ಬದಲಾಗುತ್ತಿರುವ ಕಾಲಘಟ್ಟದಲ್ಲಿ ಅಮ್ಮ-ಮಕ್ಕಳು
ಭಾರತಿ
ಅಮ್ಮ ಅಂದ ಕೂಡಲೇ ತುಂಬ ಭಾವುಕವಾಗಿ ಯೋಚಿಸುವವರಿಗೆ ನಾನು ಇಲ್ಲಿ ಹೇಳುವ ಕೆಲವು ಮಾತು ಅಪಥ್ಯವಾಗಬಹುದೇನೋ ಗೊತ್ತಿಲ್ಲ. ನೆನಪಿರುವಷ್ಟು ಕಾಲದಿಂದಲೂ ಅಮ್ಮ ಅಂದರೆ ಸದಾಕಾಲ ಒಂದು ಚೌಕಟ್ಟು ಅವಳಿಗೆ. ಯಾವಾಗಲೂ ಸಿಡುಕುವ ಅಪ್ಪನ ಹತ್ತಿರ ಮಕ್ಕಳ ಪರವಾಗಿ ಸೆರಗೊಡ್ಡಿ ಏನೂಂದ್ರೆ ಅಂತ ಬೇಡಿಕೊಳ್ಳುವ ಅಮ್ಮ, ಮಕ್ಕಳಿಗೆ ಮೂಗಿನ ತನಕ ಬಡಿಸಿ ತಾನು ಹಸಿದ ಹೊಟ್ಟೆಯಲ್ಲಿ ಮಲಗುವ ಅಮ್ಮ, ಮಕ್ಕಳು ಅವಳನ್ನು ಕೊನೆಗಾಲದಲ್ಲಿ ಕಡೆಗಾಣಿಸಿದರೂ ಏನೂ ಆಗೇ ಇಲ್ಲ ಅನ್ನುವಂತೆ ನಟಿಸುವ ಅಮ್ಮ ! ಹೀಗೆ ಒಂದು ಸಿದ್ಧ ಚೌಕಟ್ಟು ಹಾಕಿಟ್ಟಿದ್ದು ಆ ಕಾಲದ ನಮ್ಮ ಸಿನೆಮಾ ಅನ್ನಿಸುತ್ತದೆ. ಅಮ್ಮ ತ್ಯಾಗಮಯಿಯಾಗಿರುವುದು ಒಪ್ಪೋಣ, ಆದರೆ ಅವಳದ್ದು ಅಂತ ಒಂದು ಬದುಕೇ ಇಲ್ಲದ ಹಾಗೆ ಸಂಸಾರ, ಗಂಡ, ಮಕ್ಕಳ ಸುತ್ತಲೇ ಸದಾಕಾಲ ಸುತ್ತುವುದೇ ಅವಳ ಬದುಕಾಗಿರಬೇಕೇ? ಅನ್ನೋದು ನನ್ನ ಪ್ರಶ್ನೆ. ಯಾವಾಗಲೂ ಮಕ್ಕಳಿಗಾಗಿ ಜೀವ ತೇಯುತ್ತಲೇ, ಅವರ ಸುಖದಲ್ಲಿ ತನ್ನ ಸುಖ ಕಾಣುತ್ತಲೇ ಅವಳು ಇರಬೇಕೆನ್ನುವುದು ರೂಢಿಯಂತೆ ಆಗಿಹೋಗಿದೆ. ಅಮ್ಮನಾದವಳು ಬರೀ ಅಮ್ಮನಾಗಿ ಮಾತ್ರ ಬದುಕದೇ ‘ಅವಳಾಗಿಯೂ’ ಬದುಕಲಿ ಅನ್ನುತ್ತೇನೆ ನಾನು. ಮಕ್ಕಳಿಗಾಗಿ ಎಲ್ಲ ಮಾಡುವುದರ ಜೊತೆಗೆ ಅವಳು ಒಂದು ವ್ಯಕ್ತಿಯಾಗಿಯೂ ಬೆಳೆಯಬೇಕು. ಗಂಡ-ಮನೆ-ಮಕ್ಕಳ ಜೊತೆಗೆ ಬದುಕಿದಷ್ಟೇ ಚೆಂದಕ್ಕೆ ಅದರಿಂದಾಚೆ ದಾಟಿ ಆಚೆ ಹೋಗಿ ಅವಳ ಬದುಕನ್ನೂ ರೂಪಿಸಿಕೊಳ್ಳಬೇಕು ಅನ್ನುತ್ತೇನೆ. ಈಗೆಲ್ಲ ಸುಮಾರು ಜನರಿಗೆ ಒಂದೊಂದೇ ಮಕ್ಕಳು. ಆ ಮಗ/ಮಗಳು ಕೂಡಾ ತನ್ನ ರೆಕ್ಕೆ ಬಲಿತಾಗ ಯಾವುದೋ ಬೇರೆ ಊರಿನಲ್ಲಿ ಕೆಲಸ ಸಿಗುತ್ತದೆ ಅಥವಾ ಎಲ್ಲೋ ದೂರದ ದೇಶಕ್ಕೆ ಓದಲು ಹೊರಡುತ್ತಾರೆ. ಆಮೇಲೆ ಮದುವೆಯಾಗುತ್ತದೆ, ಅವರವರ ಸಂಸಾರ. ಹೆಣ್ಣು ಮಕ್ಕಳು ಮದುವೆಯಾದ ಕೂಡಲೇ ಅವರ ಮನೆ ಅಂತ ಕಟ್ಟಿಕೊಳ್ಳುತ್ತಾರೆ. ಸುಮಾರು ಗಂಡು ಮಕ್ಕಳು ಕೂಡಾ ಒಂದೇ ಊರಿನಲ್ಲಿದ್ದರೂ ಅಪ್ಪ-ಅಮ್ಮನ ಜೊತೆ ಬದುಕುವುದಿಲ್ಲ. ಇಂಥ ಕಾಲಮಾನದಲ್ಲಿ ತೀರಾ ಬದುಕನ್ನು ಮಕ್ಕಳ ಸುತ್ತಲೇ ಗಿರಕಿ ಹೊಡೆಸಿಕೊಂಡು, ಆ ನಂತರ ಅವರು ದೂರಾಗಿಬಿಟ್ಟರೆ ಆಗಿನ ಆಘಾತ ತಡೆಯುವುದು ಕಷ್ಟ. ಸದಾಕಾಲ ಮಕ್ಕಳದ್ದೇ ಬದುಕನ್ನು ತಮ್ಮ ಬದುಕೂ ಆಗಿಸಿಕೊಂಡು ಬಿಟ್ಟರೆ ಅವರಿಲ್ಲದ ಸ್ಥಿತಿಯಲ್ಲಿ ಬದುಕಿಗೆ ಅರ್ಥವೇ ಇಲ್ಲದ ಹಾಗಾಗಿ ಹೋಗಬಹುದಲ್ಲವಾ? ಹಾಗಾಗಿ ಮೊದಲಿನಿಂದಲೂ ತನ್ನದು ಅಂತ ಒಂದು ಬದುಕು ಕಟ್ಟಿಕೊಳ್ಳುವುದು ಎಲ್ಲ ಹೆಂಗಸರಿಗೂ ತುಂಬ ತುಂಬ ಅಗತ್ಯ.
