Quantcast

ಯಾವ ಪಾತ್ರವೂ ನನ್ನೊಡನೆ ಮನೆಗೆ ಬರಲಿಲ್ಲ..

ಏನೋ ಆಗಬಹುದಾಗಿದ್ದು, ಏನೂ ಆಗದ ’ಲಿಪ್ ಸ್ಟಿಕ್’

ಹೆಣ್ಣಿನ ಲೈಂಗಿಕತೆಯನ್ನು ಒಂದು ಸ್ವತಂತ್ರ ಭಾವವನ್ನಾಗಿ ಪರಿಗಣಿಸುವುದು ವಿರಳ.

ಅದೇನಿದ್ದರೂ ಗಂಡಿನ ಲೈಂಗಿಕತೆಗೆ ಪೂರಕವಾಗಿಯೇ ಬಳಕೆ ಆಗಿದೆ.

’ಮದುವೆ’ ಎನ್ನುವ ಸಂಸ್ಥೆಯ ಚೌಕಟ್ಟಿನೊಳಗೆ ಮತ್ತು ಗಂಡ ಬಯಸಿದಾಗ ಮಾತ್ರ ಹೆಣ್ಣು ಅವನಿಗೆ ಸಹವರ್ತಿ ಆಗಿರುವುದು ’ಒಳ್ಳೆಯ’ ಹೆಣ್ಣಿನ ಲಕ್ಷಣ ಎನ್ನುವ ಮೌಲ್ಯವನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ವ್ಯವಸ್ಥೆ ನಮ್ಮೊಳಗೆ ಬೆಳೆಸುತ್ತಲೇ ಬಂದಿದೆ. ಹೆಣ್ಣಿನ ಲೈಂಗಿಕ ಸಾಮರ್ಥ್ಯದ ಸಾಧ್ಯತೆ ಮತ್ತು ಗಂಡಿನ ಮಿತಿ ಎರಡೂ ಹೆಣ್ಣಿನ ಲೈಂಗಿಕತೆಯನ್ನು ಗಂಡು ನೋಟ ಆತಂಕದಿಂದಲೇ ಗಮನಿಸಲು ಪ್ರೇರೇಪಿಸಿದೆ ಅನ್ನಿಸುತ್ತದೆ.

’ಎಡಕಲ್ಲು ಗುಡ್ಡದ ಮೇಲೆ’ ಚಿತ್ರದಲ್ಲಿ ಏರುವಯಸ್ಸಿನ ಮಾಧವಿಯ ಆಸೆ, ಅಗತ್ಯಗಳ ಬಗ್ಗೆ ಪುಟ್ಟಣ್ಣನವರು ಭಾರತೀಸುತರಷ್ಟೂ ದಯೆ ತೋರಿಸಲಿಲ್ಲ.  ಲೈಂಗಿಕವಾಗಿ ತನ್ನ ಬಯಕೆಗಳನ್ನು ಈಡೇರಿಸಿಕೊಳ್ಳುವುದಿರಲಿ, ವ್ಯಕ್ತಪಡಿಸಿದರೂ ಆಕೆ ನೀತಿಗೆಟ್ಟವಳಾಗುತ್ತಾಳೆ.  ಈ ಬಗ್ಗೆ ನಮ್ಮ ಚಿತ್ರಗಳು ಮಾತಾಡಿದ್ದೂ ಕಡಿಮೆಯೆ.  ಇಂತಹ ಸಂದರ್ಭದಲ್ಲಿ ಚಿತ್ರವೊಂದು ಹೆಣ್ಣಿನ ಅದುಮಿಟ್ಟ, ನಿರ್ಲಕ್ಷಿಸಲ್ಪಟ್ಟ ಲೈಂಗಿಕ ವಿಮೋಚನೆಯ ಬಗ್ಗೆ ಮಾತನಾಡುತ್ತದೆ ಎನ್ನುವಾಗ ಆ ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚು, ಹೆಣ್ಣೊಬ್ಬಳು ಅದನ್ನು ನಿರ್ದೇಶಿಸುತ್ತಿದ್ದಾಳೆ ಎಂದಾಗ ಅದರ ಬಗ್ಗೆ ಆಶೋತ್ತರಗಳೂ ಸಹ ಹೆಚ್ಚಾಗಿರುತ್ತದೆ.  ನಿರ್ಲಕ್ಷಿತ ದನಿಯನ್ನು ಕೇಳಿಸುವ ಅವಕಾಶ, ತನ್ನೊಂದಿಗೆ ಒಂದು ಜವಾಬ್ದಾರಿಯನ್ನೂ ಹೊತ್ತು ತರುತ್ತದೆ.

