Quantcast

ಎಲ್ಲ ನಾಯಕರುಗಳಿಗೂ ಒಂದೊಂದು ಚಿನ್ನವೀಡು

ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ..

೧…

‘ಆಯಪ್ಪನ ಜೊತೆ ಮಲಗಿದ್ದಕ್ಕೆ ಅವಳಿಗೊಂದು ಮಂತ್ರಿ ಪದವಿ ಸಿಕ್ಕಿ ಬಿಡ್ತು’.
ಅವರ ಮಾತಿಗೆ ಧಡಾರನೆ ಕಾರು ಬಾಗಿಲು ಹಾಕಿ ಹೊರನಡೆದಿದ್ದೆ.
ಸಂಜೆಗೆ ಮತ್ತೆ ಅವರು ನನ್ನನ್ನು ಕೆಣುಕುವ ಮೂಡಿನಲ್ಲಿದ್ದರು. ನನಗೆ ಯಾವ ವಿಷಯಗಳು ಕಿರಿಕ್ ಮಾಡುತ್ತವೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತು.

‘ಯಾಕೆ ಅಷ್ಟು ಕೋಪ. ಈ ದೇಶದ ಹೆಣ್ಮಕ್ಕಳ ರಕ್ಷಣೆ ಗುತ್ತಿಗೆ ನೀನು ತಗೊಂಡಿದ್ದೀಯಾ?’
ನಾನು ಮೌನ.
ನನ್ನ ಮೌನ ಅವರನ್ನು ಕೆಣಕಿತ್ತೇನೋ?
‘ಯಾಕೆ ಸುಮ್ಮನಾದೆ. ಇದ್ದುದನ್ನು ಹೇಳ್ದೆ’.
ಏನೇ ಇರಲಿ ಹೆಣ್ಮಕ್ಕಳ ಬಗ್ಗೆ ಹಂಗೆಲ್ಲಾ ಮಾತಾಡೋದು ತಪ್ಪಲ್ವಾ
ನಾನು ಸ್ವಲ್ಪ ಹಗುರವಾಗಿಯೇ ಮುಖಾಮುಖಿಯಾಗತೊಡಗಿದ್ದೆ.
‘ನಾನೇನು ಅವಳ ಬಗ್ಗೆ ಕೆಟ್ಟದ್ದನ್ನು ಮಾತಾಡಿಲ್ಲ. ಎಲ್ಲರೂ ಮಾತಾಡೋದನ್ನೇ ನಾನು ಹೇಳ್ತಾ ಇರೋದು. ನೀನ್ಯಾಕೆ ಎಲ್ಲ ಗೊತ್ತಿದ್ದು ಗೊತ್ತಿಲ್ಲದವರ ಥರ ವರ್ತಿಸ್ತಿದ್ದೀಯಾ. ಹಿಪೊಕ್ರಿಟ್…’
ಕೊನೆಯ ಮಾತು ನನ್ನ ಕೆಣಕಿತ್ತು.

