Quantcast

ಪ್ರಾದೇಶಿಕ ಪತಂಗಗಳ ಬೆಂಕಿಯ ಸಂಗ…!

ನಿತೀಶ್ ಕುಮಾರ್ ಶೈಲಿಯ ರಾಜಕೀಯ ದೇಶಕ್ಕೆ ಮೊದಲಿನದೂ ಅಲ್ಲ, ಕೊನೆಯದೂ ಅಲ್ಲ. ತಿಂಗಳ ಹಿಂದಷ್ಟೇ ಕರ್ನಾಟಕದಲ್ಲಿ ವಿಧಾನ ಪರಿಷತ್ ಸಭಾಪತಿಗಳ ಪದಚ್ಯುತಿ ಪ್ರಯತ್ನದ ವೇಳೆ ಅಂತಹದೊಂದು ಮಾದರಿಯನ್ನು ಕಂಡಾಗಿದೆ. ಇಂತಹ ಘಟನೆಗಳು ಪಾಠ ಕಲಿಸದಿರುವುದೇ ಈವತ್ತಿನ ಪ್ರಾದೇಶಿಕ ರಾಜಕೀಯ ಶಕ್ತಿಗಳು ಮತ್ತು ಸಮಾಜವಾದ ಎಂಬ ಲಿಬರಲ್ ಎಡದ ಸಂಕಟಗಳ ಮೂಲ.

ಇಂದು ಬೆಳೆದು ನಿಂತಿರುವ ಬಲ ಪರಿವಾರದ ರಾಜಕೀಯವು ಸಹಸ್ರ ಶಿರಗಳು, ಸಹಸ್ರ ಕಣ್ಣುಗಳು ಮತ್ತು ಸಹಸ್ರ ಬಾಹುಗಳೊಂದಿಗೆ ಹಬ್ಬಿನಿಂತಿದೆ. ಇದು ಅವರ ಹಲವು ವರ್ಷಗಳ ಶ್ರಮದ ಫಲ. ಆದರೆ, ಅದಕ್ಕೆದುರಾಗಿ ನಿಂತಿರುವ ಕಾಂಗ್ರೆಸ್ ಮತ್ತಿತರ ರಾಜಕೀಯ ಶಕ್ತಿಗಳು ತಮ್ಮ ಸೋಮಾರಿತನದ ಕಾರಣದಿಂದಾಗಿ ಈವತ್ತಿನ ಸ್ಥಿತಿ ತಲುಪಿವೆ. ದೇಶದ ಹಿತಾಸಕ್ತಿಗಳಿಗಿಂತ ಸ್ವಹಿತಾಸಕ್ತಿಗಳೇ ಹೆಚ್ಚಿರುವ ಈ ರಾಷ್ಟ್ರೀಯ ಬಣಗಳಿಗೆ ಪರ್ಯಾಯವನ್ನು ಜನ ಹುಡುಕಲಾರಂಭಿಸಿದಾಗಲೆಲ್ಲ ಅವುಗಳದೇ Psudo ಬಾಹುವೊಂದು ತಾನೇ ಆ ಪರ್ಯಾಯ ಎಂದು ಘೋಷಿಸಿಕೊಂಡು ಬಂದು ನಿಂತದ್ದು ಆಧುನಿಕ ಭಾರತದ ಚರಿತ್ರೆಯಲ್ಲಿ ಆಗಾಗ ಕಾಣಿಸುತ್ತಲೇ ಇದೆ.

ಅದು ಶರದ್ ಪವಾರ್ ಇರಲಿ, ಮಮತಾ ದೀದಿ ಇರಲಿ, ಚಂದ್ರಬಾಬು ನಾಯ್ಡು ಇರಲಿ, ಲಾಲೂ ಇರಲಿ, ಮುಲಾಯಂ ಇರಲಿ, ಜಯಲಲಿತಾ ಇರಲಿ, ಫಾರೂಕ್ ಅಬ್ದುಲ್ಲಾ ಇರಲಿ ಅಥವಾ ಕರ್ನಾಟಕದಲ್ಲಿ ಈವತ್ತಿನ ದೇವೇಗೌಡರ ಪರಿವಾರ ಇರಲಿ – ಕೊನೆಗೆ ಇತ್ತೀಚೆಗಿನ ಅಣ್ಣಾ ಹಜಾರೆ ಎಂಬ ಅಭಿನವ ಗಾಂಧಿಯೇ ಇರಲಿ – ಇವರೆಲ್ಲರೂ ತೋರಿಸಿದ್ದು ತಮ್ಮ ಮೂಲ ಸ್ವರೂಪದ ಅದೇ Psudo ಬಾಹುಗಳನ್ನೇ. ಇವೆಲ್ಲವೂ ಸ್ವಹಿತದ ಪರ್ಯಾಯಗಳೇ ಹೊರತು ನಾಡ ಹಿತದ ಪರ್ಯಾಯಗಳಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗಿದೆ.

