Quantcast

ಭಟ್ಟರ ‘ಮುಗುಳು ನಗೆ’

ಮುಗುಳು ನಗೆಯೆಂಬ ಭಟ್ಟರ ಸಾಹಿತ್ಯವು!

ಸದಾಶಿವ ಸೊರಟೂರು 

ನಿನ್ನೆಯಿಂದ ಮನಸ್ಸು ಬಿಡದಂತೆ ಅವೇ ಸಾಲುಗಳನ್ನು ಗುನುಗುತ್ತಿದೆ.

ಯಾವಾಗಲೂ ಯಾವ ಹಾಡು ಕೂಡ ನನ್ನನ್ನು ಇಷ್ಟರಮಟ್ಟಿಗೆ ಕಾಡಿರಲಿಲ್ಲ. ಇಲ್ಲ ಸಾಧ್ಯವೇ ಇಲ್ಲ ನೀವು ಸುಳ್ಳು ಹೇಳುತ್ತೀರಿ ಅಂದರೆ ಇರಬಹುದೇನೋ! ಆದರೆ ನಾನು ನನ್ನ ಮನಸ್ಸಿಗೆ ಯಾವತ್ತೂ ಸುಳ್ಳು ಹೇಳಿಕೊಂಡಿದ್ದಿಲ್ಲ.

‘ಮುಂಗಾರು ಮಳೆ’ ಯಲ್ಲಿ ಹನಿಗಳ ಲೀಲೆಯ ಹಾಡು ಹಾಗೆ ಮೋಡದಂತೆ ತೇಲಿಸಿಕೊಂಡು ಹೋಗಿತ್ತು ಅಷ್ಟೇ! ಹಳೆ ಪೇಪರ್, ಕ್ವಾಟರ್ ಬಾಟ್ಲು, ಎಣ್ಣೆ ಹೊಡೆದ ಮಕ್ಳು, ಬೋರ್ಡ್ ಇಲ್ಲದ ಬಸ್ಸು ಇಂತಹ ರಸ್ತೆ ಬದಿಯ ಪಕ್ಕಾ ಲೋಕಲ್ ಶೈಲಿ ತಿನಿಸಿ ಐಟಮ್ ಅನ್ನು ಫೈವ್ ಸ್ಟಾರ್ ಹೋಟೆಲ್ ರೇಂಜ್ ಗೆ ಕೊಟ್ಟ ಆ ಪೆನ್ನಿನ ಇಂಕು ಸಡನ್ ಆಗಿ ‘ಅಳುವೊಂದು ಬೇಕು ನನಗೆ, ಅರೆ ಗಳಿಗೆ ಹೋಗು ಹೊರಗೆ….’ ಅಂತ ತನ್ನಷ್ಟಕ್ಕೆ ತಾನು ಬರೆದುಕೊಂಡಿದ್ದಾದರೂ ಹೇಗೆ? ಅದೇ ಅಲ್ಲವೇ ಬರೆಯುವವರ ತಾಕತ್ತು? ಕವಿ ಏನಾದರೂ ಆಗಬಲ್ಲ. ಕಟ್ಟಬಲ್ಲ, ಕೆಡವಬಲ್ಲ ಅಲ್ಲವೇ? ಆದರೆ ಅವರನ್ನು ಕವಿಯೆಂದು ಒಪ್ಪಿಕೊಂಡಿರುವುದಾದರೂ ಯಾರು? ಕರೆದಿರುವುದಾದರೂ ಯಾರು?

ಮೂರು ಸಾಲು ಗೀಚಿ, ಎರಡು ಕಥೆ ಬರೆದು ಕವಿ ಎನ್ನಿಸಿಕೊಂಡು, ಪ್ರಶಸ್ತಿಗಳನ್ನು ಬಾಚಿಕೊಂಡ ಸ್ವಘೋಷಿತ ಸಾಹಿತಿಗಳ ಮಧ್ಯೆ ಯೋಗರಾಜ್ ಭಟ್‍ರವರು ಕವಿಯಾಗುವುದಿಲ್ಲವೇ? ನಮ್ಮ ಸಾಹಿತ್ಯ ಲೋಕ ಸಿನೆಮಾದವರನ್ನು ಕವಿಗಳೆಂದು, ಸಾಹಿತಿಗಳೆಂದು ಒಪ್ಪಿಕೊಳ್ಳುವುದೇ ಇಲ್ಲ ಬಹುತೇಕ ಬಾರಿ!