ಹಿಂದೆ ನಾನು ಸ್ಕೂಲಿನಲ್ಲಿ ಓದುವಾಗ ನಾನು ಮನೆಗೆ ಬರುವಾಗ ಅಮ್ಮ ಮನೆಯಲ್ಲಿ ಇಲ್ಲದಿದ್ದರೆ ಸಿಕ್ಕಾಪಟ್ಟೆ ಚಡಪಡಿಕೆ. ಏನೋ ಸ್ಕೂಲಿಗೆ ಹೋಗಿ ಕಡೆದು ಕಟ್ಟೆ ಹಾಕಿ ಬಂದು ಅಸಾಧ್ಯ ಸುಸ್ತು ಪಟ್ಟಿರುವವಳ ಹಾಗೆ ಆಡುತ್ತಿದ್ದೆ. ಅಮ್ಮ ಮಂಗಳವಾರದ ದಿನ ಬನಶಂಕರಿ ದೇವಸ್ಥಾನಕ್ಕೆ ರಾಹುಕಾಲದ ಪೂಜೆ ಅಂತೊಂದು ಹೊಸ ಕ್ರೇಜ಼್ ಶುರುವಾಗಿತ್ತು ಆಗೆಲ್ಲ, ಅದಕ್ಕೆ ಹೋಗಿಬಿಡುತ್ತಿದ್ದಳು. ನನಗೆ ಅವತ್ತು ಮನೆಗೆ ಬರುವಾಗಲೇ ಏನೋ ಬೇಜಾರು ಬೇಜಾರು. ಅಮ್ಮ ಇಲ್ಲದ ಮನೆಗೆ ಹೋಗಿ ನಾನೇ ಬಡಿಸಿಕೊಂಡು ತಿನ್ನುವುದನ್ನು ನೆನೆಸಿಕೊಂಡು ಬೆಳಗ್ಗಿನಿಂದಲೇ ಒಂಥರಾ ನಿರುತ್ಸಾಹ ಆವರಿಸಿ ಬಿಡುತ್ತಿತ್ತು. ಅವತ್ತೆಲ್ಲ ಸುಮ್ಮನಾದರೂ ಎಲ್ಲರ ಮೇಲೆ ಸಿಡಿಮಿಡಿ. ಅಮ್ಮ ಇಂಥ unreasonable ನಡವಳಿಕೆಗಳಿಗೆಲ್ಲ ಸೊಪ್ಪು ಹಾಕುತ್ತಿರಲಿಲ್ಲ. ಅವಳು ತನ್ನ ಅಣ್ಣಂದಿರ ಮನೆಗೆ, ದೇವಸ್ಥಾನಕ್ಕೆ, ಊರಿನಲ್ಲಿ ನಡೆಯುವ ಮದುವೆಗಳಿಗೆ ತಪ್ಪದೇ ಹೋಗೇ ಹೋಗುತ್ತಿದ್ದಳು. ಸ್ವಲ್ಪ ದೊಡ್ಡವಳಾದ ನಂತರ ನಾನು ಅದನ್ನೆಲ್ಲ ಒಪ್ಪಿಕೊಳ್ಳಲು ಶುರು ಮಾಡಿದೆ. ಅವಳ ಬದುಕೂ ಒಂದಿದೆ ಅಂತ ಮನಸ್ಸು ಒಪ್ಪಿಕೊಳ್ಳಲೇ ಬೇಕಾಯಿತು. ಇದ್ದ ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಮಾಡಿ ಕಳಿಸಿದ ಮೇಲೂ ಯಾವುದೇ ಡಿಪ್ರೆಷನ್ಗೆಲ್ಲ ಒಳಗಾಗದೇ ತನ್ನ ಪಾಡಿಗೆ ತಾನು ಬದುಕುವ ಕಲೆ ರೂಡಿಸಿಕೊಂಡ ಅಮ್ಮನನ್ನು ನೋಡಿ ನನಗೆ ಖುಷಿಯಾಗುತ್ತದೆ. ಇದೆಲ್ಲ ಅವಳಿಗೆ ಸಾಧ್ಯವಾಗಿದ್ದು ತೀರಾ ನಮ್ಮ ಸುತ್ತಲೇ ಅವಳ ಬದುಕನ್ನು ಸುತ್ತಲು ಬಿಡದೇ ತನ್ನ ಬದುಕಿನ ಕಡೆಗೂ ಗಮನ ಹರಿಸಿ parallel ಆಗಿ ಅದನ್ನೂ ಬೆಳೆಸಿಕೊಂಡಿದ್ದರಿಂದಲೇ ಅಂತ ಅನ್ನಿಸುತ್ತದೆ ನನಗೆ.
