Quantcast

'ಅಯ್ಯಪ್ಪನ ಸೀಸನ್ನಲ್ಲಿ ಸ್ವಲ್ಪ ಪ್ರಾಬ್ಲಮ್'

P for…

-ಲೀಲಾ ಸಂಪಿಗೆ

ಸುಮಾರು ಆರರಿಂದ ಆರೂವರೆ ಅಡಿ ಉದ್ದ, ಮೂರೂವರೆ ಅಡಿ ಅಗಲ, ಒಂದುವರೆ ಅಡಿ ಆಳ! ದಟ್ಟವಾದ ಕುರುಚಲು. ಏಳೆಂಟು ಅಡಿ ಬೆಳೆದು ಚಿಕ್ಕ ಚಿಕ್ಕ ಛತ್ರಿಯಂತೆ ಹರಡಿಕೊಂಡು ಇತ್ತ ನೆರಳಿಗೂ ಅಲ್ಲದ, ಅತ್ತ ಮರವೂ ಅಲ್ಲದ ಜಾಲಿ. ಒಂದೊಂದು ಗುಂಡಿಗಳಿಗೂ ನೆರಳು ಕೊಡುವ ಭ್ರಮೆಯಲ್ಲಿ ನಿಂತಿವೆಯೇನೋ ಎಂಬಂತೆ ನಿಂತ ಪೋಸ್. ಪ್ರತಿ ಗುಂಡಿಯ ಒಳಗಡೆ ಹಾಸಿರುವ ಸೀರೆ ಅಥವಾ ದುಪ್ಪಟಗಳು. ಇದು ತನ್ನದೇ ಗುಂಡಿ ಎಂದು ಖಡಕ್ಕಾಗಿ ಹೇಳೋಕೆ ಒಂದು ಐಡೆಂಟಿಟಿ.

ಇದೇನು ಸ್ಮಶಾನ ವರ್ಣನೆ ಮಾಡ್ತಿದ್ದೀನಿ ಅಂದ್ಕೊಂಡ್ರಾ? ಮೊದಲ ಆ ದಿನ ಅಲ್ಲಿಗೆ ಕಾಲಿಟ್ಟಾಗ ನಾನೂ ಹೀಗೆ, ಅವಾಕ್ಕಾದೆ. ನನ್ನನ್ನು ಅಲ್ಲಿಗೆ ಕರ್ಕೊಂಡ್ಹೋಗಿದ್ದ ಗೀತಾಳನ್ನು ಹಾಗೇ ಕೇಳ್ದೆ, ಅದಕ್ಕವಳು ‘ ಸ್ಮಶಾನದ ಗುಂಡಿ ಇನ್ನೂ ಆಳ ಇರುತ್ತೆ, ಇವುಗಳು ಅಷ್ಟೊಂದು ಆಳವಿಲ್ಲ. ಅಷ್ಟೇ ವ್ಯತ್ಯಾಸ’ ಅಂದ್ಲು.

ಒಂದೊಂದು ಗುಂಡಿ ಹತ್ರಾನೂ ಹೋದೆ. ಗುಂಡಿಯೊಳಗಿನ ಬಣ್ಣ ಬಣ್ಣದ ಗುರುತುಗಳನ್ನು ನೋಡ್ದೆ. ಒಂದಕ್ಕೂ ಇನ್ನೊಂದಕ್ಕೂ ಹತ್ತು-ಹನ್ನೆರಡು ಅಡಿ ಅಂತರ. ಅದೇ ಜಾಲಿಗಳು ಒಂದಿಷ್ಟು ಅಡ್ಡ ನಿಂತು ಆ ಗುಂಡಿಗಳಿಗೆ ಒಂದು ಪ್ರೈವೆಸಿ ತಂದುಕೊಟ್ಟಿವೆ.

