Quantcast

ಹೌದು…ಹೆಮಿಂಗ್ವೆ ಗೆಲ್ಲುವುದೇ ಹಾಗೆ!

                                                                             

ಲಕ್ಷ್ಮೀಕಾಂತ ಇಟ್ನಾಳ

ಅಮೇರಿಕೆಯ ದಕ್ಷಿಣದ ರಾಜ್ಯ ಫ್ಲೋರಿಡಾದ ಮುಖ್ಯ ನೆಲದಿಂದ ಅಲ್ಲಲ್ಲಿ ಇರುವ ಏಳೆಂಟು ಸಣ್ಣ ದೊಡ್ಡ ದ್ವೀಪಗಳನ್ನು  ರಸ್ತೆಯಿಂದ ಪೋಣಿಸಿದಂತಿದೆ ದಾರಿ…

ಹೆದ್ದಾರಿ ಎಂದರೆ ಹೆದ್ದಾರಿಯಷ್ಟೇ. ಕೆಲವೆಡೆ ದ್ವೀಪಗಳಿದ್ದಲ್ಲಿ ಬಹಳವೆಂದರೆ ಒಂದು ಕಿಮೀ ಅಥವಾ ಇನ್ನರ್ಧ ಕಿಮೀ ಅಗಲವಿರಬಹುದು… ಇನ್ನುಳಿದ ಕಡೆಗೆ ಬರೀ ರಸ್ತೆಯಷ್ಟೆ. ಮುಖ್ಯ ಸಾಗರ ದಂಡೆಯಿಂದ ನೂರೆಪ್ಪತ್ತಾರು ಮೈಲು ದೂರ ಸಮುದ್ರ ಸೇತುವೆಯಂತಹ ರಸ್ತೆಯಲ್ಲಿ ಸಾಗುತ್ತಿದ್ದೇವೆ.  ಇಕ್ಕೆಲದ ಎಡಕ್ಕೆ ಕೆರೆಬ್ಬಿಯನ್ ಶರಧಿ ಹಾಗೂ ಬಲಕ್ಕೆ ಗಲ್ಫ್ ಆಫ್ ಮೆಕ್ಷಿಕೋ ಅಂಬುಧಿ. ಮೇಲೆ ಬಿಳಿಮೋಡಗಳ ಸಂತೆ ನೆರೆದ ಬಾನ ಪರಿಧಿ…

ಇಲ್ಲಿ ತಳ ತಳವೂ ಕಾಣುವಷ್ಟು ಸ್ಫಟಿಕ ಶುಭ್ರ ಜಲಧಿ… ದೊಡ್ಡ ದೊಡ್ಡ ಮತ್ಸ್ಯಕನ್ನೆಯರಂತೆ  ಕಾಣುವ ಮೀನುಗಳ ದಂಡು ಅದೆಲ್ಲೋ ನಡು ಆಳದಲ್ಲಿ ಚಲಿಸುತ್ತಿರುವುದು ಕಣ್ಣಿಗೆ ಚಂದವೋ ಚಂದ. ಆ ಹಿಂಡು ಚಲಿಸುವ ವೇಗ ಕೂಡ ಅದ್ಭುತ. ಮರೀಚಿಕೆಯಂತೆ ಅಲ್ಲಲ್ಲಿ ಕಂಡು ಮರೆಯಾಗುತ್ತವೆ. ಮೇಲೆ ಹಾರಿ  ಓಲಿಂಪಿಕ್ಸ್ ಜಿಮ್ನಾಸ್ಟಿಗರಂತೆ ಒಮ್ಮೆ ಎದ್ದು ಮತ್ತೆ ಡೈವ್ ಹೊಡೆದು ಕಣ್ಮರೆಯಾಗುತ್ತವೆ. ಇನ್ನೆಲ್ಲೋ ಏರಿಳಿಯುತ್ತ ಗುಂಪು ಸಾಗುತ್ತಿರುತ್ತದೆ, ಅಸಲು ಸಾಗರದ ಚಿನ್ನದ ನಿಧಿ.

ಇಂತಹ ವಿಶಾಲತೆಯಲ್ಲಿಯೇ ಅಲ್ಲಲ್ಲಿ `ಸ್ಯಾಂಡ್ ಬಾರ್’ ಎಂಬ ಮೊಳಕಾಲು ಆಳದ ಕಿಮೀಗಳ ವ್ಯಾಪ್ತಿಯ ನೀರಲ್ಲಿಯೇ ನಿಲ್ಲಬಹುದಾದ ಕೆಲ ಸ್ಥಳಗಳಿರುತ್ತವೆ. ಈ ಸ್ಯಾಂಡ್ ಬಾರ್ ಗಳಿಗೆ  ಸಣ್ಣ ದೊಡ್ಡ ಯಾಕ್ಟ್ ಗಳಲ್ಲಿ ಪ್ರವಾಸಿಗರನ್ನು ಕರೆದೊಯ್ದು ಸಾಗರ ಮಧ್ಯದಲ್ಲಿ ಲಂಗರಿಸಿ, ಅಕ್ಷರಶಃ ಈ ಉಸುಕಿನ ಮೇಲಿಳಿಸಿ, ನಿಲ್ಲಿಸಿ ಜಲಚರಗಳನ್ನು ನೋಡಿ ಆನಂದಿಸುವ ಥ್ರಿಲ್!

