Quantcast

ಒಂದು ಕಡೆ ಆಶಾ, ಮತ್ತೊಂದು ಕಡೆ ಶಮಿತಾ

ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ..

 

ಏನಿಲ್ಲ ಎಂದ್ರೂ ಸುಮಾರು ೧೫ ವರುಷಗಳ ಬಳಿಕ ಅವರನ್ನು ಭೇಟಿಯಾಗಿದ್ದೆ. ದೊಡ್ಡವಳು ಶಮಿತಾ. ನಂತರ ಸೀಮಾ ಮತ್ತು ಸುಜಾತಾ.

ಹಾಗೇ ನೋಡುತ್ತ ನಿಂತವಳು ನಿಂತೇ ಇದ್ದೆ . ಅವರೂ ಅಷ್ಟೇ. ನಾನು ಹೌದಾ ಅಲ್ವಾ ಅಂತ ಒಂದೇ ಸಮ ನನ್ನನ್ನೇ ನೋಡತೊಡಗಿದ್ದುದು ಸ್ವಲ್ಪ ಮುಜುಗರ ಎನಿಸಿತು. ಶಮಿತಾ ಏನಿಲ್ಲವೆಂದರೂ 80ಕೆಜಿ ಊದಿದ್ದಳಿರಬೇಕು. ಥೇಟ್ ಅವಳಮ್ಮನ ಥರ, ಥರ ಏನು ಒಂದು ಕೈ ಹೆಚ್ಚೇ. ನಾನೇ ಮುಂದಾಗಿ ಸೀಮಾ ಮತ್ತು ಸುಜಾತಾಳನ್ನು ಮಾತನಾಡಿಸಿದೆ.

ಮೊನ್ನೆ ಮೊನ್ನೆ ನನ್ನ ಕಣ್ಣೆದುರಿಗೆ ಜಿಂಕೆಯಂತೆ ನೆಗೆಯುತ್ತಿದ್ದ ಗುಲಾಬಿ ಬಣ್ಣದ ಸೀಮಾ ಇವಳೇನಾ..ರಸ್ತೆಗೆ ಬಂದರೆ ಸಾಕು ಹುಡುಗರ ನಿದ್ದೆ ಕೆಡಿಸುತ್ತಿದ್ದ ಸುಜಾತಾ ಹಿಂಗ್ಯಾಕಾಗಿದ್ದಾಳೆ…

ಅವರ ಮಾತೋ ೬೦ ವರ್ಷ ದಾಟಿದ ಹೆಂಗಳೆಯರನ್ನು ಮೀರಿಸುತ್ತಿತ್ತು. ಕೇಳಿ ಕೇಳಿಯೇ ಸುಸ್ತಾಗತೊಡಗಿದೆ. ಫೋನಿನಲ್ಲಿ ಅಗಾಗ ಹಾಯ್, ಹಲೋ ಬಿಟ್ಟರೆ ಹೆಚ್ಚಿಗೆ ಅಂಥಹ ಮಾತು ಇರಲಿಲ್ಲ. ಶಮಿತಾ ಮತ್ತು ನಾನು ಇಬ್ಬರು ಒಟ್ಟಿಗೆ ಒಂದೇ ಕ್ಲಾಸಿನಲ್ಲಿದ್ವಿ . ಅವಳ ತಂದೆ ಎಂಜಿನಿಯರ್. ಮನೆಯಲ್ಲಿ ಸಾಕಷ್ಟು ಶ್ರೀಮಂತಿಕೆ ಇತ್ತು. ಶಮಿತಳನ್ನು ಹೇಗಾದರೂ ಮಾಡಿ ಡಾಕ್ಟರ್ ಮಾಡಲೇಬೇಕು ಎಂದು ತೀರ್ಮಾನಿಸಿದ್ದರು.

