Quantcast

ಜಿ ಟಿ ಎನ್ ಅವರಿಗೆ ಹೆಚ್ಚು ಕೆಲಸವಿತ್ತು…

-ಜಿ ಎನ್ ಮೋಹನ್

ಜಿ ಟಿ ನಾರಾಯಣರಾವ್ ಅವರು ಇನ್ನು ನೆನಪು ಮಾತ್ರ ಎಂದಾಗ ಏಕೋ ಒಂದು ಕ್ಷಣ ಮನಸ್ಸು ಒಪ್ಪಲು ಸಿದ್ಧವಾಗಲಿಲ್ಲ. ಮೈಸೂರಿನಿಂದ ನೋವಿನ ಈ ಸುದ್ದಿ ಹೊತ್ತ ರಮೇಶ್ ಪೆರ್ಲರ ಎಸ್ ಎಂ ಎಸ್ ಬಂದಾಗ ನನಗೆ ಆ ಒಂದು ದೊಡ್ಡ ದನಿ ಉಡುಗಿ ಹೋಯಿತಲ್ಲಾ ಎನಿಸಿತು.

ಆ ದೊಡ್ಡ ದನಿ ನನಗೆ ಯಾಕೆ ಮುಖ್ಯ ಎಂದರೆ ಅದು ಈ ಸಮಾಜದ ಒಂದು ದೊಡ್ಡ ದನಿಯೂ ಆಗಿತ್ತು  ಎಂಬುದಕ್ಕೆ. ತನ್ನ ಕೊನೆಯ ದಿನದವರೆಗೆ ತಮ್ಮ ಮಕ್ಕಳಿಂದ ಹಿಡಿದು ತಮ್ಮ ಸಂಪರ್ಕಕ್ಕೆ ಬಂದವರಿಗೆಲ್ಲ ವೈಜ್ಞಾನಿಕ ಮನೋಭಾವ ಬಿತ್ತಿದ ದೊಡ್ಡ ಮನಸ್ಸು ಅವರದು.

ನಾನು ಹೈಸ್ಕೂಲ್ ದಿನಗಳಲ್ಲಿ ‘ಬಾಲ ವಿಜ್ಞಾನ’ ಓದುತ್ತಿದ್ದಾಗ ಬರಹದ ಮೂಲಕ ಗೊತ್ತಾದ ಮೂರು ಮುಖ್ಯ  ಹೆಸರು- ಜಿ ಟಿ ಎನ್, ಜೆ ಆರ್ ಲಕ್ಷ್ಮಣರಾವ್ ಹಾಗೂ ಅಡ್ಯನಡ್ಕ ಕೃಷ್ಣ ಭಟ್. ನಂತರ ಅದೇ ಕರ್ನಾಟಕ ವಿಜ್ಞಾನ ಪರಿಷತ್ ಗೆ ನಾನು ಆಯ್ಕೆಯಾಗಿ ಅದೇ ಬಾಲ ವಿಜ್ಞಾನದ ಸಂಪಾದಕ ಮಂಡಳಿಯಲ್ಲಿ ಸೇರ್ಪಡೆಯಾದಾಗ ಆ ಮೂರೂ ಗಣ್ಯರ ಸಹವಾಸ ಸಿಕ್ಕಿತ್ತು.

ಮೊದಲಿನಿಂದಲೂ ದೇವರು, ಮೂಢ ನಂಬಿಕೆಯನ್ನು ದೂರವೇ ಇಟ್ಟು ಚೆನ್ನಾಗಿ ಬದುಕಿದ ನಮಗೆ ಜಿ ಟಿ ಎನ್ ಹಾಗೂ ಅವರ ತಲೆಮಾರಿನವರು ‘ಬಾಳಿಗೊಂದು ನಂಬಿಕೆ’ಯಾಗಿ ಕಂಡಿದ್ದರು.

ಆಕಸ್ಮಿಕವಾಗಿ  ಮಂಗಳೂರು ತಲುಪಿಕೊಂಡ ನನಗೆ ಆದ ದೊಡ್ಡ ಲಾಭಗಳಲ್ಲಿ ಜಿ ಟಿ ಎನ್ ಅವರ ಒಡನಾಟವೂ ಒಂದು. ಅತ್ರಿ ಬುಕ್ ಸೆಂಟರ್ ನ ಅಶೋಕ ವರ್ಧನ ಅವರಿಂದ ಶಿಸ್ತು, ಗಡಸು ಪ್ರೀತಿಗಳ ಪಾಠ ಕಲಿಯುತ್ತಿರುವಾಗಲೇ ಅದೇ ಗಲ್ಲಾ ಪೆಟ್ಟಿಗೆಯಲ್ಲಿ ಜಿ ಟಿ ಎನ್ ಅವರನ್ನು ಕಂಡೆ. ಅಶೋಕವರ್ಧನ, ಅಭಯಸಿಂಹ ಅವರೊಳಗೆ ಸದಾ ಅಡಗಿ ಕೂತ ಶಿಸ್ತು, ಛಲದ ದ ಜೀನ್ ಎಲ್ಲಿದೆ ಎಂಬುದು ಗೊತ್ತಾಗಿ ಹೋಗಿತ್ತು.

ನನ್ನ ಕಾಲದ ಓದುಗರಿಗೆ ಜಿ ಟಿ ಎನ್ ಅವರ ಬರಹದ ಶೈಲಿ ಹಳಗನ್ನಡವೇ.

