Quantcast

ಸಾಂಬಾರ್ ಮಾಡಲು ದುಡ್ಡಿಲ್ಲದಿದ್ದರೂ ನ್ಯಾಪಕಿನ್ ಕೊಡಿಸಿದರು..

ಶಿವು ಶಿವಕನ್ಯ 

ಏ , ಕೈಯಲ್ಲಿ ಚೆನ್ನಾಗಿ ಉಜ್ಜಿ ತಿಕ್ಕಿ ತೊಳೆಯವ್ವ ಅಂತ ನಮ್ಮ ತಾಯಿ ಹೇಳಿದಾಗಲೆಲ್ಲಾ ಅಯ್ಯೋ ಈಟಿಯಿಂದ ಇರಿದ ರೀತಿ ಆಗುತ್ತಿತ್ತು,

ಮೊದಲೆ ಹೊಟ್ಟೆನೋವು ಅದರಲ್ಲಿ ಇದು ಬೇರೆ ಅಂತ ಕ್ರೂರ ಮೃಗ ನೋಡಿದ ಹಾಗೇ ಒದ್ದಾಡುತ್ತಾ, ನರಳುತ್ತಾ ಮೈಯೆಲ್ಲಾ ಚಳಿ ಬಂದಂಗೆ ಆಗುತ್ತಿತ್ತು, ಮುಟ್ಟಿನ ಬಟ್ಟೆಯನ್ನು ಕೈಯಿಂದ ಮುಟ್ಟಿದರೆ ಸುಟ್ಟು ಹೋಗುವಷ್ಟು ಸಿಟ್ಟು ಬಂದು ನಾನು ಕಾಲಿನಿಂದ ವಸಗಿ (ಉಜ್ಜಿ) ಹಾಕುವುದು ಮಾಡುತ್ತಿದ್ದೆ. ನಮ್ಮ ಅಮ್ಮ ನನ್ನ ಬಟ್ಟೆ ಮುಟ್ಟುವ ಹಾಗಿಲ್ಲ ಎನ್ನುವ ಸಂಕಟದಿಂದ ನೋಡುತ್ತಿದ್ದ ಆ ದಿನಗಳನ್ನು ನೆನೆಸಿಕೊಂಡರೆ ಇಗಲೂ ನಾನು ಹೇಗೆ ಆ ಘಳಿಗೆಗಳನ್ನು ಕಳೆದೆ ಎಂದೆನಿಸುತ್ತದೆ.

ತಿಂಗಳುಗಳು ಹತ್ತಿರ ಬರುತ್ತ ಇದೆ ಎನ್ನುವಾಗಲೇ ಒಂದು ಗಾಡಾಂಧಕಾರಕ್ಕೆ ದೂಡುವ ಅನುಭವವಾಗಿ ಹೆಣ್ಣಾಗಿ ಹುಟ್ಟಬಾರದಿತ್ತು, ನಮಗೆ ಮಾತ್ರ ಏಕೆ ಈ ಶಿಕ್ಷೆ ?, ಥೂ ಚಿಕ್ಕ ಮಕ್ಕಳಾಗೆ ಇರಬಾರದಿತ್ತೆ? ಎಂಬುದಾಗಿ ಹಲಬುವಂತಾಗುತ್ತಿತ್ತು.

ಅದು ಆ ಮಡಿವಂತಿಕೆಯ ಊರಿನಲ್ಲಿ ಟಿ. ನರಸೀಪುರ ತಾಲೋಕಿನ ತಲಕಾಡು ಪಕ್ಕದ ಕಾವೇರಿ ತೀರದ ಒಂದು ಹಳ್ಳಿ ನಮ್ಮೂರು.