ಇನ್ನೊಮ್ಮೆ ಜನವಸತಿ ಇಲ್ಲದ ಸಣ್ಣ ಸಣ್ಣ ಐಲ್ಯಾಂಡ್  ಗಳಲ್ಲಿ ಇಳಿಸಿ, ನಿಸರ್ಗದ, ಸಾಗರದ ಕೌತುಕಗಳನ್ನು ಕಣ್ಣಾರೆ ಕಾಣಲು ಅನುವು ಮಾಡುವ ಪ್ರವಾಸಗಳು. ಆ ಜಲಚರಗಳೊಂದಿಗೆ ಅದರದೇ ಜಗತ್ತಿನಲ್ಲಿ, ಅದರದೇ ಲೋಕದಲ್ಲಿ ತುಸು ಹೊತ್ತು ಇದ್ದುಬಿಡುವುದಿದೆಯಲ್ಲಾ! ಅದು ಕೊಡುವ ಥ್ರಿಲ್ ಇನ್ನೆಲ್ಲೂ ಸಿಗದು ಎನ್ನುವಂತೆ ಪ್ರವಾಸಿಗರು ಲಗ್ಗೆ ಇಟ್ಟಿರುತ್ತಾರೆ.

 ಆದರೆ ಹಾಂ…ಇಲ್ಲಿಯೇ `ಐಲಾಮರಡಾ’, `ಹೋಮ್ ಸ್ಟೆಡ್’ ನಂತಹ ದಾರಿಯಲ್ಲಿ ಸಿಗುವ ಹತ್ತಾರು ದ್ವೀಪಗಳಿಂದ ಒಂದು ಹದಿನೈದಿಪ್ಪತ್ತು ಕಿಮೀ ಸಾಗರದಲ್ಲಿ ಹೋಗಿಬಿಟ್ಟರೆ ಆ ಆಳ ಸಮುದ್ರದಲ್ಲಿ ಲಂಗರು ಹಾಕಿ ದೊಡ್ಡ ದೊಡ್ಡ ಮೀನುಗಳನ್ನು  ಹವ್ಯಾಸಿಗರು ಹಿಡಿಯುತ್ತಾರೆ. ಈ ಮೀನುಗಾರಿಕೆಯ ಶೌಕ್ ಇರುತ್ತದಲ್ಲ.. ಸುಮ್ಮನೆ ಅಲ್ಲ ಅದು. ಅದು ಒಮ್ಮೆ ಕಚ್ಚಿಕೊಂಡರೆ ಬಿಡುವುದೇ ಇಲ್ಲ. ನಮ್ಮ ಕರಾವಳಿ ಗೆಳೆಯರಿದ್ದರೆ ಕೇಳಿ ನೋಡಿ! …

ಹಾಗೆಯೇ ನಿಮಗೆ ಪರಿಚಯವಿದ್ದರೆ ಅಮೇರಿಕೆಯ ಮಾಜಿ ಅಧ್ಯಕ್ಷ ಜಾರ್ಜ್ ಬುಶ್ ರನ್ನೂ ಕೇಳಿ ನೋಡಿ! ನಿಮಗೆ ಅದರ ಥ್ರಿಲ್ ಕತೆಮಾಡಿ ಹೇಳಿಯಾರು. ಬಲು ದೊಡ್ಡ ದೊಡ್ಡ ಮೀನುಗಳನ್ನು ಬಲೆಹಾಕಿ ಹಿಡಿಯುವ ಪ್ಯಾಶನ್ ಇವರಿಗೆಲ್ಲಾ! ಈ ಗೀಳು ಇರುವವರಿಗೆ ಇದೊಂತಹರದ `ಕಾಶಿ’ …. ಪ್ರತಿ ವರ್ಷವೂ ಸಮರ್ ನಲ್ಲಿ ಬಂದು ಹೋಗುತ್ತಾರೆ. ಹಿಡಿದ ದೈತ್ಯ ಮೀನುಗಳನ್ನು ದೋಣಿಯಲ್ಲಿ ಲಂಗರಿಗೆ ಕಟ್ಟಿ ತರುವ ದೃಶ್ಯ ಇಂಥವರ ಅದಮ್ಯ ಕನಸುಗಳಲ್ಲೊಂದು, ಕೆಲವರಂತೂ ಹಿಡಿದು ನೋಡಿ, ಆಟ ಆಡಿಸಿ ಅಲ್ಲಿಗೇ ಮರಳಿಸಿಯೂ ಬಿಡುತ್ತಾರಂತೆ!

ನಾನೂ ಕೂಡ ಅಂತಹುದೇ ಒಂದು ದೃಶ್ಯವನ್ನು ಕಾಣುತ್ತಿದ್ದೇನೆ. ಸುಮಾರು ಎಂಟ್ಹತ್ತು ದಶಕಗಳ  ಹಿಂದಿನ ದೃಶ್ಯವದು. ಒಂದು ದೊಡ್ಡ ಬೋಟಿನಲ್ಲಿ ನಾವೀಗ ಹೊರಟಿರುವ ಅಮೇರಿಕೆಯ ಕನ್ಯಾಕುಮಾರಿ ಎಂದೆನ್ನಬಹುದಾದ…`ಕೀ ವೆಸ್ಟ್’ ನೆಡೆಗೆ ಕೆರೆಬ್ಬಿಯನ್ ಸಾಗರದಲ್ಲಿ ಬೃಹದಾಕಾರದ  ಮೀನುಗಳನ್ನು ಬೇಟೆಯಾಡಿ ಅವುಗಳನ್ನು ಲಂಗರಿಗೆ ತೂಗುಹಾಕಿಕೊಂಡು, ತನ್ನ ಇಂದಿನ ಜನ್ಮದಿನದಂದು,  ಹಿಡಿದು ತರುತ್ತಿರುವ ಅಮೇರಿಕೆಯ ಅತ್ಯುತ್ತಮ ಸಣ್ಣ ಕತೆಗಾರ ಅರ್ನೆಸ್ಟ್ ಹೆಮಿಂಗ್ವೇ, …ಸಾಆಆಆರಿ! ಇಲ್ಲಿ ಆ ಹೆಸರು ಹಿಡಿದು ಯಾರೂ ಕರೆಯುವುದಿಲ್ಲ…ಅವನಿಗೆ ಇಡೀ ಅಮೇರಿಕೆ ಸಹಿತ ವೆಸ್ಟರ್ನ್ ವರ್ಲ್ಡ್ ಪ್ರೀತಿಯಿಂದ `ಪಾಪಾ’ ಎನ್ನುತ್ತದೆ.  ಅದೇ `ಪಾಪಾ’ ನನಗೆ ಎದುರಾಗುವುದನ್ನು ಎದುರು ನೋಡುತ್ತ ಸಾಗುತ್ತಿರುವೆ.