ಆದರೆ ಶಮಿತಾಳ ತಲೆಗೆ ಯಾವ ಕ್ಯಾಲ್ಕುಲಸ್, ಸೈನ್ಸು ಹೋಗುತ್ತಿರಲಿಲ್ಲ. ಕೊನೆಯ ಇಬ್ಬರು ತಂಗಿಯರ ಜೊತೆ ಹರಟೆ ಹೊಡೆಯುತ್ತ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ತಿನ್ನುತ್ತಾ ಕಾಲ ಕಳೆದ ಶಮಿತಾ ಕೊನೆಗೂ ಪಿಯುಸಿಯಲ್ಲಿ ಫೇಲ್ ಸರ್ಟಿಫಿಕೇಟ್ ತಗೊಂಡು ಬಂದಿದ್ದಳು. ಗಳು ಡಾಕ್ಟರ್ ಆಗಬೇಕೆಂಬ ಕನಸುಗಳನ್ನು ಹೆಣೆದಿದ್ದ ತಂದೆ ಮೂಲೆಯಲ್ಲಿ  ಕೂತು ಯಾರಿಗೂ ಕಾಣದಂತೆ ಕಣೀರು ಹಾಕಿದ್ದು ಕಂಡಿದ್ದೆ.   ಮಗಳು ಮಾತ್ರ  ಕುರುಕು ತಿಂಡಿ ತಿನ್ನೋದ್ರಲ್ಲಿ ಮಗ್ನ.

ಶಮಿತಾ ನಿನ್ನಪ್ಪ ಬೇಜಾರು ಮಾಡ್ಕೊಂಡಿದ್ದಾರೆ ಕಣೆ. ನೀನು ನೋಡಿದ್ರೆ ಆರಾಮಾಗಿದ್ದೀಯ.
ನಾನೇನು ಮಾಡ್ಲಿ. ಎಲ್ಲ ನಮ್ಮ ಹಣೆಬರಹ. ಏನು ಮಾಡೋಕ್ಕಾಗಲ್ಲ.

ಲೆ: ಗುಜ್ಜಾರ್

ಅವಳ ಮಾತು ಕೇಳಿ ಸಾರ್ಥಕ ಆಯ್ತು ಅಂತ ಮನಸ್ಸಲ್ಲೇ ಅಂದುಕೊಂಡು ಸುಮ್ಮನಾಗಿದ್ದೆ. ಮುಂದೆ ಅವರಪ್ಪ ಮತ್ತೊಮ್ಮೆ ಹೇಗಾದರು ಮಾಡಿ ಮಗಳು ಪಿಯುಸಿ ಪಾಸು ಮಾಡಲೇಬೇಕೆಂದು ಪಣ ತೊಟ್ಟಿದ್ದರು.  ಜಪ್ಪಯ್ಯ ಅಂದ್ರು ಶಮಿತಾ ಒಂದು ಹೆಚ್ಹು ಅಂಕ ಕೂಡ ಪಡೆಯಲಿಲ್ಲ. ನಂತರ ಉಳಿದಿದ್ದು ಒಂದೇ ದಾರಿ-ಮದುವೆ.

ಗ್ರೀನ್ ಸಿಗ್ನಲ್ ಕೊಟ್ಟೇ ಬಿಟ್ಟಿದ್ಲು ಶಮಿತಾ. ಮದುವೇನೂ ಆಯ್ತು. ಮಕ್ಕಳೂ ಆದ್ವು.
ಕೊನೆಯ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬರನ್ನಾದ್ರು ಡಾಕ್ಟರ್ ಮಾಡಲೇಬೇಕು ಎಂದು ತೀರ್ಮಾನಿಸಿದ್ದ  ಅವರಪ್ಪಂಗೆ ಅಲ್ಲಿಯೂ ನಿರಾಸೆ. ನಂತರ ಸರದಿ ಪ್ರಕಾರ ಮದುವೆ. ಸರದಿಯಲ್ಲಿ ಮಕ್ಕಳು.

ಹಾಗೇ ನೋಡುತ್ತಾ ನಿಂತಿದ್ದೆ.
ನೀನೇನು ಮಾಡ್ತಾ ಇದ್ದೀಯ.
ಜರ್ನಲಿಸ್ಟ್.
ಇದನ್ನು ನಾನು ಫೋನ್ ನಲ್ಲಿ ಸುಮಾರು ಸಲ ಹೇಳಿದ್ದೆ
ಸರಿ ಕೆಲಸ ಏನು.
ರಿಪೋರ್ಟರ್
ಅದೇ ಬರ್ಕೊಳ್ಲೋದಲ್ವ ? .
ಹು…ಹಾಳಾಗಿ ಹೋಗ್ಲಿ ಅಂತ ಸುಮ್ಮನಾದೆ.

