Quantcast

ಗೋಪಾಲ ವಾಜಪೇಯಿ ಕಾಲ೦ : ಆರಂಕುಸಮಿಟ್ಟೊಡಂ…

ಸುಮ್ಮನೆ ನೆನಪುಗಳು

ಆರಂಕುಸಮಿಟ್ಟೊಡಂ…

– ಗೋಪಾಲ ವಾಜಪೇಯಿ

ಹುಟ್ಟೂರನ್ನು ಬಿಟ್ಟರೂ ಬಿಡಲಾರದ್ದಂತೆ ಅದರ ಬಂಧ. ಅಂತಿಂಥ ಬಂಧವಲ್ಲ ನೋಡಿ ಅದು, ‘ಕರುಳಬಳ್ಳಿ’ಯ ಸಂಬಂಧ.

ಹೀಗಾಗಿ ಹುಟ್ಟೂರು, ಅಲ್ಲಿಯ ಜನ, ಅಲ್ಲಿಯ ರೀತಿ-ರಿವಾಜು, ಅಲ್ಲಿಯ ಗುಡಿ-ಗುಂಡಾರಗಳು, ಬಸದಿ-ದರ್ಗಾ-ಮಸೀದೆಗಳು, ಅಲ್ಲಿಯ ವಾತಾವರಣ, ಅಲ್ಲಿಯ ಕೆರೆ-ಕುಂಟೆ, ತೋಟ-ಪಟ್ಟಿಗಳು, ಓದಿದ ಶಾಲೆ, ಕಲಿಸಿದ ಗುರುಗಳು, ಜತೆಯಲ್ಲಿ ಓದಿದ ಗೆಳೆಯರು, ಅವರ ಮನೆಯ ಹಿರಿಯರು… ಒಟ್ಟಾರೆ ಅಲ್ಲಿಯ ‘ಎಲ್ಲವೂ’ ‘ಎಲ್ಲರೂ’ ಎಂದಿಗಾದರೂ ಅದ್ಭುತವೇ, ಆಪ್ಯಾಯವೇ, ಅಭಿಮಾನಾಸ್ಪದವೇ…

ಅದಕ್ಕೇ –

ಕೆ.ಎಸ್.ನ. ”ನಮ್ಮೂರು ಚೆಂದವೋ ನಿಮ್ಮೂರು ಚೆಂದವೋ…?” ಅಂತ ತಮ್ಮ ಅರಸಿಯನ್ನ ಕೇಳಿದ್ದು…

”ನಮ್ಮೂರೇ ಚಂದ, ನಮ್ಮೂರೇ ಅಂದ, ನಮ್ಮೂರ ಭಾಷೆ ಕರ್ಣಾನಂದ…” ಎಂದೊಬ್ಬ ಕವಿ ಹಾಡಿದ್ದು.

ನಮ್ಮ ಕಂಬಾರರಂತೂ ಘೋಡಗೇರಿಯನ್ನೇ ‘ಶಿವಾಪುರ’ವೆಂದು ಕರೆದು ತಮ್ಮ ಊರನ್ನು ಅಜರಾಮರಗೊಳಿಸಿದ್ದು…

ಹೀಗಾಗಿ, ”ನಮ್ಮ ಊರು ನಮಗ ಪಾsಡ… ಯಾತಕ್ಕವ್ವಾ ಹುಬ್ಬಳ್ಳಿ-ಧಾರವಾsಡ…?” ಎಂದು ಮತ್ತೆ ಮತ್ತೆ ಹಾಡಹಾಡುತ್ತಲೇ ಊರಿನೆಡೆ ಓಡುತ್ತಿರುತ್ತದೆ ಮನಸ್ಸು…

ಹೌದು. ನನ್ನ ಊರಿನ ಬಗ್ಗೆ ನನಗೆ ಎಲ್ಲಿಲ್ಲದ ಹೆಮ್ಮೆಯಿದೆ.

ಯಾವುದನ್ನು ‘ಸರಳಗನ್ನಡ’ದ ‘ತಿರುಳುಗನ್ನಡ’ದ ಪುಲಿಗೆರೆ ಎಂದು ಮಹಾಕವಿ ಪಂಪ ಬಣ್ಣಿಸಿದನೋ ಆ ಲಕ್ಷ್ಮೇಶ್ವರ ನನ್ನ ಹುಟ್ಟೂರು ಎಂಬ ಹೆಮ್ಮೆ.