“ಪುಸ್ತಕದಂತಹ ನಿಷ್ಠಾವಂತ ಗೆಳೆಯ ಮತ್ತೊಬ್ಬನಿಲ್ಲ” ಎಂದು ಹೇಳಿದ್ದ ಈತ 1954ರಲ್ಲಿ ತನಗೆ ನೀಡಿದ ನೋಬೆಲ್ ಪ್ರೈಜ್ ಸ್ವೀಕರಿಸಿ ಆಡಿದ ಮಾತು `Writing, at its best, is a lonely life’ …ಲೇಖಕನ ಬದುಕನ್ನೇ ನುಂಗುವ ಪರಿಯ ಅನುಭವದ ಮಾತಾಗಿತ್ತದು. ನಾಲ್ಕು ಹೆಂಡಿರ ಗಂಡನ ಒಂಟಿತನದ ಮಾತಿಗೆ ಬೆರಗಾಗಿದ್ದೆ. ಒಂಟಿತನ ಎಲ್ಲಿ? `ಆತನ ಮೇರುತನದಲ್ಲಿ, ಆತ ಒಬ್ಬನೇ ಇರುವ ಎತ್ತರದಲ್ಲಿ’ ಅಂತಲೂ ಅರ್ಥೈಸಬಹುದಲ್ಲವೇ?

 ಅದೇ ಹೆಮಿಂಗ್ವೆಯ ತಾಣ ನೋಡಲು ಜೋರಾಗಿ ವೇಗವಾಗಿ ಹೋಗೋಣವೆಂದರೆ ಕೇವಲ ತಾಸಿಗೆ ಐವತ್ತೈದು ಮೈಲಿ ವೇಗವಷ್ಟೇ ಸಾಗಬೇಕು! ಅದು ಇಲ್ಲಿನ `ಲಾ’… ಅದನ್ನುಇಲ್ಲಿ  ಮುರಿಯುವ ಹಾಗಿಲ್ಲ…

…ಇಲ್ಲಿ ರಸ್ತೆಯ ಎಡಬಲಕ್ಕೆ ಹುಲ್ಲಿನಂಚುಗಳಲ್ಲಿ,… ಕಲ್ಲುಚಪ್ಪಡಿಗಳ ಮೇಲೆ…ಬದಿಯಲ್ಲಿ ಜೊತೆಗೆ ಬರುತ್ತಿರುವ ಮ್ಯಾಂಗ್ರೋವ್ ಮರಗಳಲ್ಲಿ ಬೀಡು ಬಿಟ್ಟಿರುವ ಇಗ್ವಾನಾಗಳ ಕೆಮೋಫ್ಲೇಜ್ ಬಣ್ಣಗಳಂತೆ ಕ್ಷಣ ಕ್ಷಣಕ್ಕೂ ಬಣ್ಣ ಬದಲಿಸುವ ಶರಧಿಗಳ ಸಂಗದಲ್ಲಿ ಸಾಗುತ್ತಿದೆ ದಾರಿ. …ನೇರ ಬಿಟ್ಟ ಬಾಣದಂತೆ! ಹತ್ತಾರು ಪುಟ್ಟ ಪುಟ್ಟ ಹಸಿರು ಹೊದ್ದ ಐಲೆಂಡ್ ಗಳು ಅಲ್ಲಲ್ಲಿ ಮಲಗಿದಂತೆ ತೋರುತ್ತಿವೆ. ಈ ನಡುವೆ ಭೂಮಿ ಅಗಲವಿರುವಲ್ಲಿ ರಸ್ತೆಯ ಬದಿಗೇ ಬೇಲಿಯಾಚೆ ಹತ್ತಾರು ವಿಮಾನಗಳ ಹಿಂಡು! ಎಂತಹ ಹುಚ್ಚು ಅಂತೀರಿ…ಒಂದೊಂದು ಕಂಪೌಂಡಿನೊಳಗೆ ಸುಮಾರು ಹತ್ತಿಪ್ಪತ್ತು ಸಣ್ಣ ಸಣ್ಣ ವಿಮಾನಗಳು! ಇಂತಹ ಹಲವಾರು ಕಂಪೌಂಡುಗಳು ಕಣ್ಣಿಗೆ ವಿಸ್ಮಯ  ಮೂಡಿಸುತ್ತವೆ. ಏವಿಯೇಶನ್ ಮಜಾ ಉಡಾಯಿಸಲು…ಪೈಲೆಟ್ ಕೋರ್ಸ ಕಲಿಯಲು!  ಇಲ್ಲವೇ ಸಮೀಪದ ವಿಮಾನದೊಡೆಯರ ಶೌಖಿಗಾಗಿ ಕೊಂಡ ವಿಮಾನಗಳು ಅವು.