ಕೂಲಿ ಮಾಡುತ್ತಿದ್ದ ಕುಟುಂಬವಾದರೂ ಮಕ್ಕಳ ಜೀವನಕ್ಕೆ ಏನು ಕುಂದು ಕೊರತೆ ಇಲ್ಲದೇ ಬೆಳೆದ ಮನೆ ನಮ್ಮದಾಗಿತ್ತು. ಈ ಊರಿನಲ್ಲಿ ಮೂಢನಂಬಿಕೆ ಮೂಟೆಗಟ್ಟಲೆ ತಾಂಡವಾಡುತ್ತಿತ್ತು, ಮೈನೆರೆದ ಹೆಣ್ಣುಮಕ್ಕಳು ಮನೆಯ ಹೊರಗೆ ಅಥವಾ ಹಿತ್ತಲಲ್ಲಿ ಒಂದು ಕಿರುಮನೆಯಲ್ಲಿ ಒಬ್ಬಂಟಿಯಾಗಿರುವ, ಕೊಟ್ಟಿದ್ದನ್ನು ತಿನ್ನುವ ಇರುವಷ್ಟು ಜಾಗಕ್ಕೆ ಮಾತ್ರ ಕಾಲು ಚಾಚುವ, ಅವರು ಕೊಟ್ಟಿದ್ದನ್ನು ಕುಡಿದು ಬಾಗಿಲು ಕಿಂಡಿಯಲ್ಲಿ ಇಣುಕಿ ಮಾತಾಡಿ ಹಿರಿಯರು ತೋರಿದ ಜಾಗದಲ್ಲಿ ಮಾತ್ರ ಹೋಗಿ ತಟ್ಟೆ ತೊಳೆದು ಬಂದು ಗಮ್ಮನೆ ಕೂರುವ, ಮೂರು ದಿನದ ತನಕ ಒಂದೇ ಆಗಸರ ಮನೆಯ ಹಳೆಯ ಒಂದು ಪಂಚೆ ಉಟ್ಟು ಒಳಗೆ ಒಂದು ಹಳೆಯ ಬಟ್ಟೆ ಹಾಕಿ ಮುಜುಗರದಿಂದ ಇರುವ ಶೋಚನೀಯ ಸ್ಥಿತಿ ನಮ್ಮೂರಿನ ಹೆಣ್ಣುಮಕ್ಕಳದ್ದು,

ಆದರೆ ನಾನು ಮೈ ನೆರೆದ ಮೇಲೆ ನಮ್ಮ ಪರಿಸ್ಥಿತಿ ಮಕ್ಕಳ ಮೇಲಿನ ಪ್ರೀತಿಯಿಂದ ಸ್ವಲ್ಪ ಮಟ್ಟಿಗೆ ಬದಲಾವಣೆ ಕಂಡಿತ್ತು ಎಂದು ಹೇಳುವುದರಲ್ಲಿಒಂದು ಕುಷಿ ಇದೆ.

ಅದೇನೆಂದರೆ ಮೈನೆರೆದ ಹೆಣ್ಣುಮಗಳು ಮೂರನೆ ದಿನಕ್ಕೆ ಗಂಡಸರು ಹೇಳುವ ಮೊದಲು ನಸುಕಿಗೆ ಎದ್ದು ನಮ್ಮ ಎಲ್ಲಾ ತಟ್ಟೆ ಲೋಟ ಚಾಪೆ ರಗ್ಗು ಎಲ್ಲಾವನ್ನು ಹೊತ್ತು ಹೊಳೆಗೆ ಹೋಗಿ ಸ್ನಾನ ಮಾಡಿ (ಊರಿಂದ ಒಂದೂವರೆ ಕಿ.ಮೀ ಅಂತರ) ಅವರು ಬಿಚ್ಚಿಟ್ಟ ಮೈಲಿಗೆ ಬಟ್ಟೆಯನ್ನು ಒಂದು ದಾರದಲ್ಲಿ ಕಟ್ಟಿ ಮುಟ್ಟಿಸಿಕೊಳ್ಳದೇ ಇಡಿದುಕೊಂಡು ಅದೇ ಹಾದಿಯಲ್ಲಿರುವ ಆಗಸರ ಬೇಲಿ ಮೇಲೆ ಹಾಕಿ ಬರುವುದು. ಅದನ್ನು ಆಗಸ ಮಡಿ ಮಾಡಿಕೊಡಬೇಕಿತ್ತು, ಅದೇನಾದರೂ ಶಾಲೆಯ ಸಮವಸ್ತ್ರ ಆದರೆ ಶಾಲೆಗೆ ಅಷ್ಟು ದಿನ ರಜೆ ಹಾಕಬೇಕಿತ್ತು ಇಲ್ಲ ಯುನಿಫಾರ್ಮ್ ಇಲ್ಲದೇ ಕಲರ್ ಬಟ್ಟೆ ಹಾಕಿ ಹೋಗುವ ಸ್ಥಿತಿ ನಿರ್ಮಾಣವಾಗಿತ್ತು. ಈ ಪರಿಸ್ಥಿತಿ ಕಾಲೇಜಿಗೆ ಹೋಗಲು ಶುರುಮಾಡಿದ್ದ ನನ್ನಿಂದ ಬೇರೆ ಆಗಿತ್ತು.