ಯಾವ ಊರಲ್ಲಿ ಏಕೀಕರಣದ ಕಾರಣಕ್ಕಾಗಿ ವರಕವಿ ಬೇಂದ್ರೆ ಪದೇ ಪದೇ ಬಂದು ಬೀಡು ಬಿಡುತ್ತಿದ್ದರೋ ಅಂಥ ಲಕ್ಷ್ಮೇಶ್ವರದಲ್ಲಿ ನಾನು ಹುಟ್ಟಿದ್ದು ಎಂಬ ಹೆಮ್ಮೆ.

ಯಾವ ಊರಲ್ಲಿ ದೇಶದಲ್ಲಿಯೇ ಅಪರೂಪದ್ದೆನಿಸುವ ಶಿವ ದೇವಾಲಯವಿದೆಯೋ ಅಂಥ ಲಕ್ಷ್ಮೇಶ್ವರದವನು ನಾನು ಎಂಬ ಹೆಮ್ಮೆ.

ಹಾಂ, ಅಂಥ ನನ್ನ ಊರು ಲಕ್ಷ್ಮೇಶ್ವರದ ಹಿರಿಮೆ-ಗರಿಮೆಗಳನ್ನಿಷ್ಟು ಸಂಕ್ಷಿಪ್ತವಾಗಿ ಬಣ್ಣಿಸಿಯೇ ಮುಂದುವರಿಯುತ್ತೇನೆ.

ಇತಿಹಾಸಪ್ರಸಿದ್ಧವಾದದ್ದು ನನ್ನ ಊರು. ‘ಪಾಳಾ-ಬದಾಮ ರಸ್ತೆ’ ಎಂಬ ಪ್ರಾಚೀನ ಹೆದ್ದಾರಿಯ ಮೇಲಿನ ಊರು. ಈ ರಸ್ತೆ ಉತ್ತರ ಕನ್ನಡ ಜಿಲ್ಲೆಯ ‘ಪಾಳಾ’ ಎಂಬಲ್ಲಿಂದ ಐತಿಹಾಸಿಕ ‘ಬದಾಮಿ’ಯ ತನಕ ಸಾಗುವಂಥದು. ಕಾಲ-ಕಾಲಕ್ಕೆ ಬೇರೆ ಬೇರೆ ವಂಶಗಳ ದೊರೆಗಳ ಆಡಳಿತಕ್ಕೆ ಒಳಪಟ್ಟ ನಮ್ಮೂರು ಜೈನ-ವೀರಶೈವ ಧರ್ಮಗಳ ಮುಖ್ಯ ಕೇಂದ್ರ. ಇಲ್ಲಿ ದೊರೆತ ಶಿಲಾಶಾಸನಗಳು ನಮ್ಮ ಊರಿನ ಗತವೈಭವದ ಮೇಲೆ ಬೆಳಕು ಚೆಲ್ಲುತ್ತವೆ. ಕ್ರಿಸ್ತ ಶಕ ಏಳನೆಯ ಶತಮಾನದಲ್ಲಿ ಕಲ್ಯಾಣ ಚಾಲುಕ್ಯ ದೊರೆಗಳು ಇಲ್ಲಿ ಶಂಖ ಬಸದಿಯನ್ನು (ಅಥವಾ ‘ಸಹಸ್ರಕೂಟ ಜಿನಾಲಯ’.) ಕಟ್ಟಿಸಿದ ಬಗ್ಗೆ ಈ ಶಾಸನಗಳು ಸಾರುತ್ತವೆ.

‘ವಚನ ಚಳುವಳಿ’ಯ ಕಾಲಕ್ಕೆ ಬಂದರೆ, ಶರಣ ಆದಯ್ಯ ಹಾಗೂ ಶರಣ ಅಗ್ಘವಣಿ ಹೊನ್ನಯ್ಯ ಇಬ್ಬರೂ ನಮ್ಮೂರಲ್ಲೇ ಇದ್ದವರು. ನಮ್ಮೂರಿನ ಅಧಿದೈವ ಸೋಮನಾಥನನ್ನು ಈ ಇಬ್ಬರೂ ತಮ್ಮ ವಚನಗಳಲ್ಲಿ ಉಲ್ಲೇಖಿಸಿದ್ದಾರೆ. ಶರಣ ಅಗ್ಘವಣಿ ಹೊನ್ನಯ್ಯನಂತೂ ‘ಹುಲಿಗೆರೆಯ ವರದ ಸೋಮನಾಥ’ ಎಂಬ ‘ಅಂಕಿತ’ದಲ್ಲೇ ವಚನಗಳನ್ನು ಬರೆದಿದ್ದಾನೆ. (ಈ ಸೋಮನಾಥ ಆದಯ್ಯನ ಭಕ್ತಿಗೆ ಮೆಚ್ಚಿ ದೂರದ ಸೌರಾಷ್ಟ್ರದಿಂದ ಬಂದು ಇಲ್ಲಿ ನೆಲೆಸಿದನೆಂಬುದು ಒಂದು ದಂತ ಕಥೆ. ಅದನ್ನು ಮುಂದೆಂದಾದರೂ ವಿವರಿಸುತ್ತೇನೆ.)

