Quantcast

ಪ್ರತಿ ತಿಂಗಳೂ ಪ್ಯಾಡ್ ತಂದುಕೊಡುತ್ತೇನೆ..

ಒಂದು ಬಟ್ಟೆಯ ವ್ಯಥೆ    

       ಅನುಪಮಾ ಹೆಗ್ಡೆ  

ಗೆಳತಿ ಹೇಳುತ್ತಾಳೆ ಅಲ್ಲವೆ ಅನುಪಮ ನೀನು ಹೈ ಜಂಪ್ ಗೆ ಹೆಸರು ಕೊಟ್ಟರೆ ನಾನು ಹೆಸರು ಕೊಡುವುದು ವ್ಯರ್ಥ ಅಂತ ಅವಳಿಗೇನು ಗೊತ್ತು ಇವಳು ಆತ್ಮವಿಶ್ವಾಸವನ್ನೆಲ್ಲ ಕಳೆದುಕೊಂಡು ಸೋತು ಹೋಗಿದ್ದಾಳೆ ಒಳೊಗೊಳಗೆ ಎಂದು.

ಅಂದು ನಾನು ಹೊರಗಾಗಿದ್ದೆ. ಎತ್ತರ ಜಿಗಿತದ ಸ್ಪರ್ಧೆ ಇತ್ತು. ಅಕಸ್ಮಾತ್ ಹೆಚ್ಚುಕಮ್ಮಿಯಾದರೆ ಕಾಣಬಾರದೆಂದು ಕಪ್ಪು ಬಣ್ಣದ ಹಾಫ್ ಪ್ಯಾಂಟ್ ಹಾಕಿದ್ದೆ. ಜಿಗಿಯದೆ ಸೊಲೊಪ್ಪಿಕೊಳ್ಳಲು ಮನಸ್ಸಿರಲಿಲ್ಲ. ಜಿಗಿಯಲೆಂದು ಅಡ್ಡಹಾಕಿದ್ದ ದಾರ ಕಾಣುವ ಕಣ್ಣು ಮನಸ್ಸು ಎರಡಕ್ಕು ಮೈಯಿಂದ ಜಿನುಗುತ್ತಿರುವ ಆ ಸ್ರಾವವೆ ಕಣ್ ಮನದಲ್ಲಿ ಹೇಸುತ್ತಿತ್ತು. ಎರೆಡೆರಡು ನಿಕ್ಕರ್ ಹಾಕಿ ತುಂಬ ಮುತುವರ್ಜಿವಹಿಸಿ ಬಟ್ಟೆಯ ಆ ಕಡೆ ಈ ಕಡೆ ಸೇಫ್ಟಿ ಪಿನ್ ಬಳಸಿ ಬೀಳದಂತೆ ಎಚ್ಚರ ವಹಿಸಿದ್ದೆ.

ಎರಡು ಸಲ ಜಿಗಿದವಳಿಗೆ 3ನೆಯ ಬಾರಿಗೆ ಜಿಗಿಯಲಾಗದೆ 2ನೆ ಸ್ಥಾನಕ್ಕೆ ಸಮಾಧಾನ ಪಟ್ಟಿದ್ದೆ. ಛೆ! ಇಂತಹ ಎಷ್ಟು ಅವಕಾಶಗಳು ಆ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಮುಟ್ಟಿನಿಂದಾಗಿ ಕಳೆದು ಹೋಗಿದ್ದವೊ ನಾ ಕಾಣೆ.

ನಾನು ಮೊದಲಸಲ ದೊಡ್ಡವಳಾದಾಗ ಚಿಕ್ಕವಳೇನಾಗಿರಲಿಲ್ಲ. ಅಷ್ಟೊತ್ತಿಗೆ ಕೆಲವು ಗೆಳತಿಯರು ಆಗಿದ್ದರಿಂದ ಅದರ ಬಗ್ಗೆ ಚೆನ್ನಾಗಿ ಅರಿತಿದ್ದೆ. ನಮಗೆ ಪ್ಯಾಡ್ ಅನ್ನುವುದೊಂದು ವಸ್ತು ಇದೆ ಎನ್ನುವುದೆ ಗೊತ್ತಿರಲಿಲ್ಲ. ಅದಕ್ಕಾಗಿ ಬಟ್ಟೆಯೆ ಗತಿಯಾಗಿತ್ತು. ಅಮ್ಮ ಹೇಳಿದ್ದರು

ಅದು ಯಾರ ಬೇರೆಯ ಬಟ್ಟೆಯ ಜೊತೆ ಒಣಗಿಸಬಾರದು ಸೋಂಕು ತಗಲತ್ತೆ ಅಂತ. ಅದನ್ನು ಯಾರಿಗು ಕಾಣದಂತೆ ನಮ್ಮ ಪೆಟಿಕೋಟ್ ಅಡಿಯಲ್ಲೊ ಅಥವ ಟಾವೆಲ್ ಮುಚ್ಚಿಯೊ ಒಣಗಿಸುತ್ತಿದ್ದೆವು. ಅದು ಯಾವತ್ತು ಸರಿಯಾಗಿ ಒಣಗಿದ್ದೆ ಇಲ್ಲ.

