಾಜಿಕ ಬಂಧ ಏರುಪೇರಾಗುವಷ್ಟು ಅಗಾಧ ಕೊಡುಗೆಯನ್ನು ಆಕೆ ಕೊಡ್ತಾಯಿದ್ದಾಳೆ. ‘ಅನಲ’ ಮೂಲಕ ಸಂಜ್ಯೋತಿ ಈ ಸಂಗತಿಗಳತ್ತ ನಮ್ಮ ಗಮನ ಸೆಳೆದಿದ್ದಾರೆ ಅಂತ ಅನ್ನಿಸುತ್ತೆ.

ಅವರು ನಿರ್ದೇಶನ ಅಥವಾ ನಟನೆ ಎರಡೂ ಜವಾಬ್ದಾರಿಯನ್ನು ನಿರ್ವಹಿಸಿದ್ದು ಹೊರೆಯಾಯ್ತೇನೋ ಅಂತ ನಾನೂ ಅಭಿಪ್ರಾಯಪಡ್ತೀನಿ. ಇದರ ಹೊರತಾಗಿ ಮೊದಲ ಪ್ರಯತ್ನದಲ್ಲೇ ತುಂಬ ಒಳ್ಳೆ ಕೆಲಸವನ್ನು ಸಂಜ್ಯೋತಿ ಮಾಡಿದ್ದಾರೆ. ಅವರ ನಟನೆ ಕೂಡ ತುಂಬ ಅಚ್ಚುಕಟ್ಟಾಗಿ ಬಂದಿದೆ.

ಮೊದಲು ಹಿರಿತೆರೆ, ನಂತರ ಕಿರುತೆರೆ, ಆನಂತರ ಕಂಪ್ಯೂಟರ್ ಮತ್ತೀಗ ಸ್ಮಾರ್ಟ್‍ಫೋನ್ ತೆರೆ ಹೀಗೆ ದೃಶ್ಯ ಮಾಧ್ಯಮ ಬಹಳ ಬೇಗ ಬದಲಾಗ್ತಾಯಿದೆ. ಈ ಕಾಲಘಟ್ಟದಲ್ಲಿ ಸಂಜ್ಯೋತಿ ‘ಅನಲ’ ಚಿತ್ರ ಮಾಡಿದ್ದು, ಅದಕ್ಕೆ ಪ್ರಶಸ್ತಿ ಸಿಕ್ಕಿದ್ದು ಮತ್ತು ಹೀಗೆ ಪ್ರದರ್ಶನಗೊಂಡು ಸಂವಾದ ಆಗ್ತಿರೋದು ನನಗೆ ತುಂಬ ಮುಖ್ಯ ಅಂತ ಅನ್ನಿಸುತ್ತೆ. ಯಾಕಂದ್ರೆ ಹೇಗೆ ಹಿರಿತೆರೆ, ಕಿರುತೆರೆಗಳನ್ನು ಶೇ 50ಕ್ಕೂ ಹೆಚ್ಚು ಭಾಗ ಮೈಂಡ್ ಲೆಸ್ ಗಳು ಆಕ್ರಮಿಸಿಕೊಂಡ್ರೋ ಹಾಗೆ ಇದನ್ನೂ ಆಕ್ರಮಿಸಿಕೊಳ್ಳುವ ಮುನ್ನ ಸಂಜ್ಯೋತಿಯಂಥವರು ಈ ಸ್ಥಾನಗಳಲ್ಲಿ ಕೂತಿರಲಿ ಅನ್ನೋದು ನನ್ನ ಆಶಯ. ಥ್ಯಾಂಕ್ಯೂ..

ಬೆಂಗಳೂರಿನಲ್ಲಿ ನಡೆದ ‘ಅನಲ’ ಪ್ರದರ್ಶನದ ನಂತರ  

ವ್ಯಕ್ತಪಡಿಸಿದ ಅಭಿಪ್ರಾಯ.

Add Comment