ಪುಲಿಗೆರೆ, ಹುಲಿಗೆರೆ, ಪುರಿಗೆರೆ, ಪುಲಿಕಾನಗರ ಮುಂತಾಗಿ ವರ್ಣಿಸಲ್ಪಟ್ಟ ಊರಿದು. ಚಾಲುಕ್ಯರ ಆಡಳಿತಕ್ಕೆ ಈ ಊರು ಒಳಪಟ್ಟಿತ್ತಾದರೂ ಪುಲಿಕೇಶಿಗೂ ಈ ಊರಿಗೂ ಸಂಬಂಧವಿದ್ದಂತಿಲ್ಲ. ಆದರೆ, ‘ಲಕ್ಷ್ಮೇಶ್ವರ’ ಎಂಬ ಹೆಸರು ಈ ಊರಿಗೆ ಬಂದದ್ದರ ಬಗ್ಗೆ ಶಾಸನಗಳಲ್ಲಿ ವಿವರಗಳಿವೆ. ಚಾಲುಕ್ಯ ದೊರೆ ಇಮ್ಮಡಿ ಸೋಮೇಶ್ವರನ ಕಾಲದಲ್ಲಿ, ‘ಬೆಳುವೊಲ ಮುನ್ನೂರು’ ಮತ್ತು ‘ಪುಲಿಗೆರೆ ಮುನ್ನೂರು’ಗಳ (ಈ ಸಂಖ್ಯೆ ಆ ಆಡಳಿತಕ್ಕೆ ಒಳಪಡುವ ಗ್ರಾಮಗಳನ್ನು ಸೂಚಿಸುತ್ತದೆಯಂತೆ.) ಉಸ್ತುವಾರಿ ನೋಡಿಕೊಳ್ಳುತ್ತಿದ್ದಾತ ಮಹಾಮಂಡಲೇಶ್ವರ ಲಕ್ಷ್ಮರಸ ಎಂಬಾತ. ಆತ ಇಲ್ಲಿ ಒಂದು ಶಿವಾಲಯವನ್ನು ಕಟ್ಟಿಸಿದ. ಆ ದೇವಾಲಯ ‘ಲಕ್ಷ್ಮಣ ಲಿಂಗನ ಗುಡಿ’ ಎಂದು ಈಗಲೂ ಕರೆಯಲ್ಪಡುತ್ತಿದೆ. ಲಕ್ಷ್ಮರಸನ ಕಾರಣದಿಂದಾಗಿ ಈ ಊರಿಗೆ ‘ಲಕ್ಷ್ಮೇಶ್ವರ’ ಎಂಬ ಹೆಸರು ಬಂತೆಂದು ಹೇಳುತ್ತಾರೆ.

ಮುಂದೆ ಈ ಊರು ವಿಜಾಪುರ ಸುಲ್ತಾನರ ಕೈವಶವಾಯಿತು. ಎರಡನೆಯ ಇಬ್ರಾಹಿಮ್ ಆದಿಲ್ ಶಾಹನ ಕಾಲದಲ್ಲಿ ಲಕ್ಷ್ಮೇಶ್ವರದಲ್ಲಿ ಆಡಳಿತಾಧಿಕಾರಿಯಾಗಿದ್ದಾತ ಅಂಕುಶ್ ಖಾನ್. ಆತ ಕ್ರಿಸ್ತ ಶಕ 1607 ರಲ್ಲಿ ಕಟ್ಟಿಸಿದ ಹಸಿರು ಕಲ್ಲಿನ ಜುಮ್ಮಾ ಮಸೀದೆ ಇಂದಿಗೂ ನಿಮ್ಮನ್ನು ಅಚ್ಚರಿಗೆ ತಳ್ಳುತ್ತದೆ.