ಭಾರತದ ರಾಜಕೀಯ ಈಗ ಕಲಿಯಬೇಕಾಗಿರುವುದು: “ ಪರ್ಯಾಯ” ಎಂಬುದು ಓವರ್ ನೈಟ್ ಮ್ಯಾಜಿಕ್ ಅಲ್ಲ, ಅದಕ್ಕೆ ದೀರ್ಘಕಾಲದ ಶ್ರಮ ಬೇಕು; ಅದು ತಳಮಟ್ಟದಲ್ಲಿ ಆವಶ್ಯಕತೆಯ ಶಿಶುವಾಗಿ ಹುಟ್ಟಬೇಕು ಎಂಬ ಮೂಲಪಾಠವನ್ನು. ಸ್ವಾತಂತ್ರ್ಯ ಚಳವಳಿಯ ಕಾಲದ ಕಾಂಗ್ರೆಸ್ಸಿನ ಹುಟ್ಟನ್ನಾಗಲೀ, ಆರೆಸ್ಸೆಸಿನ ರಾಜಕೀಯ ಆಕಾಂಕ್ಷೆಗಳ ಮೂರ್ತ ರೂಪವಾದ ಬಿಜೆಪಿಯ ಹುಟ್ಟನ್ನಾಗಲೀ ಗಮನಿಸಿ ಕೂಡ ದೇಶದ ಪರ್ಯಾಯಾಕಾಂಕ್ಷಿಗಳು ಈ ಪಾಠವನ್ನು ಕಲಿಯದಿದ್ದರೆ, ಅದಕ್ಕೆ ನಮ್ಮ ರಾಜಕೀಯ ಮೆಳ್ಳೆಗಣ್ಣು ಕಾರಣವೇ ಹೊರತು ನಮ್ಮ ಸಂವಿಧಾನವಾಗಲೀ, ಪ್ರಜಾಪ್ರಭುತ್ವ ವ್ಯವಸ್ಥೆಯಾಗಲೀ ಕಾರಣ ಅಲ್ಲ.

ಒಂದು ಕಾಲದಲ್ಲಿ ಕಾಂಗ್ರೆಸ್ಸಿಗಿದ್ದ ಬುಲ್ಡೋಜಿಂಗ್ ಚಾಣಾಕ್ಷತೆಯನ್ನು ಕಲಿತು, ಪಕ್ವಗೊಳಿಸಿಕೊಂಡಿರುವ ಪರಿವಾರದ ರಾಜಕೀಯಕ್ಕೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ನೆತ್ತಿಕಣ್ಣು ಎಲ್ಲಿದೆ ಎಂಬುದು ಚೆನ್ನಾಗಿ ಗೊತ್ತಿದೆ. ಬಿಜೆಪಿ ಈ ನೆತ್ತಿಕಣ್ಣುಗಳನ್ನು ಒತ್ತಿದಾಗಲೆಲ್ಲ ನಿತೀಶ್ ಕುಮಾರ್ ಅವರಂತಹ ಸಮಯಸಾಧಕ ರಾಜಕಾರಣಿಗಳು ತಮ್ಮ ಅಲ್ಪಕಾಲಿಕ ಲಾಭವನ್ನು ಪಡೆದುಕೊಂಡಿದ್ದಾರೆ; ಪರಿವಾರಕ್ಕೆ ತಮ್ಮ ಎದುರಾಳಿಗಳು ಪೊಳ್ಳೆಂದು ಸಾಬೀತು ಮಾಡುವುದಕ್ಕೆ ಆವಶ್ಯಕತೆ ಇರುವಷ್ಟು ಸಾಯಾತುಗಳು ಸಿಕ್ಕಿವೆ. ಪರಿವಾರ ರಾಜಕೀಯ ಬೆಳೆದುಬಂದಿರುವುದೇ ಈ ರೀತಿ ನಾಗರಿಕವಾಗಿ “ಡಿಸ್ಕಂಫರ್ಟ್” ಇರುವ ಭಾಗಗಳೆಂದು ಸಮಾಜ ಊಹಿಸಿಕೊಂಡಿರುವ ಜಾಗಗಳಲ್ಲಿ ಎಂಬುದನ್ನು ಅವರ ಬೆಳವಣಿಗೆಯ ಪುಟಪುಟಗಳಲ್ಲೂ ಕಾಣಬಹುದು.