ಪತ್ರಿಕೋದ್ಯಮದಲ್ಲಿ ಆ ವೇಳೆಗಾಗಲೇ ನಾಗೇಶ ಹೆಗಡೆ, ಎಚ್ ಆರ್ ಕೃಷ್ಣ ಮೂರ್ತಿ ಅವರ ವಿಜ್ಞಾನ ಬರಹಗಳ ಸವಿ ಉಂಡಿದ್ದ ನಮಗೆ ಜಿ ಟಿ ಎನ್ ಒಂದಿಷ್ಟು ದೂರದಲ್ಲೇ ನಿಲ್ಲುತ್ತಿದ್ದರು. ಆದರೆ ನಾವು ಸರಳ ಬರಹ ರೂಢಿಸಿಕೊಂಡವರು ಎಂದು ಗೌರವಿಸುತ್ತಿದ್ದ ಈ ಎಲ್ಲರಿಗೂ ಆ ಕಾಲಕ್ಕೆ ಜಿ ಟಿ ಎನ್ ಮಾದರಿಯಾಗಿದ್ದರು ಎಂಬುದು ಇನ್ನಷ್ಟು ಗೌರವಕ್ಕೆ ಕಾರಣವಾಗಿತ್ತು.

ಈಟಿವಿಯಲ್ಲಿದ್ದ ದಿನಗಳಲ್ಲಿ ಜ್ಯೋತಿಷಿಗಳನ್ನು ಅನಾವರಣ ಮಾಡುವ ಒಂದು ಅವಕಾಶ ಅಚಾನಕ್ಕಾಗಿ ನನಗೆ ಸಿಕ್ಕಿತ್ತು. ಸರ್ಕಾರಕ್ಕೆ ಸಂಬಂಧಿಸಿದಂತೆ ಹೇಳಿದ್ದ ಮಹಾ ಮಹಾ ಜ್ಯೋತಿಷ್ಯವಾಣಿಗಳೆಲ್ಲ ಬಾವಲಿಗಳಂತೆ ಮಾರನೆಯ ದಿನ ತಲೆಕೆಳಗು ಮಾಡಿಕೊಂಡು ಜೋತಾಡುತ್ತಿದ್ದವು. ಇದೇ ಸಂದರ್ಭದಲ್ಲಿ ಈ ಜ್ಯೋತಿಷ್ಯ ಎಂಬುದು ‘ಸುಳ್ಳೇ ಸುಳ್ಳು’ ಎಂದು ಹೇಳುವ ಒಂದು ಅವಕಾಶ ನನಗೆ ಸಿಕ್ಕಿತ್ತು.

ಅದು ಟಿ ವಿ ಪರದೆಯ ಮೇಲೆ ಮೂಡುತ್ತಿದ್ದಂತೆ ಬಂದ ಮೊದಲ ಫೋನ್ ಜಿ ಟಿ ಎನ್ ಅವರದ್ದು, ಮೈಸೂರಿನಿಂದ. ‘ಶಹಭಾಶ್’ ಎಂದರು. ಅದು ನನ್ನ ಬೆನ್ನ ಮೇಲೆ ಒಂದು ನೇವರಿಕೆಯಾಗಿ ಈಗಲೂ ನಿಂತಿದೆ.

ಪದ್ಮಪ್ರಿಯ ಪ್ರಕರಣದಲ್ಲಿ ಜ್ಯೋತಿಷ್ಯ, ಅಷ್ಟಮಂಗಳ, ಕಲ್ಲುರ್ಟಿ, ಅಂಜನ ಈ ಎಲ್ಲಾ ಪ್ರಶ್ನೆಗಳೂ ಎದ್ದು ದಿಢೀರನೆ ತಲೆಬರಹಗಳಾಗಿ ನಿಂತಾಗ ನಾನು ಮತ್ತೆ ಜಿ ಟಿ ಎನ್ ಅವರನ್ನು ನೆನಸಿಕೊಂಡೆ. ಈಗ ಜಿ ಟಿ ಎನ್ ಇಲ್ಲ. ಜಗತ್ತನ್ನು ಬದಲಾಯಿಸಿದ ವೈಜ್ಞಾನಿಕ ಸಾಧನಗಳು ಹಿಮ್ಮುಖವಾಗಿ ಚಲಿಸುತ್ತಿರುವ ಈ ದಿನಗಳಲ್ಲಿ ಜಿ ಟಿ ಎನ್ ಅವರಿಗೆ ಹೆಚ್ಚು ಕೆಲಸವಿತ್ತು. ಜಿ ಟಿ ಎನ್ ನೀವು ಹೋಗಬಾರದಿತ್ತು…

ಚಿತ್ರ ಕೃಪೆ: ಸಂಪದ

ಜಿ ಟಿ ಎನ್ ಅವರ ವಿವರ ಸಂದರ್ಶನಕ್ಕೆ ‘ಸಂಪದ’ಕ್ಕೆ ಭೇಟಿ ಕೊಡಿ-

9 Comments

 1. Shama, Nandibetta
  May 3, 2016
 2. ಉದಯಕುಮಾರ್ ಹಬ್ಬು
  May 12, 2013
 3. ಸಿದ್ದಮುಖಿ
  July 2, 2008
 4. gangadharaiah.s
  June 30, 2008
 5. natarajhuliyar
  June 30, 2008
 6. lakshimnarasimha
  June 29, 2008
 7. shile
  June 29, 2008
 8. malathi S
  June 29, 2008

Add Comment