ಲಕ್ಷ್ಮೇಶ್ವರವನ್ನು ಕೆಲವು ಕಾಲ (ಹಿರೇ) ಮಿರಜ ಸಂಸ್ಥಾನದ ಪಟವರ್ಧನ ವಂಶಸ್ಥರು ತಮ್ಮ ಎರಡನೆಯ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಅವರ ಆಡಳಿತದಲ್ಲಿ ಧರ್ಮ-ವೇದಾಂತ-ಶಾಸ್ತ್ರಗಳ ಜೊತೆ ಇಲ್ಲಿ ಸಾಹಿತ್ಯ, ಸಂಗೀತ, ರಂಗಭೂಮಿ ಕ್ಷೇತ್ರಗಳಿಗೆ ಕೂಡ ಒಳ್ಳೆಯ ಉತ್ತೇಜನ ಸಿಕ್ಕಿತು.

ನಮ್ಮ ಹಿರಿಯ ವಿಮರ್ಶಕ ಎಲ್. ಎಸ್. ಶೇಷಗಿರಿರಾಯರ ಮೂಲ ಸ್ಥಾನ ಲಕ್ಷ್ಮೇಶ್ವರವೇ. ಅವರ ಪೂರ್ಣ ಹೆಸರು ಲಕ್ಷ್ಮೇಶ್ವರ ಸ್ವಾಮಿರಾವ್ ಶೇಷಗಿರಿರಾವ್. ಅಲ್ಲದೆ ಜ್ಞಾನಪೀಠ ವಿಜೇತ ಪ್ರೊ. ವಿನಾಯಕ ಕೃಷ್ಣ ಗೋಕಾಕರು ತಮ್ಮ ಬಾಲ್ಯಕಾಲವನ್ನು ಕಳೆದದ್ದು ನಮ್ಮೂರಲ್ಲಿಯೇ. ಅವರ ತಾತ ವಿನಾಯಕರಾಯರು, ಮತ್ತು ತಂದೆ

ಕೃಷ್ಣರಾಯರು ನಮ್ಮೂರಲ್ಲಿ ಪಟವರ್ಧನ ಮಹಾರಾಜರ ಕಾಲದಲ್ಲಿ ವಕೀಲಿ ವೃತ್ತಿಯಲ್ಲಿದ್ದವರು. ಕೃಷ್ಣರಾಯರು ಕೈಹಿಡಿದದ್ದು ಲಕ್ಷ್ಮೇಶ್ವರದ ಕನ್ಯೆಯನ್ನೇ. ಆದ್ದರಿಂದ ಲಕ್ಷ್ಮೇಶ್ವರ ಪ್ರೊ. ಗೋಕಾಕರ ಅಜ್ಜಿಯ ಮನೆ.

ಕರ್ನಾಟಕದ ಮೊಟ್ಟ ಮೊದಲ ‘ಸ್ತ್ರೀ ನಾಟಕ ಮಂಡಳಿ’ ಸ್ಥಾಪನೆಯಾದದ್ದು ನಮ್ಮೂರಲ್ಲಿಯೇ. ಅದನ್ನು ‘ಬಚ್ಹಾಸಾನಿ ಕಂಪನಿ’ ಎಂದು ಗುರುತಿಸುವುದಿದೆ. ತಾವು ಚಿಕ್ಕವರಿದ್ದಾಗ ಈ ಬಚ್ಹಾಸಾನಿಯನ್ನು ನೋಡಿದ್ದಾಗಿ ನಮ್ಮ ಹಿರಿಯ ರಂಗ ತಜ್ಞ ನಾಡೋಜ ಏಣಗಿ ಬಾಳಪ್ಪನವರು ಆಗಾಗ ನೆನಪಿಸಿಕೊಳ್ಳುವುದಿದೆ. ಹಿಂದೂಸ್ತಾನಿ ಸಂಗೀತದ ವಿಖ್ಯಾತ ವಿದುಷಿಯೂ ಆಗಿದ್ದ ಆಕೆ ಮಿರಜ ಸಂಸ್ಥಾನದ ಆಸ್ಥಾನ ಗಾಯಕಿಯೂ ಆಗಿದ್ದಳು. (ಬಚ್ಹಾಸಾನಿಯ ಬಗ್ಗೆ ಪ್ರತ್ಯೇಕವಾಗಿಯೇ ಬರೆಯಬೇಕಾಗುತ್ತದೆ.)

ಇನ್ನು ಚಿತ್ರಕಲೆಯ ವಿಷಯಕ್ಕೆ ಬಂದರೆ, ಅಮೀನ್ ಸಾಬ್ ಕಮಡೊಳ್ಳಿ ಹಾಗೂ ವಾಚೇದಮಠ ಎಂಬವರು ಆ ಕಾಲದಲ್ಲಿ ಲಕ್ಷ್ಮೇಶ್ವರದ ಹೆಸರು ಕಲಾಕ್ಷೇತ್ರದಲ್ಲಿ ರಾರಾಜಿಸುವಂತೆ ಮಾಡಿದ ಕಲಾವಿದರು.