Lipstick Under my Burkha ಆ ಚಿತ್ರ, ನಿರ್ದೇಶಕಿ ಅಲಂಕೃತಾ ಶ್ರೀವಾಸ್ತವ್.  ಖ್ಯಾತ ನಿರ್ದೇಶಕ ಪ್ರಕಾಶ್ ಝಾ ಗರಡಿಯಲ್ಲಿ ಪಳಗಿದ ಅಲಂಕೃತಾಗೆ ಸ್ವತಂತ್ರ ನಿರ್ದೇಶಕಿಯಾಗಿ ಇದು ಎರಡನೆಯ ಚಿತ್ರ.  ಚಿತ್ರದ ಕತೆ, ಚಿತ್ರಕತೆ, ನಿರ್ದೇಶನ ಆಕೆಯದೆ.  ಬಿಡುಗಡೆಗೂ ಮೊದಲೇ ನಾನಾ ಕಾರಣಗಳಿಗೆ ಸದ್ದು ಮಾಡಿದ ಚಿತ್ರ ಇದು.  ಪೆಹ್ಲಾಜ್ ನಿಹಲಾನಿ ಇದೊಂದು ’ಮಹಿಳಾಕೇಂದ್ರಿತ ಚಿತ್ರ’ ಎಂದು ಮೂಗುಮುರಿದಾಗ ಅದು ನಮ್ಮಲ್ಲಿ ಹಲವರನ್ನು ಕೆರಳಿಸಿತ್ತು.  ಚಿತ್ರದ ಪೋಸ್ಟರ್ ಇಂತಹ ಎಲ್ಲಾ ಟೀಕೆಗಳಿಗೂ ಸೆಡ್ಡುಹೊಡೆದಂತೆ ಇದೆ.  ಇಡೀ ವ್ಯವಸ್ಥೆಯ ಸಿದ್ಧ ಮೌಲ್ಯಗಳನ್ನು ಧಿಕ್ಕರಿಸುವಂತೆ ಹೆಣ್ಣೊಬ್ಬಳು ಕೈ ನಡುಬೆರಳು ತೋರಿಸುತ್ತಿದ್ದಾಳೆ, ಆ ನಡುಬೆರಳಿನ ಜಾಗದಲ್ಲಿ ಒಂದು ಕಡುಗೆಂಪು ಬಣ್ಣದ ಲಿಪ್ ಸ್ಟಿಕ್.  ಲಿಪ್ ಸ್ಟಿಕ್ ಇಲ್ಲಿ ಪ್ರತಿಭಟನೆಯ ಸಂಕೇತವಾಗಿ ಬಳಕೆಯಾಗುತ್ತದೆ ಎಂದು ಪೋಸ್ಟರ್ ಚಿತ್ರ ನೋಡುವ ಮೊದಲೇ ಘೋಷಿಸಿಬಿಡುತ್ತದೆ.

ನಾಲ್ಕು ಬೇರೆ ಬೇರೆ ವಯೋಮಾನದ, ಬೇರೆ ಬೇರೆ ಆರ್ಥಿಕ ಮತ್ತು ಸಾಮಾಜಿಕ ಹಿನ್ನಲೆಯ ಮಹಿಳೆಯರ ಕಥೆ ಲಿಪ್ ಸ್ಟಿಕ್.  ಇಲ್ಲಿ ಕಾಲೇಜು ಹುಡುಗಿ ರೆಹಾನಾ ಇದಾಳೆ.  ಅವಳ ತಂದೆ ತಾಯಿ ಕಟ್ಟಾ ಸಂಪ್ರದಾಯಸ್ಥರು.  ಬುರ್ಕಾ ಹಾಕದೆ ಅವಳು ಮನೆಯಿಂದ ಹೊರಗೆ ಹೆಜ್ಜೆ ಇಡುವಂತಿಲ್ಲ.  ಆದರೆ ಆ ಹುಡುಗಿ ಬುರ್ಖಾ ಹಾಕಿಕೊಂಡು ಮಾಲ್ ಗಳಿಗೆ ಹೋಗಿ ತನಗೆ ಬೇಕನ್ನಿಸಿದ ಜೀನ್ಸ್, ಪರ್ಫ್ಯೂಮ್, ಲಿಪ್ ಸ್ಟಿಕ್, ಶೂ ಕದಿಯುತ್ತಿರುತ್ತಾಳೆ.  ಮಾಲ್ ನ ರೆಸ್ಟ್ ರೂಂ ಒಳಹೊಕ್ಕು ಹೊರಬರುವಷ್ಟರಲ್ಲಿ ಬುರ್ಖಾ ಬ್ಯಾಕ್ ಪ್ಯಾಕ್ ಒಳಗೆ.  ಇವಳು ಜೀನ್ಸ್ ತೊಟ್ಟ, ಲಿಪ್ ಸ್ಟಿಕ್ ಧರಿಸಿದ ಟಿಪ್ ಟಾಪ್ ಹುಡುಗಿ.  ಅವಳ ಮಹದಾಕಾಂಕ್ಷೆ ಹಾಡುಗಾರ್ತಿ ಆಗುವುದು.  ಕಾಲೇಜಿನ ಹಾಡುಗುಂಪಿನ ಭಾಗವಾಗಲು ಪ್ರಯತ್ನಿಸುತ್ತಲೇ ಇರುತ್ತಾಳೆ.

ಮತ್ತೊಬ್ಬಳು ಲೀಲಾ.  ಬ್ಯೂಟಿಪಾರ್ಲರ್ ನಲ್ಲಿ ಕೆಲಸ ಮಾಡುತ್ತಿರುತ್ತಾಳೆ.  ಅವಳ ಪ್ರಿಯಕರ ಒಬ್ಬ ಫೋಟೋಗ್ರಾಫರ್, ಫೋಟೋಗ್ರಾಫರ್ ಮತ್ತು ಬ್ಯುಟಿಶಿಯನ್ ಜೊತೆಗೆ ಹನಿಮೂನ್ ಪ್ಯಾಕೇಜ್ ಮಾಡುವ ಹೊಸ ವ್ಯಾಪಾರ ಪ್ರಾರಂಭಿಸುವುದು ಅವಳ ಗುರಿ.  ಅವಳ ಅಮ್ಮನಿಗೆ ಇವಳನ್ನು ಆ ಮುಸ್ಲಿಂ ಫೋಟೋಗ್ರಾಫರ್ ನಿಂದ ಬಿಡಿಸಿ ಸ್ವಂತ ಮನೆಯುಳ್ಳ ಹುಡುಗನಿಗೆ ಮದುವೆ ಮಾಡಿಕೊಡುವ ಮಹದಾಸೆ.  ಆದರೆ ಲೀಲಾ ಬಿಂದಾಸ್ ಹುಡುಗಿ.  ಅಮ್ಮ ನಿಶ್ಚಯಿಸಿದ ನಿಶ್ಚಿತಾರ್ಥದ ದಿನ ಫ್ಯೂಸ್ ಹೋಗಿ ಕರೆಂಟ್ ಹೋದಾಗ ಆ ಫೋಟೋಗ್ರಾಫರ್ ನ ಜೊತೆ ಮನೆಯ ಮೂಲೆಯೊಂದರಲ್ಲಿ ಪ್ರಣಯದಲ್ಲಿ ನಿರತಳಾಗಿರುತ್ತಾಳೆ.  ಅವಳು ಬಿಸಿರಕ್ತದ, ತನ್ನ ಬಯಕೆಗಳನ್ನು ವ್ಯಕ್ತ ಪಡಿಸುವುದರಲ್ಲಿ ಯಾವುದೇ ಎಗ್ಗು ಇಟ್ಟುಕೊಳ್ಳದ ಹುಡುಗಿ.  ಮೊಪೆಡ್ ಓಡಿಸುವ ಹುಡುಗಿಯ ಕಾಲುಗಳಲ್ಲಿ ಆಕಾಶ ಅಳೆಯುವಷ್ಟು ಬಲಶಾಲಿ ರೆಕ್ಕೆಗಳು.