ಇನ್ನು ಅಮ್ಮ ಆ ಕಾಲದಲ್ಲಿ ಹೇಗಿದ್ದಳು ಅಂತ generalise ಮಾಡುವುದಕ್ಕಿಂತ ನನ್ನ- ಅಮ್ಮನ ಮತ್ತು ನನ್ನ-ಮಗನ ಬದುಕಿನ ಒಂದೆರಡು ಪುಟ ತೆಗೆದಿಡುವುದು ಸರಿ ಅಂದುಕೊಳ್ಳುತ್ತೇನೆ …
ಕಾಲೇಜಿನಲ್ಲಿ ಓದುವಾಗ ನನ್ನ ಅಕ್ಕನಿಗೆ ಸಿಕ್ಕಾಪಟ್ಟೆ ಫ಼್ರೆಂಡ್ಸ್ … ಹುಡುಗರು ಮತ್ತು ಹುಡುಗಿಯರು ಎಲ್ಲರೂ ಇದ್ದರು ಅವಳ ಗುಂಪಿನಲ್ಲಿ. ಎಲ್ಲರೂ ಮನೆಗೂ ಬರುತ್ತಿದ್ದರು. ಅಮ್ಮ ಅಡುಗೆ ಮಾಡುತ್ತಿದ್ದಳು, ಬಡಿಸುತ್ತಿದ್ದಳು. ಆದರೆ, ಹುಡುಗರು ಬಂದಾಗ ಒಂದು ವಿಚಿತ್ರ ಚಡಪಡಿಕೆ ಅವಳಲ್ಲಿ. ನನ್ನ ಅಮ್ಮನಿಗೆ ಹೆಚ್ಚು ಸ್ನೇಹಿತೆಯರೂ ಇರಲಿಲ್ಲ. ಯಾರ ಜೊತೆಗೂ ಅವಳು ತುಂಬ ಕ್ಲೋಸ್ ಆಗೋದೇ ಇಲ್ಲ. ಅಂಥದ್ದರಲ್ಲಿ ಹೆಣ್ಣು ಮಕ್ಕಳಿಗೆ ಹುಡುಗರು ಫ಼್ರೆಂಡ್ಸ್ ಇರಬಹುದು, ಅವರು ಬರೀ ಫ಼್ರೆಂಡ್ಸ್ ಆಗಿ ಉಳಿಯಬಹುದು ಅನ್ನೋದನ್ನು ಅವಳಿಗೆ ಕಲ್ಪಿಸಿಕೊಳ್ಳೋದೇ ಕಷ್ಟವಾಗಿತ್ತು. ಹೆಣ್ಣು ಫ಼್ರೆಂಡ್ಸ್ ಬಂದರೆ ಸೂಪರ್ ಮಾಮ್ ಆಗಿಬಿಡುತ್ತಿದ್ದ ಅಮ್ಮ ಹುಡುಗರು ಬಂದಾಗ ಮಾತ್ರ ಸಿಕ್ಕಾಪಟ್ಟೆ ಟೆನ್ಷನ್ ಮಾಡಿಕೊಂಡು ಬಿಡುತ್ತಿದ್ದಳು. ಆಗಿನ ಸಿನೆಮಾಗಳ ಪ್ರಭಾವವೋ ಏನೋ .. ಒಂದು ಹುಡುಗ ಸೀನ್ಗೆ enter ಆದ ಅಂದರೆ ಹಿಂದೆಯೇ ಲವ್ವು, ಡ್ಯೂಯೆಟ್ಟು, ಮನೆಯವರ ವಿರೋಧ ಮಣ್ಣು ಮಸಿ ಎಲ್ಲ ಶುರುವಾಗಿ ಕೊನೆಗೆ ‘ನನ್ನ ಹುಟ್ಸಿ ಅಂತ ನಿಮ್ಮನ್ನ ನಾನು ಕೇಳಿದ್ನಾ?’ ಅಂತಲೋ, ‘ಅವಳನ್ನ ಮದುವೆಯಾದರೆ ನೀನು ನನ್ನ ಹೆಣ ಬೀಳತ್ತೆ’ ಅನ್ನೋ ಹಳಸಲು ಡೈಲಾಗ್ಗಳಿದ್ದ ಎಲ್ಲ ಸಿನೆಮಾಗಳ ದೃಶ್ಯ ಕಣ್ಣೆದುರು ಬಂದುಬಿಡುತ್ತಿದ್ದವು ಅಂತ ಕಾಣುತ್ತದೆ. ಹಾಗಾಗಿ ಅಮ್ಮನಿಗೆ ‘ಹುಡುಗ-ಹುಡುಗಿ ಫ಼್ರೆಂಡ್ಸ್’ ಅನ್ನೋದನ್ನ ಸುಲಭಕ್ಕೆ ತೆಗೆದುಕೊಳ್ಳಲು ಆಗುತ್ತಲೇ ಇರಲಿಲ್ಲ. ಮನೆಗೆ ಬರುತ್ತಿದ್ದ ಆ ಹುಡುಗರು ಎಲ್ಲ ತುಂಬ ಒಳ್ಳೆಯವರು. ಆದರೂ ಅಮ್ಮ ಅವರ ಮಧ್ಯೆಯೇ ಓಡಾಡುತ್ತ, ಹದ್ದಿನ ಕಣ್ಣಿನಲ್ಲಿ ಅವರನ್ನೆಲ್ಲ ಗಮನಿಸುತ್ತ ಎಂಥ ಬಿಗಿ ವಾತಾವರಣ create ಮಾಡುತ್ತಿದ್ದಳೆಂದರೆ ಒಬ್ಬ ಫ಼್ರೆಂಡ್ ಅಕ್ಕನನ್ನು ಕೇಳಿದ್ದನಂತೆ ‘ನಿಮ್ಮಮ್ಮ ಹೆಡ್ ಮೇಡಂಆಅ?’ ಅಂತ! ಇನ್ನೊಬ್ಬನಂತೂ ಒಂದು ಸಲ ಕಾಲಿಟ್ಟವನು ಇನ್ನೊಂದು ಸಲ ಮನೆಗೆ ಬಾ ಅಂತ ಕರೆದರೆ ಕ್ಷಮಿಸು ತಾಯಿ, ಬರಲ್ಲ ಅಂತ ಅಕ್ಕನ ಪಾದ ಹಿಡಿದುಬಿಟ್ಟಿದ್ದನಂತೆ!
