Quantcast

ಕಥೆ ಹೇಳಲೆಂದೇ ಬದುಕಿರುವ ಮಾರ್ಕ್ವೆಸ್

ಗಾಳಿಬೆಳಕು

ನಟರಾಜ ಹುಳಿಯಾರ್

ಐದಾರು ವರ್ಷಗಳ ಕೆಳಗೆ ಲ್ಯಾಟಿನ್ ಅಮೆರಿಕಾದ ಲೇಖಕ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಸ್ ಗೆ ಕ್ಯಾನ್ಸರ್ ಇರುವುದು ಗೊತ್ತಾಯಿತು. ಆಗ ಮಾರ್ಕ್ವೆಸ್ ನ ಮನಸ್ಥಿತಿ ಹೇಗಿತ್ತೋ ಗೊತ್ತಿಲ್ಲ. ಆದರೆ ಸಾವನ್ನು ಮುಂದೂಡಲೋ ಅಥವಾ ಸಾವಿನ ಆತಂಕದಿಂದ ಪಾರಾಗಲೋ ಎಂಬಂತೆ ಮಾರ್ಕ್ವೆಸ್ ಆತ್ಮಚರಿತ್ರೆ ಬರೆಯಲಾರಂಭಿಸಿದ. ಎರಡು ವರ್ಷಗಳ ಕೆಳಗೆ ಆ ಆತ್ಮಚರಿತ್ರೆ `ಲಿವಿಂಗ್ ಟು ಟೆಲ್ ದಿ ಟೇಲ್ ಪ್ರಕಟವಾಯಿತು. ಬೃಹತ್ ಸಂಪುಟವಾದ ಈ ಆತ್ಮಚರಿತ್ರೆ ಮಾರ್ಕ್ವೆಸ್ ಬದುಕಿನ ತಾರುಣ್ಯದ ಘಟ್ಟದಲ್ಲಿ ನಿಂತಿದೆ. ಇದಾದ ನಂತರ ಮಾರ್ಕ್ವೆಸ್`ಇನ್ನೂ ಎರಡು ಸಂಪುಟ ಬರೆಯುತ್ತೇನೆ ಎಂದಿದ್ದ. ಪ್ರಾಯಶಃ ಬರೆಯುತ್ತಿರಬಹುದು. ಆದರೆ ಅವನ ಪುಸ್ತಕದ ಶೀರ್ಷಿಕೆ `ಕತೆ ಹೇಳಲು ಬದುಕುತ್ತಿರುವೆ’ ಎಂಬುದು ನೆನಪಾದಾಗಲೆಲ್ಲ ವಿಚಿತ್ರವಾದ ರೋಮಾಂಚನವಾಗುತ್ತಿರುತ್ತದೆ.