ಏಕೀಕರಣಕ್ಕೂ ಮೊದಲು ಮುಂಬಯಿ ಪ್ರಾಂತ್ಯಕ್ಕೆ ಸೇರಿತ್ತು ಲಕ್ಷ್ಮೇಶ್ವರ. ‘ರಾಜ್ಯೋದಯ’ದ ನಂತರ ಧಾರವಾಡ ಜಿಲ್ಲೆಯ ಪ್ರಮುಖ ಪಟ್ಟಣವೆನಿಸಿತು.

ಶಿರಹಟ್ಟಿ ತಾಲೂಕಿಗೆ ಸೇರಿದ ನನ್ನೂರು ಆರಂಭದಿಂದಲೂ ಮುಖ್ಯ ವ್ಯಾಪಾರೀ ಕೇಂದ್ರ. ಒಂದು ಕಾಲಕ್ಕೆ ತುಂಗಭದ್ರಾ ನದಿಯ ಎಡ ದಡಕ್ಕೆ ಹೊಂದಿಕೊಂಡು ದೊಡ್ಡ ಜಿಲ್ಲೆ ಎನಿಸಿತ್ತು ಧಾರವಾಡ. ಮೊನ್ನೆ ಮೊನ್ನೆ ಮೂರು ಚೂರುಗಳಾಗಿ, ಹೊಸ ಜಿಲ್ಲೆಗಳು ಉದಯಿಸುವ ತನಕ ಧಾರವಾಡ ಜಿಲ್ಲೆಯಲ್ಲಿದ್ದ ನನ್ನ ಊರು ಇದೀಗ ಗದಗ ಜಿಲ್ಲೆಯ ಮುಖ್ಯ ಊರಾಗಿ ನಿಂತಿದೆ.

ಈ ಸುತ್ತ ಮುತ್ತಲಿನ ಪರಿಸರವೇ ಹಾಗಿದೆ.

ಯಾಲಕ್ಕಿ ಕಂಪಿನ ಹಾವೇರಿ, ಕನಕದಾಸರ ಬಾಡ, ಗೋಕಾಕರ ಸವಣೂರು, ಶರೀಫರ ಶಿಶುನಾಳ, ಅವರ ಗುರು ಗೋವಿಂದಭಟ್ಟರ ಕಳಸ, ಸವಾಯಿ ಗಂಧರ್ವರ ಕುಂದಗೋಳ, ಸಿದ್ಧಾರೂಢರ ಹುಬ್ಬಳ್ಳಿ, ಕುಮಾರವ್ಯಾಸನ ಕೋಳಿವಾಡ, ವೀರನಾರಾಯಣನ ಗದಗು, ದಾನಚಿಂತಾಮಣಿ ಅತ್ತಿಮಬ್ಬೆಯ ಲಕ್ಕುಂಡಿ, ವೀರ ಭೀಮರಾಯನ ಮುಂಡರಗಿ, ನಯಸೇನ ಕವಿಯ ಮುಳಗುಂದ, ಬೇಂದ್ರೆ ಮತ್ತು ವೆಂಕೋಬರಾಯರ ಶಿರಹಟ್ಟಿ… ಈ ಎಲ್ಲ ಊರುಗಳಿಗೆ ನಮ್ಮ ಊರಿನಿಂದ ಒಂದು ಇಲ್ಲವೇ ಒಂದೂವರೆ ತಾಸಿನ ದಾರಿ, ಅಷ್ಟೇ.

ಇಂಥ ಭವ್ಯ ಸಾಂಸ್ಕೃತಿಕ ಹಿನ್ನೆಲೆ, ಪರಂಪರೆ ಇರುವ ನನ್ನ ಊರನ್ನು ನಾನು ಮರೆತೇನಂದರ ಮರೆಯಲಿ ಹ್ಯಾಂsಗ…?

ಅಂದಾಗ, ‘ಆರಂಕುಸಮಿಟ್ಟೊಡಂ…’ ಎಂಬ ಉದ್ಗಾರ ಸಹಜವೇ ಅಲ್ಲವೇ…?

(ಮುಂದುವರಿಯುವುದು)

7 Comments

 1. suresha deshkulkarni
  June 19, 2012
 2. N Krishnamurthy Bhadravathi
  June 18, 2012
 3. Basu patil
  June 17, 2012
 4. Tiru Sridhara
  June 17, 2012
 5. Guruprasad Kurtkoti
  June 17, 2012
 6. Savita Inamdar
  June 17, 2012

Add Comment