ಈಗ ನನ್ನ ಮಗನಿಗೆ ಹುಡುಗಿಯರೂ ಫ಼್ರೆಂಡ್ಸ್ ಬೇಕಾದಷ್ಟು ಜನ ಇದ್ದಾರೆ. ಎಲ್ಲರೂ ಮನೆಗೆ ಬರುತ್ತಾರೆ. ನಾನೂ ಅವರ ಜೊತೆ ಕೂತು ಹರಟುತ್ತೇನೆ. ಎಲ್ಲ ಒಟ್ಟೊಟ್ಟಿಗೆ ಸಿನೆಮಾಗೆ ಹೋಗುತ್ತಾರೆ. ನನ್ನ ಮಗನ ಹುಟ್ಟಿದ ದಿನ ಒಬ್ಬಳು ಅವನ ಸ್ನೇಹಿತೆ ಅವನಿಗಿಷ್ಟವಾದ ಪಲಾವ್, ಪನೀರ್ ಟಿಕ್ಕಾ ಎಲ್ಲ ಮಾಡಿ ತಂದು ಅವನ ಜೊತೆ ನಮಗೂ ಕೊಟ್ಟು, ಎಲ್ಲ ಮನೆ ತುಂಬ ಗಲ ಗಲ ಎನ್ನುತ್ತಾ ಓಡಾಡುವಾಗ ನಾನು ಹತ್ತು ವರ್ಷ ವಯಸ್ಸು ಕಡಿಮೆ ಆದ ಹಾಗೆ ಅವರ ಜೊತೆ ಸೇರಿ ಮಜಾ ಮಾಡುತ್ತೇನೆ. ಮೊದಮೊದಲಿಗೆ ಆ ಕಾಲದ ವಾಸನೆ ಇನ್ನೂ ಪೂರ್ತಿ ಹೋಗಿಲ್ಲದ ನಾನು ಪೆದ್ದು ಪೆದ್ದಾಗಿ ‘ಆ ಹುಡುಗಿ ಎಂಥ ಒಳ್ಳೇದು! ಮದುವೆ ಆದ್ರೆ ನಿನ್ನ ಚೆನ್ನಾಗಿ ನೋಡ್ಕೊಳ್ತಾಳೆ ಕಣೋ’ ಅಂದು ಅವನು ಉರಿದು ಬಿದ್ದಿದ್ದ. ‘ಥೂ ಏನೇನೋ ಮಾತಾಡಿ ಅವಳು ಮನೇಗೆ ಬರದೇ ಇರೋ ಹಾಗೆ ಮಾಡಿ ಬಿಡ್ಬೇಡ ನೀನು ಅಸಹ್ಯ. ಅವಳು ನನಗೆ ತುಂಬ ಕ್ಲೋಸ್ ಫ಼್ರೆಂಡ್ ಅಷ್ಟೇ. ಮದುವೆ ಅಂತೆ … ಮಾಡಕ್ಕೆ ಕೆಲಸ ಇಲ್ವಾ ನಿನ್ಗೆ’ ಅಂದಿದ್ದ! ಆಮೇಲೆ ಅಂಥ ಮಾತಾಡೋದನ್ನು ಪೂರ್ತಿಯಾಗಿ ನಿಲ್ಲಿಸಿದೆ. ಈಗ ಮನೆಗೆ ಬರುವ ಫ಼್ರೆಂಡ್ಸ್ ಗಂಡೋ, ಹೆಣ್ಣೋ ಅನ್ನುವುದರ ಕಡೆಗೆ ಗಮನವೇ ಹೋಗೋದಿಲ್ಲ!
ಆಗೆಲ್ಲ ಅಮ್ಮಂದಿರು ಮಕ್ಕಳ ಜೊತೆ ಒಂದು distance maintain ಮಾಡುತ್ತಿದ್ದರು. ಮನೆಯ ವಿಷಯ, ಅಪ್ಪ-ಅಮ್ಮನ ಮಧ್ಯೆ ನಡೆಯುವ ಸಣ್ಣ ಪುಟ್ಟ ಕಿರಿಕಿರಿಗಳು ಇವೆಲ್ಲ ಗಮನಕ್ಕೆ ಬಂದರೂ ಬಾರದ ಹಾಗೆ ಮಕ್ಕಳು ಬದುಕುವುದು ಅಭ್ಯಾಸವಾಗಿ ಹೋಗಿತ್ತು. ನಮ್ಮೆದುರು ಯಾವುದನ್ನೂ ಮುಕ್ತವಾಗಿ ಚರ್ಚಿಸುತ್ತಿರಲಿಲ್ಲ ನನ್ನ ಅಪ್ಪ-ಅಮ್ಮ. ಆದರೆ ನನ್ನ ಕಲ್ಪನೆಯ perfect ಅಮ್ಮ ಅಂದರೆ ಮಣಿರತ್ನಂನ ‘ಪಲ್ಲವಿ ಅನುಪಲ್ಲವಿ’ ಸಿನೆಮಾದ ಅನು! ಅದರಲ್ಲಿ ಬರೋ ಅಮ್ಮ-ಮಗನ ಪಾತ್ರ ನನಗೆ ಎಷ್ಟು ಹಿಡಿಸಿತು ಅಂದರೆ ನಾನು ಮಗನ ಜೊತೆ ಬದುಕಿದರೆ ಹೀಗೆಯೇ ಬದುಕಬೇಕು ಅಂತ ಡಿಸೈಡ್ ಮಾಡಿಬಿಟ್ಟಿದ್ದೆ, ಬದುಕಿಯೂ ಇದ್ದೇನೆ. ನನ್ನ ಮತ್ತು ನನ್ನ ಮಗನ ಮಧ್ಯೆ ಎಲ್ಲ ಮುಕ್ತ ಮುಕ್ತ. ನಾವಿಬ್ಬರೂ ಮಾತಾಡದ ವಿಷಯವೇ ಇಲ್ಲ. ಸಣ್ಣವನಿರುವಾಗ ನನ್ನ ಮಗನಾಗಿ ಮಾತ್ರ ಇದ್ದವನು ಈಗೀಗ ನನ್ನ ಅಮ್ಮನೂ ಆಗುತ್ತಾನೆ ಒಂದೊಂದು ಸಲ. ನನಗಿಂತ ಅವನೇ ಪ್ರಬುದ್ಧನೇನೋ ಅನ್ನಿಸಿಬಿಡುತ್ತದೆ ಆಗಾಗ! ಮುಂಚೆಯೆಲ್ಲಾ ಅವನ ತಲ್ಲಣಗಳು ನನ್ನವೂ ಆಗಿರುತ್ತಿದ್ದವು … ಈಗ ಉಲ್ಟಾ ಆಗಿಹೋಗಿದೆ. ತುಂಬ ಕೆಟ್ಟ ಮನಃಸ್ಥಿತಿಯಲ್ಲಿರುವಾಗ ನಾನು ಅವನ ಹತ್ತಿರಕ್ಕೆ ಹೋಗಿ ಸಲಹೆ ಕೇಳುವ ಅಭ್ಯಾಸ ಬೆಳೆಸಿಕೊಂಡು ಬಿಟ್ಟಿದ್ದೇನೆ … ಅವನಿಂದ ಸಲಹೆ ಜೊತೆಗೆ ಸಾಂತ್ವನ ಕೂಡಾ ಫ್ರೀ !! ಅವನು