Quantcast

ಚೌಕಟ್ಟಿನಾಚೆಯವರು

ಚೌಕಟ್ಟನ್ನು ದಾಟುವವರ ಕಥನ

– ಟಿ.ಅವಿನಾಶ್

ಕೃಪೆ : ದ ಸ೦ಡೆ ಇ೦ಡಿಯನ್

 

ಸಾಹಿತ್ಯದ ಹೊಸ ತಲೆಮಾರಿಗೆ ಈಗ ಏರುಜವ್ವನ. ಗಟ್ಟಿ-ಜೊಳ್ಳು ಎಂಬ ವಾಗ್ವಾದದ ನಡುವೆಯೇ ನವ್ಯೋತ್ತರ ಕಾಲಘಟ್ಟದಲ್ಲಿ ಕರ್ನಾಟಕದ ಮೂಲೆ ಮೂಲೆಗಳಿಂದ ಯುವ ಲೇಖಕ-ಲೇಖಕಿಯರು ಹೊಸ ಅನುಭವಗಳ ಪ್ರಪಂಚವನ್ನು ತಮ್ಮ ಕೃತಿಗಳಲ್ಲಿ ಅನಾವರಣ ಮಾಡುತ್ತಿದ್ದಾರೆ. ಅವರಲ್ಲಿ ಕವಿ-ಕತೆಗಾರ್ತಿ ಗೀತಾ ವಸಂತ ಕೂಡ ಒಬ್ಬರು. ಈಗಾಗಲೇ ’ಪರಿಮಳದ ಬೀಜ’ ಕವನ ಸಂಕಲನವನ್ನು ಪ್ರಕಟಿಸಿರುವ ಇವರು ‘ಚೌಕಟ್ಟಿನಾಚೆಯವರು’ ಎಂಬ ಪ್ರಥಮ ಕಥಾಸಂಕಲನವನ್ನು ಕೊಟ್ಟಿದ್ದಾರೆ.

ಗೀತಾ ಅವರ ಕಥಾಪ್ರಪಂಚ ಅವರ ಹುಟ್ಟೂರಾದ ಉತ್ತರ ಕನ್ನಡ ಜಿಲ್ಲೆಯ ಕೌಟುಂಬಿಕ-ಸಾಮಾಜಿಕ ಪರಿಸರವನ್ನು ಅದರೆಲ್ಲಾ ಸೂಕ್ಷ್ಮತೆಗಳೊಂದಿಗೆ ನಿರೂಪಿಸುತ್ತದೆ. ಇವರ ಮುಖ್ಯ ದೃಷ್ಟಿ, ಸಂಸಾರದೊಳಗೆ ಏಗುತ್ತಿರುವ ಮತ್ತು ತಮ್ಮದೇ ಸ್ವತಂತ್ರ ಅಸ್ಮಿತೆಗಾಗಿ, ಘನತೆಗಾಗಿ ಹಾತೊರೆಯುತ್ತಿರುವ ಹೆಣ್ಣು ಪ್ರಪಂಚ. ಇವರ ಅಂತರಂಗದ ತಲ್ಲಣ, ಬಿಕ್ಕಟ್ಟು, ವಿಷಾದ, ಅನಿವಾರ್ಯತೆಗಳನ್ನು ಕತೆಗಾರ್ತಿ ಹದವಾಗಿ ನಿರೂಪಿಸಿದ್ದಾರೆ. ಹವ್ಯಕ ಬ್ರಾಹ್ಮಣರ ಕೌಟುಂಬಿಕ ವ್ಯವಹಾರಗಳ ಸುತ್ತ ಕತೆಗಳು ಕಟ್ಟಲ್ಪಟ್ಟಿದ್ದರೂ, ಬೇರೆ ಬೇರೆ ಜಾತಿಯ ಹೆಣ್ಣಿನ ಲೋಕಕ್ಕೂ ನಿರೂಪಣೆಗೆ ಸಮಾನ ಅವಕಾಶ ನೀಡಿರುವುದು ಸಕಾರಾತ್ಮಕ ಅಂಶ. ಕಥಾ ಸಾಹಿತ್ಯಕ್ಕೆ ಅತ್ಯಗತ್ಯವಾದ ಭಾಷೆಯ ಮೂಲಕವೇ ತನ್ನ ಅನುಭವ ಸಂಕೀರ್ಣತೆಗಳನ್ನು ಹಿಡಿದಿಡುವ ಕಲೆ ಪ್ರಥಮ ಸಂಕಲನದಲ್ಲೇ ಗೀತಾ ಅವರಿಗೆ ದಕ್ಕಿರುವುದು ಆಶಾದಾಯಕ ಬೆಳವಣಿಗೆ.

ಶತಕದ ಹಿಂದೆಯೇ ಆರಂಭವಾದ ಆಧುನೀಕರಣ ಪ್ರಕ್ರಿಯೆ ದೂರದ ಉತ್ತರ ಕನ್ನಡದ ಕುಗ್ರಾಮಗಳನ್ನು ತಲುಪಿದ್ದು ಸ್ವಲ್ಪ ತಡವಾಗಿಯೇ. ಹಾಗಾಗಿ ಇಲ್ಲಿನ ಕತೆಗಳನ್ನು ಆಧುನೀಕರಣದ ಪ್ರಕ್ರಿಯೆ ಸಂಕೀರ್ಣತೆಗಳಿಗೆ ನೀಡಿದ ಒಂದು ಪ್ರತಿಕ್ರಿಯೆ ಎಂದೂ ಭಾವಿಸಬಹುದು. ಒಂದು ಕಡೆ ಸ್ಥಿತ್ಯಂತರಗೊಳ್ಳುತ್ತಿರುವ ನಗರೀಕರಣದ ಪ್ರಕ್ರಿಯೆಗೆ ತನ್ನನ್ನು ತಾನು ತೆರೆದುಕೊಳ್ಳುತ್ತಿರುವ ಸಮಕಾಲೀನ ಸಮಾಜದಲ್ಲಿ ಸಂಸಾರದೊಳಗೇ ಕೊಳೆಯುತ್ತಿರುವ ಹೆಂಗಸರು ಒಂದು ಕಡೆ ಇದ್ದರೆ, ಬೆಂಗಳೂರಿನಂತಹ ಸ್ವತಂತ್ರ ಜೀವನದಲ್ಲೂ ತೀವ್ರ ಅತೃಪ್ತಿಯಿಂದ ಬಳಲುತ್ತಿರುವ ಹೆಂಗಸರು ಇಲ್ಲಿದ್ದಾರೆ. ಆಧುನಿಕತೆ ತನ್ನಷ್ಟಕ್ಕೆ ತಾನೇ ಬಿಡುಗಡೆಯನ್ನು ತರುವುದಿಲ್ಲ. ಎಲ್ಲಿಯೇ ಇದ್ದರೂ ಸ್ವತಂತ್ರ, ಅಭಿವ್ಯಕ್ತಿಯ ಸೆಲೆ ಹುಡುಕಿಕೊಳ್ಳುವವರು ಅಂತಿಮವಾಗಿ ಹೊಸ ಪ್ರಜ್ಞೆಗಾಗಿ ಹಾತೊರೆಯುತ್ತಿರುವ ಪಾತ್ರಗಳೆ. ತಮ್ಮ ಸೀಮಿತ ಚೌಕಟ್ಟಿನಲ್ಲೇ ಹೊಸ ಪ್ರಜ್ಞೆಗಾಗಿ ಹಾತೊರೆಯುವ ರೆಬೆಲ್ ಗುಣಗಳ ಬಗ್ಗೆ ಕತೆಗಾರ್ತಿಗೆ ವಿಶೇಷ ಗಮನವಿದೆ.