ನಮ್ಮೊಡನೆ ರಸ್ತೆಯಲ್ಲಿ ಚಲಿಸುವ ಕಾರುಗಳಲ್ಲಿ ಹತ್ತರಲ್ಲಿ ಎರಡು ಕಾರುಗಳು ತಮ್ಮ ತಮ್ಮ ಮನೆಯ ದೋಣಿಯನ್ನು ಟೋ ಮಾಡಿಕೊಂಡು ಸಾಗುತ್ತಿವೆ…ಆಳ ಸಮುದ್ರ ತೀರಗಳಲ್ಲಿ ರಜಾ ಉಡಾಯಿಸಲು ಇಲ್ಲಿ ಬಹುತೇಕರು ಸ್ವಂತ ದೋಣಿಯೊಂದನ್ನು ವೀಕೆಂಡಿಗೆ ಟೋ ಮಾಡಿಕೊಂಡು ತರುತ್ತಾರೆ. ಸುಮಾರು ಐದಾರು ತಾಸು ಹೀಗೆ ಚಲಿಸಿದ ಫಲವೇ ಎದುರೇ ಅಂದರೆ ಎದುರೇ ಕೀ ವೆಸ್ಟ್ ಎಂಬ ಅದ್ಭುತವಾದ ಅಮೇರಿಕೆಯ ಕಟ್ಟ ಕಡೆಯ ಸುಂದರ ದ್ವೀಪವೊಂದರ ಅಂಗೈಯಲ್ಲಿದ್ದೆವು.  ನಾವೀಗ ಅಮೇರಿಕೆಯ ಮೊತ್ತ ಮೊದಲ ಹೆದ್ದಾರಿ ರಸ್ತೆ ನಂ 1 ರ ಜೀರೋದ ಆಚೆಗೆ ಇದ್ದೇವೆ. ಅದರಾಚೆ ನೀರಿದೆ. ಭೂಮಿಯಿಲ್ಲ. ಬರೀ ಸಾಗರವಿದೆ. ಇನ್ನೂ ಆಚೆ ತೇಲಿದರೆ ಕೇವಲ ತೊಂಭತ್ತು ಮೈಲಿಯಾಚೆ `ಕ್ಯೂಬಾ’ ಎಂಬ ಜಗತ್ತಿದೆ. ಬಹಾಮಾ ಮತ್ತಿತರ ವೆಸ್ಟ್ ಇಂಡೀಸಿನ ದ್ವೀಪಗಳು ಇನ್ನಷ್ಟು ಕಾಲೆತ್ತಿ ನೋಡಿದರೆ ಕಂಡರೂ ಕಂಡಾವು.  ಗಮನಿಸಿ …ದಕ್ಷಿಣ ಅಮೇರಿಕೆ ಎಂಬ ಖಂಡದಲ್ಲಿ ಅರವತ್ತೆಪ್ಪತ್ತು ಕಿಮೀ ಅಗಲದೊಂದಿಗೆ ಸಾವಿರ ಸಾವಿರ ಕಿಮೀ ಹರಿವ ಆಮೆಝಾನ್ ನದಿಗೆ ತಲುಪಲು ಒಂದು ತಾಸಿನ ಹಾರಾಟದ ದೂರದಲ್ಲಿದ್ದೆವು ಅನ್ನುವುದೇ ಒಂದು ಥ್ರಿಲ್.

ಬಲು ಸುಂದರ ಬಲು ಸುಂದರ ದ್ವೀಪ, ಕೀ ವೆಸ್ಟ್. ಅದರ ಬಗ್ಗೆ ಮತ್ತೆ ಹೇಳುವೆ. ಆದರೆ ನಾನೀಗ ನಡೆದಿರುವುದು118ನೆಯ ಹುಟ್ಟುಹಬ್ಬವನ್ನಾಚರಿಸಿಕೊಳ್ಳುತ್ತಿರುವ ಜಗತ್ತಿನ ಸಣ್ಣ ಕತೆಗಳ ಸರದಾರನೆಂದೇ ಕರೆಸಿಕೊಳ್ಳುತ್ತಿರುವ ನೊಬೆಲ್ ಪುರಸ್ಕೃತ ಕತೆಗಾರ `ಪಾಪಾ’ ಅರ್ನೆಸ್ಟ್ ಹೆಮಿಂಗ್ವೇ ನಡೆದಾಡಿದ ಜಾಗಕ್ಕೆ… ಏಕಾಂತವೊಂದರಲ್ಲಿ ಕುಳಿತು ತನ್ನ ಅನುಭವಗಳನ್ನು ಕಲ್ಪನೆಗಳೊಂದಿಗೆ ಹಿಂಡಿ  ಕಾದಂಬರಿ, ಸಣ್ಣಕತೆಗಳನ್ನು ಹೆಣೆದ ಅವನ ಮನೆಯ ತಾಣಕ್ಕೆ….