ಸ್ಕೂಲ ಗಳಲ್ಲಿ ಕೂಡ ಬಟ್ಟೆ ಬದಲಿಸಲು ಮಾಡುವಂತ  ಬಾತ್ ರೂಮ್ ವ್ಯವಸ್ತೆ ಅಂತು ಕೇಳಲೆ ಬೇಡಿ.  ಬಟ್ಟೆ ಎಲ್ಲಿ ಬಿದ್ದು ರಾಮಾಯಣ ಆಗುತ್ತದೊ ಎಂದು ಕಾಲನ್ನು ಒತ್ತಿ ನಡೆಯುತ್ತಿದ್ದೆವು. ಮನೆಗೆ ಬರುವ ವೇಳೆಗೆ ಕಾಲೆಲ್ಲ ಕೊರೆದು ಕೆಂಪಾಗಿ ಎಷ್ಟು ಉರಿಯಾಗುತ್ತಿಂದರೆ ಹೆಜ್ಜೆ ಕಿತ್ತಿಡಲಾಗದಷ್ಟು. ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಮಲಗಬೇಕಿತ್ತು. ಆಯಾಸ ಒಂದು ಕಡೆ ಬಟ್ಟೆ ತೊಳೆಯಬೇಕಾದ ಸಂಕಟ ಇನ್ನೊಂದು ಕಡೆ.

ರಾತ್ರಿ ಬಟ್ಟೆ ತೊಳೆಯಲು ಬೇಜಾರು ಎಂದು ಅಡಗಿಸಿಟ್ಟು ಬೆಳಿಗ್ಗೆ ಸ್ನಾನ ಮಾಡುವಾಗ ತೊಳೆಯೋಣವೆಂದರೆ ಅದರ ಗಬ್ಬು ವಾಸನೆಯನ್ನು ಅಡಗಿಸಲು ಆಗುತ್ತಿರಲಿಲ್ಲವೆ…ಅದಕ್ಕಾಗಿ ತೊಳೆಯಲೆ ಬೇಕಾದ ಅನಿವಾರ್ಯತೆ. ಅದಲ್ಲದೆ ಯಾವಾಗಲು ರಜೆಯಾದಾಗ 3 ದಿನ ರಾತ್ರಿ ನನ್ನದು ಉಪವಾಸ..ಯಾಕೆಂದರೆ ಆ ಬಟ್ಟೆ ತೊಳೆದ ಕೈಯಲ್ಲಿ ನನಗೆ ಊಟ ಸೇರುತ್ತಿರಲಿಲ್ಲ.

ಪಟ್ಟಣದಲ್ಲಿ ಓದುತ್ತಿದ್ದ ನಮಗೆ ತೊಳೆಯದೆ ಎಲ್ಲಾದರು ಎಸೆದು ಬಿಡೋಣವೆಂದರೆ ಎಲ್ಲಿ ಎಸೆಯುವುದು ಎನ್ನುವುದು ದೊಡ್ಡ ಸಮಸ್ಯೆ.

ಆದರೆ ನಮ್ಮ ಮನೆಯಲ್ಲಿ ಹೊರಗೆ ಕೂರಬೇಕೆಂಬುದನ್ನು ನಮ್ಮ ತಂದೆಯವರ ಆಜ್ನೆಯಂತೆ ನಾನು ದೊಡ್ಡವಳಾದಾಗಿನಿಂದ ತೆಗೆದುಹಾಕಿದ್ದರು. ಊರಿನಲ್ಲಿ      ನಮ್ಮ ಅಜ್ಜ ಹೊರಗಾದವರಿಗಾಗಿಯೆ ಕತ್ತದಿಂದ ಮಾಡಿದ ಹಾಸಿಗೆ ಮತ್ತು ಪ್ರತ್ಯೇಕ ಬಚ್ಚಲು ಮನೆ ಮಾಡಿಸಿದ್ದರು. ನನ್ನಮ್ಮ ಅತ್ತೆಯವರೆಲ್ಲ ಕೂರುತ್ತಿದ್ದುದನ್ನು ನೋಡಿದ ನಾನು ಕಾಗೆ ಬಂದು ತಲೆಯಮೇಲೆ ಕೂತು ಹೋದರೆ 3 ದಿನ ಹೊರಗೆ ಕೂರಬೇಕೆಂದು ನಂಬಿದ್ದೆ.

