Quantcast

ಟೂ ಇನ್ ಒನ್ ಕಪ್ಪುಸುಂದರಿ..

ಕೆ ಸುರೇಶ್ ಶಾನುಭೋಗ್

ಸುಮಾರು 15 ವರ್ಷಗಳ ಹಿಂದೆ ಮನೆಗೊಂದು ಕಲರ್ ಟಿವಿ ತರುವ ಸಲುವಾಗಿ ಬೆಂಗಳೂರಿನ ಯಲಹಂಕದಲ್ಲಿನ ಒಂದು ಎಲೆಕ್ಟ್ರಾನಿಕ್ಸ್ ಅಂಗಡಿಗೆ ಸೋದರಮಾವನ ಜತೆ ಹೋಗಿದ್ದೆ.

ಆಗ ಉದಯವಾಣಿ ಬೆಂಗಳೂರು ಕಚೇರಿಯಲ್ಲಿ ಒಂದು ಬಿಪಿಎಲ್ ಟಿವಿ ಇತ್ತು ಮತ್ತು ಅದರ ವೂಫರ್ ಸರೌಂಡ್ ಸೌಂಡ್ ಸಿಸ್ಟಂ ಇನ್ನಿಲ್ಲದಂತೆ ನನ್ನನ್ನು ಕಾಡಿಬಿಟ್ಟಿತ್ತು.

ಹೀಗಾಗಿ ಆ ಕಂಪೆನಿ ಮುಚ್ಚುವ ಸ್ಥಿತಿಯಲ್ಲಿದೆ ಎಂಬುದು ಗೊತ್ತಿದ್ದೂ ನಾನೂ ಅದೇ ಥರದ ಟಿವಿ ಕೊಳ್ಳುವ ಆಸೆಯೊಂದಿಗೆ ಹೋಗಿದ್ದೆ. ಅಲ್ಲೇನೋ ಅದಕ್ಕೆ ಸರಿಸಮಾನವಾದ ಟಿವಿ ಸಿಕ್ಕಿತು; ಆದರೆ ನನ್ನನ್ನು ಬಿಡದೇ ಆಕರ್ಷಿಸಿದ್ದು ಬಿಪಿಎಲ್ ಟಿವಿಗಳ ಸಾಲಿನ ಕೊನೆಯಲ್ಲಿ, ಮ್ಯೂಸಿಕ್ ಸಿಸ್ಟಂಗಳ ಸಾಲಿನ ಆರಂಭದಲ್ಲಿ ಷೋಡಶಿ ಥರ ಮಗುಮ್ಮಾಗಿ ಕುಳಿತಿದ್ದ ಈ ಪುಟ್ಟ ಎಪಿಎಲ್ (Audio Player ಮಾರ್ರೆ!). ಟಿವಿಯ ಬಿಲ್ ಮಾಡಲು ಹೋದಾಗಲೂ ‘ನನ್ನ ಬಿಟ್ಟು ಹೋಗ್ತೀಯ?’ ಎಂದು ಪ್ರಶ್ನಿಸುವಂತೆ ಗಮನ ಸೆಳೆದಿದ್ದ ಈ ಫಿಲಿಪ್ಸ್ ಟೂ ಇನ್ ಒನ್ ಕಪ್ಪುಸುಂದರಿಯನ್ನು ಬಿಟ್ಟುಬರಲು ಮನಸ್ಸಾಗದೆ ಕೊನೆಗೂ ಖರೀದಿಸಿದ್ದಾಯ್ತು. ಅಕ್ಕನ ನೋಡಲು ಹೋಗಿ ತಂಗಿಯೂ ಇಷ್ಟವಾಗಿ, ಅಕ್ಕ-ತಂಗಿ ಇಬ್ಬರನ್ನೂ ಕರೆತಂದು ಮನೆ ತುಂಬಿಸಿಕೊಂಡೆವು!

