Quantcast

ನಾಳೆ ಎಂದರೆ ಭಯವಾಗಿದೆ…


ಗುರುರಾಜ್

ಒಗ್ಗರಣೆ ಹಿಡಿದ ಸಾರು
ಕೊತಕೊತನೆ ಕುದಿಯುವಾಗ
ಅವರು ಇವರನ್ನು ಕೊಂದರು ಎಂಬ ಬ್ರೇಕಿಂಗ್ ನ್ಯೂಸ್ಗೆ ಗಾಬರಿ ಬಿದ್ದ ಅಮ್ಮ
ಎಲ್ಲಿದ್ದೀಯಾ ಮಗನೇ ಎಂದು ಪೋನಚ್ಚುತ್ತಾಳೆ..

ಇಂದು ಎಂದಿನ ಕೂಲಿ ಸಿಗದಿದ್ದರೂ
ಗೆಳೆಯನ ಮುಖದಲ್ಲಿ
ಬೇಗನೇ ಮನೆ ತಲುಪುವ ಧಾವಂತ
ಇಂದು ಅವರ ಮೆರವಣಿಗೆಯಿದೆ ಮತ್ತು ಮನೆಯಲ್ಲಿ ತಂಗಿಯರಿದ್ದಾರೆ…

ಅವರ
ಭಾಷಣ ಎಷ್ಟು ಆಪ್ತ,ಅಪ್ಯಾಯಮಾನವೆಂದರೆ
ಏನನ್ನೂ ಹೇಳದೇ ಎಲ್ಲವನ್ನೂ ಹೇಳುತ್ತಾರೆ
ಹಾಗಾಗಿ ಒಂದಿಷ್ಟು ಮನೆಗಳಲ್ಲಿ
ಫೋಟೊಗಳ ಮುಂದಿನ ದೀಪಗಳಿಗೆ ಕಣ್ಣೀರೆ ಎಣ್ಣೆಯಾಗಿದೆ…

ಈ ರಾತ್ರಿ ಹಗಲುಗಳು
ಯಾಕಾದರೂ ಸರದಿಯಲಿ ಬದಲಾಗುತ್ತವೋ
ನಮಗೆ ನಾಳೆಯೆಂದರೇ ಅಷ್ಟು ಭಯವಿದೆ…

ಮುಖಗಳೆಲ್ಲ
ಮುಖವಾಡ ತೊಟ್ಟ ಮೇಲೆ
ಈ ಊರಲಿ ಬದುಕು ಬಲು ದುಬಾರಿ
ಸಾವು ತುಂಬಾ ಸೋವಿ….

Add Comment