ನಂಗೆ ಇಂಥಹ ಕಮೆಂಟ್ಸ್ ಹಿಡಿಸಲ್ಲ. ಮತ್ತೆ ಬೇರೆಯವರ ಪರ್ಸನಲ್ ಮ್ಯಾಟರ್ಸ್ನಲ್ಲಿ ತಲೆ ಹಾಕೋದು ಸರಿ ಅಲ್ಲ.
ನಾನಿನ್ನು ಕೆರಳಿರಲಿಲ್ಲ.
‘ಸ್ವಲ್ಪ ಅವಳ ಸಾಮರ್ಥ್ಯ ನೋಡಿ. ಅಷ್ಟೆಲ್ಲ ಗಂಡಸರ ಮಧ್ಯೆ ಕಲ್ಲುಬಂಡೆಯಂತೆ ನಿಂತಿದ್ದಾಳಲ್ಲಾ. ಸ್ವಲ್ಪ ಅಪ್ರಿಶಿಯೆಟ್ ಮಾಡಿ. ಗಂಟೇನು ಹೋಗುತ್ತೆ’.
‘ಹಾಂಗಂತ ಎಂತೆಂಥದ್ದೋ ಮಾರ್ಗ ಹಿಡಿಯೋಕೆ ಆಗುತ್ತಾ ನವೋಮಿ. ವಾಸ್ತವ ಒಪ್ಕೋ..ನೀನೇ ಒಮ್ಮೆ ವಿಚಾರ ಮಾಡು. ಎಷ್ಟು ಹೆಣ್ಮಕ್ಕಳು ಈ ರೀತಿ ಮಿನಿಸ್ಟರ್ ಆಗೋಕೆ ಸಾಧ್ಯ..ಸುಮ್ಮನೆ ಆಗೋಕಾಗತ್ತಾ. ಅವ್ಳು ಆಯಪ್ಪಂಗೆ ಹತ್ತಿರವಾಗಿದ್ಲು. ಅದಕ್ಕೆ ಮಿನಿಸ್ಟರ್ ಆದ್ಲು. ಅದರ ಬಗ್ಗೆ ನೀನು ಮಹಾಕಾಳಿ ಥರ ಆಡೋದೇಕೆ’
‘….ನಿಜ ಅವರಿಗೆ ಹತ್ತಿರ ಆಗಿರ್ಬಹುದು. ಆ ಅಂತಸ್ತನ್ನು ಅವಳು ಎಂಜಾಯ್ ಮಾಡಿಕೊಂಡು ಇರಬಹುದಿತ್ತಲ್ಲ’. …ನಾನು ಸುಮ್ಮನೆ ಬಿಡಲಿಲ್ಲ.

‘ಅದ್ಯಾಕೆ ಗಂಡಸರು ಕೆಲಸ ಮಾಡಲ್ವಾ ಈ ರೀತಿ ಹೆಣ್ಮಕ್ಕಳು ತನ್ನತನವನ್ನು ಅಡವಿಟ್ಕೊಂಡು ಹಿಂಗೆ ಹಿಂಬಾಗಿಲಿನಿಂದ ಬಂದ್ರೆ ಅವ್ರಿಗೆ ನೋವಾಗಲ್ವಾ…? ಇದ್ಯಾವ ನ್ಯಾಯ ನವೋಮಿ
ಒಮ್ಮೆ ವಿಚಾರ ಮಾಡಿ ನೋಡು. ನಾನು ಈ ರೀತಿ ಮಾತನಾಡ್ತಾ ಇಲ್ಲ. ಪ್ರಪಂಚ ಈ ರೀತಿ ಹೇಳ್ತಾ ಇದೆ’.

ಸುಮ್ಮನಾದೆ. ಇವರ ಜೊತೆ ಮಾತನಾಡಿ ಪ್ರಯೋಜನ ಇಲ್ಲ.

…..2

‘…ನೋಡಿ ನಮ್ಮದು ಕೂಡ ಹಳೇ ಪಕ್ಷ. ನಮ್ಮಲ್ಲಿ ಹೆಚ್ಚು ಕಡಿಮೆ ಎಲ್ಲ ನಾಯಕರುಗಳಿಗೂ ಒಂದೊಂದು ಕಡೆ ಒಂದೊಂದು ಚಿನ್ನವೀಡು. ಈ ಕೀಪ್ ಗಳಿಗೆ ಸಕಲ ಸವಲತ್ತು ಸಿಗ್ತವೆ. ಆದ್ರೆ ಎಲ್ಲಿಡಬೇಕೋ ಅಲ್ಲಿಡ್ತಾರೆ’.

‘ಅದರರ್ಥ ನಿಮ್ಮ ಲೀಡರುಗಳ ತೆವಲು ತಿರಿಸೋಕೆ ಮಾತ್ರ’.

‘ಹ್ಞೂ,  ಇನ್ನೇನು ಮತ್ತೆ ಕೊಚ್ಚೆಯನ್ನೆಲ್ಲಾ ಶೋಕೇಸ್ ಮಾಡೋಕಾಗತ್ತಾ…?’

‘ಹೆಣ್ಮಕ್ಕಳಾಗಿ ನೀವೇ ಹೀಗೆ ಮಾತಾಡಿದ್ರೆ..’