ಬಿಟ್ಟು ಬಿಡದೆ ನನನ್ನು ಒಂದೇ ಸಮ ಊಟಕ್ಕೆ ಎಬ್ಬಿಸಿದ ಮೂವರು ನನ್ನ ಪಕ್ಕವೇ ಕೂತು ಮಾತಿನ ಮಹಾಪೂರ ಎಬ್ಬಿಸಿ ಬಿಟ್ಟಿದ್ರು. ಎಲ್ಲೋ ನನಗೆ ವೇವ್ ಲೆಂಗ್ತ್ ಅಡ್ಜಸ್ಟ್ ಅಗ್ತಾ ಇರಲಿಲ್ಲ. ಅವರ ಆಸ್ತಿ, ಪಾಸ್ತಿ, ಮದುವೆ, ಮುಂಜಿ, ಸತ್ಯನಾರಾಯಣ ಪೂಜೆ ಇತ್ಯಾದಿ ಕೇಳಿ ಸುಸ್ತಾದೆ. ನನ್ನ ಕಣ್ಣುಗಳು ಅವರ ಅಪ್ಪನನ್ನೇ ಹುಡುಕುತ್ತಿದ್ದವು. ಅಲ್ಲೆಲ್ಲೋ ಒಂದು ಮೂಲೆಯಲ್ಲಿ ಕುಳಿತುಕೊಂಡಿದ್ದ ಅವರು ಆ ಗಲಾಟೆ ಮಧ್ಯದಲ್ಲೂ ಯಾವುದೊ ಪತ್ರಿಕೆಯನ್ನು ಗಂಭೀರವಾಗಿ ಓದುತ್ತಿದ್ದರು. ವೃದ್ಧಾಪ್ಯ ಅವರ ಬದುಕಿನ ಉತ್ಸಾಹ ಕಡಿಮೆ ಮಾಡಿರಲಿಲ್ಲ. ತನ್ನ ಹೆಣ್ಣು ಮಕ್ಕಳ ಬಗ್ಗೆ ಎಷ್ಟು  ಕನಸು ಕಂಡಿರಲಿಕ್ಕಿಲ್ಲ ಆ ಹೃದಯ.

ನಾನು ಬೇಡಬೇಡ ಎಂದರೂ ನನ್ನ ತಟ್ಟೆಗೆ ಕುರುಕಲು ತಿಂಡಿ, ಸಿಹಿ ಸರಬರಾಜು ಆಗುತ್ತಲೇ ಇತ್ತು.
ಇಂಥದ್ದೆಲ್ಲ ಹೆಚ್ಚು ತಿನ್ನಬಾರದು ಎಂದೆ.
ಅಯ್ಯೋ  ತಿನ್ನಬೇಕಾದಾಗ ತಿಂದು ಆರಾಮಾಗಿ ಇದ್ದು ಹೋಗಬೇಕಷ್ಟೆ ಮೂವರ ಒಕ್ಕೊರಲ ಒತ್ತಾಯ. ಅಂತೂ ಊಟ ಮುಗಿಸಿದ್ದೆ.  ಈ ಮದ್ಯೆ ಅವರ ತಂದೇನ ನಾನೇ ಮಾತಾಡಿಸಿದೆ. ನನ್ನ ನೋಡಿ ಖುಷಿಪಟ್ಟ ಅವರು ನನ್ನ ವೃತ್ತಿ ಬಗ್ಗೆಯೂ  ಸಾಕಷ್ಟು ಖುಷಿ ವ್ಯಕ್ತಪಡಿಸಿದರು.

ನಾನು ಅವರ ಮನೆ, ಇವರ ಮನೆಯಲ್ಲಿ ಇದ್ದಾಗ ತಿಂದು, ಇಲ್ಲದಿದ್ದಾಗ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕ್ಕೊಂಡು  ಓದಿದೆ. ನನ್ನ ಮಕ್ಕಳು ನನ್ನ ಥರ ಕಷ್ಟ ಪಡಬಾರದು ಅಂತ ಏನೆಲ್ಲಾ ಮಾಡಿದೆ. ಆದ್ರೆ ಏನಾಯ್ತು.ಅವರ ಕಣ್ಣುಗಳು ತೇವಗೊಂಡಿದ್ದವು. ನಾನೇ ಸಮಾಧಾನ ಪಡಿಸಿದೆ.
ಅಷ್ಟೊತ್ತಿಗೆ ಮೂವರ ದಂಡು ಮತ್ತೆ ನನ್ನ ಕಡೆ ತಿರುಗಿತು.

