Quantcast

ಬೇಡ ಎಂದರೆ ಬಿಡೋಲ್ಲ, ಬೇಕು ಎಂದಾಗಲೆಲ್ಲ ಬರೋಲ್ಲ..

ಸಂಜೋತಾ ಪುರೋಹಿತ

ಎಲ್ಲವನ್ನು ಮುಕ್ತವಾಗಿ ನೋಡುವ  ನಾನು ಮುಟ್ಟು ಅಥವಾ ಲೈಂಗಿಕತೆಯ ವಿಷಯ ಬಂದಾಗ  ಕೊಂಚ ಯೋಚಿಸುತ್ತೇನೆ. ನಾವು ಬೆಳೆದ ವಾತಾವರಣವೇ ಅಂತಹದ್ದು.  ಇವೆರಡು ಕದ್ದು ಮುಚ್ಚಿ ನಡೆಯುವ ಕ್ರಿಯೆಗಳೆಂಬಂತೆ ನೋಡುವ ನಮ್ಮ ಜನ, ಯಾರಾದರೂ ಮಾತನಾಡಿದರೆ ಕಣ್ಣಗಲ  ಮಾಡಿ ನೋಡುವ ಪರಿ, ಗುಂಪಿನಲ್ಲಿ ಗಟ್ಟಿಯಾಗಿ ‘ಪ್ಯಾಡ್ ಇದೆಯಾ’ ಎಂದು ಕೇಳಲು ತಡವರಿಸುವ ಸ್ಥಿತಿ  ಎಲ್ಲವು ನಮಗೆ ಹೊಸದೇನಲ್ಲ.

ಈ ವಿಷಯದ ಮೇಲೆ ಇದೆ ಮೊದಲ ಬಾರಿಗೆ ಬರೆಯುತ್ತಿದ್ದೇನೆ.  ನಾನು ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ ಸಮಯವದು. ನನ್ನ ಸ್ನೇಹಿತೆಯರೆಲ್ಲ ಅದಾಗಲೇ ‘ದೊಡ್ಡವರಾಗಿದ್ದರು’.  ನನ್ನದು ಕೊಂಚ ತಡವಾದ್ದರಿಂದ ನಮ್ಮಮ್ಮನಿಗೆ ಒಂಥರಹ ಚಿಂತೆ ಆಗಿ ಬಿಟ್ಟಿತ್ತು. ಅಷ್ಟೊತ್ತಿಗಾಗಲೇ ಸ್ನೇಹಿತೆಯರಿಂದ, ಅಮ್ಮನಿಂದ, ಅಕ್ಕ ಪಕ್ಕದ ಮನೆಯ ಹಿರಿಯಕ್ಕಗಳಿಂದ ನನಗೆ ಎಲ್ಲವು ಗೊತ್ತಾಗಿತ್ತು. ಬಹುಶಃ ಕಾಯುತ್ತಿದ್ದೆ ನಾನ್ಯಾವಾಗ ದೊಡ್ಡವಳಾಗುವುದೆಂದು.