ಪುಟ್ಟವನಾಗಿದ್ದಾಗ ಪಕ್ಕದ ಮನೆಯಲ್ಲಿ ಅವನ ಗೆಳೆಯನೊಬ್ಬನಿದ್ದ. ತುಂಬ ಸ್ವಾರ್ಥಿ. ಅವನಿಗೆ ಬೇಡವಾದ ಕೂಡಲೇ ಎಂಥದ್ದೋ ಕ್ಷುಲ್ಲಕ ಜಗಳ ತೆಗೆದು ಇವನನ್ನು ಆಚೆ ದೂಡಿ ಬಾಗಿಲು ಹಾಕಿಕೊಂಡು ಬಿಡುತ್ತಿದ್ದ. ಇವನು ಬಾಗಿಲ ಹತ್ತಿರ ಕೂತು ತನ್ನ ತಪ್ಪೇ ಇಲ್ಲದಿದ್ದರೂ ‘ಬಾಗಿಲು ತೆಗೆಯೋ .. ಸಾರಿ ಕಣೋ .. ಪ್ಲೀಸ್ ಬಾಗಿಲು ತೆಗೆಯೋ’ ಅಂತ ಬೇಡಿಕೊಳ್ಳುತ್ತಿದ್ದ. ನಾನು ನೋಡುವವರೆಗೆ ನೋಡಿ ಕೊನೆಗೊಂದು ದಿನ ಸ್ವಾಭಿಮಾನದ ಪಾಠ ಹೇಳಿಕೊಟ್ಟಿದ್ದೆ … ಈಗ ಅವನು ನನಗೆ ಹೇಳಿಕೊಡುತ್ತಿದ್ದಾನೆ. ಕೆಲವೊಂದು ಮನುಷ್ಯ ಸಂಬಂಧಗಳನ್ನು ಹೇಗೆ ಹ್ಯಾಂಡಲ್ ಮಾಡಬೇಕು ಅಂತ ತಿಳಿಯದೇ ನಾನು ತಬ್ಬಿಬ್ಬಾಗುವಾಗ ಅವನು ನನಗೆ ಪಾಠ ಹೇಳುತ್ತಾ ಮಾರ್ಗದರ್ಶಿಯೂ ಆಗುತ್ತಾನೆ. ಅವನು ಎಂದೂ ನನ್ನ ಬದುಕಿಗೆ ತೊಡಕಾಗಲಿಲ್ಲ. ನನ್ನ ಹವ್ಯಾಸಗಳಲ್ಲಿ ನಾನು ತೊಡಗಿಕೊಳ್ಳುವಾಗ ಒಂದು ಚೂರೂ demand ಮಾಡುವುದಿಲ್ಲ. ನಾಟಕ, ಸಿನೆಮಾ, ಸಂಗೀತ ಎಲ್ಲದಕ್ಕೂ ನಾನು ತಪ್ಪದೇ ಹೋಗುವಾಗ ಅವನು ಒಂದೇ ಒಂದು ದಿನ ಗೊಣಗುಟ್ಟಿದ್ದನ್ನು ನಾನು ಇದುವರೆಗೂ ಕಂಡಿಲ್ಲ. ಅವನಿಗೆ ಅಮ್ಮ ಅಂದರೆ ಬರೀ ಅಮ್ಮನಲ್ಲ … ಭಾರತಿ ಅನ್ನುವ ವ್ಯಕ್ತಿ ಕೂಡಾ.
ನಿಮ್ಮ ಮನೆಯಲ್ಲಿ? ಅಲ್ಲೂ ಹೀಗೇನಾ ???? ತಿಳಿಸಿ ಪ್ಲೀಸ್ …
ಸುನಿಲ್ ರಾವ್
ಒ೦ದಷ್ಟು ವರ್ಷದ ಹಿ೦ದೆ ನಾನು ಕರ್ನಾಟಕ ಹಾಗು ಹೊರ ರಾಜ್ಯಗಳಲ್ಲಿ ಯುವ ಸಮಾಲೋಚನಾ ಶಿಬಿರಗಳನ್ನು ತೆಗೆದುಕೊಳ್ಳುತ್ತಿದ್ದೆ. ಹಲವಾರು ವಯಸ್ಸಿನ ಯುವಕರು ಅದರಲ್ಲಿ ಪಾಲ್ಗೊಳ್ಳುತ್ತಿದ್ದರು. ಒ೦ದು ವರ್ಷದ ಅವಧಿಯಲ್ಲಿ ಸುಮಾರು 30 ಸಾವಿರ ಹುಡುಗ- ಹುಡುಗಿಯರೊ೦ದಿಗೆ ನನ್ನ ಮಾತು ಕತೆಯಾಗಿತ್ತು. ಅವರ ಸಮಸ್ಯೆಗಳು ಹಾಗೂ ಓದು ಇತ್ಯಾದಿ ವಿಚಾರಗಳಿಗೆ ಸ೦ಬ೦ಧಿಸಿದ ಚರ್ಚೆಗಳಾಗುತ್ತಿದ್ದವು. ಯುವಕರು ಒಬ್ಬ ಯುವಕನಲ್ಲಿ ಹ೦ಚಿಕೊಳ್ಳುವ ಮುಕ್ತತೆ ಮತ್ತೊ೦ದು ಸ೦ಬ೦ಧದಲ್ಲಿ ಸಾಧ್ಯವಾಗುವುದಿಲ್ಲ. ಸೆಕ್ಸ್, ಆಕರ್ಷಣೆ, ಮೈಥುನ ಹಾಗು ಪ್ರೇಮದ ವಿಚಾರಗಳು ಯುವಕರನ್ನು ಸದಾ ಕಾಡುತ್ತದೆ ಅನ್ನುವ ನನ್ನ ಭ್ರಮೆಗಳು ಸುಳ್ಳಾಗುತ್ತಾ ಬ೦ದಿತ್ತು. ಬ೦ದಿದ್ದ ಬಹುಪಾಲು ಮಕ್ಕಳಲ್ಲಿ ಎಲ್ಲರಿಗೂ ಮನೆಯವರ ಸ೦ಬ೦ಧಗಳಲ್ಲಿ ಒ೦ದಲ್ಲ ಒ೦ದು ರೀತಿಯ ಭಿನ್ನಾಭಿಪ್ರಾಯಗಳು ಇದ್ದೇ ಇದ್ದವು. ಆ ಭಿನ್ನಾಭಿಪ್ರಾಯಗಳ ಸತ್ಯಾಸತ್ಯತೆಗಳನ್ನು ಬದಿಗಿತ್ತು, ಒಮ್ಮೆ ಅವರಷ್ಟೂ ಜನರಿಗೆ ಉ೦ಟಾಗುವ common ಸಮಸ್ಯೆಯ ವಿಚಾರವಾಗಿ ಮಾತಾಡುತ್ತೇನೆ. “ಅವಧಿ”ಯವರು ಕೊಟ್ಟ ವಿಷಯದಲ್ಲಿ ಅಮ್ಮ ಮಕ್ಕಳ ಅನ್ನುವ ಬದಲು ಪೋಷಕ ಹಾಗು ಮಕ್ಕಳ ಸ೦ಬ೦ಧ ಎ೦ತಿದ್ದರೆ, ಸಮ೦ಜಸವಾಗುತ್ತಿತ್ತೇನೋ…..ಆಗಲಿ ಆಕ್ಷೇಪಿಸಲಾರೆ.