ತನ್ನ ಹುಟ್ಟೂರು ಇಲಿನಾಯಿಸ್ ದ ಓಕ್ ಪಾರ್ಕದಲ್ಲಿದ್ದ ತನ್ನ ಅಪ್ಪ ಕೂಡ ಜನಪ್ರಿಯ ವೈದ್ಯನಾಗಿದ್ದು, ತೀರ ಬದುಕು ದುರ್ಭರವೆನಿಸಿ ಹಣಕಾಸಿನ ಅಡಚಣೆಯಲ್ಲಿ ನಲುಗುತ್ತಿದ್ದ ಅಪ್ಪನಿಗೆ ಬರೆದಿದ್ದ, `ನೀನೇನೂ ಚಿಂತಿಸಬೇಡ, ಪಪ್ಪಾ, ಹಣಕಾಸಿನ ವ್ಯವಸ್ಥೆ ನಾನು ಮಾಡುವೆ, ಧೈರ್ಯಗೆಡಬೇಡ’ ಎಂದು ಯುದ್ಧದ ಎಫೆಕ್ಟನಲ್ಲಿ ಬರಿಗೈಯಾದ ಸಂದರ್ಭದಲ್ಲಿ ತಾನು ಧೈರ್ಯ ಹೇಳಿ ಪತ್ರ ಬರೆದಿದ್ದ, ಆ ಪತ್ರ ಅಪ್ಪ ಬಂದೂಕಿನಿಂದ ತಲೆಗೆ ಗುರಿಯಿಟ್ಟು ಅದುಮಿಕೊಂಡ ಕೆಲ ನಿಮಿಷಗಳಲ್ಲೇ ತಲುಪಿತ್ತು. ಅದೇ ಅಪ್ಪನ ಸಾವು ಹೆಮಿಂಗ್ವೆಯನ್ನು ಅಗಾಗ ಕಾಡುವಾಗ ಕಾಲುಗಳು `ಸ್ಲೋಪಿ ಜೋ’ ಬಾರಿನೆಡೆಗೆ ಕರೆದೊಯ್ಯುತ್ತಿದ್ದವು…ಹಾಂ…ಅದೇ `ಸ್ಲೋಪಿ ಜೋ’ ನಲ್ಲಿ ನಡೆಯುತ್ತಿದೆ ಅವನಂತೆಯೇ ಕಾಣುವ, `ಹೆಮಿಂಗ್ವೆ ಲುಕ್ ಅಲೈಕ್’ ಸ್ಪರ್ಧೆ. ಅಲ್ಲಿಗೆ ಧಾವಿಸುತ್ತಿರುವೆ ಅದನ್ನೇ ಕಣ್ದುಂಬಲು…ಅರೆ! ಬಾರಿನ ತುಂಬ ಹೆಮಿಂಗ್ವೆ ತರಹ ಕಾಣುವ ಮುಖಗಳೇ ಬಂದು ತುಂಬಿಕೊಂಡಿವೆ. ಓಹ್! ಎಷ್ಟೊಂದು ಪ್ರೀತಿಸುತ್ತಾರೆ ಇವರೆಲ್ಲ `ಪಾಪಾ’ ಎಂಬ ಈ ಮಾನವೀಯ ಬರಹಗಾರನನ್ನು!

`For Whom The Bell Tolls’. `A Farewell to Arms’ ಸ್ವತಃ ಯುದ್ಧದಲ್ಲಿ ಭಾಗವಹಿಸಿ ಅಲ್ಲಿನ ಹಿಂಸೆ, ಬರ್ಬರತೆಗಳನ್ನು ಖುದ್ದು ಅನುಭವಿಸಿ ಬರೆದ ಕಾದಂಬರಿಗಳಿವು… ಚಿತ್ರಹಿಂಸೆ, ಯುದ್ಧ ಮನಸ್ಥಿತಿಯವರಿಗೆ ಮಾನವೀಯತೆಯ ಕರೆಯ ಕೂಗಿದೆ ಅಲ್ಲಿ …ಇದು ಕೇಳದಿದ್ದರೆ ನಾವು ಕಿವುಡರೇನೋ ಎಂಬ ಸಂಶಯ ನಮಗೇ ಬಂದೀತು….. `For what are we born, if not to aid one another?’ ಎಂದೆನ್ನುವ ಅವನ ಮಾನವೀಯ ದನಿ ಬಲು ಆಳ ಚಿಂತನೆಗೆ ಹಚ್ಚುತ್ತದೆ. ಇದನ್ನೇ ಹಾಡಿದ್ದನಲ್ಲವೇ ರಾಜಕಪೂರ…`ಕಿಸೀ ಕಾ ದರ್ದ್ ಮಿಲ್ ಸಕೇ ತೋ, ಲೇ ಉಧಾರ…ಜೀನಾ ಇಸೀ ಕಾ ನಾಮ್ ಹೈ’ ಎಂಥ ಜೀವನದೃಷ್ಟಿಗಳು!

ಯಾರೇ ಇರಲಿ. ಇಡೀ ಜೀವನದಲ್ಲಿ ಒಂದು ಕ್ಲಾಸಿಕ್ ಬರೆದಾರು. ಆದರೆ ಹೆಮಿಂಗ್ವೆ ಮಾತ್ರ ಬರೆದದ್ದೆಲ್ಲ ಕ್ಲಾಸಿಕ್! ಒಂದರ ಹಿಂದೊಂದು ಕ್ಲಾಸಿಕ್ ಗಳು. ಇನ್ನೂ ಅಮೇರಿಕೆಯ ಅತ್ಯಂತ ಬೆಸ್ಟ ಸೆಲರ್ಸ್ ಗಳಲ್ಲಿ ಗುಣಿತವಾಗುತ್ತವೆ. The Old Man And The Sea’ ಬಹುತೇಕರು ಓದಿರಬಹುದು. ಸ್ಯಾಂಟಿಯಾಗೋ ಎಂಬ ಕ್ಯೂಬನ್ ವೃದ್ಧ ಮೀನುಗಾರನೊಬ್ಬ ಸತತ ಎಂಭತ್ನಾಲ್ಕು ದಿನ ಮೀನು ಸಿಗದೇ, ಸಂಗಾತಿಗಳೆಲ್ಲ ಕಟ್ಟಕಡೆಯ  ಅದೃಷ್ಟಹೀನ ಎಂಬ ಅರ್ಥೈಸಬಹುದಾದ `ಸಲಾವ್’ ಪಟ್ಟ ನೀಡಿ ಅವನನ್ನು ತೊರೆದಾಗ ಈತ ವಿಶಾಲ ಸಾಗರದಲ್ಲಿ ಒಬ್ಬಂಟಿ.  ಎಂಭತ್ತೈದನೇ ದಿನ ಸಾಗರದಾಳದಲ್ಲಿ ಬಹು ಬೆಲೆಬಾಳುವ ಮರ್ಲಿನ್ ಎಂಬ ದೊಡ್ಡ ದೈತ್ಯ ಮೀನೊಂದನ್ನು ಹಿಡಿದು, ಹೋರಾಡಿ, ಅದು ತನ್ನನ್ನೇ ಎಳೆದೊಯ್ಯುವಾಗ ಜರ್ಜರಿತನಾಗಿ, ಗಾಯಗೊಂಡು ಒಬ್ಬಂಟಿಯಾಗಿ ಹಿಡಿದು ತರುವ ವೃದ್ಧನ ಸಾಹಸ!