ನನಗೆ ಈ ಟೇಪ್ ರೆಕಾರ್ಡರ್ ಗಳೆಂದರೆ ಮೊದಲಿಂದಲೂ ಏನೋ ಸೆಳೆತ. ಚಿಕ್ಕವನಿದ್ದಾಗ ದೊಡ್ಡಣ್ಣ ಮನೆಗೆ ಇಂಥದ್ದೇ ಒಂದು ಟೇಪ್ ರೆಕಾರ್ಡರ್ ತಂದಿದ್ದ. ಅದಕ್ಕೆ ಬಾಡಿಗಾರ್ಡ್ ಥರ ಸಾಧಾರಣದಿಂದ ಭಾರಿ ಸೈಜಿನ ಎರಡು ಸೌಂಡ್ ಬಾಕ್ಸುಗಳನ್ನು ಮನೆ ಜಗುಲಿ ಗೋಡೆಯ ಎರಡು ತುದಿಗಳಲ್ಲಿ ಫಿಕ್ಸ್ ಮಾಡಿದ್ದ. ಆ ಸೌಂಡ್ ಬಾಕ್ಸುಗಳಲ್ಲಿ ಒಂದರಲ್ಲಿ ಎಸ್ಪಿ ಬಾಲಸುಬ್ರಹ್ಮಣ್ಯಂ ಧ್ವನಿಯನ್ನೂ ಇನ್ನೊಂದರಲ್ಲಿ ಜಾನಕಿಯಮ್ಮನ ಸ್ವರವನ್ನೂ ಕೇಳಲು ಮಜವಾಗುತ್ತಿತ್ತು, ಹಿತವಾಗುತ್ತಿತ್ತು.

ಟೇಪ್ ರೆಕಾರ್ಡರ್ ಗಂಟಲು ಕೆಟ್ಟಾಗ ಅಣ್ಣ ಅದೊಂಥರಾ ಸ್ಮೆಲ್ಲಿನ ಲಿಕ್ವಿಡ್ ಬಾಟಲ್ ಕೊಟ್ಟು ಹೆಡ್ ಕ್ಲೀನ್ ಮಾಡಿ ಎಂದು ನಮಗೆ ಹೇಳುತ್ತಿದ್ದ. ಹೆಡ್ ಕ್ಲೀನ್ ಮಾಡಿದ ನಂತರ ಎಸ್ಪಿಬಿ, ಜಾನಕಿಯಮ್ಮ ಹೊಸ ಹುರುಪು ಬಂದವರಂತೆ ಹಾಡುತ್ತಿದ್ದರು! ಗಂಟಲು ಕೆಡುವುದರ ಹೊರತಾಗಿ ಈ ಟೇಪ್ ರೆಕಾರ್ಡರ್ ಕೆಲವೊಮ್ಮೆ ‘ಗೊಳ ಗೊಳ’ ಎಂದು ಅಳಲು ಶುರು ಮಾಡುತ್ತಿತ್ತು. ಆಗೆಲ್ಲ ಒಂದು ಸ್ಕ್ರೂ ಡ್ರೈವರ್ ತಗೊಂಡು ಕ್ಯಾಸೆಟ್ಟಿನ ಸುತ್ತಿಕೊಂಡ ರೀಲನ್ನು ಸರಿ ಮಾಡಿಬಿಟ್ಟರೆ ಅದರ ಅಳು ನಿಲ್ಲುತ್ತಿತ್ತು. ಹೀಗೆ ಅತ್ತೂ ಅತ್ತು ಸುಸ್ತಾದ ಅದೆಷ್ಟೋ ಕ್ಯಾಸೆಟ್ಟುಗಳು ಮತ್ತು ರೀಲುಗಳು ನಮ್ಮ ಆಟಿಕೆ ಸಾಮಗ್ರಿಗಳಿದ್ದ ಡಬ್ಬಿ ಸೇರಿಕೊಳ್ಳುತ್ತಿದ್ದವು. ಕೆಲವೊಮ್ಮೆ ಸ್ವಲ್ಪ ಸರಿ ಇದ್ದ ಕ್ಯಾಸೆಟ್ಟುಗಳನ್ನೂ ನಾವು ಸರಿ ಇಲ್ಲ ಎಂಬ ತೀರ್ಮಾನಕ್ಕೆ ಬಂದು ಆಡಲು ಬಳಸುತ್ತಿದ್ದೆವು. ಆಗೆಲ್ಲ ಅಣ್ಣ ಬಯ್ಯುತ್ತಿದ್ದ; ನಾವು ಅಳುತ್ತಿದ್ದೆವು!

