Quantcast

ತಿಮ್ಮಣ್ಣನ ಜುಂಜಪ್ಪನ ಕಥೆ

 ನರಸಿಂಹರಾಜು ಬಿ ಕೆ

ನಮ್ಮ ಚಿಕ್ಕಪ್ಪ ತಿಪ್ಪೇಸ್ವಾಮಿ ನಮ್ಮೂರ ಪುಡಾರಿಗಳ ಗುಂಪಲ್ಲಿ ದೊಡ್ಡ ಹೆಸರು ಮಾಡಿದವ!

ವೃತ್ತಿಯಲ್ಲಿ ಡ್ರೈವರ್ ಆದ್ದರಿಂದ ವಲಸೆ ಹೋಗಿ ಊರಿಗೆ ಬಂದಿದ್ದರು! ನಾವಿನ್ನೂ ಚಿಕ್ಕವರು ಆಗ. ಊರಮಧ್ಯೆ ಸಿಂಗಾರ ಮಾಡ್ಕೊಂಡು ಮೊಣಕಾಲಿನಗಂಟ ಸೀರೆ ಉಟ್ಕೊಂಡು ತುರುಬು ಜಡೆ ಸುತ್ಕೊಂಡ ಚೆಲುವೆಯೊಬ್ಬಳು ಕಂಕುಳಿಗೆ ಪುಟ್ಟ ಬಿದಿರ ಪುಟ್ಟಿಯೊಂದನ್ನು ಇಟ್ಟುಕೊಂಡು ಊರ ತುಂಬೆಲ್ಲಾ ವೈಯಾರದಿಂದ “ಕಣಿ ಹೇಳ್ತೀನವ್ವ ಕಣಿ! ” ಅಂಥ ಕೂಗ್ತಾ ತಿರುಗ್ತಿದ್ಲು.

ಮೊದಲೆ ತರಲೆ ನಮ್ಮ ಕಾಕ(ಚಿಕ್ಕಪ್ಪ)ನ ಕಣ್ಣಿಗೆ ಬಿದ್ದ ಈ ಚಲುವೆಯನ್ನು ಕರೆದು ಈಚಲು ಚಾಪೆ ಹಾಕಿ ಒಂದು ಮೊರದಲ್ಲಿ ಸ್ವಲ್ಪ ಅಕ್ಕಿ ಹಾಕಿ ಎಲೆ ಅಡಿಕೆ ಇಟ್ಟು ಊದಬತ್ತಿ ಹಚ್ಚಿ ಎಲೆ ಅಡಕೆಗೆ ನೂರು ರೂಪಾಯಿ ದುಡ್ಡಿಟ್ಟು ಕಣಿ ಕೇಳೋಕೆ ಕುತ್ಕೊಂಡ್ರು !

ಆಕೆ “ನಿಮ್ಮ ಮನೆದೇವರು ನೆನಪು ಮಾಡ್ಕೊಂಡು ನಿನ್ ಮನಸ್ಸಿನ ಆಸೆಗಳನ್ನು ಕೇಳ್ಕೋ ನಿನ್ನ ಆಸೆ ಏನು? ಆ ಆಸೆ  ಆಗುತ್ತೋ ಇಲ್ವೋ?!  ” ಹೇಳ್ತೀನಿ ಅಂತ ಹೇಳಿದ್ಲು ಇದೆಲ್ಲಾ ನಡೆಯುವ ಮಧ್ಯೆ ಅಕ್ಕಪಕ್ಕದ ಮನೆಯ ಹೆಂಗಸರೆಲ್ಲಾ ಕಣಿ ಕೇಳೋಕೆ ಅಂತ ಸೇರ್ಕೊಂಡ್ರು.

ಆಗ ನಮ್ಮ ಕಾಕ ” ನನ್ ಮನಸ್ಸಿನಲ್ಲಿ ಒಂದು ಮಾತಿದೆ ಅದೇನು ಅಂತ ಹೇಳು ನೋಡಣ” ಅಂದ.

ಕಣಿಯಾಕೆ ಕೆಲಕಾಲ ಯೋಚಿಸಿ
“ನಿನ್ ಹೆಸರೇನು ?” ಅಂತ ಕೇಳಿದ್ಲು .
ಅದಕ್ಕೆ “ತಿಪ್ಪೇಸ್ವಾಮಿ” ಅಂದ ನಮ್ಮ ಕಾಕ!

” ಹುಮ್ !
ಸರಿ ಹಾಗಾದರೆ ನಡಿ ಹೋಗೋಣ!
ಅದೆಲ್ಲಿದೆ ಈರನಸರ? ಅಂದ್ಲು! (ಈರನಸರ ನಮ್ಮೂರ ಪಕ್ಕದ ಹಳ್ಳವೊಂದರ ಹೆಸರು ಇದು ಜನನಿಭಿಡ ಪ್ರದೇಶ)

ಆಕೆ ಹಾಗಂದಿದ್ದೇ ತಡ ಎದ್ನೋ ಬಿದ್ನೋ ಅಂತ ನಮ್ಮ ಕಾಕ ಅಲ್ಲಿಂದ ಓಡಿಹೋದ!