ಆದರು 3 ದಿನದ ಮೇಲೆ ಬಟ್ಟೆಯನ್ನು ತೋಟದಲ್ಲಿ ಚಿಕ್ಕ ಹೊಂಡ ತೆಗೆದು ಹೂತು ಮುಚ್ಚುತ್ತಿದುದನ್ನು ನೋಡುವಾಗ ಎನೋ ಕುತೂಹಲ. ಮೆತ್ತನೆಯ ಸೀರೆಯಾಗಲಿ    ಪಂಚೆಯಾ ತುಂಡಾಗಲಿ ಸರಿಯಾಗಿ ತೊಳೆಯದೆ ಒಣಗಿದರೆ ಅದು ಖಡಕ್ ಆಗಿ ಕೊರೆಯುತ್ತಿತ್ತು. ಒಣಗಿಲ್ಲವಾದರಂತು ಅದರ ಕತೆ ಹೇಳತೀರದು. ಅಮ್ಮನ ಹತ್ತಿರ ಸಾವಿರಬಾರಿಯಾದರು ಹೇಳಿದ್ದೆ ನಮ್ಮನ್ನು ಸೃಅಷ್ಟಿಸಿದ ಆ ದೇವರು ವರ್ಶಕ್ಕೆ ಒಂದೆ ಸಲ ಯಾಕೆ ಮಾಡಿಲ್ಲ ಇದನ್ನು ಎಂದು. ಅಮ್ಮ ಅದಕ್ಕೆಲ್ಲ ಹೇಗೆ ಸಮಜಾಯಿಸಿ ಹೇಳುತ್ತಿದ್ದಳೊ ನಾ ಕಾಣೆ. ಏನೆ ಆಗಲಿ ನಾವು ಪಡುತ್ತಿದ್ದ ಕಷ್ಟ ಯಾರಿಗು ಬರದೆ ಇರಲಿ ಎಂದು ಬೇಡಿಕೊಳ್ಳುತ್ತಿದ್ದೆವು.

ನಾನು ಈ ಬಟ್ಟೆಯ ನರಕದಿಂದ ತಪ್ಪಿಸಿಕೊಳ್ಳಲು ಮಾಡಿದ ಐಡಿಯಾಗಳನ್ನು ಬರೆಯುತ್ತ ಹೋದರೆ ಪುಸ್ತಕವೇ ಬೇಕಾದೀತು. ಹಾಗು ಇನ್ನು ಪ್ಯಾಡ್ ಬರದಿದ್ದರೆ ನಾನೆ ಕಂಡುಹಿಡಿದು ಬಿಡುತ್ತಿದ್ದೆನೇನೊ.

ನನ್ನ ಪ್ರಕಾರ ಸ್ಯಾನಿಟರಿ ಪ್ಯಾಡಗಳು ಒಂದು ವರದಾನ. ಅದಕ್ಕೆ ಟಾಕ್ಸ್ ಹಾಕಲಿ ಬಿಡಲಿ ತಿಂಗಳಿಗಾಗುವದನ್ನು ಮಾತ್ರ ನಿಲ್ಲಿಸಲಾದೀತೆ?  ಇದು ಬಡವರಿಗೆ ಬರಿಸಲು ಕಷ್ಟವೆ ಸರಿ. ಅದಕ್ಕಾಗಿ ನಾನು ನಮ್ಮ ಕೆಲಸದವಳ ಮಗಳಿಗೆ ಪ್ರತಿ ತಿಂಗಳು ಪ್ಯಾಡ್ ತಂದುಕೊಡುವ ರೂಡಿಮಾಡಿಕೊಂಡಿದ್ದೇನೆ. ಏನೆನೊ ಸಹಾಯ ಮಾಡಲಾಗದಿದ್ದರು ಈ ತರಹದ ಚಿಕ್ಕ ಪುಟ್ಟ ಸಹಾಯಗಳು ಮನಸ್ಸಿಗೆ ತುಂಬ ತೃಪ್ತಿಕೊಡುವುದಂತು ನಿಜ.

One Response

  1. H M Mahendra Kumar, Ballari
    July 14, 2017

Add Comment

Leave a Reply to H M Mahendra Kumar, Ballari Cancel reply