ಶಾರ್ಕಗಳಿಗೆ ಮರ್ಲಿನ್ ರಕ್ತದ ರುಚಿ ಸೋರಿ ದೋಣಿಗೆ ಗಂಟುಬಿದ್ದು, ಒಂದೊಂದು ತುಂಡನ್ನು ಅಪಹರಿಸುತ್ತಿದ್ದಾಗ, ಈತ ತನ್ನೆಲ್ಲ ಶಕ್ತಿ ಯುಕ್ತಿ ಬಳಸಿ ಅವುಗಳನ್ನು ನಡುಗುವ ಕೈಗಳಲ್ಲಿ ಕೊಲ್ಲಲು ಪ್ರಯತ್ನಿಸುವ ಸಾಹಸಗಳು. ಕಳೆದುಕೊಳ್ಳುವ ಆಯುಧಗಳು, ಅಗಾಧ ಶರಧಿಯ ಮುಂದೆ ವೃದ್ಧ ಹುಲುಮಾನವ. ಆದರೂ ಹೆಮಿಂಗ್ವೆ ಹೇಳುತ್ತಾನೆ,… `Courage is grace under pressure’, ವೃದ್ಧ ಈಗ ಜಯಿಸುತ್ತಾನೆ. ಇಡೀ ರಾತ್ರಿ `ಮರ್ಲಿನ್’ ಮೀನನ್ನು ಎಳೆದು ತರುತ್ತಿರುವಾಗ ತಾನೆಷ್ಟು ಗಳಿಸಬಹುದು, ಎಷ್ಟು ಸಂಜೆಗಳನ್ನು ಹಿತವಾಗಿಸಿಕೊಳ್ಳಬಹುದು ಎಂದು ಕನಸಿನ ಕಣ್ಣುಗಳಲ್ಲಿ ತೇಲುತ್ತ ಬಂದವನಿವ… ಬೆಳಗು ದಡಕ್ಕೆ ಬಂದು ತಲುಪಿ ಮನೆಗೆ ಹೋಗಿ ನಿದ್ರೆಗೆ ಜಾರುತ್ತಾನೆ. ಇಲ್ಲಿ ದೋಣಿಗೆ ಕಟ್ಟಿದ ಮರ್ಲಿನ್ನಿನ ಎಲುವು ಹಂದರ ಮಾತ್ರ! ಎಲ್ಲವೂ ಕೃತಕತೆ ಇಲ್ಲದ ಅದೇ ನಿಸರ್ಗ ಸಹಜ ಚಿತ್ರಣ… ಹೌದು…ಹೆಮಿಂಗ್ವೆ ಗೆಲ್ಲುವುದೇ ಹಾಗೆ…

ಇದೇ ಕತೆಯ `ಓಲ್ಡ್ ಮ್ಯಾನ್ ಆಂಡ್ ದಿ ಸೀ’ ಕೃತಿಯನ್ನು ಪ್ರಕಟಿಸಿದ `ಲೈಫ್’ ಮ್ಯಾಗಜಿನ್ನಿನ ಐವತ್ತು ಲಕ್ಷ ಪ್ರತಿಗಳು ಎರಡು ದಿನಗಳಲ್ಲಿ ಮಾರಾಟವಾಗಿದ್ದವೆಂದರೆ ಅದೂ 1952ರಲ್ಲಿ!. ಅವನ ಜನಪ್ರಿಯತೆಗೆ ಇನ್ನೇನು ಸಾಕ್ಷಿ ಬೇಕು. ನೋಬೆಲ್ ಕಣ್ಣಿಗೂ ಬಿತ್ತು. ಅದರಲ್ಲಿ ನೆಟ್ಟ ಅವರ ಕಣ್ಣು ಕೀಳಲೇ ಇಲ್ಲ. ನೂರಾ ಇಪ್ಪತ್ತೇಳು ಪುಟದ ಪುಸ್ತಕ ನೋಬೆಲ್ ಧರಿಸಿತ್ತು! `The Sun Also Rises’ , `A Movable Feast’ , `The Short Stories of Ernest Hemingway’ ಇನ್ನೂ ಮುಂತಾದ ಬರಹಗಳಿಂದ ಜಗತ್ತಿನ ಕಣ್ಮಣಿಯಾಗಿದ್ದ ಹೆಮಿಂಗ್ವೇ…