ಅಲ್ಲಿ ಇನ್ನೊಬ್ಬ ಮುಸ್ಲಿಂ ಹೆಣ್ಣು ಮಗಳಿದ್ದಾಳೆ, ಶಾಹೀನ್.  ಅವಳ ಗಂಡ ಸೌದಿಯಿಂದ ಕೆಲಸ ಕಳೆದುಕೊಂಡು ಬಂದಿದ್ದಾನೆ.  ಇವಳು ಇಲ್ಲಿ ಸೇಲ್ಸ್ ಗರ್ಲ್ ಕೆಲಸ ಮಾಡುತ್ತಿದ್ದಾಳೆ, ಆದರೆ ಗಂಡನಿಗೆ ವಿಷಯ ಹೇಳಿಲ್ಲ.  ಆಕೆಗೆ ಮೂರು ಜನ ಪುಟ್ಟಪುಟ್ಟ ಮಕ್ಕಳು.  ಆತನಿಗೆ ಹೆಂಡತಿ ಎಂದರೆ ಕೇವಲ ಅವಳ ಅಂಗಗಳು ಮಾತ್ರವೆ.  ಅದೂ ಲೈಂಗಿಕವಾಗಿ ಅವಳನ್ನು ’ಬಳಸಿ’ ಕೊಳ್ಳುವವನೇ ಹೊರತು ಆ ಕ್ರಿಯೆಯಲ್ಲಿ ಎಂದೂ ಅವಳನ್ನು ಸಹಭಾಗಿ ಮಾಡಿಕೊಂಡವನಲ್ಲ.  ಅವಳ ಕಂಪನಿಯ ಹೊಸಹೊಸ ವಸ್ತುಗಳನ್ನು ಮಾರಾಟ ಮಾದುವುದರಲ್ಲಿ ಶಾಹೀನ್ ಗೆ ಇನ್ನಿಲ್ಲದ ಚಾಕಚಕ್ಯತೆ.  ಅವಳ ಈ ಪ್ರತಿಭೆಗೆ ಮೆಚ್ಚಿದ ಅವಳ ಕಂಪನಿಯಿಂದ ಅವಳಿಗೆ ಸೇಲ್ಸ್ ಟ್ರೇನರ್ ಕೆಲಸದ ಆಫರ್ ಬಂದಿದೆ, ಸಂಬಳ ನಲ್ವತ್ತು ಸಾವಿರ.

ಆ ವಠಾರದ ಮಾಲಿಕಳು ಉಷಾ.  50-55 ವರ್ಷಗಳ ಮಹಿಳೆ.  ಮನೆತನದ ಮಿಠಾಯಿ ವ್ಯಾಪಾರವನ್ನು ಸಮರ್ಥವಾಗಿ ತೂಗಿಸಿಕೊಂಡು ಹೋಗುವ ಆಕೆ, ಮನೆಮಂದಿಗಷ್ಟೇ ಅಲ್ಲ, ಸುತ್ತಮುತ್ತಲಿನ ಎಲ್ಲರ ಪಾಲಿಗೂ ’ಬುವಾಜಿ’.  ಕಡೆಗೆ ಅವಳದೇ ವಯಸ್ಸಿನ ಮಧ್ಯವಯಸ್ಕ ವಿಧುರನೊಬ್ಬ ಸಹ ಆಕೆಯನ್ನು ಬುವಾಜಿ ಎಂದೇ ಕರೆಯುತ್ತಾನೆ.  ಅವನು ಎರಡನೆ ಮದುವೆಗೆ ಸಿದ್ಧವಾಗಿದ್ದಾನೆ,  ಆ ಮಾತು ಬೇರೆ!  ಉಷಾಗೆ ಪುರಾಣದ ಪುಸ್ತಕದ ನಡುವೆ ಮಿಲ್ಸ್ ಅಂಡ್ ಬೂನ್ಸ್ ನಂತಹ ರೊಮ್ಯಾಂಟಿಕ್ ಪುಸ್ತಕ ಇಟ್ಟುಕೊಂಡು ಓದುವುದೊಂದು ಗೀಳು.  ಆ ಪುಸ್ತಕದ ಶೃಂಗಾರ ಜಗತ್ತಿನಲ್ಲಿ ಅವಳು ಕಳೆದುಹೋಗುತ್ತಿರುತ್ತಾಳೆ.  ಇಂತಹ ಉಷಾಗೆ ಈಜು ಕಲಿಯುವ ಆಸೆ ಮೂಡುತ್ತದೆ.  ಈಜು ಕಲಿಸುವ ಚಿಕ್ಕವಯಸ್ಸಿನ ಹುಡುಗನೆಡೆಗಿನ ಆಕರ್ಷಣೆ ಅವಳು ಈಜು ಕಲಿಯಲು ಒಂದು ಕಾರಣ.  ಆಮೇಲಾಮೇಲೆ ಆ ಹುಡುಗನಿಗೆ ’ರೋಸಿ’ ಎನ್ನುವ ಹೆಸರಿನಿಂದ ಕರೆ ಮಾಡಲು ಪ್ರಾರಂಭಿಸುತ್ತಾಳೆ.  ಅವನೊಂದಿಗೆ ಫೋನಿನಲ್ಲಿ ಶೃಂಗಾರವಾಗಿ ಮಾತನಾಡುತ್ತಾ ತನ್ನ ಏಕಾಕಿತನವನ್ನು ಆ ಮಟ್ಟಿಗೆ, ಕಲ್ಪನೆಯಲ್ಲಾದರೂ ನಿವಾರಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುತ್ತಾಳೆ.

