ಶಿವಕುಮಾರ್ ಮಾವಲಿ
ಓ ಇನ್ನೂ ಹುಟ್ಟದ ಮಗುವೇ ,
ಇನ್ನೇನು ಕೆಲ ದಿನಗಳಲ್ಲಿ
ನೀನಿಲ್ಲಿ ಈಗಾಗಲೇ ಇರುವ ಅಸಂಖ್ಯ ನಮ್ಮನ್ನು
ಒಡಗೂಡವ ಹೊತ್ತಲ್ಲಿ
ಇದೇ ಗೃಹದ ಸಂಜಾತನೋರ್ವನ
ಟಿಪ್ಪಣಿಯನ್ನು ಓದಿಕೊಂಡರೆ ಒಳ್ಳೆಯದು.
ನಿನಗಿದು ತಿಳಿದಿರಲಿ
ಇಲ್ಲಿ ಎಲ್ಲರ ಮಧ್ಯೆಯೂ
ನೀನು ಏಕಾಂಗಿಯಾಗಿಯೇ ಬದುಕಬೇಕು
ಇಲ್ಲಿ ನೀನು ಸರ್ವತಂತ್ರ ಸ್ವತಂತ್ರ
ಆದರೂ ಸದಾ ನಿನ್ನ ಕೈಕಾಲ್ಗಳನ್ನು
ಕಟ್ಟಿರಲಾಗುತ್ತದೆ
ನೀನು ತೆವಳುತ್ತಲೇ ಇರಬೇಕು.
ನೀನೆಂದೂ ವಿಶ್ವಮಾನವ ನಾಗಲಾರೆ
ನಿನ್ನ ಮನೆ ,ಬೀದಿ, ಜಿಲ್ಲೆ, ರಾಜ್ಯ
ದೇಶ ಭಾಷೆಗಳನ್ನು ಮೀರಲಾರೆ
ಇಲ್ಲಿ ನೀನು ಗ್ರಾಹಕನೂ, ಗೃಹಸ್ಥನೂ
ಆಗುವುದರಿಂದ ಲೋಭ, ಪ್ರಲೋಭನೆಗಳು
ಸಹಜವಾಗಿರುತ್ತವೆ .
ನೀನು ಪ್ರೇಮ -ಕಾಮ ಗಳ
ಪ್ರತಿಫಲ ವಾಗಿರುವುದರಿಂದ
ಈ ವರ್ತುಲವನ್ನು ನೀನು ಪೂರ್ಣಗೊಳಿಸಲೇಬೇಕು
ಇಲ್ಲಿ ವಿಜ್ಞಾನ-ವಿವೇಕಗಳ ಜೊತೆ ವಿಕೃತಿಯೂ ಇದೆ
ವಿನೋದ- ವಿಲಾಸಗಳ ಜೊತೆ ವಿಕಾರವೂ ಇದೆ
ನೀ ಯಾವುದಕ್ಕೂ ವಿಮುಖನಾಗದಿರು .
ನೀನೊಬ್ಬ ಪದವೀಧರನೋ,ಪಾಮರನೋ
ಆಗಿ ಬದುಕುತ್ತೀಯ
ಆದರೆ ಪ್ರಜೆಯಾಗಿ ಬದುಕುವುದೇ ದುಸ್ತರ.
ನಿನ್ನ ಅಜ್ಜಿಯೋ, ಅಮ್ಮನೋ ನಿನಗೆ
ರಾಜರ ಕತೆಗಳನ್ನು ಹೇಳುತ್ತಾರೆ
ಆದರೀಗ ರಾಜರಿಲ್ಲ. ರಾಜ್ಯಗಳಿವೆ.
ರಾಜರು ಯುದ್ಧ ಮಾಡುತ್ತಿದ್ದರು
ರಾಜ್ಯಗಳೂ ಮಾಡುತ್ತಿವೆ ಅಷ್ಟೇ.
ನೀನು ಆಟ-ಪಾಠಗಳ ಜೊತೆ
ಕಾಲ-ದೇಶಗಳ ಕಾಲಾತೀತ
ವಿಷಮಗಳನ್ನು ವಿಮರ್ಷಿಸಬೆಕಾಗಬಹುದು.
ಮನುಷ್ಯನಂತೆ ನೀನು ಬದುಕುವಾಗ
ಕಷ್ಟ ಕಾರ್ಪಣ್ಯಗಳೂ, ಕಾಯಿಲೆಗಳು
ನಿನ್ನನ್ನು ಬಾಧಿಸಿಯೇ ತೀರುತ್ತವೆ.
ಹ್ಞಾಂ ಇದು ಬಹು ಮುಖ್ಯವಾದುದು ;
ನೀನು ಕೇವಲ ಬದುಕಿದ್ದರೆ ಸಾಲದು
‘ನಾನು ಬದುಕಿದ್ದೇನೆ ‘ ಎಂಬುದನ್ನು
ಆಗಾಗ ಸಾಬೀತುಮಾಡುತ್ತಲೇ ಇರಬೇಕು.
ಇಲ್ಲಿ ಎಲ್ಲವೂ ಸರಿ ಎಲ್ಲ ಎಂದು
ಹಲುಬುವವರು ಹಲವರುಂಟು
ಇದೇ ಸ್ವರ್ಗ ಲೋಕ ಎಂದು
ಹಾಡಿ ಹೊಗಳುವವರೂ ಉಂಟು.
ಇವೆಲ್ಲದರ ನಡುವೆ ನಾನು ಪ್ರಮಾಣ
ಮಾಡಿ ಹೇಳ್ತೀನಿ ಮಗು ,
ನಿನಗೊಂದು ಉಜ್ವಲ ಭವಿಷ್ಯ ಈಗ
ನಾನಿರುವ ಈ ಭೂಮಿಯಲ್ಲೇ ಇದೆ .
ಉಳಿದಿದ್ದನ್ನು ನೀನಿಲ್ಲಿಗೆ ಬಂದ ಮೇಲೆ
ಖುದ್ದು ನಾನೇ ತಿಳಿಸುತ್ತೇನೆ
ನನ್ನ ಕೈ ಹಿಡಿದು ನೀನು ಶಾಲೆಗೆ ಹೋಗುವಾಗ.
ಕೊನೆಯ ಸಾಲು ತುಂಬಾ ಅರ್ಥಗರ್ಭಿತವಾಗಿದೆ