Quantcast

ಗೇರುತೋಪಿನ ಕಾವಲುಗಾರ

ಹೈವೇ 7                                                                     ವಿ ಎಂ ಮಂಜುನಾಥ್ 

———-

ಅಭಿನವ ಬೋದಿಲೇರ್ ಎಂದು ಕರೆಯಲ್ಪಡುವ ಹೊಸ ತಲೆಮಾರಿನ ಕವಿ ವಿ.ಎಂ.ಮಂಜುನಾಥ್ ತಮ್ಮ ಹಸಿ ಹಾಗೂ ತೀಕ್ಷ್ಣ ಪ್ರತಿಮೆಗಳ ಮೂಲಕ ಕನ್ನಡ ಕಾವ್ಯಾಸಕ್ತರನ್ನು ಅಚ್ಚರಿಗೊಳಿಸಿದವರು. ಅವರು ಈಚೆಗೆ ಬರೆಯುತ್ತಿರುವ ಹೈವೆ-೭ ಎಂಬ ಆತ್ಮಕಥನದ ಕೆಲವು ವಿಶಿಷ್ಟ ಭಾಗಗಳು 

 

* * *

ನನ್ನ ಗ್ರಾಮದ ಕುಂಟಮುನಿಸ್ವಾಮಿ ಗೇರುತೋಪಿನ ಕಾವಲುಗಾರನಾಗಿ ಸೇರಿಕೊಂಡ. ಅವನಿಗೆ ಒಂದು ಕೈ ಇರಲಿಲ್ಲ. ನಾನು ಚಿಕ್ಕಂದಿನಿಂದ ಅವನನ್ನು ಹತ್ತಿರದಿಂದ ನೋಡಿ ಬೆಳೆದಿದ್ದರೂ ಅದು ಯಾವ ಕೈ ಎಂದು ನನಗೆ ಈಗ ಹೇಳಲಾಗುತ್ತಿಲ್ಲ ಎನ್ನುವುದು ಸಂಕಟ ತರಿಸುತ್ತಿದೆ. ಅವನು ಕೈ ಕಳೆದುಕೊಂಡಿದ್ದು ಅಪಘಾತದಲ್ಲಿ. ಇವನು ಮೂಲತಃ ಲಾರಿಡ್ರೈವರ್. ಇವನು ಬ್ಯಾರೆಲ್ಗಟ್ಟಲೆ ಸಾರಾಯಿ ಹೀರಿ ಹಾಕುತ್ತಿದ್ದ. ಹೀಗೆ ಅತಿಯಾಗಿ ಕುಡಿದುಕೊಂಡು ಹಾದಿಬದಿಯ ಪೊದೆಗಳಲ್ಲಿ ಕಾದು ಕುಳಿತ ನಾಲ್ಕೈದುಹೆಣ್ಣುಗಳನ್ನು ಲಾರಿಯಲ್ಲಿ ಹತ್ತಿಸಿಕೊಂಡು ವೇಗವಾಗಿ ಓಡಿಸತೊಡಗಿದ. ಅವರೊಂದಿಗೆ ಚಕ್ಕಂದವಾಡುತ್ತ, ರೈಲ್ವೆ ಲೆವೆಲ್ಕ್ರಾಸಿಂಗ್ ಅನ್ನು ಗಮನಿಸದೆ ರೈಲಿಗೆ ಟ್ರಕ್ ಗುದ್ದಿ ತನ್ನ ಒಂದು ಕೈ ಕಳೆದುಕೊಂಡ. ಹೀಗೆ ಅವನ ಸ್ವೇಚ್ಛಾಚಾರ ತೆರೆ ಕಂಡೀತೆಂದು ನಾವೆಲ್ಲರೂ ಅಂದುಕೊಳ್ಳುವಷ್ಟೊತ್ತಿಗೆ ಅವನ ನಿಜವಾದ ಕಾಮಪ್ರಚೋದಕ ಮದ್ಯಸೇವನೆ, ತೆವಲುಗಳು ಆರಂಭಗೊಂಡಿದ್ದವು. ಇದ್ದ ಒಂದು ಕೈನಲ್ಲೇ ಹರಾಮಿ ಹೆಂಗಸರನ್ನು ಸಂಭಾಳಿಸುತ್ತಿದ್ದ. ನಶೆಯಲ್ಲಿರುತ್ತಿದ್ದ ಸುಂದರಿಯನ್ನು ಜಾಣತನದಿಂದ ಓಲೈಸುತ್ತಿದ್ದ. ಹೆಗಲಿನ ಮೇಲೆ ಟವೆಲ್ ಹಾಕಿಕೊಂಡಿರುತ್ತಿದ್ದ ಈತ ಬೀಡಿ ಸೇದುತ್ತಾ ಮಳೆಗಾಲದಲ್ಲಿ ನಮ್ಮ ಮನೆಗಳ ಚಾವಣಿಗಳ ಕೆಳಗೆ ನಿಂತುಕೊಂಡಿರುತ್ತಿದ್ದ. ಮಳೆನೀರಿನಿಂದ ನೆನೆದ ಹಕ್ಕಿಯೊಂದು ಗರಿಗೆದರುವಂತೆ ಅವನು ತನ್ನ ತಲೆಯನ್ನು ಕೊಡವಿಕೊಳ್ಳುತ್ತಿದ್ದ.