ಪರಿವಾರೇತರ ಪ್ರತಿಪಕ್ಷಗಳೆಲ್ಲವೂ ಈವತ್ತು ಅಕಾಲಿಕ ಮೆದುಮೂಳೆ ರೋಗದಿಂದ ಬಳಲುತ್ತಿವೆ. ಮೂಳೆ ಎಲ್ಲೆಲ್ಲಿ ಮೆದುವಾಗಿದೆ ಎಂಬುದನ್ನು ಚೆನ್ನಾಗಿ ತಿಳಿದಿರುವ ಅಮಿತ್ ಷಾ ರಂತಹ ರಾಜಕೀಯ ಲೆಕ್ಕಾಚಾರ ಪಂಡಿತರು ಬರೇ ಎಕ್ಸೆಲ್ ಶೀಟುಗಳನ್ನಿಟ್ಟುಕೊಂಡು ವಿಕೇಟುಗಳನ್ನು ಮನಸೋ ಇಚ್ಛೆ ಉದುರಿಸುತ್ತಿದ್ದಾರೆ; ಅದನ್ನು ದೇಶದ ಜನ ಅವಾಕ್ಕಾಗಿ ನೋಡುತ್ತಾ ವಾಹ್ ಎನ್ನಲೋ ಅಥವಾ ವ್ಯಾಕ್ ಎನ್ನಲೋ ಎಂಬ ಗೊಂದಲದಲ್ಲಿ ಪೆಕರುನಗೆ ನಗುತ್ತಿದ್ದಾರೆ. ಇವನ್ನೆಲ್ಲ ಎಚ್ಚರದಿಂದ ನೊಡಬೇಕಾಗಿದ್ದ ಮಾಧ್ಯಮಗಳಂತೂ ಸಂಪೂರ್ಣವಾಗಿ ಅವರ ಆಟದಲ್ಲಿ ದಾಳಗಳಾಗಿ ಕುಳಿತಿದ್ದಾರೆ.

ಭೌಗೋಳಿಕವಾಗಿ ವಿಶಾಲವಾದ  ಭಾರತದಂತಹ ಒಕ್ಕೂಟ ವ್ಯವಸ್ಥೆಯೊಂದರಲ್ಲಿ  ಪ್ರಾದೇಶಿಕತೆ ಬಹಳ ಸುಲಭವಾಗಿ ಜನಬೆಂಬಲವನ್ನು ಕಟ್ಟಿಕೊಡುವ ಸಂಗತಿ. ಆದರೆ ಪದೇ ಪದೇ, ಒಂದೋ ರಾಷ್ಟ್ರೀಯ ಪಕ್ಷಗಳ ಕಳ್ಳಬಾಹುಗಳೇ ಈ ಪ್ರಾದೇಶಿಕತೆಯ ಹೆಸರಿನಲ್ಲಿ ಜನರ ಹಾದಿ ತಪ್ಪಿಸುತ್ತಾ ಬಂದಿವೆ ಇಲ್ಲವೇ ಸ್ಥಳೀಯವಾಗಿ ಹುಟ್ಟಿದ ಮಹತ್ವಾಕಾಂಕ್ಷೆಗಳು ಸೂಕ್ತ ದೂರದರ್ಶಿತ್ವ ಇಲ್ಲದೆ ಕ್ಷಣಿಕ ಲಾಭಕ್ಕಾಗಿ ರಾಷ್ಟ್ರೀಯ ಪಕ್ಷಗಳ ಬೆಂಕಿಯ ಸಂಗ ಮಾಡಿ ಸುಟ್ಟುಹೋಗುತ್ತಿವೆ.

ನಿತೀಶ್, ಲಾಲೂ, ದೇವೇಗೌಡರ ಬ್ರಾಂಡಿನ ಪ್ರಾದೇಶಿಕತೆಗಳ ಕ್ಯಾರಟೇಜ್ ಲೆಕ್ಕಾಚಾರ ಮಾಡುವುದಕ್ಕೆ ಇದು ಸಕಾಲ. ಇಲ್ಲಿಂದಾಚೆಗೆ ಅಧಿಕಾರ ಹಿಡಿಯುವ ಗಡಿಬಿಡಿ ಇಲ್ಲದ ಪ್ರಾದೇಶಿಕತೆ ಮತ್ತು ಪರಸ್ಪರ ಕೊಡು-ಕೊಳ್ಳುವಿಕೆ ಇರುವ ಒಕ್ಕೂಟ ವ್ಯವಸ್ಥೆಯೊಂದರ ಕುರಿತು ಚಿಂತನೆ ಆರಂಭಗೊಳ್ಳುವಂತಾದರೆ ಅದು ನಾಡಿಗೆ ಅಚ್ಛೇದಿನ್!

Add Comment