ಹಂಸಲೇಖ ಅವರದು ಅದ್ಭುತ ಸಾಹಿತ್ಯ. ಅವರನ್ನು ಒಬ್ಬ ಸಾಹಿತಿಯೆಂದು ಕರೆಯುವುದೇ ಇಲ್ಲ. ಚಿತ್ರಸಾಹಿತಿ ಎಂದು ಕೋಟ್ ಮಾಡುತ್ತೇವೆ. ಸಾಹಿತ್ಯವಲಯದ ಪ್ರಶಸ್ತಿಗಳು ಅವರಿಗೆ ಸಿಗುವುದೇ ಇಲ್ಲ ಯಾಕೆ ಅವರು ಸಾಹಿತಿಗಳು ಅಲ್ಲ ಅಂತ ಅಲ್ಲವೇ?

ಮೊನ್ನೆ ಒಮ್ಮೆ ಹೀಗೆ ಆಯ್ತು. ವೇದಿಕೆ ಮೆಲೆ ಜಯಂತ್ ಕಾಯ್ಕಿಣಿಯವರ ಬಗ್ಗೆ ಮಾತಾಡುತ್ತಿದವರು ಸಿನೆಮಾಗಳಿಗೆ ಹಾಡು ಬರೆದಂತಹ ಜಯಂತ್ ಕಾಯ್ಕಿಣಿ ಅಂತಲೇ ಪರಿಚಯ ಮಾಡುತ್ತಿದ್ದರು. ಸಿನೆಮಾ ಹಾಡುಗಳಿಗಿಂತ ಹತ್ತುಪಟ್ಟು ಬೇರೆ ಸಾಹಿತ್ಯ ಬರೆದಿರುವುದು ಅವರಿಗೆ ಗೊತ್ತೇ ಅಲ್ಲ. ಅವರ ‘ಬೊಗಸೆಯಲ್ಲಿ ಮಳೆ’ ಅದೆಷ್ಟು ಬೇಜಾರುಪಟ್ಟುಕೊಂಡಿತೊ! ಕಲ್ಲು, ಮಣ್ಣು, ಹೂ, ಗಾಳಿ ಪದಗಳ ಜೊತೆಗೆ ಅರ್ಥವಾಗದ ಕಲ್ಪನೆ ಇಟ್ಟುಕೊಂಡು, ಸಾಂಕೇತಿಕವಾಗಿ ಏನನ್ನೋ ಹೇಳಿ ಕವನ-ಕವಿ-ಬಿರುದುಗಳನ್ನು ಅನಾಯಾಸವಾಗಿ ಬಾಚಿಕೊಳ್ಳಬಹುದು. ಹೃದಯವೇ ಮಾತಾಡಿದಂತೆ ನಿಲ್ಲುವ ಸಾಲುಗಳನ್ನು ಬರೆದ ಯೋಗರಾಜ್ ಭಟ್ಟರು ಕವಿಗಳ ಸಾಲಿನಲ್ಲಿ ನಿಲ್ಲುವುದೇ ಇಲ್ಲ.