 
ಮಾರ್ಕ್ವೆಸ್ ಪುಸ್ತಕದ ಈ ಶೀರ್ಷಿಕೆ ಅನೇಕರಲ್ಲಿ ಅರೇಬಿಯನ್ ನೈಟ್ಸ್ ಕತೆಗಳನ್ನು ನೆನಪಿಸಿದ್ದರೆ ಆಶ್ಚರ್ಯವಲ್ಲ: ಹೆಂಗಸರ ಬಗ್ಗೆ ಅಸೂಯೆ, ಅನುಮಾನಗಳ ಗೀಳಿಗೆ ತುತ್ತಾದ ಅರೇಬಿಯಾದ ಸುಲ್ತಾನ ಶೆಹ್ರಿಯಾರ್ ಪ್ರತಿಸಂಜೆ ಒಬ್ಬಳನ್ನು ಮದುವೆಯಾಗುತ್ತಾನೆ. ಮಾರನೆಯ ಬೆಳಗ್ಗೆ ಅವಳನ್ನು ಮುಗಿಸುತ್ತಾನೆ. ಈ ಪರಿಪಾಠವನ್ನು ಮುಂದುವರಿಸುತ್ತಿದ್ದ ಸುಲ್ತಾನ ಜಾಣಹುಡುಗಿ ಶಹರ್ಜಾದೆಯನ್ನು ಒಂದು ಸಂಜೆ ವರಿಸುತ್ತಾನೆ. ಆ ರಾತ್ರಿ ಅವಳು ಕತೆಯೊಂದನ್ನು ಹೇಳತೊಡಗುತ್ತಾಳೆ. ಅವಳ ಕತೆಯೊಳಗಣ ಕತೆಯ ರಚನೆ ಎಷ್ಟೊಂದು ಅದ್ಭುತವಾಗಿರುತ್ತದೆಂದರೆ, ಬೆಳಗಾಗುವುದರೊಳಗೆ ಮುಂದಿನ ಕತೆ ಏನಿರುತ್ತದೆ ಎಂದು ರಾಜನಿಗೆ ಕುತೂಹಲ ಹುಟ್ಟುತ್ತದೆ. ಮತ್ತೆ ರಾತ್ರಿ ಕತೆ ಶುರುವಾಗುತ್ತದೆ… ಹೀಗೆ ಸಾವಿರದ ಒಂದು ರಾತ್ರಿಯವರೆಗೂ ಈ ಅರೇಬಿಯನ್ ನೈಟ್ಸ್ ಕತೆಗಳು ಮುಂದುವರಿಯುತ್ತವೆ. ಶಹಜರ್ಾದೆಯನ್ನು ಕೊಲ್ಲುವ ಇರಾದೆಯನ್ನು ಕೊನೆಗೂ ಸುಲ್ತಾನ ಕೈ ಬಿಡುತ್ತಾನೆ.

 
ಈ ಕತೆಗಳ ಮೋಹಕ ಲೋಕ ಹಾಗೂ ಉದ್ದೇಶವನ್ನು ಕುರಿತು ಯೋಚಿಸುತ್ತಿದ್ದರೆ, ಹಳ್ಳಿಯೂರುಗಳಲ್ಲಿ ವಿಘ್ನ ನಿವಾರಣೆಗೆ ಕತೆ ಓದಿಸುವ ಆಚರಣೆ ನೆನಪಾಗುತ್ತದೆ. ಸಾವಿರಾರು ವರ್ಷಗಳಿಂದಲೂ ಕತೆ ಎನ್ನುವುದು ಅಪಾಯಗಳನ್ನು ದಾಟಬಲ್ಲ, ಸಾವನ್ನು ಮುಂದೂಡಬಲ್ಲ ಸಾಧನವೆಂಬಂತೆ ಬಳಕೆಯಾಗುತ್ತಾ ಬಂದಿರುವ ರೀತಿ ಕಂಡು ಅಚ್ಚರಿಯಾಗುತ್ತದೆ. ಕಾಲದ ನಾಗಾಲೋಟದ ನಡುವೆ ಕೂಡ ಮಾನವನ ಮೂಲ ಭಯ, ಬಯಕೆಗಳು ಹೆಚ್ಚು ಕಡಿಮೆ ಹಾಗೆಯೇ ಉಳಿದುಬಿಡುತ್ತವೆಯೆ? ಇಪ್ಪತ್ತೊಂದನೆಯ ಶತಮಾನದ ಶುರುವಿನಲ್ಲಿ ಬಂದ ಮಾರ್ಕ್ವೆಸ್ ನ ಆತ್ಮಚರಿತ್ರೆಯಲ್ಲೂ ಶಹರ್ಜಾದೆಯ ಭಯ ಹಾಗೂ ಬಯಕೆಗಳ ಪ್ರತಿಬಿಂಬವಿದೆ, ನಿಜ. ಆದರೆ `ಲಿವಿಂಗ್ ಟು ಟೆಲ್ ದಿ ಟೇಲ್ ಎಂಬ ಶೀರ್ಷಿಕೆ ಹಾಗೂ ಈ ಪುಸ್ತಕ ಕೇವಲ ಸಾವನ್ನು ಮುಂದೂಡುವ ಬಯಕೆಗಷ್ಟೇ ಸೀಮಿತವೆಂದು ನನಗನ್ನಿಸಿಲ್ಲ. ಮಾಕ್ವರ್ೆಜ್ ಇಷ್ಟು ದೀರ್ಘಕಾಲ ಬದುಕಿರುವುದೇ ಕತೆ ಹೇಳಲು ಎಂಬುದನ್ನೂ ಇದು ಹೇಳುತ್ತದೆ. ಎಲ್ಲರ ಹಾಗೆ ಮಾಕ್ವರ್ೆಜ್ ಕೂಡ ಒಬ್ಬ ಮಾನವಜೀವಿಯಾಗಿ ಬಗೆಬಗೆಯ ಪಾತ್ರ ನಿರ್ವಹಿಸಿದ್ದಾನೆ. ಪತ್ರಕರ್ತ, ಪ್ರೇಮಿ, ವಿಟ, ಪತಿ, ಬುದ್ಧಿಜೀವಿ, ಖ್ಯಾತಿವಂತ, ನೊಬೆಲ್ ಪ್ರಶಸ್ತಿ ಪಡೆದ ದೊಡ್ಡ ಲೇಖಕ, ಕ್ರಾಂತಿಗಳಿಗೆ ಫಂಡ್ ಮಾಡಬಲ್ಲಷ್ಟು ಪ್ರಭಾವಶಾಲಿ…ಇದೆಲ್ಲಕ್ಕಿಂತ ಹೆಚ್ಚಾಗಿ, ನನ್ನ ಸೀಮಿತ ಓದಿನ ತಿಳಿವಳಿಕೆಯ ಪ್ರಕಾರ ಇವತ್ತು ಜಗತ್ತಿನಲ್ಲಿ ಬದುಕಿರುವ ಅತ್ಯಂತ ಶ್ರೇಷ್ಠ ಕಾದಂಬರಿಕಾರ…