ಅರೆ! ಯಾಕೆ ಹಾಗೆ ಓಡಿಹೋದ ಅಂತ ನಾವು ಯೋಚನೆ ಮಾಡ್ತಿದ್ವಿ. ಆ ಕೊರವಂಜಿ ಹೇಳಿದ್ಲು “ಅವನಿಗೆ ನನ್ ಜೊತೆ  ಈರನಸರದಲ್ಲಿ ಚಕ್ಕಂದ ಆಡೋಕೆ ಆಸೆಯಂತೆ, ಅದಕ್ಕೆ ಹೋಗಣ ಬಾ ಅಂದೆ”

ಎಲ್ಲರೂ ನಿಬ್ಬೆರಗಾಗಿ ಸುಮ್ಮನೆ ಕುಳಿತುಬಿಟ್ಟೆವು !

ಇದೆಲ್ಲಾ ಇವಾಗ ಯಾಕೆ ನನಗೆ ನೆನಪಾಯಿತು ಅಂದರೆ.
ರಾತ್ರಿ ಹಿರಿಯ ರಂಗಕರ್ಮಿ ಗೋಮಾರದಹಳ್ಳಿ ಮಂಜುನಾಥ್ ಅವರು ನಮ್ಮೂರಿಗೆ ಆಕಸ್ಮಿಕವಾಗಿ ಬೇಟಿ ಕೊಟ್ಟರು, ಅಪರೂಪವೇನು ಅಲ್ಲ ನಮ್ಮಿಬ್ಬರ ಭೇಟಿ. ಅಕ್ಕಪಕ್ಕದ ಊರಿನವರಾದ ನಾವು ಹಾಗಾಗ್ಗೆ ಭೇಟಿ,ಮಾತು, ಹರಟೆ ಎಲ್ಲವೂ ಸಾಮಾನ್ಯ!

ಆದರೆ ನೆನ್ನೆ ರಾತ್ರಿ 7:30 ಕ್ಕೆ ನಮ್ಮೂರಿಗೆ ಬಂದಿದ್ದ ಮಂಜಣ್ಣನಿಗೆ ಇಬ್ಬರೂ ಅಪರೂಪಕ್ಕೆ ಕೊಂಚ ಬಿಡುವಾಗಿದ್ದ ಕಾರಣ ನಮ್ಮೂರ ಪದಗಾರ ತಿಮ್ಮಣ್ಣ ಮಾವನ ಬಳಿ ಹೋಗಿ ಜುಂಜಪ್ಪನ ಕಥೆ ಕೇಳ್ತಾ ಕುಂತ್ವಿ.

7:30 ಗೆ ಕಥೆ ಕೇಳೋಕೆ ಕುಳಿತಾಗ ನಮ್ಮ ಜೊತೆ ಇದ್ದದ್ದು ನಾನು ಮಂಜಣ್ಣ ಜೊತೆಗೆ ಅವರ ಗೆಳೆಯ ವಿವೇಕಣ್ಣ.

ಆದರೆ ಕಥೆ ಪ್ರಾರಂಭ ಆದ ಅರ್ಧಗಂಟೆಗೆ ಕಾಡುಗೊಲ್ಲರ ಹಟ್ಟಿಯ ಅನೇಕ ಜನ ಸೇರ್ಕೊಂಡ್ರು. ಕತೆ ಕೇಳ್ತಾ ಇರುವ ಮಧ್ಯೆ ಮಂಜಣ್ಣನವರ ಪತ್ನಿ ಹೊಲದಲ್ಲಿ ಒಬ್ಬರೇ ಇದ್ದ ಕಾರಣ ಬೇಗ ಬರೋಕೆ ಫೋನ್ ಮಾಡಿದ್ರು. ಇದೆಲ್ಲವನ್ನೂ ಕಥೆ ಕೇಳ್ತಾ ಮರೆತೇ ಹೋದ ನಾವು ಸುಮಾರು 9:30 ಆದರೂ ಎಲ್ಲವನ್ನೂ ಮರೆತು ಕಥೆಯಲ್ಲೇ ತಲ್ಲೀನರಾದೆವು .

ಅಷ್ಟಕ್ಕೂ ನಾವು ತಿಮ್ಮಣ್ಣನನ್ನು ಕೇಳಿದ್ದು ಇಷ್ಟೇ
“ಜುಂಜಪ್ಪನ ಹೇಗೆ ಹುಟ್ಟಿದ? ” ಅಂತ.

ಅಷ್ಟೇ!

ಶುರು ನೋಡಿ ತಿಮ್ಮಣ್ಣನ ಕಥೆ !
ನಮಗೆ ಸಮಯ ಹೋಗಿದ್ದೆ ಗೊತ್ತಾಗಲಿಲ್ಲ !

ಆ ಕಥೆಯ ಮದ್ಯೆ ಕೊರವಂಜಿ ಪಾತ್ರವೊಂದು ಬಹುಮುಖ್ಯ ಪಾತ್ರ ವಹಿಸಿತ್ತು ಮತ್ತೆ ಕಾಡುತ್ತಿತ್ತು .
ಅದಕ್ಕೆ ಇದೆಲ್ಲಾ ನೆನಪಾಯ್ತು.

Add Comment