ಅದಿರಲಿ ಬಿಡಿ, ಆದರೆ ‘ಮುಗುಳು ನಗೆ’ ಸಿನೆಮಾಕೆಂದು ಬರೆದ ಅವರ ಹಾಡು (ಮುಗುಳು ನಗೆಯೇ ನೀ ಹೇಳು…) ಕಿತ್ತು ಕಿತ್ತು ಕೊಡುವ ಭಾವನೆಗಳನ್ನು ಜೋಡಿಸಿಕೊಳ್ಳಲು ಸಾಧ್ಯವಾ? ರಕ್ತ ಎಲ್ಲೆಲ್ಲಿ ಹರಿದು ಹೋಗುತ್ತದೆಯೋ ಅ ಪದಗಳ ಮಾರ್ದನಿ ಅಲ್ಲಲ್ಲಿ ಹೋಗಿ ಕಚಗುಳಿ ಇಟ್ಟು ಬರುತ್ತದೆ. ಶಬ್ದಕೋಶ ಇಟ್ಟುಕೊಂಡು ಕುಳಿತು ಅರ್ಥಮಾಡಿಕೊಳ್ಳಬೇಕಾದ ಪದಗಳನ್ನು ಅವರು ಬರೆದಿಲ್ಲ. ಇಷ್ಟೇ ಇಷ್ಟು ಸರಳಪದಗಳಲ್ಲಿ ಅದ್ಬುತ ಅರ್ಥವೊಂದನ್ನು, ಭಾವವೊಂದನ್ನು, ರಸವೊಂದನ್ನು ಹೇಗೆ ಸೃಷ್ಟಿಸಬಹುದು ಎಂಬುದಕ್ಕೆ ಕೇವಲ ಅದೊಂದು ಸಾಂಗ್ ಸಾಕ್ಷಿಯಾಗುತ್ತದೆ.

ತ್ರಾಸವಿಲ್ಲದ ಪ್ರಾಸ, ಒಂದು ಸಾಲು ಇನ್ನೊಂದು ಸಾಲಿಗೆ ಬೆನ್ನತ್ತಿ ಹೋಗುವ ಶೈಲಿ, ಪ್ರತಿ ಪದ್ಯದ ಕಂತೊಂದು ಮುಗಿದಾಗ ಕಟ್ಟುವ ಉಪಾರ್ಥ, ಉಪಾರ್ಥಗಳನ್ನು ಬೆಸೆಯಲು ತಣ್ಣಗೆ ಕಾಡುವ ಸಂಗೀತ. ಅಬ್ಬಾ! ಆ ಹಾಡಿನ ಸಾಲುಗಳಿಗೆ ನನ್ನನ್ನು ನಾನು ಮಾರಿಕೊಳ್ಳಬೇಕು ಅನಿಸುತ್ತೆ. ಕೇವಲ ಮುಗುಳು ನಗೆಯೊಂದನ್ನು ಹಿಡಿದು ಪದಗಳಲ್ಲಿ ಪಳಗಿಸಿದ ಅವರ ಮನಸ್ಸಿಗೆ, ನಿಜಕ್ಕೂ ಹಾಡು ಮುಗಿದ ಮೇಲೆ ಅದೇ ಅವರ ತುಟಿಗಳ ಮೇಲೆ ಮೂಡಿರುವ ಮುಗುಳು ನಗೆಗೆ ಯಾವು ಬಹುಮಾನ ತಾನೇ ಕೊಡಲಾದೀತು?

ಇಲ್ಲಿ ಭಟ್ಟರು ಮುಗುಳು ನಗೆಯೊಂದಿಗೆ ನವಿರಾಗಿ ಮಾತಿಗಿಳಿಯುತ್ತಾರೆ. ‘ನಮ್ಮ ಎಲ್ಲದರ ಜೊತೆಗಾರ ಅವನೊಬ್ಬನೆ! ಒಂಟಿತನದಲ್ಲಿ ಸುಳಿದು ತಟ್ಟನೆ ತುಟಿಯ ಮೇಲೆ ಕುಳಿತು ನೋವನ್ನು ಕೂಡ ನಗೆಯಾಗಿ ಭಾಷಾಂತರಿಸುವ ಮೋಡಿಗಾರ ನೀನು, ನೋವಿಗೆ ಜೊತೆಯಾಗಬಲ್ಲ ಏಕೈಕ ಗೆಳೆಯ ನೀನು, ನಾ ಹೋಗು ಎಂದರೂ ಹೋಗದೆ ಚಿಕ್ಕ ಮಗುವಿನಂತೆ ಹಠವಿಡಿದು ಬೆನ್ನು ಬೀಳುವ ಜಾದುಗಾರ ನೀ, ಅಳುವನ್ನ ಕಸಿದು ಬಿಡುವ ಅಲ್ಲೂ ಕೂಡ ಒಂಟಿಯಾಗಿ ಬಿಡದ ಏ ಬಂಧುವೇ, ಎಲ್ಲಕ್ಕೂ ಜೊತೆಯಿರುವುದಾದರೆ ನೀನು ಅಳಲೇ ಬೇಕಾಗುತ್ತದೆ ಏಕೆಂದರೆ ಇಲ್ಲಿ ತನ್ನ ಖುಷಿಗೂ, ನೋವಿಗೂ ಒಂದೇ ಮೂಲ. ಖುಷಿಯೊಂದನ್ನು ಮೆರೆಸಿದಂತೆ, ನೋವೊಂದನ್ನು ಸಂಭಾಳಿಸು’ ಎನ್ನುತ್ತಾ ಮುಗುಳು ನಗೆಯನ್ನು ಪದೇ ಪದೇ ಕಾಡುತ್ತಾರೆ.