ಮನೆಗೆ ಬಂದ ಈ ಕಪ್ಪುಸುಂದರಿ ನನ್ನ ಒಡನಾಡಿಯಾಯ್ತು. ನನಗಿಷ್ಟದ ಹಾಡುಗಳನ್ನೆಲ್ಲ ಮತ್ತೆ ಮತ್ತೆ ಪ್ಲೇ ಮಾಡಿ ಕೇಳಿ ಆಸ್ವಾದಿಸಿದೆ. ಆ ಸಮಯದಲ್ಲಿ ಬೆಂಗಳೂರಿನಲ್ಲಿ ಖಾಸಗಿ ಎಫ್ ಎಂ ರೇಡಿಯೋಗಳೂ ಒಂದೊಂದಾಗಿ ಆರಂಭವಾಗತೊಡಗಿದ್ದರಿಂದ ಹಾಡುಗಳನ್ನೂ ಅವುಗಳ ಚಿತ್ರ ವಿಚಿತ್ರ ಜಾಹೀರಾತುಗಳನ್ನೂ ನಿರೂಪಕಿಯರ ಉಲಿತಗಳನ್ನೂ ಬೇಸರವಿಲ್ಲದೆ ನನ್ನ ಕಿವಿಗೆ ದಾಟಿಸಿತು. ಅಣ್ಣ ತಂದಿದ್ದ ಟೇಪ್ ರೆಕಾರ್ಡರ್ ನ ‘ಚುಕುಬುಕು ರೈಲೇ…”ಗಿಂತಲೂ ಇದರ “ನಾ ಬೋರ್ಡು ಇರದ ಬಸ್ಸನು ಹತ್ತಿಬಂದ ಚೋಕರಿ”ಯ ಧ್ವನಿ ಸಾಮರ್ಥ್ಯ ನನಗೆ ಪ್ರಿಯವಾಗಿತ್ತು. ಕೊನೆಗೊಂದು ದಿನ ಬೆಂಗಳೂರಿನಲ್ಲಿ ಎಫೆಂಗಳ ಸಂತೆಯೊಳಗೇ ನನ್ನ ಈ ಆಡಿಯೋ ಪ್ಲೇಯರ್ ಹೋಗಿ ನಿಂತುಕೊಂಡಿತು. ಅವುಗಳ ಕಚಪಿಚ ಮಾತು, ಗಡಿಬಿಡಿ, ಗಜಿಬಿಜಿ, ದಡಬಡ ಸದ್ದಿನ ನಡುವೆಯೂ ನನ್ನಿಷ್ಟದ ಹಾಡಿಗೆ ಸಹನೆಯ ಧ್ವನಿಯಾಯ್ತು.

ಬರುಬರುತ್ತಾ ಸಿಡಿ, ಪೆನ್ ಡ್ರೈವ್, ಮೆಮೊರಿ ಕಾರ್ಡುಗಳ ಜಮಾನಾ ಆರಂಭವಾಗಿ ಜನ ಬಹುಬೇಗ ಅಪ್ಡೇಟ್ ಆದರು. ನಾನು ಸಹ ಆ ಕಡೆ ಗಮನಹರಿಸಿದೆ, ಆದರೆ ಈ ಸಂಗಾತಿಯ ಮರೆಯಲಿಲ್ಲ. ನಾನು ಮನೆಯಲ್ಲಿದ್ದಾಗ ಕ್ಯಾಸೆಟ್ಟುಗಳು ಸೆಟೆದು ನಿಲ್ಲುತ್ತಿದ್ದವು. ಕಪ್ಪು ಸುಂದರಿ ಧ್ವನಿ ಎತ್ತರಿಸಿ ಹಾಡುತ್ತಿದ್ದಳು. ಸುಮಾರು ಹತ್ತು ವರ್ಷಗಳ ನಂತರ ನನ್ನ ಕುಟುಂಬ ಬೆಳಗಾವಿಗೆ ಶಿಫ್ಟ್ ಆಗಿ, ವೃತ್ತಿ ಸಲುವಾಗಿ ನಾನೊಬ್ಬನೇ ಬೆಂಗಳೂರಲ್ಲಿ ಇರಬೇಕಾಗಿ ಬಂದಾಗ ನನ್ನ ಮತ್ತು ಈ ಆಡಿಯೋ ಪ್ಲೇಯರಿನ ಬಾಂಧವ್ಯ ಮತ್ತಷ್ಟು ಹೆಚ್ಚಾಯಿತು. ಸುಮಾರು ಎರಡು ವರ್ಷ ಕಾಲ ಒಂಟಿಯಾಗಿದ್ದ ನನ್ನ ನೋವು-ನಲಿವಿನ ಕ್ಷಣಗಳಿಗೆ ಸಾಕ್ಷಿಯಾಗಿ, ಹಿನ್ನೆಲೆ ಸಂಗೀತದ ಥರ ಸಾಥ್ ನೀಡಿದ್ದು ಇದೇ ಆಡಿಯೋ ಪ್ಲೇಯರ್. ಎಷ್ಟೋ ಬಾರಿ ಇದರಲ್ಲಿ ಬರುವ ಹಾಡು ಲಾಲಿ ಹಾಡಾಗಿ ನಾನು ನಿಶ್ಚಿಂತನಾಗಿ ನಿದ್ರಿಸಿದ್ದಿದೆ, ಖುಷಿಯ ಕ್ಷಣಗಳಲ್ಲಿ ಇದರ ಹಾಡಿಗೆ ನರ್ತಿಸಿದ್ದಿದೆ, ನೋವಿನ ವೇಳೆಯಲ್ಲಿ ಕಣ್ಣೀರಾಗಿದ್ದೂ ಇದೆ, ಇದೆ.