ಸ್ವಲ್ಪ ಭಾವುಕ ನೆಲೆಯಿಂದ ಹೊರಡುವ ಕತೆಗಳು ಈ ಸಂಕಲನದಲ್ಲಿದ್ದರೂ, ಇಲ್ಲಿರುವ ಸಾಮಾಜಿಕ ರಚನೆಗಳು ಗಂಡು ಹೆಗ್ಗಡೆಗಳ ಡೌಲು, ಹೆಣ್ಣಿನ ತವಕ-ತಲ್ಲಣ, ಸಂಭ್ರಮ, ವಿಷಾದದ ಬದುಕಿನ ಬಿರುಕು ಹಾಗೂ ಇವೆಲ್ಲವುಗಳ ನಡುವೆಯೇ ಸ್ವಂತಿಕೆ, ಪೂರ್ಣತ್ವಗಳಿಗಾಗಿ ಹಾತೊರೆಯುತ್ತಿರುವ ಹೆಣ್ಣುಮಕ್ಕಳ ಪ್ರಪಂಚವನ್ನು ಒಳಗೊಂಡಿದೆ. ಸಂಕಲನದ ಮೊದಲ ಕತೆ ‘ಚೌಕಟ್ಟಿನಾಚೆಯವರು’ ನನ್ನ ಈ ಮಾತುಗಳಿಗೆ ಒಳ್ಳೆಯ ಉದಾಹರಣೆ. ಇಲ್ಲಿ ಮೂವರು ಹೆಣ್ಣು ಮಕ್ಕಳು ಮೂರು ವಿಭಿನ್ನ ಎರಕದವರು. ಸಾಂಸಾರಿಕ ಮರ್ಯಾದೆ ತಲೆಯ ಮೇಲಿಟ್ಟು ಒಳಗೆ ನಲುಗುವ ದೊಡ್ಡಮ್ಮ, ಕಾಲೇಜು ದಿನಗಳಲ್ಲಿ ಕ್ರಾಂತಿಕಾರಿ ಆಲೋಚನೆಗಳುಳ್ಳ ಆದರೆ ಈಗ ಬಿಸಿ ಕಳೆದುಕೊಂಡ ಮಾಲತಿ, ಗಂಡನನ್ನು ಕಳೆದುಕೊಂಡು ಹಿಂಸಾತ್ಮಕ ಸಮಾಜದ ಕಾಮುಕತನದ ನಡುವೆಯೇ ಬದುಕು ಸಾಗಿಸುತ್ತಿರುವ ಜೋರುಬಾಯಿಯ ದುರ್ಗಿ, ನಿತ್ಯ ಬದುಕಿನ ಲಯಗಳಲ್ಲೇ ಇರುವವರು. ಆದರೆ ಕತೆಗಾರ್ತಿ ಇವರಲ್ಲಿರುವ ಉಲ್ಲಂಘನೆಯ ಅಂಶವನ್ನು ಎತ್ತಿ ತೋರಿಸುವಲ್ಲಿ ಸಫಲರಾಗಿದ್ದಾರೆ. ಅದರಲ್ಲೂ ಕೆಳಜಾತಿಯ ದುರ್ಗಿ ತನ್ನ ಜೋರು ಬಾಯಿಂದ ಹಗಲಿನಲ್ಲೇ ‘ದೊಡ’ವರ ಮರ್ಯಾದೆಯನ್ನು ತೆಗೆಯಬಲ್ಲಳು. ಎಲ್ಲರಂತೆ ಈಕೆಯೂ ಸಂಸಾರಸ್ಥಳೇ. ಆದರೆ ಬದುಕಿನ ಅನಿವಾರ್ಯತೆಯಲ್ಲಿ ಈ ಚೌಕಟ್ಟನ್ನು ದಾಟುವವಳು. ಈಕೆಗೆ ಸಮಾಜದ ರಚನೆಗಳ ಹಿಂದಿನ ಹಿಂಸೆಯ ಅರಿವಿದೆ. ಈ ರೀತಿಯ ಲೋಕಗ್ರಹಿಕೆ ಕತೆಗಾರ್ತಿಗೆ ದಕ್ಕಿರುವುದು ಪ್ರಾಯಶಃ ಆಧುನಿಕ ಸ್ತ್ರೀವಾದಿ ಚಿಂತನೆಗಳ ಹಿನ್ನಲೆಯಲ್ಲಿ ಇರಬಹುದು. ಇಡೀ ಕಥಾಸಂಕಲನದಲ್ಲಿ ಬೇರೆ ಬೇರೆ ಪಾತಳಿಗಳಲ್ಲಿ ತಮ್ಮ ಸ್ವಂತಿಕೆ ಹುಡುಕಿಕೊಳ್ಳುವ ಸ್ತ್ರೀ ಪಾತ್ರಗಳ ಸಮೂಹವೇ ಬೇಕಾದಷ್ಟಿದೆ ತಮ್ಮ ತಮ್ಮ ಮಿತಿಗಳಲ್ಲಿ ಚೌಕಟ್ಟನ್ನು ದಾಟುವವರ ಕಥನವನ್ನು ಗೀತಾ ವಸಂತ ಇಲ್ಲಿ ಬಿಚ್ಚಿಟ್ಟಿದ್ದಾರೆ.