ಇಲ್ಲ, ಇಲ್ಲ ಅವರ ಆ ಹಾಡಿನ ಸಂಪೂರ್ಣತೆಯನ್ನು ಹಿಡಿಯಲು ಆಗುವುದೇ ಇಲ್ಲ. ಅದನ್ನು ಅನುಭವಿಸಬೇಕು ಅಷ್ಟೇ! ಹಾಗೆ ಸುಮ್ಮನೆ ಕೇಳಿಸಿಕೊಳ್ಳಬೇಕು. ಮತ್ತೆ ಮತ್ತೆ ಕೇಳಿಸಿಕೊಳ್ಳಬೇಕು. ಪ್ರತಿಬಾರಿಯೂ ಹೊಸದೇನೊ ಅರ್ಥವಾಗುತ್ತೆ. ಇನ್ನೊಂದೇನೋ ಹೊಳೆದು ಬರುತ್ತದೆ.

ಸೋನು ನಿಗಮ್‍ಗೆ ಕನ್ನಡ ಬರುತ್ತೋ ಇಲ್ಲವೋ ಗೊತ್ತಿಲ್ಲ. ಈ ಹಾಡು ಅರ್ಥವಾಯ್ತೊ ಇಲ್ಲವೊ ಗೊತ್ತಿಲ್ಲ. ಪ್ರತಿ ಪದವನ್ನು ಜಗಿದು ಜಗಿದು ಚಪ್ಪರಿಸಿ ನುಂಗಿದ್ದಾರೆ. ಸವಿದಿದ್ದಾರೆ. ರುಚಿ ಹತ್ತಿರಬೇಕು ಅವರಿಗೂ! ಕೇವಲ ಹಾಡಷ್ಟೇ ಅಲ್ಲ ಪ್ರತಿ ಪದವೂ ಅವರ ಧ್ವನಿಯಲ್ಲಿ ಜೀವ ತುಂಬಿ ಕುಣಿಯುತ್ತದೆ. ಹರಿಕೃಷ್ಣ ಸಂಗೀತ ಚನ್ನಾಗಿದೆ. ಅಲ್ಲಿ ಬರುವ ಎರಡು ಮೂರು ಬೀಟ್‍ಗಳು ಈ ಮೊದಲು ಎಲ್ಲೋ ಕೇಳಿದೀನಿ ಅನಿಸುತ್ತೆ. ಎಲ್ಲರಿಗಿಂತ ಅಲ್ಲಿ ಗೆಲ್ಲುವುದು ಭಟ್ಟರು ಮತ್ತು ಅವರ ಸಾಹಿತ್ಯ ಹಾಗೂ ಕೊನೆಗೆ ಉಳಿಯುವ ನಿಮ್ಮ ಮುಗುಳು ನಗೆ.

4 Comments

 1. dileep delli
  July 31, 2017
 2. Shivaiah Mathapati
  July 31, 2017
 3. Yogaraj bhat
  July 29, 2017
 4. ಸೌಮ್ಯ ದಯಾನಂದ
  July 29, 2017

Add Comment