‘ಹೆಣ್ಮಕ್ಕಳು ತಾವಾಗಿಯೇ ರೆಡಿಯಾಗಿರ್ತಾರಲ್ಲ…’
‘ಆ ಹೆಣ್ಣುಮಕ್ಕಳನ್ನ ಮುಖ್ಯವಾಹಿನಿಗೆ ಪರಿಚಯಿಸುವ ಧೈರ್ಯ ಬೇಕಲ್ವ .. ತಮ್ಮ  ತೆವಲಿಗೆ ಮಾತ್ರ ಬಳಸ್ಕೊಳ್ಳೋ ರಾಜಕಾರಣಿಗಳನ್ನ ನೀವು ಸಪೋರ್ಟ್ ಮಾಡಿ…..’

….3

ಈ ಎರಡು ಸಂಭಾಷಣೆಗಳು ನನ್ನನ್ನು ಇನ್ನಿಲ್ಲದಂತೆ ಕಾಡಿವೆ.  ಇಲ್ಲಿ ಸ್ವಲ್ಪ ಮಟ್ಟಿನ ನಿಜಾಂಶ ಇದ್ದರೂ ನಾವು  ಪಾಸಿಟಿವ್ ಸೈಡ್ ಏಕೆ ನೋಡುತ್ತಿಲ್ಲ ..ನಮಗೇಕೆ ಬೇರೆಯವರ ಹುಳುಕುಗಳೇ ಕಾಣಿಸುತ್ತಿವೆ. ಅವಳಿಗಾಗಿ ಮತ್ತೊಬ್ಬ ಗಟ್ಟಿ ಹೆಣ್ಣು ಮಗಳನ್ನ ಮೂಲೆಗುಂಪು ಮಾಡಿದ್ದನ್ನು ನಾವು ಖಂಡಿಸೋಣ. ಆದರೆ ತನ್ನ ಖಾಸಗಿ ಬದುಕಿನ ಬಗ್ಗೆ ಅವಳೇ ಅಷ್ಟೊಂದು ತಲೆ  ಕೆಡಿಸಿಕೊಳ್ಳದೆ ತನ್ನ ಕೆಲಸದಲ್ಲಿ ಮಗ್ನ ಆಗಿರುವಾಗ ಇವರ  ಕಷ್ಟ ನನಗರ್ಥವಾಗುತ್ತಿಲ್ಲ.

ನಾನು ಅವಳೊಂದಿಗೆ ತುಂಬ ಮಾತಾಡಿದ್ದೇನೆ. ಆರಂಭದಲ್ಲಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಲು ಕಷ್ಟ ಪಡುತ್ತಿದ್ದ ಅವಳಿಗೆ ನನಗೆ ಅವಳ ಖಾಸಗಿ ವಿಚಾರದಲ್ಲಿ ಯಾವುದೇ ಆಸಕ್ತಿ ಇಲ್ಲದಿರುವುದು ನನ್ನ ಜೊತೆ ವಿಶ್ವಾಸದಿಂದಲೇ ಮಾತಾಡಲು ಕಾರಣವಾಗಿದೆ.

ನನ್ನಂತೆ ಅವಳು ಕೂಡ ಹಳ್ಳಿಯಿಂದ ಬಂದು ಪಟ್ಟಣ ಸೇರಿದ ಕಾರಣ ನಾವು ಸೇರಿದಾಗ ಹೆಚ್ಹಿನ ಸಮಯ ಹಳ್ಳಿ, ಹಳ್ಳಿಯ ಸಮಸ್ಯೆಗಳು, ನಿರುದ್ಯೋಗ ಮಹಿಳೆ ಇವೇ  ವಿಷಯ ಚರ್ಚೆಯಾಗುತ್ತವೆ. ಹಳ್ಳಿಗಳಲ್ಲಿ ಮಹಿಳೆಯರು ಬಹಿರ್ದೆಸೆಗಾಗಿ ಪರದಾಡುವುದು ಅವಳನ್ನು ಕಾದಿದೆ. ಯುವಕರು ಉದ್ಯೋಗವಿಲ್ಲದೆ ಹಾದಿ ತಪ್ಪುತ್ತಿರುವುದು, ಬಡತನ ಆತ್ಮಹತ್ಯೆಗೆ ಜನರನ್ನು ನೂಕುತ್ತಿರುವುದು ಅವಳನ್ನು ಇನ್ನಿಲ್ಲದಂತೆ ಕಾಡಿದೆ.