 
ಮೊನ್ನೆ ಮಾರ್ಚ್ ತಿಂಗಳಿಗೆ ಎಂಬತ್ತೊಂದು ವರ್ಷ ತಲುಪಿದ  ಮಾರ್ಕ್ವೆಸ್ ಕಳೆದ ವರ್ಷ ಸಭೆಯೊಂದರಲ್ಲಿ ತನ್ನ ಪ್ರಖ್ಯಾತ ಕಾದಂಬರಿ `ಒನ್ ಹಂಡ್ರಡ್ ಯಿಯರ್ಸ್ ಆಫ್ ಸಾಲಿಟ್ಯೂಡ್ (ಎ.ಎನ್.ಪ್ರಸನ್ನ ಈ ಅದ್ಭುತ ಕಾದಂಬರಿಯನ್ನು ಕನ್ನಡೀಕರಿಸಿ ಕೊಲೆ ಮಾಡಿರುವ ಗಂಭೀರ ಆಪಾದನೆಗಳಿವೆ, ಇರಲಿ!) ಕಾದಂಬರಿ ಬರೆದ ಕಾಲವನ್ನು ಮತ್ತೆ ನೆನಪಿಸಿಕೊಂಡಿದ್ದ:  ಮಾರ್ಕ್ವೆಸ್ ಈ ಕಾದಂಬರಿ ಬರೆಯುವ ಹದಿನೆಂಟು ತಿಂಗಳ ಕಾಲ ಮನೆ ನಿಭಾಯಿಸಲು ಅವನ ಹೆಂಡತಿ ಮರ್ಸಿಡಿಸ್ ತನ್ನ ಒಡವೆಗಳನ್ನು ಮಾರಿದ್ದಳು. ಆಗಸ್ಟ್ 1967ರಲ್ಲಿ ಬರೆದು ಮುಗಿಸಿದ ಈ ಕಾದಂಬರಿಯನ್ನು ಕಳೆದ ನಲವತ್ತೊಂದು ವರ್ಷಗಳಲ್ಲಿ ಜಗತ್ತಿನ ಐವತ್ತು ಮಿಲಿಯನ್ಗಿಂತ ಹೆಚ್ಚು ಜನ ಓದಿದ್ದಾರೆ. 1967ರಲ್ಲಿ ಆ ಕಾದಂಬರಿ ಬರೆದು ಮುಗಿಸಿದ ಮೇಲೆ ಮಾರ್ಕ್ವೆಸ್ ಹಾಗೂ ಮರ್ಸಿಡಿಸ್ ಕಾದಂಬರಿಯ ಹಸ್ತಪ್ರತಿಯನ್ನು ಬ್ಯೂನಸ್ ಐರಿಸ್ನಲ್ಲಿದ್ದ ಸಂಪಾದಕನೊಬ್ಬನಿಗೆ ಕಳಿಸಲು ಪೋಸ್ಟ್ ಆಫೀಸಿಗೆ ಹೋಗುತ್ತಾರೆ. ಅದರ ಅಂಚೆವೆಚ್ಚ 82 ರೂಪಾಯಿ. ಆದರೆ ಅವರ ಹತ್ತಿರ ಇದ್ದದ್ದು 53 ರೂಪಾಯಿ. ಅಂಚೆ ತೂಕ ಕಡಿಮೆಯಾಗಲೆಂದು ಹಸ್ತಪ್ರತಿಯನ್ನು ಎರಡು ಭಾಗ ಮಾಡಿ ಮೊದಲು ಒಂದು ಭಾಗವನ್ನು ಸಂಪಾದಕನಿಗೆ ಕಳಿಸುತ್ತಾರೆ. ತಮಾಷೆಯೆಂದರೆ, ಅದನ್ನು ಕಳಿಸಿದ ಮೇಲೆ ತಾವು ಕಾದಂಬರಿಯ ಎರಡನೆಯ ಭಾಗ ಕಳಿಸಿದ್ದೇವೆಂಬುದು ಇಬ್ಬರಿಗೂ ಗೊತ್ತಾಗುತ್ತದೆ! ಅದೃಷ್ಟವಶಾತ್, ಆ ಸಂಪಾದಕನಿಗೆ ಕಾದಂಬರಿಯ ಮೊದಲ ಭಾಗವನ್ನು ಓದುವ ಕಾತುರ ಹುಟ್ಟುತ್ತದೆ. ಆತ ಮೊದಲ ಭಾಗವನ್ನು ಕಳಿಸುವಂತೆ ಕೋರಿ ಹಣ ಕಳಿಸುತ್ತಾನೆ. ಆಮೇಲೆ ಕಾದಂಬರಿಯ ಮೊದಲ ಭಾಗ ಅವನಿಗೆ ತಲುಪುತ್ತದೆ. ಸಭೆಯಲ್ಲಿ ಇದೆಲ್ಲ ನೆನೆಸಿಕೊಂಡ ಮಾರ್ಕ್ವೆಸ್ ನ ಲಹರಿಯಲ್ಲಿ ಎಲ್ಲ ಬರಹಗಾರರಲ್ಲೂ ಅಸೂಯೆ ಹುಟ್ಟಿಸಬಲ್ಲ ಮಾತುಗಳಿವೆ:

 


`ಹದಿನೇಳು ವರ್ಷದವನಾಗಿದ್ದಾಗಿನಿಂದ ಹಿಡಿದು ಇವತ್ತಿನ ಬೆಳಗ್ಗೆಯ ತನಕ ನಾನು ಮಾಡಿರುವುದು ಇಷ್ಟೇ. ಪ್ರತಿದಿನ ಬೇಗ ಏಳುವುದು, ಹಿಂದೆಂದೂ ಯಾರೂ ಹೇಳದ ಕತೆಯೊಂದನ್ನು ಹೇಳಿ, ಅಸ್ತಿತ್ವದಲ್ಲೇ ಇಲ್ಲದ ಓದುಗನ ಬದುಕನ್ನು ಖುಷಿಯಲ್ಲಿಡುವ ಏಕಮಾತ್ರ ಉದ್ದೇಶದಿಂದ ಟೈಪ್ರೈಟರ್ ಮೇಲಿನ ಖಾಲಿಹಾಳೆಯನ್ನು ತುಂಬಿಸಲು ಕೀಗಳ ಮೇಲೆ ಬೆರಳಿಡುವುದು…ನನ್ನ ರೂಮಿನ ಏಕಾಂತದಲ್ಲಿ ಕೂತು ಬರೇ 28 ಅಕ್ಷರಗಳನ್ನು ಹಾಗೂ ಎರಡು ಬೆರಳುಗಳನ್ನು ನನ್ನ ಏಕಮಾತ್ರ ಅಸ್ತ್ರವಾಗಿ ಬಳಸಿ ಬರೆದದ್ದನ್ನು ಹತ್ತು ಲಕ್ಷ ಜನ ಓದುತ್ತಾರೆ ಎಂದರೆ ಇದು ನಿಜಕ್ಕೂ ಒಂದು ಹುಚ್ಚಲ್ಲವೆ!
ಎಂಬತ್ತೊಂದು ದಾಟಿರುವ ಮಾರ್ಕ್ವೆಸ್ ತನ್ನ ಹದಿನೇಳನೆಯ ವಯಸ್ಸಿನಿಂದ ಇಲ್ಲಿಯವರೆಗೆ, ಅಂದರೆ ಸುಮಾರು ಅರವತ್ತನಾಲ್ಕು ವರ್ಷಕಾಲ ದಿನನಿತ್ಯ ಹೊಸತನ್ನು ಬರೆಯಬಲ್ಲ ಲೇಖಕನಾಗಿ, ಅದರಲ್ಲೂ ಜೀವಂತವಾಗಿ ಬರೆಯುವ ಲೇಖಕನಾಗಿ ಉಳಿದಿರುವುದು ಅದ್ಭುತವಾಗಿದೆ. ತನ್ನ ಸಮಾಜದ ಎಲ್ಲ ಟೆನ್ಷಷ್ಗಳನ್ನೂ ಕಣ್ಣುಬಿಟ್ಟು ನೋಡುವ, ಅನುಭವಿಸುವ ಲೇಖಕ ಆರೇಳು ದಶಕಗಳ ಕಾಲ ಅತ್ಯಂತ ಮಹತ್ವದ್ದನ್ನೇ ಸೃಷ್ಟಿಸಬಲ್ಲವನಾಗಿ ಉಳಿಯುವುದು, ಹೆಚ್ಚುಕಡಿಮೆ ಒಂದು ಶತಮಾನದ ಚರಿತ್ರೆಗೆ ಸಾಕ್ಷಿಯಾಗಿ ಅದನ್ನು ಆಳವಾಗಿ ಗ್ರಹಿಸಿ ಬರೆಯಬಲ್ಲವನಾಗಿರುವುದು, ಅದರ ಜೊತೆಗೆ ನಿರಂತರ ಸೃಜನಶೀಲನಾಗಿ ಉಳಿದಿರುವುದು ನಿಜಕ್ಕೂ `ಭುವನದ ಭಾಗ್ಯ’ ಅಲ್ಲವೆ?

 
ನಮ್ಮಲ್ಲಿ ಕಾರಂತ, ಕುವೆಂಪು, ಮಾಸ್ತಿ ಎಲ್ಲರೂ ದೀರ್ಘಕಾಲ ಬದುಕಿದ್ದರೂ ಅವರ ಕ್ರಿಯಾಶೀಲತೆಯ ಕಾವು ಅರವತ್ತರ ಅಂಚಿಗೆ ಆರಿದಂತೆ ಕಾಣುತ್ತದೆ. ಕಾರಂತರ ಜೀವಿತದಲ್ಲಿ ಕಡೆಯ ಹತ್ತಾರು ವರ್ಷಕಾಲ ನಿಜಕ್ಕೂ ಅರ್ಥಪೂರ್ಣವಾದಕತೆಗಳು ಅವರೊಳಗಿದ್ದರೂ ಅದನ್ನು ಹೇಳಿ ಬರೆಸಲು ಹೋಗಿ ತಮ್ಮ ಕಲೆಯನ್ನು ಕಳಕೊಂಡಂತಿದೆ. ಮಾರ್ಕ್ವೆಸ್ 81ರ ವಯಸ್ಸಿನಲ್ಲಿ ಕೂಡ ಇನ್ನೂ ಯಾರಿಗೂ ಹೇಳಿ ಬರೆಸಿದಂತಿಲ್ಲ. ಬರೆಯುವುದಕ್ಕೂ, ಬರೆಸುವುದಕ್ಕೂ ಇರುವ ಮುಖ್ಯ ವ್ಯತ್ಯಾಸ ಎಲ್ಲ ಬರಹಗಾರರಿಗೂ ಗೊತ್ತಿರುತ್ತದೆ: ಬರವಣಿಗೆಯೆಂಬುದು ಅಂತಿಮವಾಗಿ ತನ್ನೊಡನೆ ನಡೆಸುವ ಸಂವಾದ. ಅದನ್ನು ಇನ್ನೊಬ್ಬರಿಗೆ ಹೇಳಿ ಬರೆಸಿದಾಗ, ಇನ್ನೊಬ್ಬರೊಡನೆ ನಡೆಸುವ ಸಂವಾದವಾದಾಗ ಅದು ಎಕ್ಸ್ಟರ್ನಲ್ ಆಗುತ್ತದೆ. ಹಾಗಾದತಕ್ಷಣ ಬರವಣಿಗೆಯ ಜೀವ ಕುಂದಿ ಅದರ ಸ್ಟ್ರಕ್ಚರ್ ಸಡಿಲವಾಗತೊಡಗುತ್ತದೆ.