ಇದು ಚಿತ್ರದ ಪ್ಲಾಟ್.  ಅದೊಂದು ಅದ್ಭುತವಾದ, ಸಿದ್ಧ ಮಾದರಿಗಳನ್ನು ಮುರಿಯಬಲ್ಲ ಚಿತ್ರವಾಗುವ ಎಲ್ಲಾ ಸಾಧ್ಯತೆಗಳಿರುವ ಕಥಾಹಂದರ.  ಆದರೆ ಇದು ಎಷ್ಟರ ಮಟ್ಟಿಗೆ ಮತ್ತು ಹೇಗೆ ಕಥೆ ಆಗಿದೆ ಎಂದು ನೋಡಲು ಹೋದರೆ ನಮಗೆ ನಿರಾಸೆ ಎದುರಾಗುತ್ತದೆ.  ಮೊದಲನೆಯದಾಗಿ ಇಂತಹ ದಿಟ್ಟತನದ ಪಾತ್ರಗಳನ್ನು ಕಟ್ಟುವಾಗ ನೋಡುಗರಲ್ಲಿ ಯಾರಾದರೂ ಅಲ್ಲಿನ ಪಾತ್ರಗಳಿಗೆ ತಮ್ಮನ್ನು ತಾವು ಹೋಲಿಸಿಕೊಳ್ಳಬೇಕು, ಆ ಮಟ್ಟಿಗೆ ಆ ಪಾತ್ರಗಳು ಗಟ್ಟಿತನದಿಂದ ಕೂಡಿರಬೇಕು.  ಆದರೆ ಇಲ್ಲಿನ ಪಾತ್ರಗಳಿಗೆ ಆ ಹೊಳಹು ಇದೆಯೇ ಹೊರತು, ಅದು ಪಾತ್ರಗಳಲ್ಲಿನ ಆಂತರಿಕ ಶಕ್ತಿಯಾಗಿ ಎಲ್ಲೂ ಮೂಡಿಬಂದಿಲ್ಲ.

ನಾಟಕಕ್ಕೂ, ಚಲನಚಿತ್ರಗಳಿಗೂ ವ್ಯಕ್ತಪಡಿಸುವ ಮಾಧ್ಯಮದಲ್ಲೂ, ನೋಡುಗರ ಸ್ಪಂದನದಲ್ಲೂ ವ್ಯತ್ಯಾಸವಿದೆ.  ನಾಟಕಕ್ಕೆ ಬರುವ ಪ್ರೇಕ್ಷಕರೇ ಬೇರೆ, ಚಲನಚಿತ್ರಗಳಿಗೆ ಬರುವವರೇ ಬೇರೆ.  ಎಷ್ಟೋ ಸಲ ನಾಟಕದಲ್ಲಿ ದಾಟಿಸಲು ಸಾಧ್ಯವಾಗುವ ಸೂಕ್ಷ್ಮತೆ ಮತ್ತು ಪದರಗಳನ್ನು ಚಲನಚಿತ್ರಗಳಲ್ಲಿ ದಾಟಿಸಲಾಗುವುದಿಲ್ಲ.  ಎಷ್ಟೋ ಕಲಾತ್ಮಕತೆ ಇದ್ದರೆ ಮಾತ್ರ ಶೃಂಗಾರ ಕಣ್ಣೆದುರಿನ ದೊಡ್ಡ ಪರದೆಯಲ್ಲಿ ಸಹನೀಯವಾಗುತ್ತದೆ.  ಆದರೆ ಇಲ್ಲಿ ಶೃಂಗಾರ ಎಷ್ಟು ಕಣ್ಣಿಗೆ ಹೊಡೆಯುತ್ತದೆ ಎಂದರೆ ಸ್ವಲ್ಪ ಹೊತ್ತಿನ ನಂತರ ನಿಜಕ್ಕೂ ಈ ದೃಶ್ಯದ ಅಗತ್ಯವಿತ್ತೇ ಎಂದು ನಾವೇ ಕೇಳಿಕೊಳ್ಳುವಂತಾಗುತ್ತದೆ.

ಹಾಗೆ ಅಂತಹ ಸುಮಾರು ಲೈಂಗಿಕ ದೃಶ್ಯಗಳಿರುವ ಚಿತ್ರದಲ್ಲಿ ಅವುಗಳನ್ನು ಹಾಗೆ ತೋರಿಸದೆಯೂ ಕಥೆಯನ್ನು ಹೇಳಲು ಸಾಧ್ಯವಿತ್ತು ಎಂದಾಗ ಆ ದೃಶ್ಯಗಳಿಗೆ ಉಳಿಯುವುದು ’ಶಾಕ್ ವಾಲ್ಯು’ ಮಾತ್ರ.  ನೋಡುಗರನ್ನು ಅದು ಬೆಚ್ಚಿಬೀಳಿಸುತ್ತದೆ, ಕೆಲವು ಸಲ ಮುಖ ತಿರುಗಿಸುವಂತೆ ಮಾಡುತ್ತದೆ.  ಅಂತಹ ದೃಶ್ಯಗಳನ್ನು ನಿಭಾಯಿಸಲು ಬೇಕಾದ ಕಲಾತ್ಮಕತೆ ನಿರ್ದೇಶಕಿಗೆ ಇಲ್ಲ.  ಅಂತಹ ದೃಶ್ಯದಲ್ಲಿ ಕ್ಯಾಮೆರಾ ಹಿಂದೆ ಇರುವುದು ಹೆಣ್ಣು ನೋಟಕ್ಕೆ ಬದಲಾಗಿ, ಗಂಡಿನ ನೋಟಕ್ಕೆ ಸರಕು ಒದಗಿಸುವ ನೋಟ ಅನ್ನಿಸುತ್ತದೆ.