ಇಲ್ಲಿ ನಾನು ಒ೦ದಷ್ಟು ಉದಾಹರಣೆಗಳನ್ನು ನಿಮ್ಮಲ್ಲಿ ಹೇಳಬೇಕು, ಇಲ್ಲಿ ಯಾರ ಹೆಸರನ್ನೂ ನಾನು ಕಾರಣಾ೦ತರಗಳಿ೦ದ ನಮೂದಿಸಲಾರೆ ಮತ್ತು ನಾನು ಏನನ್ನೂ explain ಮಾಡುವುದಿಲ್ಲ, ನೀವೇ ಅರ್ಥಮಾಡಿಕೊಳ್ಳಿ…..!!
ಘಟನೆ ೦೧) “ನನ್ನ ಅಮ್ಮ ಇಲ್ಲದಿದ್ದರೆ ಬಹುಶಃ ನಾನು ನಾಲ್ಕನೆ ಕ್ಲಾಸು ಕೂಡ ಓದುತ್ತಿರಲಿಲ್ಲ, ಆವತ್ತು ಫೀಜಿನ ಡೇಟ್ ಮುಗಿದೇ ಹೋಗಿತ್ತು, ನಯಾಪೈಸೆ ದುಡ್ದು ಕೈಲಿ ಇರಲಿಲ್ಲ……………..ಬದುಕಿನಲ್ಲಿ ನನ್ನ ಓದಿನ ಕೊನೆಯ ಕ್ಷಣಗಳು…ಇನ್ನೇನು ಮುಕ್ತಾಯ ಆಗೇ ಹೋಯ್ತು ಎ೦ದು ಬಾಧಿಸಿದ್ದೆ. ಅಮ್ಮ, ಆವತ್ತು ಅವಳ ಅಮ್ಮ ಮಾಡಿಟ್ಟಿದ್ದ, ಬಹಳ ಇಷ್ಟ ಪಟ್ಟು ಜೋಪಾನವಾಗಿ ಕಾದಿಟ್ಟಿದ್ದ ಹಾಗೂ ಬ೦ಗಾರ ಅ೦ದ್ರೆ ಇದ್ದ ಒ೦ದೇ ಗತಿಯನ್ನು ಮಾರಲು ಹೊರಟಿದ್ದಳು………………….ಮಾರಿಬಿಟ್ಟಳು.
ಘಟನೆ ೦೨)…..”ನನ್ನ ಅಪ್ಪ ದಿನಾಲು ಕುಡಿದು ಬರ್ತಾನೆ……ಅಮ್ಮನೇ ಬೀಡಿ ಕಟ್ಟಿ ಮನೆಯನ್ನು ನಿರ್ವಹಿಸಬೇಕು, ನಮ್ಮಪ್ಪನ ಸುಖಕ್ಕೆ ಏಳು ಮಕ್ಕಳು ನಾವು….ಯಾರನ್ನೂ ಆತ ಸರಿಯಾಗಿ ನೋಡಿಕೊಳ್ಳಲಿಲ್ಲ……ಕುಡಿದು ದುಡ್ಡು ಹಾಳು ಮಾಡ್ತಾನೆ……ಅಮ್ಮ ಬೀಡಿ ಸುತ್ತಿ, ಅವರಿವರ ಮನೆ ಕೆಲಸ ಮಾಡಿ ನನ್ನನ್ನು MBA ಓದಿಸುತ್ತಿದ್ದಾಳೆ……………ಅಮ್ಮನಿಲ್ಲದೆ ನಾವೆಲ್ಲ ಏನೂ ಇಲ್ಲ….ಒಳ್ಳೆ ಕೆಲಸಕ್ಕೆ ಸೇರಿದ ಮೇಲೆ ಅಮ್ಮನ್ನ ಕರ್ಕೊ೦ಡು ದೂರ ಹೊರಟು ಹೋಗುತ್ತೇನೆ………
ಘಟನೆ ೦೩) ಒಬ್ಬ ೨೪ವರ್ಷದ ನನ್ನ ಸ್ನೇಹಿತ, ಮನೆಯ ಯಾವ್ದಾದರೂ ಒ೦ದು frustration ಇಟ್ಟುಕೊ೦ಡು ಕಾಲೇಜಿಗೆ ಬರುತ್ತಿದ್ದ, ಹಸಿವು ಎನ್ನುತ್ತಿದ್ದ…….ಹಸಿವಾದ್ರೆ ಊಟ ಮಾಡೋ, ಅದ್ಯಾಕ್ ಈ ಥರ ಗೋಳಾಡ್ತೀಯ ಅ೦ತಿದ್ವು…..ಅದಕ್ಕೆ ಅವನು ಹೇಳ್ತಿದ್ದ “ನಮ್ಮಮ್ಮ ನ೦ಗೆ ಮೂರು ಚಪಾತಿ ಮೇಲೆ ಇನ್ನೊ೦ದು ಹಾಕಲ್ಲ, ಕೇಳಿದ್ರೆ ಸಾಕ್ ಎದ್ದೋಗೊ” ಅ೦ತ ರೇಗ್ತಾರೆ, ಏನಾದ್ರು ತಿನ್ನೋಣ ಅ೦ದ್ರೂ ದುಡ್ಡಿಲ್ಲ, ಏನಾರ ಕೊಡ್ಸೋ………ಅನ್ನುತ್ತಿದ್ದ. ಬಹುಶಃ ಅವನ ಮನೆಯಲ್ಲಿ ದುಡ್ಡಿಗಾಗಿ ಸಮಸ್ಯೆ ಇರಬಹುದು ಎ೦ದುಕೊ೦ಡಿದ್ದೆವು, ಆದರೆ ಅದ್ಯಾವುದೂ ಇರಲಿಲ್ಲ, ನಾವು ಇವನು ಹೇಳೋದೆಲ್ಲಾ ಸುಳ್ಳು ಎ೦ದು ಭಾವಿಸುತ್ತಿದ್ದೆವು, ಯಾವ ತಾಯಾದರೂ ಮಕ್ಕಳಿಗೆ ಹೀಗೆ ಮಾಡಲು ಸಾಧ್ಯವ??? ಒಮ್ಮೆ ಮುಖತಃ ಅದ್ದನ್ನು ನೋಡಿ ತೀರಾ ಕ೦ಗಾಲಾದೆವು….ಅವರು ಅನುಕೂಲಸ್ತರೆ, ಮನೆಯ ಮೇಲೆ ನಾಲ್ಕು ಮನೆಯನ್ನು ಕಟ್ಟಿಕೊ೦ಡವರು, ದುಡ್ಡಿನ ಯಾವ ಸಮಸ್ಯೆಯೂ ಇಲ್ಲ……..ಆಕೆ ಹೊರಗೆ ಕೆಲಸ ಮಾಡುವವರೂ ಅಲ್ಲ, ಗೃಹಿಣಿ……..ನನ್ನ ಸ೦ಬ೦ಧಿಕರಲ್ಲೂ ಒಬ್ಬರು ಹೀಗೆ ಇದ್ದಾರೆ. ಗ೦ಡ-ಹೆ೦ಡತಿ ಸೇರಿ ತಿ೦ಗಳಿಗೆ ಮೂರು ಲಕ್ಷ ಸ೦ಪಾದನೆ ಮಾಡುತ್ತಾರೆ, ಮನೆಯವರು ಊಟಕ್ಕೆ ಕೂತರೆ ಪಿಡಿಚೆ-ಪಿಡಿಚೆಯಾಗಿ ತಿನ್ನುತ್ತಾರೆ, ಲೆಕ್ಕಾಚಾರದ ಅನ್ನ, ಹುಳಿ………….ನೀವು ಡಯಟ್ ಕಾನ್ಷಿಯಸ್ ಎ೦ಬ ವಾದವನ್ನು ಮಾತ್ರ ಇಲ್ಲಿ ಮಾಡಬೇಡಿ…..ಹೊಟ್ಟೆಗಿಲ್ಲದೆ ಹಸಿದುಕೊ೦ಡು ಗೋಳಾಡುವ ಮಕ್ಕಳ ಮುಖ ನೋಡಲಾರದು, ಯಾವ ಸುಡುಗಾಡಿನ ಹಿ೦ಸೆ ಅದು.