ತನಗೆ ಅವಕಾಶ ಸಿಕ್ಕರೆ ಇವರಿಗಾಗಿ ಏನೋ ಒಂದು ಮಾಡಿ ತೀರುತ್ತೇನೆ ಎನ್ನುವ ಆಶಾಭಾವ ಅವಳ ಕಣ್ಣಲ್ಲಿ ಕಾಣುತ್ತೇನೆ.ಅವ್ಳು ಹೋದಾಗಲೆಲ್ಲ ಹೈಟೆಕ್ ಪಾರ್ಲರ್ ನವರೊಬ್ಬರು ಮೇಡಂ ಫ್ರೀ ಮಾಡ್ಕೊಂಡು ಮಸಾಜ್ ಮಾಡ್ಕೊಳ್ಳಿ, ಥೈ ಥೆರಪಿ ಇದೆ. ರಿಲ್ಯಾಕ್ಸ್ ಆಗುತ್ತೆ ಅಂಥ ಅವಳ ಹಿಂದೆ ಬೀಳುವಾಗ ಇವಳು ಕೋಪದಿಂದ ನಿಮಗೇನಾದ್ರು ಬುದ್ದಿಗಿದ್ದಿ ಇದೆಯಾ ಇಲ್ವಾ ಅಂಥ ಕೆಂಡವಾಗುತ್ತಲೇ…ಒಬ್ಬೊಬ್ಬರ ನೋವು ನನ್ನನ್ನು ಹಿಂಡಿ ಹಿಪ್ಪಿ ಮಾಡಿದೆ ಸಾಧ್ಯವಾದಷ್ಟು ಕೆಲಸ ಮಾಡಬೇಕು ಅಂದ್ಕೊಂಡಿದ್ದೀನಿ ಊಟ ಸ್ನಾನಕ್ಕೂ ಸಮಯ ಸಿಕ್ತಾ ಇಲ್ಲ ನವೋಮಿ ಒಂದೇ ಸಮ ಗೋಗರೆಯುತ್ತ . .

ಯಾವುದೋ ಎರಡು ಸಿನೆಮಾ ಮಾಡಿ ಹೀಗೆ ಯಾರಿಗೋ ಗರ್ಲ್ ಫ್ರೆಂಡ್ ಆಗಿ,  ಫಾರಿನ್ ಗೆ  ಹೋಗಿ ಹೆತ್ತು,  ಕೋಟಿ ಕೋಟಿ ರೂಪಾಯಿ ಬಂಗಲೆ ಕಟ್ಟಿಕೊಂಡು, ತಮಗೊಂಡು ತಮ್ಮ ಮನೆ ಜನರಿಗೆ ತಮ್ಮ ಸಂಬಂಧಿಕರಿಗೆ ಆಸ್ತಿ ಮಾಡಿಕೊಡೋದ್ರಲ್ಲಿ ಬ್ಯುಸಿ ಆಗೋ ಈ ಸೋ ಕಾಲ್ಡ್ ಕೀಪ್ ಗಳನ್ನ ನೋಡಿದ್ದೇನೆ. ಕಪ್ಪು ಗ್ಲಾಸಿನ ಕಾರಿನಲ್ಲಿ ಪ್ರಯಾಣಿಸುವ ಈ ಹೆಣ್ಣುಮಕ್ಕಳಿಗೆ ಬೇರೆಯವರ ಕಷ್ಟ ಗೌಣ. ಇವರಿಬ್ಬರನ್ನು ಹತ್ತಿರದಿಂದ ನೋಡಿದಾಗ ನೊಂದವರ ಪರ ಮರುಗುವ ಅವಳು ಹೆಚ್ಹು ಇಷ್ಟ ಆಗುತ್ತಿದ್ದಾಳೆ.

2 Comments

  1. sunaath
    July 29, 2008
  2. uniquesupri
    July 28, 2008

Add Comment