ಇಡೀ ಚಿತ್ರ ಒಂದು ಕೊಲಾಜ್ ನಂತೆ ಕಾಣುತ್ತದೆಯೇ ಹೊರತು, ಒಂದೇ ಓಣಿಯಲ್ಲಿ ವಾಸಿಸುವ ಆ ಯಾವ ಪಾತ್ರಗಳಿಗೂ ಒಬ್ಬರಿಗೊಬ್ಬರಿಗೆ ಸಂಬಂಧವೇ ಬೆಸೆದುಕೊಳ್ಳುವುದಿಲ್ಲ.  ಒಂದು ಸಣ್ಣ ಊರಿನ ಹೆಣ್ಣುಮಕ್ಕಳ ಪ್ರಪಂಚದಲ್ಲಿರಬಹುದಾದ ಪರಸ್ಪರ ಪ್ರೀತಿ, ಹೊಂದಾಣಿಕೆ, ಒಮ್ಮೊಮ್ಮೆ ಸಣ್ಣ ಅಸೂಯೆ ಯಾವುದನ್ನೂ ಚಿತ್ರ ಕಟ್ಟಿಕೊಡುವುದಿಲ್ಲ.  ಭೂಪಾಲ್ ಎನ್ನುವ ಊರಿನಲ್ಲಿ ನಡೆಯುವ ಈ ಕಥೆಯಲ್ಲಿ ಅಲ್ಲಿನ ಗ್ಯಾಸ್ ದುರಂತ ಸುಮ್ಮನೆ ಒಂದು ಉಲ್ಲೇಖವಾಗಿ ಬರುತ್ತದೆಯೇ ಹೊರತು ಇಲ್ಲಿ ಊರು ಒಂದು ಪಾತ್ರವಾಗಿ, ಕಥೆಯ ಆವರಣವಾಗಿ ಹೊಮ್ಮುವುದೇ ಇಲ್ಲ.

ಹಾಗೆಂದು ಚಿತ್ರದಲ್ಲಿ ಒಳ್ಳೆಯ ದೃಶ್ಯಗಳಿಲ್ಲವೆ ಎಂದರೆ ಖಂಡಿತಾ ಇವೆ.  ಒಮ್ಮೆ ಉಷಾ ತನಗಾಗಿ ಈಜುಡುಪು ತೆಗೆದುಕೊಳ್ಳಲು ಮೊದಲ ಸಲ ಮಾಲ್ ಗೆ ಬರುತ್ತಾಳೆ.  ಅಲ್ಲಿನ ಎಸ್ಕಲೇಟರ್ ನೋಡಿ ಅವಳಿಗೆ ಗಾಬರಿ.  ಆಗ ಅಲ್ಲಿ ಒಂದು ಪುಟ್ಟಪುಟ್ಟ ಹುಡುಗಿಯರ ಗುಂಪು ಬರುತ್ತದೆ, ಅವರಲ್ಲಿ ಒಬ್ಬಳು ಆರಾಮಾಗಿ ಉಷಾ ಕೈ ಹಿಡಿದುಕೊಂಡು ಎಸ್ಕಲೇಟರ್ ದಾಟಿಸುತ್ತಾಳೆ.  ಆಗ ಉಷಾ ಮೊಗದಲ್ಲಿ ಮೂಡುವ ಸಣ್ಣ ನಾಚಿಕೆ, ಖುಷಿ ಎಷ್ಟು ಸುಂದರ.  ಉಷಾ ಪಾತ್ರದಲ್ಲಿ ರತ್ನಾ ಪಾಠಕ್ ಶಾ ನಟನೆ ಅವಿಸ್ಮರಣೀಯ.  ಮತ್ಯಾರೇ ಆ ಪಾತ್ರವನ್ನು ಮಾಡಿದ್ದರೂ ಅದು ಕ್ಯಾರಿಕೇಚರ್ ಆಗುವ ಅಪಾಯವಿತ್ತು.  ಆದರೆ ಅಂತಹ ರತ್ನಾಗೆ ಸಹಾ ಆ ಪಾತ್ರವನ್ನು ಪೂರ್ತಿಯಾಗಿ ಕನ್ವಿನ್ಸಿಂಗ್ ಆಗುವಂತೆ ಕಟ್ಟಲಾಗಿಲ್ಲ ಎಂದರೆ ಅದು ಕಥೆಯದೇ ಕೊರತೆ.