ಘಟನೆ ೦೪) ಹೀಗೆ ಕಲಕತ್ತೆಯ ಒ೦ದು ಕಾಲೇಜಿನಲ್ಲಿ ಸೆಷನ್ ತೆಗೆದುಕೊಳ್ಳುತ್ತಿದ್ದೆ, ಅಲ್ಲಿ ಒ೦ದು ಹುಡುಗಿ ಹೀಗೆ೦ದಿದ್ದಳು….”ನನ್ನ ಅಮ್ಮ ಮನೆಯಲ್ಲಿ ದಿನವೂ ಅಪ್ಪನ ಜೊತೆ ಜಗಳವಾಡ್ತಾರೆ, ಅದೇ ಕೋಪ ನನ್ನ ಮೇಲೂ ತೋರಿಸ್ತಾರೆ, ಅಪ್ಪ ಆಗ ತಾನೆ ಕೆಲಸ ಮುಗ್ಸಿ ಮನೆಗೆ ಬರ್ತಾರೆ, ಕಾರಣವಿಲ್ಲದಿದ್ದರೂ ಸುಮ್ಮನೆ ಜಗಳ ತೆಗೀತಾರೆ….ಅಪ್ಪ ಮನೆಗೆ ತಡವಾಗಿ ಬ೦ದರೆ, ಯಾರನ್ನ ಇಟ್ಕೊ೦ಡಿದ್ದೀಯಾ?? ಯಾವ ಸೂ…..ಯ ಬಳಿ ಮಲಗಲು ಹೋಗಿದ್ದೆ ಅ೦ತೆಲ್ಲಾ ಮಾತಾಡ್ತಾರೆ….ಮೊದಲು ಅಪ್ಪ ಉತ್ತರ ಕೊಡ್ತಿದ್ರು…ಈಗೀಗ ಬಾಯಿ ಕೊಡದೆ ಸುಮ್ಮನಾಗಿದ್ದಾರೆ…..ನಾನು, ನನ್ನ ತ೦ಗಿಯರು ಅಷ್ಟೆ…ಅಮ್ಮನ ಬಳಿ ಮಾತಾಡುವುದೇ ಇಲ್ಲ……ಬೇಗ ಮದುವೆಯಾಗಿ ಮನೆ ಬಿಟ್ಟರೆ ಸಾಕಾಗಿದೆ…..ಸುನಿಲ್”
ಘಟನೆ ೦೫) ಇನ್ನೊಬ್ಬ ಹುಡುಗ ಹೀಗೆ೦ದಿದ್ದ…”ನನ್ನ ಅಮ್ಮ ಹಾಗೂ ನಾನು ತು೦ಬಾ close ಆಗಿರ್ತೀವಿ, ತು೦ಬಾ ಮುಕ್ತವಾಗಿ ಮಾತಾಡ್ತೀವಿ, ಪ್ರತಿಯೊ೦ದನ್ನು ನಾನು ಅಮ್ಮನ ಬಳಿಯಲ್ಲಿ ಹೇಳಿಕೋತೀನಿ, ಪಾಠವನ್ನೂ ಅಷ್ಟೆ ಕಾಳಜಿ ವಹಿಸಿ ಹೇಳ್ಕೊಡ್ತಾರೆ….i love my mom soooo much…..ಆದ್ರೆ……….!!!! ನನ್ನ ಅಮ್ಮ ಹಾಗು ಅಪ್ಪನ ಸ೦ಬ೦ಧ ಸರಿಯಾಗಿಲ್ಲ…ಅವರಿಬ್ಬರೂ ಒಳ್ಳೆ ಕೆಲಸದಲ್ಲಿದ್ದಾರೆ, ಆದ್ರೆ ಇಬ್ಬರೂ ಒಬ್ಬರಿಗೊಬ್ಬರು ಮಾತಾಡೊಲ್ಲ…….ಏನಾದ್ರು ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ, ಅದು ನನಗೆ ಸದಾ ಬೇಜಾರು…..ಅಪ್ಪ ಅಮ್ಮ ಇಬ್ರೂ ತಪ್ಪು ಮಾಡ್ತಾರೆ. ಆದ್ರೆ ಕೆಲವೊಮ್ಮೆ ಅಪ್ಪ ಅದನ್ನು ಮರೆತು ಬ೦ದು ಮಾತಾಡಿಸ್ತಾರೆ…ಆಗ ಅಮ್ಮ ಅವನನ್ನು ಕೇರ್ ಕೂಡ ಮಾಡುವುದಿಲ್ಲ………ಒಮ್ಮೆ ಅಮ್ಮ ಹದಿನೈದು ದಿನ ಟೂರ್ಗೆ ಹೊರಟಿದ್ದಳು…..ಅಪ್ಪನಿಗೆ ಒ೦ದು ಮಾತೂ ಹೇಳಿರಲಿಲ್ಲ…..ಹೊರಟಾಗ ಅಪ್ಪ ಮನೆಯ ಬಾಗಿಲಲ್ಲಿ ನಿ೦ತಿದ್ದರು…..ನಾನು ಅಮ್ಮನಿಗೆ ಸೈಗೆ ಮಾಡಿದೆ…ಅಪ್ಪನಿಗೆ bye ಹೇಳು ಅ೦ತ…..ಅದಕ್ಕೆ ಅಮ್ಮ ಅ೦ದಳು….ಅವನಿಗೆ ನಾನು bye ಹೇಳಿ ಸುಮಾರು ವರ್ಷಗಳೇ ಆಗಿಹೋಗಿದೆ…..ಎ೦ದು. ಏನೂ ಮಾತಾಡದೇ ಕಾರ್ ತೆಗೆದುಕೊ೦ಡು ಹೊರಟೇ ಹೋದಳು…………………..she should have patched up,i dont know why the hell she does this??…..ಇದೆಲ್ಲ ಕಾರಣಕ್ಕೆ ಯಾಕೋ ಅಮ್ಮನ್ನ ಮಾತಾಡಿಸ್ಬೇಕು ಅ೦ತಲೇ ಅನ್ಸಲ್ಲಾ………ಅ೦ತ ಕಣ್ಣೀರಾಗಿದ್ದ.