ನೀನ್ಯಾಕೆ  ಕೆಲಸಕ್ಕೆ ಹೋಗ್ತಿಯ. ಬೇಕಾದಂಗೆ ಇದೆಯಲ್ಲ.
ಹಂಗಂತ ಮನೆಯಲ್ಲಿ ಇರೋಕ್ಕಾಗಲ್ಲ
ಅಯ್ಯೋ ಒಳ್ಳೆ ಕಥೆ ಆಯ್ತು. ಚೆನ್ನಾಗಿ ಉಂಡು ತಿಂದು ಇರೋದು…ಬಿಟ್ಟು.
ಮೂವರಿಗೂ ಪ್ರಪಂಚದಲ್ಲಿ ಏನಾಗ್ತಿದೆ ಎನ್ನೋದರ ಪರಿವೆ ಇರಲಿಲ್ಲ. ತಾವು ಎಲ್ಲಿದ್ದೀವಿ, ಏನು ಮಾಡ್ತಾ ಇದ್ದೇವೆ ಇದನ್ನು  ಬಿಟ್ಟು ಬೇರೆ ಪ್ರಪಂಚ ಇದೆ ಅನ್ನೋದನ್ನು ಅವರು ಮರೆತೇ ಹೋದಂಗಿತ್ತು. ತಿಳಿದುಕೊಳ್ಳೋ ಪ್ರಯತ್ನ ಅಥವಾ ಕಳೆದುಕೊಂಡ ಬಗ್ಗೆ ಯಾವುದೇ ಆತಂಕ ಬೇಸರ ಅವರಲ್ಲಿರಲಿಲ್ಲ.
ಮನೆಗೆ ಬಂದವಳು ಎಷ್ಟೋ ಹೊತ್ತು ಸುಮ್ಮನೆ ಹಾಗೆ ಚಿಂತಿಸುತ್ತಿದ್ದೆ.

ಯಾಕೋ ಕಾಲೇಜು ದಿನಗಳು ನೆನಪಾಗತೊದಗಿದವು. ಅಂದು ನಮ್ಮ ಜೊತೆಯಲ್ಲಿ ಆಶಾ ಅಡಿಗ ಅಂಥ ಒಬ್ಬ ಹುಡುಗೀನು ಇದ್ದಳು. ಕನ್ನಡ ಮಾಧ್ಯಮದಲ್ಲೇ ಓದಿದ್ದ ಅವಳ ಬುದ್ದಿವಂತಿಕೆಗೆ ಎಲ್ಲಾ ಹುಡುಗರು ಬೆರಗಾಗುತ್ತಿದ್ದರು. ನಮ್ಮ ಕ್ಲಾಸ್ನಲ್ಲಿ ಶ್ರೀಮಂತ ಮತ್ತು ಬಡವರ ಒಂದು ಗುಂಪಾದರೆ, ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ  ಮತ್ತೊಂದು ಗುಂಪು ಇತ್ತು. ಶಮಿತಾ ನನ್ನ ಬಿಟ್ಟು ಕದಲುತ್ತಿರಲಿಲ್ಲ. ತನ್ನ ಬುದ್ದಿಮತ್ತೆಯಿಂದ ಎಲ್ಲ ಗುಂಪಿಗೂ ಭಯ  ಹುಟ್ಟಿಸುತ್ತಿದ್ದ ಅಶಾಳನ್ನು ಕಂಡರೆ ಮಾತ್ರ ಶಮಿತಾಗೆ ಏನೋ ವಿಚಿತ್ರ ಭಾವನೆ. ಅವಳನ್ನು ಏಲಿಯನ್ ಥರ ನೋಡುತ್ತಿದ್ದ ಶಮಿತಾ ಇವಳ ತಲೆಯಲ್ಲೇನಿದೆ ಎಂದು ಬೆರಗಾಗಿ ಕೇಳುತ್ತಿದ್ದಳು. ಒಳ್ಳೆ ಕಡ್ಡಿಯಂತಿದ್ದ ಆಶಾಳ ಸ್ವಭಾವವೂ ಅಷ್ಟೆ ಚೆನ್ನಾಗಿತ್ತು. ಮನೆಯಲ್ಲಿ ಕಡು ಬಡತನ. ಸಿಕ್ಕಾಗಲೆಲ್ಲ ಹೇಳೋಳು