ಹಾಗಂತ ಇಲ್ಲಿನ ಎಲ್ಲ ಕಥೆಗಳು ಸಮಾನ ಕಲಾತ್ಮಕ ಯಶಸ್ಸನ್ನು ಸಾಧಿಸಿಲ್ಲ. ಉರಿಯ ವಾಸನೆ ಹಾಗೂ ಬೇಟೆ ಕಥೆಗಳು ಅತಿ ನಾಟಕೀಯತೆಯಿಂದ ಹಾಗೂ ಟಿ.ವಿ. ಧಾರವಾಹಿಗಳಲ್ಲಿ ಎದ್ದು ಕಾಣುವ ಸೆಂಟಿಮೆಂಟಲ್ ಗುಣಗಳಿಂದ ಬಳಲುತ್ತವೆ. ಆದರೆ ಕತೆಗಾರ್ತಿಗೆ ಕಥೆ ಹೇಳುವ ಕಲೆ ದಕ್ಕಿರುವುದರಿಂದ ಇಲ್ಲಿನ ಬಹುತೇಕ ಕಥೆಗಳು ಓದಿಸಿಕೊಳ್ಳುತ್ತವೆ. ಈ ಕತೆಗಾರ್ತಿಯಿಂದ ಮುಂದಿನ ದಿನಗಳಲ್ಲಿ ಇನ್ನೂ ಗಟ್ಟಿ ರಚನೆಗಳನ್ನು ನಿರೀಕ್ಷಿಸಬಹುದು.

ಕೃತಿಯ ಪುಟಗಳಿಂದ

‘ಮಗಳೇ ಮನೇಲಿ ರಾಶೀ ತ್ರಾಸನೇ?’ ಎಂದು ತಲೆ ನೇವರಿಸಿದರೆ ‘ಹೌದೇ ಆಯಿ’ಎನ್ನುತ್ತ ಇಲ್ಲೇ ಉಳಿದುಬಿಟ್ಟರೆ ಎಂಬ ಡುಗುಡುಗು. ಪ್ರಜ್ಞಾ ಗಂಡನ ಮನೆಗೆ ಹೋದ ಮೇಲೆ ಈ ಸಾರೆ ಬಂದಾಗ ಅವಳನ್ನು ಸರೀ ಮಾತಾಡಿಸಲೂ ಇಲ್ಲ ಎಂಬ ಅಪರಾಧೀಭಾವ ಅವಳನ್ನು ಕಾಡುತ್ತಿತ್ತು. ಈ ಎಲ್ಲ ಸಂಕಟಗಳನ್ನು ಒಳಗೊಳಗೆ ಒತ್ತಿಟ್ಟುಕೊಂಡ ಆಯಿ ಕಳೆದ ಸಾರಿ ಪ್ರಜ್ಞಾ ಹೊರಡುವಾಗ ಕಣ್ಣ ತುಂಬಾ ನೀರು ತುಂಬಿಕೊಂಡು ಗೇಟಿನವರೆಗೆ ಬಂದು ನಿಂತು ಅಲ್ಲೆ ಸ್ತಬ್ದ ಚಿತ್ರವಾಗಿದ್ದಳು. ಆಕೆ ಹೋದ ಮೇಲೆ ಭೋರ್ಗರೆಯುವ ಮಳೆಯಾಗಿದ್ದಳು.

Add Comment