ಕಳ್ಳತನ, ವೇಶ್ಯಾವೃತ್ತಿ, ಇಸ್ಪೀಟು, ಕಳ್ಳಭಟ್ಟಿ ಸಾರಾಯಿ ದಂಧೆಯಲ್ಲಿ ನಿರತನಾಗಿದ್ದ ಕುಂಟಮುನಿಸ್ವಾಮಿಗೆ ಕೃತಜ್ಞತೆ ಎಂಬುದು ಕೂದಲೆಳೆಯಷ್ಟೂ ಇರಲಿಲ್ಲ. ಬಹುಶಃ ಅವನ ಸದ್ಯದ ಅಸಹಾಯಕತೆ ಹಾಗೂ ಹಿಂದಿನ ಮಾದಕ ಬದುಕಿನ ನೆನಪುಗಳು ಅವನ ಅವಿಧೇಯತೆಗೆ ಕಾರಣವಿರಬಹುದು. ಹೀಗೆ ನಮ್ಮ ಮನೆಗಳ, ಸಾಲುಹುಣಸೆಮರಗಳ, ಗುಜರಿ ಅಂಗಡಿ ಮುಂದೆ ಕುಳಿತಿರುತ್ತಿದ್ದ ಕುಂಟಮುನಿಸ್ವಾಮಿ ಯಾರಾದರೂ ಹಣವಂತರು, ಪರಿಚಯಸ್ಥರು ಸಾರಾಯಿ ಅಂಗಡಿ ಕಡೆಗೆ ಬರುತ್ತಿದ್ದರೆ ಮೊದಲೇ ಅವರ ಬಳಿಗೆ ಓಡಿಹೋಗಿ, ಅವರನ್ನು ಹಿಂಬಾಲಿಸುತ್ತಿದ್ದ. ಕೈ ಇಲ್ಲದಿದ್ದರೂ ಯಾರದ್ದಾದರೂ ಸೈಕಲ್ಗಳನ್ನು ವೇಗವಾಗಿ ಓಡಿಸುತ್ತಿದ್ದ. ಇವನು ಬಹುಕಾಲ ಸಾರಾಯಿ ಅಂಗಡಿ ಮತ್ತು ಬಾರ್ಗಳಲ್ಲೇ ತನ್ನ ಬದುಕನ್ನು ಕಳೆದ. ಸುಂದರಿ ಮತ್ತು ಆಚಾರಮ್ಮನಿಗೆ ಹಣವಂತ ಗಿರಾಕಿಗಳನ್ನು ಹಿಡಿದು ತರುತ್ತಿದ್ದ ನಿಸ್ಸೀಮ. ಇವನ ಹೆಂಡತಿ ಮತ್ತು ಮಕ್ಕಳು ಯಾರು ಎಲ್ಲಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಒಮ್ಮೆ ಇವನ ಹೆಂಡತಿಮಕ್ಕಳು ಊರಿಗೆ ಬಂದುಹೋಗಿದ್ದು ಮಾತ್ರ ನೆನಪಿದೆ.
ದೊಡ್ಡವಯಸ್ಸಿನ ಕುಂಟಮುನಿಸ್ವಾಮಿ ಮತ್ತು ಇವನಷ್ಟೇ ವಯಸ್ಸಿನ ಇವನ ತಮ್ಮನನ್ನು ಸಾಕುತ್ತಿದ್ದದ್ದು ಇವರಿಬ್ಬರನ್ನೂ ಹೆತ್ತವಳೇ. ಏಕೆಂದರೆ ಇವರು ದುಡಿದದ್ದೆಲ್ಲಾ ಇವರ ಸಾರಾಯಿ ಸೇವನೆಗೆ ಸಾಕಾಗುತ್ತಿತ್ತು. ಇವರ ತಾಯಿ ಸಾಹುಕಾರರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದಳು. ನಾನು ಸ್ಕೂಲಿಗೆ ಹೋಗುವಾಗ ಅವಳು ರಸ್ತೆಯ ಒಂದು ಬದಿಯಲ್ಲೇ ನಡೆದುಬರುತ್ತಿದ್ದಳು. ಕೈಯಲ್ಲಿ ಒಂದು ದೊಡ್ಡಚೀಲವಿರುತ್ತಿತ್ತು. ಅದರಲ್ಲಿ ರೊಟ್ಟಿ, ಅನ್ನ ಇರುತ್ತಿತ್ತು. ಅವಳು ಮನೆಗೆಲಸ ಮುಗಿಸಿಕೊಂಡು ಹಿಂದಿರುಗಿ ಬರುವಾಗ ಪೇಪರ್, ಕಬ್ಬಿಣ, ಬಾಟಲ್ಗಳನ್ನು ಹಾಯ್ದು ತರುತ್ತಿದ್ದಳು. ಅವೆಲ್ಲವನ್ನೂ ಗುಜರಿಗೆ ಹಾಕಿ, ಬಂದ ಹಣದಿಂದ ಇಬ್ಬರು ಮಕ್ಕಳಿಗೆ ಬನ್ನು ತೆಗೆದುಕೊಂಡು ಹೋಗುತ್ತಿದ್ದಳು. ವಯಸ್ಸಾದ ಆ ಹೆಂಗಸು ಮನೆಯ ಮುಂದೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದಳು. ಊಟದಲ್ಲೇನಾದರೂ ಸ್ವಲ್ಪ ತಡವಾಯ್ತು ಅಂದ್ರೆ ಮಕ್ಕಳಿಬ್ಬರೂ ಸೇರಿಕೊಂಡು ಬಡಿದು ಹಾಕುತ್ತಿದ್ದರು.
ಈ ಮೂವರಲ್ಲಿ ಕುಂಟಮುನಿಸ್ವಾಮಿ ಕ್ಷಯರೋಗಕ್ಕೆ ತುತ್ತಾಗಿ ಮೂಲೆ ಸೇರಿದ. ಅಂತಹ ಸಂದರ್ಭದಲ್ಲಿ ಅವನ ತಾಯಿ ಅವನನ್ನು ಉಳಿಸಿಕೊಳ್ಳಲು ಹೆಣಗಾಡಿದಳು. ಅವನು ತೀರಿಕೊಂಡ. ಅವನ ತಾಯಿ ಗೋಳಾಡುತ್ತಿದ್ದರೆ, ಇನ್ನೊಬ್ಬ ಮಗ ಕಂಠಮಟ್ಟ ಕುಡಿದು ಒಳ್ಳೇ ದೆವ್ವ ಬಂದಂತೆ ನಿಂತಿದ್ದ. ಒಂದೇ ಕೋಣೆಯಲ್ಲಿ ಮೂವರು ನರೆಗೂದಲಿನವರೇ ಜೀವಿಸುತ್ತಿದ್ದು ಕಡೆಗೆ ಇಬ್ಬರೇ ಉಳಿದರು. ನಾನು ಈಗ ಹೇಳಿದ್ದು ಎಷ್ಟೋ ವರ್ಷಗಳ ಹಿಂದಿನ ಮಾತು. ಉಳಿದೊಬ್ಬ ಮಗ ಮದುವೆಯೇ ಆಗಲಿಲ್ಲ. ಈಗ ಅವನು ಹೈವೇಯಲ್ಲಿ ಕಡ್ಡಿ ಹಿಡಿದುಕೊಂಡು ಭಿಕ್ಷೆ ಬೇಡುತ್ತಿರುವುದನ್ನು ಈಗಲೂ ನೋಡಬಹುದು. ನಮ್ಮ ಮನೆಯ ಆಸುಪಾಸಿನಲ್ಲೇ ಇವರು ಬೆಳೆದಿದ್ದರಿಂದ ಈಗಲೂ ನಮ್ಮ ಮನೆಯವರು ಯಾರಾದರೂ ಕಾಣಿಸಿದರೆ, ಈತ ಬೇಗಬೇಗ ನಮ್ಮ ಬಳಿಗೆ ಓಡಿಬಂದು ಕೈ ಒಡ್ಡುತ್ತಾನೆ. ಇವರಿಬ್ಬರನ್ನೂ ಸಾಕಿದ ತಾಯಿ ಇನ್ನೂ ಬದುಕಿದ್ದಾಳೆ.  
ಕುಂಟಮುನಿಸ್ವಾಮಿ ಗೇರುತೋಪಿನಲ್ಲಿ ಕಾವಲುಗಾರನಾಗಿ ಸೇರಿಕೊಂಡರೂ ಅದು ನೆಪಮಾತ್ರವಾಗಿತ್ತು. ಹೆಣ್ಣುಗಳನ್ನು ಹುಡುಕಿಕೊಂಡು ಬರುವ ಸೈನಿಕರಿಗೆ ತಲೆಹಿಡುಕನಾಗಿ ತನ್ನ ಕೆಲಸವನ್ನು ಆರಂಭಿಸಿದ. ಸಂಜೆಯಾಗುತ್ತಿದ್ದಂತೆ ಗೇರುತೋಪಿನಲ್ಲಿ ಮುನಿಸ್ವಾಮಿ ಬೇರೆಬೇರೆ ಹೆಣ್ಣುಗಳ ಸಂಗಡ ಕುಳಿತಿರುತ್ತಿದ್ದ. ಬೇರೆಬೇರೆ ಊರುಗಳಿಗೆ ಈ ದಂಧೆಗಾಗಿ ಹೆಣ್ಣುಗಳನ್ನು ಕರೆತರುತ್ತಿದ್ದ. ಇದರ ಜೊತೆಗೆ ಗೇರುತೋಪು ಕಾವಲು ಕಾಯುತ್ತಲೇ ಜೀಡಿಬೀಜಗಳನ್ನು ಮಾರಿಕೊಳ್ಳುತ್ತಿದ್ದ. ಜೀಡಿಬೀಜಗಳು ದುಬಾರಿಯಾದ್ದರಿಂದ ಯಾವಾಗಲಾದರೂ ಮನೆಗೆ ಬರುವಾಗ ಕದ್ದು ತಂದು ಅಂಗಡಿಗಳಿಗೆ ಮಾರಿಕೊಳ್ಳುತ್ತಿದ್ದ.