ಹೀಗೆ ನನ್ನೊಂದಿಗೆ ಭಾವನಾತ್ಮಕವಾಗಿಯೇ ಬೆಸೆದುಕೊಂಡಿದ್ದ ಈ ಆಡಿಯೋ ಪ್ಲೇಯರನ್ನು ನಾನೂ ಬೆಳಗಾವಿಗೆ ಶಿಫ್ಟ್ ಆಗುವಾಗ ಜತೆಯಲ್ಲೇ ಕರೆತಂದೆ. ಅಷ್ಟೊತ್ತಿಗಾಗಲೇ ಕ್ಯಾಸೆಟ್ಟುಗಳು ಮೂಲೆಗುಂಪಾಗಿದ್ದವು. ಅವುಗಳ ರೀಲುಗಳು ನನ್ನ ಮಗಳಿಗೆ ಆಟಿಕೆಯ ವಸ್ತುಗಳಾಗಿದ್ದವು (ಎರಡನೇ ಚಿತ್ರ ಗಮನಿಸಿ!). ಸಿಡಿ, ಪೆನ್ ಡ್ರೈವ್, ಮೊಬೈಲ್ ಮೆಮೊರಿ ಕಾರ್ಡುಗಳೆದುರು ಸ್ಪರ್ಧಿಸಲಾಗದೆ ಆಡಿಯೋ ಪ್ಲೇಯರ್ ಮೌನಕ್ಕೆ ಜಾರಿತ್ತು. ಇತ್ತ ಬೆಳಗಾವಿಯಲ್ಲಿ ಬೆಂಗಳೂರಿನ ಥರ ಎಫ್ ಎಂ ಸಂತೆ ಇಲ್ಲ. ಇರುವುದೊಂದು ವೇಣುಧ್ವನಿ ಸೀಮಿತ ಅವಧಿಗೆ ಮಾತ್ರವಿದೆ. ಕೊಲ್ಲಾಪುರದ ರೇಡಿಯೋ ಸಿಟಿ ಆಗಾಗ ಗಾಳಿ ಜತೆ ಹಾರಿಕೊಂಡು ಬಂದು ಚರಪರ ಸದ್ದು ಮಾಡಿ ಮರೆಯಾಗುತ್ತದೆ. ಹೀಗಾಗಿ ಈ ಆಡಿಯೋ ಪ್ಲೇಯರಿಗೆ ಇಲ್ಲಿ ಕೆಲಸವೇ ಇಲ್ಲ. ಹಾಗಂತ ಅದನ್ನು ದೂರ ಮಾಡಲು ನನಗೆ ಮನಸ್ಸಿಲ್ಲ. ಮನೆ ಶೋಕೇಸಿನ ಎತ್ತರದ ಸ್ಥಳದಲ್ಲಿ ಅದಕ್ಕೆ ಸ್ಥಾನ ಕೊಟ್ಟಿದ್ದೇನೆ. ಆರಡಿ ಕಟೌಟಿನ ನನಗಿಂತಲೂ ‘ಎತ್ತರ’ದಲ್ಲಿ ಅದಿದೆ ಈಗ!

ಇದನ್ಯಾಕೆ ಇನ್ನೂ ಇಟ್ಟುಕೊಂಡಿದ್ದೀರಿ ಎಂದು ಮನೆಗೆ ಬಂದ ಕೆಲವರು ಕೇಳಿದ್ದಿದೆ. ಆಗೆಲ್ಲ ನನ್ನ ನಗುವೇ ಉತ್ತರವಾಗುತ್ತದೆ!

Add Comment