‘ಅವಧಿ’ಯಲ್ಲಿ ಪ್ರಕಟವಾದ ಅಂಕಣ ‘ನುಣ್ಣನ್ನ ಬೆಟ್ಟ’ ಈಗ ಪುಸ್ತಕವಾಗಿ ನಿಮ್ಮ ಮುಂದೆ ಬರಲಿದೆ. ಆಗಸ್ಟ್ ೨೦ ರಂದು ಉಡುಪಿಯಲ್ಲಿ ಬಿಡುಗಡೆಯಾಗುತ್ತಿರುವ ರಾಜಾರಾಂ ತಲ್ಲೂರು ಅವರ ಈ ಅಂಕಣ ಸಂಕಲನಕ್ಕೆ ಬರೆದ ಬೆನ್ನುಡಿ ಇಲ್ಲಿದೆ.
ಸತೀಶ್ ಚಪ್ಪರಿಕೆ
ಮನುಷ್ಯ ನಿಜಕ್ಕೂ ಮನುಷ್ಯನಾಗಬೇಕಿದ್ದರೆ ಅವನನ್ನು ಸುತ್ತಿ ಹಾಕಿಕೊಂಡಿರುವ ಎಲ್ಲ ಭ್ರಮೆಗಳನ್ನು ಹರಿದು, ಒಂಟಿಯಾಗಿ, ಬದುಕಿನ ಸಂತೆಯಲ್ಲಿ ನಗ್ನನಾಗಿ ನಿಲ್ಲಬೇಕು. ಮೈಗಂಟಿಕೊಂಡ ಇತಿಹಾಸದ ಹೊಲಸು ಚಿಪ್ಪುಗಳನ್ನು ಕಿತ್ತೆಸೆದು, ಹೊಸದಾಗಿ ತನ್ನ ಬದುಕನ್ನು ಮತ್ತೆ ಕಟ್ಟಿಕೊಳ್ಳುವ ಯತ್ನ ಮಾಡಬೇಕು. ಆಗ ಅನಾವರಣವಾಗುವ ಬದುಕಿನ ಜೊತೆ ಮನುಷ್ಯತ್ವವೂ ಮೇಳೈಸಿದರೆ ಆತ ಸಮಾಜದ ಪ್ರಮುಖ ‘ಸಾಕ್ಷಿಪ್ರಜ್ಞೆ’ಯಾಗುವ ಎಲ್ಲ ಸಾಧ್ಯತೆಗಳು ಇರುತ್ತವೆ.
ಅದರಲ್ಲಂತೂ ಮನುಷ್ಯತ್ವದ ಸೂಕ್ಷ್ಮತೆಗಳನ್ನು ಆಳವಾಗಿ ಅರಿತವ, ಜಗತ್ತಿನ ಬಹುದೊಡ್ಡ ಭ್ರಮಾಲೋಕವಾದ ಮಾಧ್ಯಮ ಜಗತ್ತಿನಿಂದ ಹೊರಬಂದಾಗ ಏನಾಗುತ್ತಾನೆ, ಎಂದರೆ ನಿಷ್ಠುರವಾಗುತ್ತಾನೆ. ಅಂತಹ ನಿಷ್ಠುರವಾದಿ ಮತ್ತು ‘ಸಾಕ್ಷಿಪ್ರಜ್ಞೆ’ಯಾಗಿರುವ ರಾಜಾರಾಂ ತಲ್ಲೂರು, ‘ಕೃಷ್ಣ’ನೂರು ಉಡುಪಿಯಲ್ಲಿ ಕೂತು ಜಗತ್ತಿಗೆ ಸ್ಪಂದಿಸುತ್ತಿರುವ ರೀತಿ ಅನನ್ಯವಾದದ್ದು.
ಈ ಕೃತಿಯಲ್ಲಿ ಇರುವ ಬಹುತೇಕ ಬರಹಗಳು, ವರ್ತಮಾನಕ್ಕೆ ನೀಡಲಾದ ತತ್ಕ್ಷಣದ ಸ್ಪಂದನೆ. ಅದು ಚುಟುಕು ಬರಹಗಳ ರೂಪದಲ್ಲಿ. ಹಾಗೆ ನೋಡಿದಲ್ಲಿ ಇಲ್ಲಿನ ಪ್ರತಿಯೊಂದು ಚುಟುಕಿಗೂ ಪೂರ್ಣ ಪ್ರಮಾಣದ ಲೇಖನವಾಗುವ ಎಲ್ಲ ಅರ್ಹತೆಗಳಿವೆ. ಆದರೆ, ಲೇಖಕ ತಾನೇ ಹಾಕಿಕೊಂಡಿರುವ ಚೌಕಟ್ಟಿನಲ್ಲಿ ಚುಟುಕಾಗಿಯೇ ಕುಟುಕುತ್ತಾ ಸಾಗುತ್ತಾರೆ. ಸ್ಥಳೀಯ ಮರಳು ಮಾಫಿಯಾದಿಂದ ಹಿಡಿದು ಜಾಗತಿಕ ನೆಲೆಯ ಸುದ್ದಿಗಳವರೆಗೆ; ರಾಜಕೀಯ, ಸಾಂಸ್ಕ್ರತಿಕ, ಆರ್ಥಿಕ… ಹೀಗೆ ಪ್ರತಿಯೊಂದು ವಿಷಯಕ್ಕೂ ಲೇಖಕ ಸ್ಪಂದಿಸಿರುವುದು ಮಾನವೀಯ ನೆಲೆಯಲ್ಲಿ.
ಈ ಚುಟುಕುಗಳ ವಿಶೇಷವೇನೆಂದರೆ ಬರವಣಿಗೆಯುದ್ದಕ್ಕೂ ಢಾಳಾಗಿರುವ ಮಾನವೀಯ ಮತ್ತು ನಿಷ್ಠುರ ಮನೋಭಾವ. ಈ ಕೃತಿ ಓದಿ ಮುಗಿಸಿದ ಮೇಲೆ, ಈ ಲೇಖಕ ಮಾಧ್ಯಮ ಲೋಕದ ನಡುವಿದ್ದೇ ಅಲ್ಲಿನ ಎಲ್ಲ ಭ್ರಮೆಗಳನ್ನು ಹರಿದುಹಾಕಬಹುದಿತ್ತು ಎಂದು ಅನ್ನಿಸುತ್ತದೆ. ಆದರೆ, ವಾಸ್ತವದ ನೆಲೆಗಟ್ಟಿನಲ್ಲಿ ಅದು ಅಸಾಧ್ಯ ಎನ್ನುವುದು ನನಗೇ ಗೊತ್ತಿರುವ ನಿತ್ಯಸತ್ಯ. ಮಾಧ್ಯಮ ಕಳೆದುಕೊಂಡಿತು. ಸಮಾಜ ದಕ್ಕಿಸಿಕೊಂಡಿತು. ಅಷ್ಟೆ. ತೊಂದರೆಯಿಲ್ಲ. ಇಂತಹ ‘ಸಾಕ್ಷಿಪ್ರಜ್ಞೆ’ಗಳು ಎಲ್ಲೆಡೆ ಅನಾವರಣಗೊಳ್ಳಲಿ.