ಹೊಳೆಗೆ ನಾನು ಹೋಗಲು ಇಷ್ಟವಿಲ್ಲದಿದ್ದರಿಂದ ನಮ್ಮ ತಂದೆ ನನಗೆ ಅನುಕೂಲವೆಂಬಂತೆ ಇವಳು ಹೊಳೆಗೆ ಹೋಗುವುದು ಬೇಡ ಅಂತ ತೀರ್ಪು ಕೊಟ್ಟರು. ಆ ಒಂದು ಮಾತು ನನ್ನ ಪಾಲಿನ ಸುಂದರಘಟ್ಟ ಎಂದೆನಿಸಿ ಮುಜುಗರ ಹಿಂಸೆಯಿಂದ ತಪ್ಪಿಸಿಕೊಂಡೆ (ಮನೆಯಲ್ಲೇ ನಸುಕಿನಲ್ಲಿ ಎದ್ದು ಹೊರಗಡೆ ಬೀಸಿನೀರ ಸ್ನಾನ ಮಾಡುವ ರೂಢಿಯಾಯಿತು) ನಂತರದಲ್ಲಿ ಮೈನೆರದ ಎರಡು ತಿಂಗಳು ನಾನು ಆ ಘನ ಘೋರ ಹೊಟ್ಟೆನೋವಿನ ಜೊತೆಗೆ ಮುಖ ಮೂತಿ ಎತ್ತಿಕೊಂಡು ಮುಟ್ಟಿನ ಬಟ್ಟೆ ತೊಳೆಯುವ ಪರಿ ನೋಡಿದ ನಮ್ಮ ತಾಯಿಗೆ ಏನನಿಸಿತೋ ಏನೋ! ನಾನು ಮನೆಯಿಂದ ಹೊರಗಡೆ ಆದಾಗಲೆಲ್ಲಾ ಸಾಂಬಾರ್ ಮಾಡಲು ದುಡ್ಡಿಲ್ಲದಿದ್ದರೂ ದುಡ್ಡು ಕೂಡಿಕ್ಕಿ ನನಗೆ ತಿಂಗಳಿಗೆ ಒಂದು ನ್ಯಾಪಕಿನ್ ಕೊಡಿಸಲು ಶುರುಮಾಡಿದರು.

ಆಗ ಮತ್ತೊಂದು ದೊಡ್ಡ ನಿರಾಳ ಭಾವನೆ ಎಂದರೆ ಅದು ಅಮೃತ ಘಳಿಗೆ ಎಂದರೆ ತಪ್ಪಾಗಲ್ಲ, ಆಗ ತೊಳೆಯುವ ಗೋಜಿಲ್ಲ ಒಣಗಲು ಹಾಕುವ ಅವಶ್ಯಕತೆ ಮೊದಲೆ ಇಲ್ಲ , ಮೈಲಿಗೆ ಆದಾಗಲೆಲ್ಲಾ ತೆಗೆದು ಹಿತ್ತಲಲ್ಲಿ ಮಣ್ಣು ತೆಗೆದು ಹೂಳುವುದು ಅಷ್ಟೆ ಆಗಿತ್ತು. ಪರಿಸ್ಥಿತಿ ಸುಧಾರಿಸಿದ ಮೇಲೆ ತಿಂಗಳಾಗುತ್ತಿದ್ದಂತೆ ಕಡಿಮೆ ದುಡ್ದು ಆದ್ದರಿಂದ ನಮ್ಮ ಅಪ್ಪನ ಕೈಯಲ್ಲಿ ಚೀಟಿಯಲ್ಲಿ ಬರೆದುಕೊಟ್ಟು ಮೇಡಿಕಲ್ ನಿಂದ ತರಿಸಿಕೊಳ್ಳುತ್ತಿದ್ದೆ.