ಪರಸ್ಪರ ವ್ಯವಹಾರ ಕುದ್ರಿಸ್ಕೊಂಡು ಅಲ್ಲಿಗೆ ಬರ್ತಾರೆ. ಹಾಸಿರೋ ಬಟ್ಟೆ ಕೊಡವಿದ್ರೆ ಸಾಕು ಶಯ್ಯಾಗಾರ ರೆಡಿ. ಒಂದೊಂದು ಗುಂಡಿಗೂ ಒಂದೊಂದು ಪ್ಯಾಕೆಟ್ ಕಾಂಡೂಮ್ ಹಾಕಿ ಬಂದ್ಲು ಗೀತಾ. ನಾನೊಂದು ಐಡಿಯಾ ಕೊಟ್ಟೆ. `ಹೀಗೆ ಹಾಕಿ ಬಂದ್ರೆ ಸೇಫ್ ಅಲ್ಲ, ಒಂದೊಂದು ಗುಂಡಿಯಲ್ಲೂ ಒಂದೊಂದು ದೀಪದ ಗೂಡಿನ ಥರಾ ಮಾಡಿ ಅದ್ರೊಳಗೆ ಕಾಂಡೂಮ್ ಇಡಬಹುದು. ಮಳೆ, ಬಿಸಿಲುಗಳಿಂದ್ಲೂ ರಕ್ಷಿಸ್ಬಹುದು’ ಅಂದೆ. ಈ ಕಾಂಡೂಮ್ ಕೆಲಸದಲ್ಲಿ ರೋಸಿಹೋಗಿದ್ದ ಗೀತಾ, ‘ಹೌದಮ್ಮ, ಅದೊಂದು ಬಾಕಿ,  ಅಷ್ಟೊಂದು ಅನುಕೂಲ ಮಾಡೋಳು ನೀನೆ ಬಂದು ಹಾಕ್ಬಿಡು ಅಂತಾರೆ ಅಷ್ಟೆ’ ಅಂತ ಕಿಚಾಯಿಸಿದ್ಲು. ಅಲ್ಲಿದ್ದ ಒಂದಷ್ಟು ಹುಡಿಗೀರ್ನ ಮಾತಾಡ್ಸಿದ್ವು. ಗೀತಾ ಕನ್ನಡಕ್ಕೆ ಅನುವಾದ ಮಾಡಿದ್ಲು: ‘ಹದಿನೈದು ರೂಪಾಯಿಯಿಂದ ಹಿಡ್ದು ಹೆಚ್ಚಂದ್ರೆ ನೂರು ರೂಪಾಯಿಯವರ್ಗೂ ಗಿರಾಕಿಗಳು ಬರ್ತಾರೆ’. ಚೌಕಾಸಿ ಮಾಡೋ ಚಾಲಾಕಿನ ಮೇಲೆ ಹಣ ನಿಗದಿಯಾಗುತ್ತೆ. ಇನ್ನು ಜಾಗ ಫ್ರೀ. ಉಳಿದ ಎಲ್ಲವೂ ನಿಸರ್ಗದತ್ತ!

 

‘ಅಯ್ಯಪ್ಪನ ಸೀಸನ್ನಲ್ಲಿ ಸ್ವಲ್ಪ ಪ್ರಾಬ್ಲಮ್. ಗಿರಾಕಿಗಳು ಕಡಿಮೆ. ಆದ್ರೆ ಸೀಸನ್ ಮುಗಿಯೋವಾಗ ಗಿರಾಕಿಗಳ ಸುಗ್ಗಿ.  ಮೊದಮೊದಲು ಅಯ್ಯಪ್ಪನ ವೇವ್ ಶುರುವಾದಾಗ ಮೂರು ತಿಂಗಳುಗಳ ಕಾಲ ಗಿರಾಕಿಗಳೇ ಕಡಿಮೆ ಆಗೋರು. ಎಷ್ಟೋ ಬಾರಿ ಆ ಅಯ್ಯಪ್ಪ ನಮ್ಮ ಹೊಟ್ಟೆ ಮೇಲೆ ಹೊಡೆದ್ಬುಟ್ಟೌನೆ. ಈಗೆಲ್ಲಾ ಆ ವ್ರತ ಕಡಿಮೆ ಆಗಿ, ಸ್ವಲ್ಪ ದುಡ್ಡು ಜಾಸ್ತಿ ಸಿಗುತ್ತೆ. ಇನ್ನು ಜಾತ್ರೆ, ವಿಶೇಷ ಪೂಜೆ, ಪಕ್ಷ- ಇಂಥಾ ಟೈಮಲ್ಲೆಲ್ಲಾ ಗಿರಾಕಿಗಳೇ ಜಾಸ್ತಿ ಇರ್ತಾರೆ. ಏನೇ ಇದ್ರೂ ನಾವು ಮಾತ್ರ ಹೀಗೆ’ ಅಂತ ಹೇಳ್ತಾ ಇದ್ಲು. ಅಷ್ಟೊತ್ತಿಗೆ ಗಿರಾಕಿ ಕಣ್ಣಿಗೆ ಬಿದ್ದ ಅನ್ಸುತ್ತೆ ಹಾಗೇ ಹೋದ್ಲು. ಬಟಾ ಬಯಲು, ಎಲ್ಲವೂ ಚಿತ್ರ ಬರೆದಂತೆ. ಏಳು ಮಲೆಗಳ ಆ ಲೇಯರ್ಗಳನ್ನು ನೋಡ್ತಾ ಹಾಗೇ ಕತ್ತೆತ್ತಿದೆ. ಅತ್ಯಂತ ಶ್ರೀಮಂತ ವೆಂಕಟ್ರಮಣನ ಮುಕುಟ ಹಿಂಭಾಗದಿಂದ ಕಾಣ್ತಾ ಇತ್ತು.