ಅಪ್ಪ ಅದೇ ಗೇರುತೋಪಿನ ಹಾದಿಯಲ್ಲಿ ಹೋಗುತ್ತಾ ಬರುತ್ತಿದ್ದದ್ದರಿಂದ ಅವರ ಕೈಗೆ ಜೀಡಿಬೀಜಗಳ ಚೀಲವನ್ನು ಕೊಟ್ಟು ಕಳುಹಿಸುತ್ತಿದ್ದ. ಸಂಜೆ ನಮ್ಮ ಮನೆಗೆ ಬಂದು ಪಡೆದುಕೊಳ್ಳುತ್ತಿದ್ದ. ಕುಂಟಮುನಿಸ್ವಾಮಿಗೆ ಕುಡಿಯಲಷ್ಟೇ ಹಣ ಬೇಕಾದ್ದರಿಂದ ಹೆಚ್ಚಿಗೇನೂ ಹಣ ಕೇಳುತ್ತಿರಲಿಲ್ಲ. ಅಮ್ಮ ಆಗಾಗ ಹಣ ಕೊಟ್ಟು ಜೀಡಿಬೀಜಗಳನ್ನು ಕೊಳ್ಳುತ್ತಿದ್ದಳು. ಹೆಚ್ಚಿಗೇನಾದರೂ ಹಣ ಕೇಳಿದರೆ ಅಪ್ಪ ಅವನನ್ನು ಬೈಯುತ್ತಿದ್ದರು.