 
 ಮಾರ್ಕ್ವೆಸ್ ಬದುಕಿದ್ದು ಹಾಗೂ ಬದುಕಿರುವುದೇ ಕತೆ ಹೇಳಲು; ಅಂದರೆ `ಲಿವಿಂಗ್ ಟು ಟೇಲ್ ಎನ್ನುವುದು ಅವನ ಇಡೀ ಜೀವನದ ಮೂಲ ಉದ್ದೇಶಕ್ಕೇ ಅನ್ವಯಿಸುವ ಮಾತು. ಮಾರ್ಕ್ವೆಸ್ ನನ್ನು ಒಂದು ಇಡೀ ಜೀವಮಾನ ಹಿಡಿದಿಟ್ಟಿರುವ ಈ ಧ್ಯಾನಶೀಲ ಉದ್ದೇಶ ಎಲ್ಲ ಲೇಖಕ, ಲೇಖಕಿಯರಿಗೂ ಸ್ಫೂರ್ತಿ, ಪ್ರೇರಣೆ ತರುವ ಮಾದರಿಯಂತಿದೆ; ಒಂದು ಜೀವಮಾನದ ಧ್ಯಾನ ಕಲಿಸಿಕೊಡುವ ಕುಶಲತೆ, ತರುವ ಆಳ, ಹೊಸತನ, ಹೊಳೆಯಿಸುವ ಸತ್ಯಗಳು ಹಾಗೂ ವಿಶಿಷ್ಟ ಜೀವನದರ್ಶನ ಎಷ್ಟು ವ್ಯಾಪಕವಾಗಿರಬಹುದಲ್ಲವೇ ಎಂಬುದರ ಬಗ್ಗೆ ನಾವೆಲ್ಲ ಒಮ್ಮೆಯಾದರೂ ಗಾಢವಾಗಿ ಚಿಂತಿಸುವಂತೆ ಮಾಡುತ್ತದೆ. ಮಾರ್ಕ್ವೆಸ್ ನ`ಲಿವಿಂಗ್ ಟು ಟೆಲ್ ದಿ ಟೇಲ್’ ಎಂಬ ಜೀವನದ ಗುರಿ ನಮ್ಮನಮ್ಮ ಜೀವನದ ಉದ್ದೇಶಗಳನ್ನು ನಾವು ಆಗಾಗ್ಗೆಯಾದರೂ ಸ್ಪಷ್ಟಪಡಿಸಿಕೊಳ್ಳಬೇಕೆಂದು ಪಿಸು ನುಡಿಯುತ್ತದೆ.

6 Comments

 1. D.RAVIVARMA
  June 24, 2011
 2. kumvee
  April 7, 2011
 3. kirankumari
  May 25, 2010
  • ravivarma
   March 14, 2011
 4. natarajhuliyar
  October 14, 2008
 5. H S Komalesha
  September 9, 2008

Add Comment