ಸುಂದರ ಬಾಲ್ಯದ ದಿನಗಳು ಅವನವು….ಅಪ್ಪ ಹೆಸರಾಂತ, ಜನಪ್ರಿಯ ಡಾಕ್ಟರು, ತಾಯಿ ಸಂಗೀತಗಾರ್ತಿಯ ಆಪ್ತತೆಯಲ್ಲಿ ಬೆಳೆದ. ಮೊದಲ ಮಹಾಯುದ್ಧದಷ್ಟೊತ್ತಿನಲ್ಲಿ ರೆಡ್ ಕ್ರಾಸಿನ ಸೇವೆಗೆ ಆಯ್ಕೆಯಾಗಿ ಇಟಲಿಯ ಯುದ್ಧಭೂಮಿಯಲ್ಲಿ ಅಂಬ್ಯುಲೆನ್ಸ್ ಡ್ರೈವರನಾಗಿ ಸೇವೆಗೆ ಸೇರಿದ. ಹೀಗಿರುವಾಗ ಅದೊಂದು ದಿನ ಗಾಯಗೊಂಡ ಸೈನಿಕನೊಬ್ಬನನ್ನು ಹೊತ್ತಾಗ ಮಾರಣಾಂತಿಕವಾಗಿ ಗಾಯಗೊಂಡು ಅಂತೂ ಬದುಕುಳಿದಿದ್ದ.  ನಂತರ ಒಂದೆರೆಡು ಪತ್ರಿಕಾ ಹುದ್ದೆಗಳಲ್ಲಿ ಬರವಣಿಗೆಗೆ ಅಂಟಿಕೊಂಡ.

ನೂರು ವರ್ಷಗಳ ನಂತರವೂ ಅವನ ಬರಹಗಳು ಇನ್ನೂ ಮರ್ಲಿನ್ನಿನಂತೆ (ನಮ್ಮಲ್ಲಿ…ಬಿಸಿ ದೋಸೆಯಂತೆ) ಮಾರಾಟವಾಗುತ್ತವೆ.  ತನ್ನ ಜನಪ್ರಿಯತೆಗೆ ಕಾರಣ ಕೇಳಿದರೆ… ಎಷ್ಟೊಂದು ಸಲೀಸಾಗಿ ಹೇಳುತ್ತಿದ್ದ ಹೆಮಿಂಗ್ವೇ. “ಅದರಲ್ಲೇನಿದೆ….`There is nothing to writing, all you do is sit down at a typewriter and bleed” …ಪ್ರತಿಭಾನ್ವಿತನೆನ್ನಲೇಬೇಕು ಅಲ್ಲವೇ?

`ಪ್ರತಿಯೊಬ್ಬರ ಅಂತ್ಯವೂ ಒಂದೇ ಆಗಿರುತ್ತದೆ, ಆದರೆ ಬದುಕಿದ ಹಾಗೂ ಸತ್ತ ರೀತಿಗಳು ಭಿನ್ನವಾಗಿರುತ್ತವೆ’ ಎನ್ನುತ್ತಲೇ, `Happiness in intellegent people is the rarest thing I know’ ಎನ್ನುತ್ತ  ಸಾಮಾನ್ಯ ಬದುಕಿನಲ್ಲೇ ಶ್ರೇಷ್ಠತೆಯು ಅಡಗಿದೆ ಎನ್ನುವತ್ತ ತನ್ನ ದೃಷ್ಟಿಕೋಣ ಮೆರೆದ ಹೆಮಿಂಗ್ವೇ ಇದೇ `ಕೀವೆಸ್ಟ್’ ನ `ಸ್ಲೋಪಿ ಜೋ’ ಬಾರಿನಲ್ಲಿ ಕುಳಿತು ಸಾಮಾನ್ಯರೊಂದಿಗೆ ದಿನವೂ ಮದಿರೆ ಕುಡಿಯುತ್ತಿದ್ದ.

ಅವನು ಕುಡಿದ ಆ ಮದಿರೆ ಇಂದು `ಹೆಮಿಂಗ್ವೆ ಡ್ರಿಂಕ್ಸ್’ ಎಂದೇ ಈ ಬಾರಿನಲ್ಲಿ ಈಗಲೂ ವಿಶೇಷ ಪೇಯವಾಗಿ ಸಿಗುತ್ತದೆ. ಅಮೇರಿಕೆಯಲ್ಲಿ ದಶಕಗಳ ಕಾಲ ಹೆಮಿಂಗ್ವೆ ತರಹ ಕಾಣುವ ವ್ಯಕ್ತಿಗಳ ಸ್ಪರ್ಧೆ ನಡೆಯುತ್ತಿತ್ತು. 2005 ರವರೆಗೆ ನಡೆದ ಇದು ಈಗ ಕೀವೆಸ್ಟಗೆ ಮಾತ್ರ ಸೀಮಿತವಾಗಿದೆ. ಈಗ ನಾನು ಹೋದ ವರ್ಷದ ಲುಕ್ ಅಲೈಕ್ ಫೈನಲಿಸ್ಟನೊಂದಿಗಿದ್ದೆ. ಅರ್ನೆಸ್ಟ್ ಮಿಲರ್ ಹೆಮಿಂಗ್ವೆ ದಿನವೂ ಕಳೆಯುತ್ತಿದ್ದ ಅದೇ `ಸ್ಲೋಪಿ ಜೋ’ ಬಾರಿನ ಬಾಗಿಲಲ್ಲೇ ನನಗೆ ಈ ಹೆಮಿಂಗ್ವೆ  ಫೈನಲಿಸ್ಟ್ ಸಿಕ್ಕಿದ್ದು. ಅವನ ಕೊರಳಲ್ಲಿ ಲುಕ್ ಅಲೈಕ್ ಪದಕ ಗಮನಿಸಿ.  ಅಲ್ಲಿ ಒಳಗೆ ಹೋದರೆ ಕೂಡಲು ಜಾಗವಿಲ್ಲದಷ್ಟು ಲುಕ್ ಅಲೈಕಗಳೇ…ವಾಹ್! ಹೆಮಿಂಗ್ವೆ. ಆ ನಿನ್ನ ಮೋಡಿಯ ಲೇಖನಿಗೆ ಶರಣೆಂದೆ `ಪಾಪಾ’…