ಆದರೆ ಇದರ ಬಗ್ಗೆ ಗೊತ್ತಿಲ್ಲದೇ ಇರುವವರು ಗೊತ್ತಿದ್ದರು ತರಿಸಿಕೊಳ್ಳಲು ಕನಿಷ್ಟ ಕಾಸು ಇಲ್ಲದವರು ಅದೇ ಹಳೆಯ ಬಟ್ಟೆಗಳನ್ನು ಹಾಕಿಕೊಂಡು ಎರಡು ದಿನದ ಮೇಲೆ ಅದನ್ನು ಒಗೆದು ಹುಲ್ಲಿನ ಬಣವೆ ಮೇಲೆ, ಮನೆಯ ಬೇಲಿ ಮೇಲೆ ಅಥವಾ ಕಲ್ಲು ಗುಡ್ಡೆ ಮೇಲೆ ಅಪ್ಪ ಅಣ್ಣ ತಮ್ಮಂದಿರ ಕಣ್ಣು ಮರೆಸಿ ಅರ್ಧಂಬರ್ಧ ಒಣಗಿಸಿ ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ತುಂಬಿ ಯಾವುದೇ ಕಿಂಡಿಗೆ ತುರುಕುತ್ತ ಇದ್ದವರೂ ಇದ್ದರು, ಮತ್ತೆ ಮುಂದಿನ ತಿಂಗಳು ಅದೇ ಬಟ್ಟೆ ಬಳಕೆ ಅಲ್ಲಿ ಫಂಗಸ್ ಇರಲಿ, ಬೇರೆ ಹುಳುಗಳೇ ಇರಲಿ ಅದೇ ಬಟ್ಟೆಯನ್ನು ಹಾಕಿ ಚಿಕ್ಕ ಚಿಕ್ಕ ವಯಸ್ಸಿಗೆ ಗುಪ್ತ ರೋಗಗಳಿಗೆ ತುತ್ತಾದವರು ಎಷ್ಟೋ ಜನ ನಮ್ಮ ಕಣ್ಮುಂದೆ ಇದ್ದರು.

ಈಗ ಕಾಲ ಬದಲಾದಂತೆ ಹಳ್ಳಿಗಳಲ್ಲಿ ದೂರದರ್ಶನ ರೇಡಿಯೋಗಳು ಹೆಜ್ಜೆ ಇಟ್ಟ ಮೇಲೆ ಬೇಲಿ ಮೇಲೆ ಜೋತಾಡುತ್ತಿದ್ದ ಆ ಹಳೆ ಬಟ್ಟೆಗಳು ಮರೆಯಾಗುತ್ತಾ ಹೋಗಿ, ಸುಮಾರಷ್ಟು ಜನ ಪ್ಯಾಡ್ ಬಳಸುವಂತಾಗಿ ನೆಮ್ಮದಿಯಾಗಿದ್ದ ಹುಡುಗಿಯರು ಅದರ ಬೆಲೆ ಏರಿಕೆಯಿಂದ ಪ್ಯಾಡ್ ಬಳಸುತ್ತಿದ್ದವರು ಮತ್ತೆ ಹಳೆಯ ಬದುಕಿಗೆ ಅಂಟುಕೊಂಡು ರೋಗಗಳನ್ನು ತರಿಸಿಕೊಳ್ಳುವಂತಾಗದಿದ್ದರೆ ಅಷ್ಟೇ ಸಾಕು. ಅದರ ಬದಲು ಎಲ್ಲಾ ಸ್ತರದವರು ಬಳಸುವ ಹಾಗೇ ಉಚಿತವಾಗಿದ್ದರೆ, ನ್ಯಾಪ್ ಕಿನ್ ಜಾಹೀರಾತಿನಲ್ಲಿ ತೋರಿಸುವ ಹಾಗೇ ಹುಡುಗಿಯರು ಕುಣಿಯುವ ಸ್ಥಿತಿ ನಿರ್ಮಾಣವಾಗಬಾರದೇಕೆ?

Add Comment