ಅದೇ ಯೋಚಿಸ್ತಾ ನಿಂತೆ. ಇಷ್ಟು ವರ್ಷಗಳು ಎಲ್ಲೆಲ್ಲಿ ಸುತ್ತಿ ಬಂದೆ. ಅಲ್ಲೆಲ್ಲ ಕಂಡದ್ದು ಪ್ರಕೃತಿ ಎಲ್ಲಿ ತನ್ನ ಛಾಪನ್ನು ಸುಂದರವಾಗಿ ಮೂಡಿಸಿರುತ್ತದೋ, ಅಲ್ಲೆಲ್ಲಾ ಮಾನವನ ಭೂಗತ ಚಟುವಟಿಕೆಗಳು, ಪಾತಕ ಲೋಕದ ತಾಣಗಳು ಸಾಮಾನ್ಯವಾಗಿ ಇರುತ್ತವೆ. ಅದರೊಂದಿಗೇ ವೇಶ್ಯಾವಾಟಿಕೆಯೂ ಇರುತ್ತದೆ. (ಪಾತಕ ಲೋಕ ಮತ್ತು ವೇಶ್ಯಾವಾಟಿಕೆಯ ನಿಕಟತೆಯ ಬಗ್ಗೆ ಮುಂದೆ ಬರೆಯುತ್ತೇನೆ.) ಪ್ರಕೃತಿದತ್ತವಾದ ಬೆಟ್ಟಗುಡ್ಡಗಳು, ದಟ್ಟವಾದ ಕಾಡುಗಳು, ಸಮುದ್ರ ತೀರಗಳು, ನದಿ ದಂಡೆಗಳು…….ಹೀಗೆ ಇವುಗಳ ವೇಶ್ಯಾವಾಟಿಕೆಗೆ ಹೇಳಿ ಮಾಡಿಸಿದಂಥ ಜಾಗಗಳು. ಗಿರಾಕಿಗಳು ಹೆಚ್ಚು ದೊರೆಯುವ ಹಾಗೆಯೇ ನಿರ್ಭಯವಾದ ಲೈಂಗಿಕ ಕ್ರಿಯೆಗೆ ತೊಡಗಬಹುದಾದ ಏಕಾಂತ. ಘಟ್ಟ ಪ್ರದೇಶ ಹೆದ್ದಾರಿಯೂ ಆಗಿ ದಟ್ಟವಾದ ಅರಣ್ಯವೂ ಇದ್ದಾಗ, ದಿನನಿತ್ಯ ನಿರಂತರವಾಗಿ ಓಡಾಡುವ ಸಾವಿರಾರು ಲಾರಿಗಳು ಹಾಗೂ ವಾಹನಗಳು ವಿಶ್ರಾಂತಿಗಾಗಿ, ಸ್ನಾನಕ್ಕಾಗಿ, ಊಟಕ್ಕಾಗಿ ವಿರಮಿಸುತ್ತವೆ. ಈ ಘಟ್ಟ ಪ್ರದೇಶದೊಂದಿಗೆ ಹರಿಯುತ್ತಿರುವ ನದಿಗಳ ತಪ್ಪಲಲ್ಲಿರುವ ಶಿರಾಡಿ ಘಾಟ್ ಕೂಡ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿದೆ.
ಒಮ್ಮೆ ಆ ಅಡವಿಯೊಳಗೆ ಹೊಕ್ಕರೆ ಸಾಕು, ಎಲ್ಲವೂ ಪ್ರೈವೆಸಿಯೇ! ಆ ದಟ್ಟತೆ ಎಲ್ಲವನ್ನೂ ತನ್ನ ಒಡಲೊಳಗೆ ಮುಚ್ಚಿಕೊಂಡುಬಿಡುತ್ತದೆ.
ಅಲ್ಲಲ್ಲಿಯೇ ಮರಗಳ ಬುಡಗಳಲ್ಲಿ ಸಮತಟ್ಟಾದ ಜಾಗಗಳಲ್ಲಿ ತಮಗೆ ಅಗತ್ಯವಿರುವಷ್ಟು ಜಾಗವನ್ನು ಸಿದ್ಧಗೊಳಿಸಿಕೊಂಡಿರುತ್ತಾರೆ. ಎಲೆಗಳ ರಾಶಿಯನ್ನೇ ಹಾಸಿಗೆಯನ್ನಾಗಿಸಿಕೊಳ್ಳುತ್ತಾರೆ.