ಸೈನಿಕರ ಮೈಮನಗಳನ್ನು ತಣಿಸಲು ದೂರದೂರುಗಳಿಂದ ಗೇರುತೋಪಿಗೆ ಬರುತ್ತಿದ್ದ ಹೆಣ್ಣುಗಳಿಗೆ, ಸೈನಿಕರಿಗೆ ಮದ್ಯ, ಊಟ ಸರಬರಾಜು ಮಾಡುತ್ತಿದ್ದ. ತನಗೆ ಬರಬೇಕಾದ ಕಮೀಷನ್ಗಾಗಿ ಆತ ಅವರಿಂದ ಒದೆಸಿಕೊಂಡು ಗೇರುತೋಪಿನಿಂದ ನಿರ್ಗಮಿಸಿದ್ದನ್ನು ಅನೇಕ ಸಲ ನೋಡಿದ್ದೇನೆ. ಸೈನಿಕರು ಅಷ್ಟುದೂರದಲ್ಲಿ ಕಾಣುತ್ತಿದ್ದಂತೆ ಅವರ ಹತ್ತಿರ ಓಡುತ್ತಿದ್ದ. ಅಪ್ಪ ಕೆಲಸದಿಂದ ಹಿಂತಿರುಗುವಾಗ ಕುಂಟಮುನಿಸ್ವಾಮಿಯ ಜೊತೆ ಮರದ ಕೆಳಗೆ ಕುಳಿತುಕೊಂಡು ಎಲೆಅಡಿಕೆ, ಬೀಡಿ ಸೇದುವುದು ರೂಢಿಯಾಗಿತ್ತು.
ಹೀಗೆ ಗೇರುತೋಪನ್ನು ಕೊಂಡವರಿಗೆ ಕುಂಟಮುನಿಸ್ವಾಮಿಯ ತಲೆಹಿಡುಕತನದ ಜೊತೆಜೊತೆಗೇ ಗೇರುಬೀಜ ಕದಿಯುವುದು ಗೊತ್ತಾಗಿ ಅವನನ್ನು ಒದ್ದು, ಗೇರುತೋಪಿನಿಂದ ಹೊರಗೆ ಅಟ್ಟಿದರೂ ಅವನು ಮತ್ತೆಮತ್ತೆ ಕೆಲಸ ಕೇಳಿಕೊಂಡು ಅದೇ ಗೇರುತೋಪಿಗೆ ಹೋಗುತ್ತಿದ್ದ.

 

Add Comment