ಗಣೇಶ ಚತುರ್ಥಿಗೆ ಇನ್ನು ಹದಿನೈದು ದಿನಗಳಿತ್ತು. ಅವತ್ತು ಬೆಳಿಗ್ಗೆ ಶಾಲೆ ಹೋಗಲು ರೆಡಿ ಆಗುತ್ತಿದ್ದೆ. ಅಮ್ಮನಿಗೆ ಸಂಶಯ ಬಂದು  ‘ಆದ್ರ ಹೇಳು ‘ ಎಂದು ಹೇಳಿದರು.  ಅಮ್ಮನಿಂದ ಈ ತರಹ ಸಾಕಷ್ಟು ಬಾರಿ ಕೇಳಿದ್ದರಿಂದ ‘ಏ ಹೋಗಮ್ಮ’ ಎಂದು ಹೇಳಿ ಶಾಲೆಗೆ ಹೋಗಿದ್ದೆ.  ಒಂದೆರಡು ತರಗತಿಗಳ ನಂತರ ಅನುಭವಕ್ಕೆ ಬರತೊಡಗಿತು.  ಏನೋ ಹಸಿ ಹಸಿ ಭಾವ. ಅಮ್ಮನ ಸಂಶಯ ನಿಜವಾಗಿತ್ತು.  ಶಾಲೆಯಲ್ಲಿ ಏನೋ ಒಂದು ಸಬೂಬು ಹೇಳಿ ಮನೆಗೋಡಿ ಬಂದೆ. ಅಮ್ಮ ಬಟ್ಟೆ ಕೊಟ್ಟು ದೂರ ಕುಳಿತುಕೊಳ್ಳಲು ಹೇಳಿದರು.  ಅಮ್ಮ ‘ಕಡೀಗೆ’ಯಾದಾಗ ಕೆಲಸ ಕಾರ್ಯವಿಲ್ಲದೆ ಕಾದಂಬರಿ ಓದುತ್ತಿದ್ದನ್ನು ನೋಡಿ ”ಅಮ್ಮಾಗ ಈ ನಾಕ್ ದಿನ ಅಂದ್ರ ಭಾಳ್ ಸೇರ್ತದ.. ಅಡಿಗಿ ಮಾಡೋದಿಲ್ಲದ ಆರಾಮ  ಇರಬಹುದು ” ಎಂದುಕೊಂಡಿದ್ದೆ. ಆದರೆ ನನಗೆ ಆ ಸಂದರ್ಭ ಬಂದಾಗ ನಿಜ ಪರಿಸ್ಥಿತಿಯ ಅರಿವಾಯಿತು. ಕುಳಿತಲ್ಲೇ ಕುಳಿತಿರಬೇಕು. ಬಾಯಾರಿಕೆಯಾದರು ಯಾರಾದರೂ ನೀರು ಕೊಡುವವರೆಗೂ ಕಾಯುತ್ತಿರಬೇಕು. ನಮ್ಮ ಬಟ್ಟೆ ಬರೆ, ಪಾತ್ರೆ ಎಲ್ಲವನ್ನು ನಾವೇ ತೊಳೆದಿಡಬೇಕು. ಮನೆಯೊಳಗಡೆ ಪೂಜೆ ನಡೆಯುತ್ತಿದ್ದರೆ ಹಾಲಿನಲ್ಲೋ ಹೊರಗಡೆ ಕಟ್ಟೆಯ ಮೇಲೋ ಹೋಗಿ ಕುಳಿತುಕೊಳ್ಳಬೇಕು. ಉಳಿದವರೆಲ್ಲ ತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾದ್ದರಿಂದ ಖಾಲಿ ಇದ್ದ ನಮ್ಮ ಜೊತೆ ನಾಲ್ಕು  ದಿನ ಹರಟೆ ಹೊಡೆಯುವವರಾರು? ಹೀಗಾಗಿ ಏಕಾಂಗಿ ವಾಸ ಈ ನಾಲ್ಕು ದಿನಗಳು.

ನನಗೆಲ್ಲವೂ ಹೊಸತು. ಗೊತ್ತಿಲ್ಲದೇ ಏನನ್ನೋ ಮುಟ್ಟಿ ಅದನ್ನು ತೊಳೆದಿಡುವಂತೆ ಹೇಳಿದಾಗ ಸಿಟ್ಟು ಬರುತ್ತಿತ್ತು. ರಾತ್ರಿ ಮಲಗುವಾಗ ಒಂದು ಬದಿಯಲ್ಲಿ ಮಲಗಬೇಕು. ನನಗೋ ಭಯ.. ಒದ್ದಾಡುತ್ತ ಎಲ್ಲಿ ಅತ್ತ ಇತ್ತ ಹೋಗುತ್ತೀನೋ ಎಂದು. ಕಲೆಯಾಗುವ ಭಯವಂತೂ ಸದಾ ಇದ್ದದ್ದೇ. ಉಪಯೋಗಿಸಿದ ಬಟ್ಟೆ ತೊಳೆದು ಯಾರಿಗೂ ಕಾಣದಂತೆ ಒಣ ಹಾಕುವುದು.  ಅದು ಒಣಗಿದರೂ ಅದರಿಂದ ಬರುತ್ತಿದ್ದ ಕಟು ವಾಸನೆ ಅಬ್ಬಬ್ಬಾ! ಸ್ಯಾನಿಟರಿ ನಾಪಕಿನ್ ಕಂಡು ಹಿಡಿದವರ ಪಾದಕ್ಕೆ ದೀರ್ಘದಂಡ ನಮಸ್ಕಾರ .