ಈ ವಾರವೆಲ್ಲ ಹೆಮಿಂಗ್ವೆ ಜನ್ಮದಿನದಾಚರಣೆ. 21ನೆಯ ಜುಲೈದಿಂದ 28ರವರೆಗೆ ಹೆಮಿಂಗ್ವೆ ಹಬ್ಬ ನಡೆದಿತ್ತು. ಅದರಲ್ಲೇ ಪಾಲ್ಗೊಳ್ಳಲೆಂದೇ ಕೀವೆಸ್ಟ ಗೆ ಪ್ರಯಾಣಿಸಿದ್ದೆವು. ಇಡೀ ಕೀವೆಸ್ಟ ಎಂಬ ದ್ವೀಪ ಹೆಮಿಂಗ್ವೆ ನೆನಪಿನಲ್ಲಿ ಮದುಮಗಳಂತೆ ಸಿಂಗರಿಸಿಕೊಂಡಿತ್ತು. ಇಡೀ ಊರು ಹಬ್ಬ ಆಚರಿಸುತ್ತಿತ್ತು. ಅದೊಂದು ಅವನ ನೆನಪಿನ ಜಾತ್ರೆ. …ಅಮೇರಿಕೆಯ ಜೀರೋ ಮೈಲಿನ ಆಚೆ ತುತ್ತ ತುದಿಯ ಮನೆಯಲ್ಲಿ ಸಾಗರ ಭೋರ್ಗರೆತಗಳನ್ನು ಕೇಳುತ್ತಲೇ ಕತೆಗಳು, ಕಾದಂಬರಿಗಳು ರೂಪುಗೊಳ್ಳುತ್ತಿದ್ದವು. `ಗ್ರೀನ್ ಹಿಲ್ಸ್ ಆಫ್ ಆಫ್ರಿಕಾ’ ಡೆತ್ ಇನ್ ದಿ ಆಫ್ಟರನೂನ್’, `ಟು ಹ್ಯಾವ್ ಆಂಡ್ ಹ್ಯಾವ್ ನಾಟ್’, ಅದೇಕೆ `ಎ ಫೇರ್ ವೆಲ್ ಟು ಆರ್ಮ್ಸ್’ ಕಾದಂಬರಿಯನ್ನು ಹದಿನೇಳು ಸರ್ತಿ ತನಗೆ ಸಂತೃಪ್ತಿಯಾಗುವವರೆಗೂ ತಿದ್ದಿ ತಿದ್ದಿ ಮರುಬರೆದದ್ದುಇದೇ ಕೀವೆಸ್ಟಿನ  ತನ್ನ ಮನೆಯಲ್ಲಿ.

ಅದೇನೋ ಹೇಳಿದ್ದನಲ್ಲ? ಹಾಂ… `The masters of the short story come to no good end’ ಎಂದು ಸಣ್ಣ ಕತೆಗಾರರ ಕುರಿತು ಬರೆಯುತ್ತಲೇ ಕೊನೆಗೆ ತಾನೂ ಕೈಯಲ್ಲಿ ಬಂದೂಕು ಎತ್ತಿಕೊಂಡು ಅಪ್ಪನಂತುಹದೇ ಕೃತ್ಯಕ್ಕೆ ಈಡಾಗಿದ್ದು ವಿಧಿಯ ವಿಲಾಸವೆನ್ನಬೇಕೇನೋ.

ಅದೇ ಕೀವೆಸ್ಟನ ಹೆಮಿಂಗ್ವೆ ತುಂಬ ಪ್ರೀತಿಸುತ್ತಿದ್ದ ಅವನ ಮನೆಯ ಮುಂದೆ ನಿಂತಿದ್ದೇನೆ!

ಸಂಜೆ ಐದಾಗಿಬಿಟ್ಟಿತ್ತು…ಒಳಗೆ ಪ್ರವೇಶಿಸುವ ವೇಳೆ …ಜಸ್ಟ್ ಕ್ಲೋಸ್ಡ್!

ಹೌದು…ಹೆಮಿಂಗ್ವೆ ಗೆಲ್ಲುವುದೇ ಹಾಗೆ!

 

11 Comments

 1. N.Ramesh Kamath
  August 1, 2017
 2. kvtirumalesh
  July 31, 2017
  • ಲಕ್ಷ್ಮೀಕಾಂತ ಇಟ್ನಾಳ
   July 31, 2017
 3. Anonymous
  July 31, 2017
  • ಲಕ್ಷ್ಮೀಕಾಂತ ಇಟ್ನಾಳ
   July 31, 2017
   • ಲಕ್ಷ್ಮೀಕಾಂತ ಇಟ್ನಾಳ
    July 31, 2017
 4. chandra aithal
  July 30, 2017
  • ಲಕ್ಷ್ಮೀಕಾಂತ ಇಟ್ನಾಳ
   July 31, 2017
   • ಲಕ್ಷ್ಮೀಕಾಂತ ಇಟ್ನಾಳ
    July 31, 2017
    • Anonymous
     August 1, 2017
     • ಲಕ್ಷ್ಮೀಕಾಂತ ಇಟ್ನಾಳ
      August 1, 2017

Add Comment