ಅಂತಹುದೇ ಇನ್ನೊಂದು ದೃಶ್ಯ ಬರುತ್ತದೆ.  ಅಮ್ಮ ಹುಡುಕಿದ ವರನ ಬಳಿ ಸ್ವಂತ ಮನೆ ಇದೆ ಎಂದು ಲೀಲಾಗೆ ಗೊತ್ತಾಗುತ್ತದೆ, ಅಲ್ಲದೇ ಅವಳ ಪ್ರೇಮಿ ಅವಳನ್ನು ಇನ್ನೊಬ್ಬರೆದುರಲ್ಲಿ ಪ್ರೇಮಿ ಎಂದು ಒಪ್ಪಿಕೊಳ್ಳುವುದಿಲ್ಲ.  ಇಂತಹ ಸಂದರ್ಭದಲ್ಲಿ ಅಮ್ಮ ಹುಡುಕಿದವನನ್ನೇ ಮದುವೆಯಾಗುವುದು ಲೇಸು ಎಂದುಕೊಳ್ಳುತ್ತಾಳೆ.  ಆದರೆ ಆತನೊಂದಿಗೆ ಹೋಗಿ ಅವನ ಮನೆಯನ್ನು ನೋಡಿದರೆ ಅದೊಂದು ಗಡಿಯಾರದ ಸೆಕೆಂಡ್ ಮುಳ್ಳು ಸಹ ಅಂಬೆಗಾಲಿಡುವ ಲೋಕದಂತೆ ಕಾಣಿಸಿ, ಆ ಬದುಕಿಗೆ ಹೆದರಿಬಿಡುತ್ತಾಳೆ.  ಪ್ರೇಮಿಯೊಡನೆ ದೆಹಲಿಗೆ ಓಡಿಹೋಗುವ ಪ್ಲಾನ್ ಮಾಡುತ್ತಾಳೆ.  ಅದಕ್ಕಾಗಿ ದುಡ್ಡು ಹೊಂಚಲು ತನ್ನ ಮೊಪೆಡ್ ಮಾರುತ್ತಾಳೆ.  ಹಣ ಕೈಲಿ ಹಿಡಿದು ಹೊರಟವಳು ಮತ್ತೆ ಬಂದು ಅದರ ಮೇಲೆ ಮೃದುವಾಗಿ ಕೈ ಆಡಿಸುತ್ತಾಳೆ.  ಸಣ್ಣ ಊರಿನ ಹೆಣ್ಣು ಮಗಳಿಗೆ ಮೊಪೆಡ್ ಕೊಡುವ ಸ್ವಾತಂತ್ರ್ಯ ಮತ್ತು ಆತ್ಮವಿಶ್ವಾಸ ಎರಡೂ ದೊಡ್ಡದು.  ಆದರೆ ಈಗ ತನ್ನ ಆಗಸದ ಪರಿಧಿಯನ್ನು ದೊಡ್ಡದು ಮಾಡಿಕೊಳ್ಳಲು ಆ ಸ್ವಾತಂತ್ರ್ಯವನ್ನೇ ಅಡವಿಡುವ ಪರಿಸ್ಥಿತಿ ಅವಳಿಗೆ ಬಂದಿದೆ.

ಕಾಲೇಜಿನಲ್ಲಿ ಒಮ್ಮೆ ವಸ್ತ್ರಸಂಹಿತೆಯನ್ನು ವಿರೋಧಿಸಿ ಒಂದು ಮೀಟಿಂಗ್, ಪ್ರತಿಭಟನೆ ನಡೆಯುತ್ತಿರುತ್ತದೆ.  ಯಾರೋ ರೆಹಾನಾಳ ಮುಖದೆದಿರು ಮೈಕ್ ಹಿಡಿಯುತ್ತಾರೆ, ಆಕೆ ಯಾವುದೋ ಆವೇಶಕ್ಕೆ ಸಿಕ್ಕವಳಂತೆ,  ‘Don’t wear lipstick, you’ll have an affair. Don’t wear jeans, there’ll be a scandal. I want to ask the authorities – what exactly will happen? Why does out freedom scare you so?’ ಎನ್ನುತ್ತಾಳೆ.  ಈ ಸಾಲುಗಳಲ್ಲಿ ಇಡೀ ಚಿತ್ರದ ಧ್ವನಿ ಇದೆ.  ಆದರೆ ಇದು ಕೇವಲ ಘೋಷಣೆ ಮಾತ್ರ ಆಗಿರುವುದು ಚಿತ್ರದ ಸೋಲು.

ಚಿತ್ರದಲ್ಲಿ ಲಿಪ್ ಸ್ಟಿಕ್ ಪ್ರತಿಭಟನೆಯ ಅಸ್ತ್ರವಾಗಿ ಬಳಕೆ ಆಗಿದೆ, ಚಿತ್ರದ ಯಾವ ಪಾತ್ರವೂ ಪ್ರೀತಿಯಿಂದ ಲಿಪ್ ಸ್ತಿಕ್ ಧರಿಸುವಂತೆ ಕಾಣುವುದಿಲ್ಲ.  ವ್ಯಾಕ್ಸಿಂಗ್ ಇರಲಿ, ಲಿಪ್ ಸ್ಟಿಕ್ ಇರಲಿ, ಅದನ್ನೊಂದು ರೊಚ್ಚಿನಿಂದಲೇ ಮಾಡುತ್ತಾರೆ.  ಹಾಗಾಗಿಯೇ ಅದು ಎದೆಯ ಒಳಗೆ ಇಳಿಯದೆ ಕೇವಲ ಕಣ್ಣೆದುರಿನ ಧಿಕ್ಕಾರದ ಕೂಗಾಟ ಮಾತ್ರ ಆಗಿಬಿಡುತ್ತದೆ.  ಚಿತ್ರದಲ್ಲಿ ರೆಹಾನಾಗೆ ಹೇಗಾದರೂ ಕಾಲೇಜಿನ ’ಕೂಲ್’ ವಿದ್ಯಾರ್ಥಿಗಳ ಗುಂಪಿನಲ್ಲಿ ಗುರುತಿಸಿಕೊಳ್ಳುವ ಹಂಬಲ.  ಹಾಗಾಗಿ ಅವರು ಸಿಗರೇಟ್, ಬಿಯರ್ ಕೊಟ್ಟಾಗ ತನಗೆ ಎಂದಿನಿಂದಲೋ ಅವುಗಳ ಅಭ್ಯಾಸ ಇದೆ ಎಂದು ತೋರಿಸಿಕೊಳ್ಳಲು ನಟಿಸುತ್ತಾಳೆ.  ಈ ಚಿತ್ರ ಸಹ ಎಲ್ಲೋ ಒಂದೆಡೆ ತೋರಿಕೆಯ ಮಹಿಳಾವಾದದ ಸೋಗು ಹಾಕುತ್ತದೆ ಅನ್ನಿಸಿಬಿಡುತ್ತದೆ.