ಇತ್ತೀಚಿನ ದಿನಗಳಲ್ಲಿ ಆರತಿ ಸಂಪ್ರದಾಯ ಕಾಣೆಯಾಗಿದೆ. ಆಗಿನ ದಿನಗಳಲ್ಲಿ ಆರತಿ ಕಾರ್ಯಕ್ರಮ ಇಟ್ಟುಕೊಳ್ಳುತ್ತಿದ್ದರು.  ನನ್ನ ಸುದ್ದಿ ಕೇಳಿ ನಮ್ಮ ಮಾವ, ಚಿಕ್ಕಮ್ಮ ಎಲ್ಲರು ಐದನೇ ದಿನಕ್ಕೆ ಉಡುಗೊರೆ ಸಮೇತ ಬಂದಿಳಿದರು.  ಅಕ್ಕ ಪಕ್ಕದ ಮನೆಯವರು, ಪರಿಚಯದವರು, ಸಂಬಂಧಿಗಳು ಹೀಗೆ ಎಲ್ಲರು ಬಂದಿದ್ದರು. ತಲೆ ತುಂಬಾ ಮಲ್ಲಿಗೆಯ ದಂಡೆ  ಹಾಕಿ ಕುಳಿತ ನನಗೆ ಮುಜುಗರ.  ನಾಲ್ಕು ದಿನದ ಹಿಂಸೆಯ ಜೊತೆಗೆ ಈ ಹಿಂಸೆ ಬೇರೆ.  ಯಾವಾಗ ಮುಗಿಯುತ್ತದೋ ಎಂದು ಕೈ ಹಿಸುಕಿಕೊಂಡು ಕುಳಿತಿದ್ದೆ.

ಇದಾದ ಮಾರನೇ ತಿಂಗಳು ಮುಟ್ಟಿನ ಸಮಯ ಬಂದಾಗ ನಾನು ಹತ್ತನೇ ತರಗತಿಯ ಟ್ಯೂಷನ್ ಕ್ಲಾಸ್ಸಿಗೆಂದು ನಮ್ಮ ಮಾವನ ಮನೆಯಲ್ಲಿದ್ದೆ.  ಈ ಬಾರಿ ದೂರ ಕುಳಿತುಕೊಳ್ಳುವ ಪ್ರಮೇಯವಿರಲಿಲ್ಲ. ಆದರೆ ಟ್ಯೂಷನ್ ಗೆ ಸೈಕಲ್ ಮೇಲೆ ಹೋಗುವಾಗ ಕಿರಿಕಿರಿಯಾಗುತ್ತಿತ್ತು.  ಮೂರು ದಿನ ಅನಾರೋಗ್ಯದ ನೆಪ ಹೇಳಿ ಬಿಟ್ಟು ಬಿಡಲೇ ಎಂದೆನಿಸುತ್ತಿತ್ತು.  ಮೊದಲ ದಿನ ಹೊಟ್ಟೆ ನೋವು ಬಂದಾಗಲೆಲ್ಲ ಹೊಟ್ಟೆಯಲ್ಲಿರುವ ನರ ಕಿತ್ತು ಬಾಯಿಗೆ ಬಂದಂಗಾಗುತ್ತದೆ.

ಮುಟ್ಟು ಅಪ್ಪಿಕೊಂಡ ನಂತರ ನನ್ನೊಳಗಿದ್ದ ಚಿಕ್ಕ ಹುಡುಗಿಗೆ ಜಾಗ ಇಲ್ಲದಾಯಿತು.  ನಾವಿದ್ದುದು ಹಳ್ಳಿಯಾದ್ದರಿಂದ  ಅಪರಿಚಿತರೊಂದಿಗೆ ಹರಟೆ ಹೊಡೆಯುವುದಾಗಲಿ, ಪಕ್ಕದ ಮನೆಯ ಅಣ್ಣನೊಂದಿಗೆ ಅಥವಾ ಶಾಲೆಯಲ್ಲಿ ಸ್ನೇಹಿತನೊಂದಿಗೆ ಒಂಟಿಯಾಗಿ ಅಲೆಯುವಂತಿರಲಿಲ್ಲ. ಅಮ್ಮ ತಾಕೀತು ಮಾಡಿದ್ದರು.  ಮುಟ್ಟಾಗಿದ್ದರೆ ಪೂಜೆ ಸಮಾರಂಭಗಳಿಗೆ ಪ್ರವೇಶವಿರುತ್ತಿರಲಿಲ್ಲ.  ಅತಿ ಮುಖ್ಯ ಕಾರ್ಯಕ್ರಮಗಳಿದ್ದರೆ ಒಂದೆರಡು ದಿನ ಮುಂದೂಡುವಂತೆ ಮಾತ್ರೆ ತೆಗೆದುಕೊಂಡು ‘ದೇವರೇ ಪ್ಲೀಸ್ ಎರಡು ದಿನ ಲೇಟ್ ಆಗ್ಲಿ’ ಅಂತ ಪ್ರಾರ್ಥಿಸೋದೆಲ್ಲ ನಮ್ಮ ಜೀವನದಲ್ಲಿ ಅತಿ ಸಾಮಾನ್ಯವಾದ ಮಾತು.