ನೂರಾರು ಅಡಿ ಎತ್ತರದಲ್ಲಿ ಹೆದ್ದಾರಿ. ಇಕ್ಕೆಲಗಳ ಅಡವಿಯ ಇಳಿಜಾರು. ಅದರೊಳಗೆ ಇಳಿದಿಳಿದು ಹೋದಂತೆ ಆಳದಲ್ಲಿ ತಣ್ಣಗೆ ಹರಿಯುತ್ತಿರುವ ನದಿಗಳು ಈ ಲೈಂಗಿಕ ವೃತ್ತಿ ಮಹಿಳೆಯರ ಬದುಕಿನೊಂದಿಗೆ ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸುತ್ತವೆ.
ದಣಿದ ದೇಹ ಮನಸ್ಸುಗಳಿಗೆ ತನ್ನ ತಣ್ಣನೆಯ ಸ್ಪರ್ಶದೊಂದಿಗೆ ಮೈದಡವುತ್ತವೆ. ಅನೇಕ ಬಾರಿ ಪೊಲೀಸರಿಂದಲೋ, ಗಿರಾಕಿಗಳಿಂದಲೋ ರಕ್ತಸಿಕ್ತವಾಗುವುದು, ಘಾಸಿಗೊಳ್ಳುವುದು ಅತಿ ಸಾಮಾನ್ಯ. ಆಗೆಲ್ಲಾ ಅನಾಥ ಪ್ರಜ್ಞೆಯಿಂದ ಏಕಾಂಗಿಯಾಗಿ ಓಡಿಬಂದು ಈ ಪಾಪನಾಶಿನಿಯ ತೆಕ್ಕೆಗೆ ಬಿದ್ದುಬಿಡುತ್ತಾರೆ. ದುಗುಡಗಳು ಇಳಿಯುವವರೆಗೂ ಅಲ್ಲೇ ಅವಳ ಮಡಿಲಲ್ಲೇ ಇದ್ದುಬಿಡುತ್ತಾರೆ. ಕೆಲವೊಮ್ಮೆ ಮನಸ್ಸು ಉಲ್ಲಸಿತವಾದಾಗಲೂ ಕಾಲುಗಳನ್ನು ಇಳಿಬಿಟ್ಟು ಪಾಪನಾಶಿನಿಯ ಸ್ಪರ್ಶದೊಂದಿಗೆ ಪುಳಕಗೊಳ್ಳುತ್ತಾರೆೆ. ಬಹುಶಃ ಅವರು ಮಾನಸಿಕವಾಗಿ ರಿಫ್ರೆಶ್ ಆಗಲು ತೊಡಗಿಕೊಳ್ಳುವ ದಾರಿ.

 

One Response

  1. sunaath
    August 1, 2008

Add Comment