ಹೆಣ್ಣಿನ ಲೈಂಗಿಕತೆ, ಆಸೆ, ಆಸೆಯ ಪೂರೈಕೆಗಾಗಿ ಅವಳೇ ಮೊದಲ ಹೆಜ್ಜೆ ಇಡುವುದು.. ಇವ್ಯಾವುದೂ ತಪ್ಪಲ್ಲ.  ಇದಕ್ಕಾಗಿ ಆಕೆ ಕ್ಷಮೆ ಕೇಳಬೇಕಾಗಿಲ್ಲ ಎನ್ನುವುದು ಎಷ್ಟು ಸತ್ಯವೋ ಇದರ ಬಗ್ಗೆ ಆಕೆ ಎಲ್ಲರನ್ನೂ ಕರೆದುಕರೆದು ಹೇಳಬೇಕಾಗಿಲ್ಲ ಎನ್ನುವುದೂ ಅಷ್ಟೇ ಸತ್ಯ.  ಹೆಣ್ಣಿನ ಸ್ವಾತಂತ್ರ್ಯ ಎಂದರೆ ಅದು ಕೇವಲ ಲೈಂಗಿಕ ಸ್ವಾತಂತ್ರ್ಯ ಮಾತ್ರ ಎನ್ನುವ ಮಿಥ್ ಅನ್ನು ಒಡೆಯಬೇಕಿದೆ. ಬಿಡುಗಡೆ ಹೊಂದಿದ ಮಹಿಳೆಯ ಬಿಡುಗಡೆಯನ್ನು ಕೇವಲ ಸಿಗರೇಟು, ಮದ್ಯ, ಲೈಂಗಿಕ ಮುಕ್ತತೆಯಲ್ಲಿ ತೋರಿಸುವುದು ಮಹಿಳಾ ಸ್ವಾತಂತ್ರ್ಯ ಮತ್ತು ಸಮಾನತೆಯ ಕಲ್ಪನೆಗಳನ್ನು ಅತ್ಯಂತ ಸೀಮಿತಗೊಳಿಸಿಬಿಡುತ್ತದೆ.

ಕೆಲವು ವಿಷಯಗಳಲ್ಲಿ ಗಂಡಸರ ನಡವಳಿಕೆ ತಪ್ಪು ಎನ್ನುವುದಾದರೆ ಹೆಣ್ಣು ಮಾಡಿದರೂ ಅದು ತಪ್ಪೆ.  ಅವಳ ತಂದೆ ತಾಯಿ ವಿಪರೀತ ಸಂಪ್ರದಾಯವಾದಿಗಳು ಎನ್ನುವ ಕಾರಣಕ್ಕೆ ರೆಹಾನಳ ಕಳುವನ್ನು ಸಮರ್ಥಿಸಿಕೊಳ್ಳಲಾಗುವುದಿಲ್ಲ.  ವಯಸ್ಸಾದ ಗಂಡೊಬ್ಬ ಚಿಕ್ಕ ವಯಸ್ಸಿನ ಹುಡುಗಿಗೆ ಸುಳ್ಳು ಹೇಳಿ ಟೆಲಿಫೋನ್ ನಲ್ಲಿ ಚಾಟ್ ಮಾಡುವುದು ತಪ್ಪು ಎನ್ನುವುದಾದರೆ, ಅದು ಮಹಿಳೆಯಿಂದಾದರೂ ತಪ್ಪೆ.  ಆದರೆ ನಿರ್ದೇಶಕಿ ಇಲ್ಲಿ ಸಹಜವಾದ ಯಾವ ಹೋರಾಟ, ಘರ್ಷಣೆಗಳಿಗೂ ಪ್ರಯತ್ನಿಸದೆ ಒಟ್ಟಾಗಿ ಚಿತ್ರದ ಗಂಡಸರ ಪಾತ್ರಗಳೆಲ್ಲವನ್ನೂ ಕೆಟ್ಟವರನ್ನಾಗಿಸಿ, ಸುಲಭದ ಆಯ್ಕೆಗೆ ಅವಕಾಶ ಮಾಡಿಕೊಟ್ಟು ಬಿಡುತ್ತಾರೆ.  ಇಡೀ ಚಿತ್ರದ ಹಿನ್ನಲೆಯಲ್ಲಿ ಬರುವ ಆ ಮಿಲ್ಸ್ ಅಂಡ್ ಬೂನ್ಸ್ ಕಥೆಯ ಧ್ವನಿ ಎಲ್ಲೂ ಸಹಜವಾಗಿ ಹೊಂದಿಕೆ ಆಗದೆ, ಕೇವಲ ಚಮತ್ಕಾರಕ್ಕಾಗಿ ಸೇರಿಸಿದಂತೆ ಕಂಡುಬಿಡುತ್ತದೆ.

ನಲ್ವತ್ತು ಸಾವಿರ ದುಡಿಯುವ ಸಾಮರ್ಥ್ಯ ಹೊಂದಿದ ಶಿರೀನ್ ಸಹ ಗಂಡನ ನಿರುದ್ಯೋಗ, ವೈವಾಹಿಕ ಅತ್ಯಾಚಾರ, ಇನ್ನೊಬ್ಬ ಹೆಣ್ಣಿನ ಜೊತೆಗಿನ ಸಂಬಂಧವನ್ನು ಪ್ರಶ್ನಿಸದಷ್ಟು ಅಸಹಾಯಕಳಾಗಿ ಬಿಡುತ್ತಾಳೆ ಎಂದರೆ ಇಡೀ ಚಿತ್ರ ಏನು ಹೇಳುತ್ತದೆ?  ಕಡೆಯ ದೃಶ್ಯದಲ್ಲಿ ಆ ನಾಲ್ಕು ಹೆಣ್ಣುಮಕ್ಕಳು ಜೊತೆಯಲ್ಲಿ ಕೂತು ಸಿಗರೇಟು ಸೇದುವುದೇ ಬಿಡುಗಡೆ ಎನ್ನುವುದು ಅವಸರದ ತೀರ್ಮಾನ ಆಗಿಬಿಡುತ್ತದೆ.  ಹೆಣ್ಣು ಸ್ವತಂತ್ರವಾಗಿ ಮಾಡುವ ಆಯ್ಕೆ ಮತ್ತು ಅದಕ್ಕಾಗಿ ಆಕೆ ಪಣಕ್ಕಿಡಬಲ್ಲ ತನ್ನ ತಾಳ್ಮೆ ಮತ್ತು ಪ್ರಯತ್ನ ಇಲ್ಲಿನ ಯಾವ ಪಾತ್ರಗಳಲ್ಲಿಯೂ ಕಂಡುಬರುವುದಿಲ್ಲ.  ಕಡೆಗೆ ಇಲ್ಲಿನ ಎಲ್ಲಾ ಪಾತ್ರಗಳೂ ಸೋಲುತ್ತವೆ.