ನವೋಮಿ ನಮ್ಮ ಅಪ್ಪ ಅಮ್ಮ  ಸ್ವಲ್ಪನಾದ್ರು ಶ್ರೀಮಂತರಾಗಿರಬೇಕಾಗಿತ್ತು ಕಣೆ. ನಾನು ಮೆಡಿಕಲ್, ಇಂಜಿನಿಯರಿಂಗ್ ಏನಾದ್ರು ಮಾಡ್ತಿದ್ದೆ. ಅವಳು ದೈನ್ಯತೆಯಿಂದ ಹೇಳುವಾಗ ಕಣ್ಣು ತೆವಗೊಲ್ಲುತ್ತಿದ್ದವು. ಹಳೆಯ ಬಟ್ಟೆ ಧರಿಸಿ ಬರುವ ಆಶಾಳ ಮಧ್ಯಾಹ್ನದ ಊಟದ ಬಾಕ್ಸ್ನಲ್ಲಿ ಮೊಸರನ್ನ ಬಿಟ್ಟರೆ ಬೇರೆ ಊಟ ಕಂಡಿದ್ದೇ ಕಡಿಮೆ. ನಿರೀಕ್ಷೆಯಂತೆ ಆಶಾ ಕಾಲೇಜಿಗೆ ಫಸ್ಟ್ ಬಂದಿದ್ದಳು. ಆದರೆ ಅಂದು cet ಅಂಥ ಯಾವುದೇ ಪದ್ಧತಿ ಇರಲಿಲ್ಲ. ದುಡ್ಡು ಕೊಡೋಕೆ ಆಗದೆ ಅವಳು ಮುಂದೆ ಬಿಎಸ್ಸಿ ಮುಂದುವರಿಸಿದಳು. ಅಷ್ಟೊತ್ತಿಗಾಗಲೇ ಅವರಪ್ಪಾನು ತೀರಿಕೊಂಡಿದ್ದರು. ಮುಂದೆ ಡಿಗ್ರೀನು ಮುಗಿಸೋಕೆ  ಕಷ್ಟವಾಗಿ ಅರ್ಧದಲ್ಲೇ ಅವಳ ಓದು ನಿಂತಿತ್ತು.

ಆಶಾ ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಕರಾರುವಕ್ಕಾಗಿ ಮಾತನಾಡುವಾಗ ಯಾವಾಗಲೂ ಕ್ಲಾಸಿನಲ್ಲಿ ನಿದ್ರಿಸುತ್ತಿದ್ದ ಶಮಿತಾ ಇದ್ದಕ್ಕಿದ್ದಂತೆ ಎಚ್ಹೆತ್ತುಕೊಂಡು ಅದೇನೇ ಹಂಗಂದ್ರೆ ಅಂತ ಕೇಳೋಳು.
ಏನಿಲ್ಲ ಬಿಡು. ನಿನಗದು ಅರ್ಥ ಆಗಲ್ಲ. ನಿಮ್ಮನೆಯಲ್ಲಿ ಬೇಕಾದಷ್ಟಿದೆ..ಅನ್ನುತ್ತಿದ್ದಂತೆ ಅವಳು ಮತ್ತೆ ನಿದ್ದೆ ಹೋಗುತ್ತಿದ್ದಳು.

ಒಂದು ಕಡೆ ಆಶಾ ಮತ್ತೊಂದು ಕಡೆ ಶಮಿತಾ. ಮತ್ತೆ ಅವಳ ಸೋದರಿಯರು ನನ್ನ ಕಣ್ಣ ಮುಂದೆ  ಹಾದು ಹೋದರು…. .

3 Comments

  1. vasudendra
    July 13, 2008
  2. rameshy
    July 13, 2008

Add Comment