ಇಂದಿಗೂ ಎಷ್ಟೋ ಜನ ಹೆಣ್ಣು ಮಕ್ಕಳು ಬಟ್ಟೆಯ ಮೇಲೆ ಅವಲಂಬಿತರಾಗಿದ್ದಾರೆ.  ಎಷ್ಟೋ ಮನೆಗಳ ಕತ್ತಲ ಛಾಯೆಯಲ್ಲಿ ಬಟ್ಟೆಗಳಿನ್ನು ಒಣಗುತ್ತಿವೆ. ನಾಪಕಿನ್ ಕೊಳ್ಳುವಷ್ಟು ಹಣವಿಲ್ಲದವರು ಒಂದಷ್ಟು ಜನರಾದರೆ, ಸುರಕ್ಷತೆಯ ಅರಿವಿಲ್ಲದವರು ಕೆಲವರು.  ನಮ್ಮ ಮನೆಯ ಕೆಳಗಡೆ ಕಿರಾಣಿ ಅಂಗಡಿಯೊಂದಿದೆ.  ‘ಎಮರ್ಜೆನ್ಸಿ’ ಟೈಮ್ ಲಿ ಹೋಗಿ ‘ಅಂಕಲ್ ವಿಸ್ಪರ್ ಕೊಡಿ’ ಎಂದು ಗಟ್ಟಿಯಾಗಿ ಹೇಳಿದರೆ ಅಂಕಲ್ ಎಲ್ಲರನ್ನು ಕಳುಹಿಸಿದ ನಂತರ ಪೆಪೆರನಲ್ಲಿ ಅದನ್ನು ಸುತ್ತಿ ಕಪ್ಪು ಬಣ್ಣದ ಪ್ಲಾಸ್ಟಿಕ್ ಬ್ಯಾಗಿನಲ್ಲಿ ಹಾಕಿ ಕೊಡುತ್ತಾರೆ.  ಮುಟ್ಟಿನ ಬಗೆಗಿರುವ ಈ ಕೀಳರಿಮೆಯ ಭಾವನೆ ಹೋಗಬೇಕಾಗಿದೆ.  ಯಾರೋ ಹುಡುಗಿಯ ಬಟ್ಟೆ ಕೊಂಚ ಕಲೆಯಾಗಿದ್ದರೆ ಹಿಂದೆ ನಿಂತು ಮುಸಿ ಮುಸಿ ನಗುವ ಜನರಿಗೆ ಬುದ್ದಿ ಬರಬೇಕಿದೆ.  ನಿಮ್ಮ ಮುಟ್ಟೇನು ಮಹಾ ನಾವು ಪ್ರತಿ ದಿನವೂ ಗಡ್ಡ ಬೋಳಿಸಿಕೊಳ್ಳಬೇಕು  ಎಂದು ಸಮರ್ಥಿಸಿಕೊಳ್ಳುವ ಗಂಡು ಜೀವಿಗಳಿಗೆ ನಮ್ಮ ಪರಿಸ್ಥಿತಿಯ ಅರಿವಾಗಬೇಕಿದೆ. ಮುಟ್ಟು ಕೀಳರಿಮೆ ಅಲ್ಲ, ಹೆಣ್ಣಿನ ದೇಹದಲ್ಲಿ ನಡೆಯುವ ಸಹಜ ಕ್ರಿಯೆ. ಪ್ರತಿಯೊಬ್ಬರಿಗೂ ಅನಿವಾರ್ಯವಾದ ದೈನಂದಿನ ಕ್ರಿಯೆಗಳಂತೆ ಮುಟ್ಟು ಸಹ ತಿಂಗಳಿಗೊಮ್ಮೆ ಬರುವ ಅನಿವಾರ್ಯ ಕ್ರಿಯೆ.

ಬೇಡ ಎಂದರೆ ಬಿಡೋಲ್ಲ, ಬೇಕು ಎಂದಾಗಲೆಲ್ಲ ಬರೋಲ್ಲ.

2 Comments

  1. Kavya Kadame
    July 13, 2017
  2. ಭಾರತಿ ಬಿ ವಿ
    July 13, 2017

Add Comment