ಚಿತ್ರ ಮುಗಿದ ಮೇಲೆ ನೆನಪಿನಲ್ಲಿ ನಿಲ್ಲುವುದು ರತ್ನಾ, ಕೊಂಕಣಾ ಮತ್ತು ಲೀಲಾ ಪಾತ್ರಧಾರಿಯ ನಟನೆ ಮಾತ್ರ. ಆದರೆ ಚಿತ್ರ ಮುಗಿದ ಮೇಲೆ ಯಾವ ಪಾತ್ರವೂ ನಮ್ಮೊಡನೆ ಮನೆಗೆ ಬರುವುದಿಲ್ಲ, ನಮ್ಮನ್ನು ಪ್ರಶ್ನಿಸುವುದಿಲ್ಲ.  ಯಾವುದೇ ಪಾತ್ರಕ್ಕೆ ಧೃಢವಾದ ದನಿಯಲ್ಲಿ ’ಇಲ್ಲ’ ಎಂದು ಹೇಳುವುದು ಸಾಧ್ಯವಾಗುವುದಿಲ್ಲ.  ತನ್ನ ಪ್ರತಿಭೆ, ಧೈರ್ಯ, ಜಾಣತನ, ಗುರಿ, ದಿಟ್ಟತನ, ಕಷ್ಟದ ಎದುರಲ್ಲಿ ಗಟ್ಟಿಯಾಗಿ ನಿಲ್ಲಬಲ್ಲ ಧೈರ್ಯ ಯಾವುದೂ ಈ ನಾಲ್ಕು ಹೆಣ್ಣುಮಕ್ಕಳನ್ನು ಪರಿಸ್ಥಿತಿಯನ್ನು ಎದುರಿಸಲು ಶಕ್ತರನ್ನಾಗಿಸುವುದಿಲ್ಲ ಎನ್ನುವುದು ವಿಷಾದ.  ಕಡೆಗೂ ಎಂತಹ ಒಳ್ಳೆಯ ಕಥೆಯಾಗಬಹುದಿದ್ದ, ಸಿನಿಮಾ ಆಗಬಹುದಿದ್ದ ಅವಕಾಶ ಕೈಚೆಲ್ಲಿತು ಎನ್ನುವ ಬೇಜಾರೇ ನಮ್ಮಲ್ಲಿ ಉಳಿಯುತ್ತದೆ.

ಚಿತ್ರದಲ್ಲಿ ಕಾಣಿಸಿಕೊಂಡೂ ಕೊನೆ ಮುಟ್ಟದ ಹಲವು ಪಾತ್ರಗಳಿವೆ.  ಲೀಲಾಳ ತಾಯಿ ಒಂದು ಕಲಾಶಾಲೆಯಲ್ಲಿ ನಗ್ನ ಮಾಡೆಲ್ ಆಗಿ ಕೆಲಸ ಮಾಡುತ್ತಿರುತ್ತಾಳೆ, ’ತಿಂಗಳ ಆ ದಿನಗಳಲ್ಲೂ ನಾನು ಹೀಗೆ ಬಂದು ಕೂರುತ್ತಿದ್ದೆ’ ಎಂದು ನಿಟ್ಟುಸಿರಿಡುವ ಅವಳ ಕಥೆ ಏನು?  ಶಿರೀನ್ ಳ ಸಹಪಾಠಿ ಒಬ್ಬಳು ಆಸ್ಪತ್ರೆಯ ಒಂಟಿ ಮಂಚದ ಮೇಲೆ ಅಬಾರ್ಶನ್ ಮಾಡಿಸಿಕೊಂಡು ಕೂತಿರುತ್ತಾಳೆ, ಅವಳ ನಿಟ್ಟುಸಿರಿನ ಆಳ ಎಷ್ಟು?  ಉಷಾ ಫ್ಯೂಸ್ ನೋಡಲು ಹೋದಾಗ ಎದುರಾದ ಆ ಮಧ್ಯವಯಸ್ಕ ಆಮೇಲೇನಾದ?  ಹೀಗೆ ಈ ಪಾತ್ರಗಳೇ ಚಿತ್ರ ಮುಗಿದ ಮೇಲೆ ಹೆಚ್ಚು ಕಾಡುತ್ತವೆ.  ನಟನೆಯ ನಂತರ ನೆನಪಿನಲ್ಲಿ ಉಳಿಯುವುದು ಸಂಭಾಷಣೆಯ ಕೆಲವು ಭಾಗಗಳು.

ಬ್ರಿಟಿಷ್ ಇತಿಹಾಸಕಾರ Eric Hobsbawm ತನ್ನ Revolutionaries ಎನ್ನುವ ಪುಸ್ತಕದಲ್ಲಿ ಒಂದು ಮಾತು ಬರೆಯುತ್ತಾನೆ, ’Shocking the bourgeois is, alas, easier than overthrowing them.’  ಕಡೆಗೂ ಈ ಚಿತ್ರ ಮಾಡಲು ಸಾಧ್ಯವಾಗಿರುವುದು ನೋಡುಗರನ್ನು ಆಘಾತಗೊಳಿಸುವುದಷ್ಟೇ.

12 Comments

 1. Sandhya honguntikar
  July 31, 2017
 2. Shobha venkatesh
  July 30, 2017
  • ಸಂಧ್ಯಾರಾಣಿ
   July 31, 2017
 3. ಭಾರತಿ ಬಿ ವಿ
  July 30, 2017
 4. Mandya Ramesh
  July 30, 2017
 5. Arathi ghatikar
  July 30, 2017
 6. Jayadev Mohan
  July 30, 2017
 7. ಲಕ್ಷ್ಮೀಕಾಂತ ಇಟ್ನಾಳ
  July 30, 2017

Add Comment