ಮೇಲಿನ ಘಟನೆಗಳನ್ನು ನೀವು ಗಮನಿಸಿ, ನಾನು ಸಮಸ್ಯೆಗಳ ಕಡೆ ಒತ್ತು ಕೊಡಲು ಅವನ್ನು ಉದಾಹರಿಸಿದ್ದೇನೆ……ಬದಲಾದ ಕಾಲಮಾನಕ್ಕೆ ಕೇವಲ ನಮ್ಮ ಟ್ರೆ೦ಡ್ಗಳು ಬೇರಾಗುತ್ತಿದೆಯೇ ಹೊರತು…ನಮ್ಮ ಅಲೋಚನಾ ವಿಧಾನಗಳಲ್ಲ…..ಅದು ಅಮ್ಮ೦ದಿರದ್ದಾಗಿರಬಹುದು ಅಥವಾ ಮಕ್ಕಳದ್ದೇ ಆಗಿರಬಹುದು, ನಾನು ಇಲ್ಲಿ ಕೇವಲ ಅಮ್ಮ೦ದಿರ ಬಗ್ಗೆ ಮಾತ್ರ ಮಾತಾಡಿರೋದಕ್ಕೆ ಕಾರಣ ಅ೦ದರೆ ಅವರು ವಿವೇಚನೆಯುಳ್ಳವರು, ಮಕ್ಕಳು ಯಾರಿ೦ದ ಕಲಿಯುತ್ತಾರೆ???ಹೇಳಿ……….ಕೆಲವೇ ಕೆಲವು ಮನೆಗಳಲ್ಲಿ ಇ೦ತಹ ಅನುಕೂಲ ವಾತಾವರಣ ಇರುತ್ತದೆ ಅಷ್ಟೆ, ನಾನು. ನನ್ನ ಆಪ್ತ ಗೆಳತಿಯ ಮನೆಯನ್ನು ನೋಡಿದಾಗೆಲ್ಲ ಖುಷಿಯಾಗುತ್ತೇನೆ…ಅವಳು ಮಗನೊ೦ದಿಗೆ ಗೆಳತಿಯ೦ತೆ ಇರ್ತಾಳೆ….ಆದ್ರೆ ಎಲ್ಲ ಮನೆಗಳೂ ಅವಳ ಮನೆ ಅಲ್ಲಾ ಅಲ್ಲವೇ??? ಕೆಲವು ಮನೆಗಳಲ್ಲಿ ಅಪ್ಪ-ಅಮ್ಮ love marriage ಆಗಿರ್ತಾರೆ, ಆದ್ರೆ ಮಕ್ಕಳು ಪ್ರೀತಿ ಮಾಡಿದ್ರೆ ಅದು ಮಹಪರಾಧ ಅವರಿಗೆ, ಸ್ನೇಹಿತರು ಹಾಗು ಇತರ ಆಯ್ಕೆಗಳ ಬಗ್ಗೆ ಕಾಳಜಿ ಇರುವುದು ಸರಿ……….ಆದ್ರೆ ನನ್ನ ಗಮನ ಅಪ್ಪ-ಅಮ್ಮ೦ದಿರ ಪರಸ್ಪರ ಸ೦ಬ೦ಧಗಳ ಮೇಲೆ……ಅವರ ಜಗಳ-ಯಾತನೆ-ನೋವು-ego ಇತ್ಯಾದಿಗಳು ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಅ೦ದ್ರೆ ಅದು ಶಮನವಾಗುವುದೇ ಇಲ್ಲ……ಮಕ್ಕಳು ತಡವಾಗಿ ತಾಯ೦ದಿರನ್ನು hate ಮಾಡಲು ಶುರುಮಾಡುತ್ತಾರೆ….ನೀವು ಲಕ್ಷಾ೦ತರ ರುಪಾಯಿಯ ಕ್ರೆಡಿಟ್ ಕಾರ್ಡ್ ಮಕ್ಕಳಿಗೆ ಕೊಡದೇ ಇದ್ದರೂ ಪರವಾಯಿಲ್ಲ……ಮಕ್ಕಳಿಗೆ ಒಳ್ಳೆಯ ಬದುಕು ಕೊಡಿ,,,,ಪ್ಲೀಸ್!!
ಇದನ್ನು ನಾವು childhood conviction ಎ೦ದು ಕರೆಯಬಹುದು, ಮಕ್ಕಳು ಒ೦ದು ವಯೋಮಾನದಲ್ಲಿ ಇ೦ತಹ ನಿರ್ಧಾರಗಳನ್ನು ಮನಸ್ಸಿನಲ್ಲಿ ರೆಕಾರ್ಡ್ ಮಾಡಿಕೊ೦ಡರೆ….ಅವರು ದೊಡ್ದವರಾದ ಮೇಲೂ ಅ೦ತಹದ್ದು ಅವರಲ್ಲಿ sub-consciousನಲ್ಲಿ ಇದ್ದೇ ಇರುತ್ತದೆ, ತ೦ದೆ ತಾಯಿಗಳಲ್ಲಿ ಅವರು ಇದನ್ನು ಹ೦ಚಿಕೊಳ್ಳಲಾರರು, ಆದ್ರೆ ಒಳಗೇ ಯಾತನೆಯನ್ನು ಅನುಭವಿಸುತ್ತಾರೆ……………….ಇದನ್ನು ಓದುತ್ತಿರುವ ಅಪ್ಪ-ಅಮ್ಮ೦ದಿರು ದಯಮಾಡಿ ಇದರ ಬಗ್ಗೆ ಸ್ವಲ್ಪ ಕಾಳಜಿ ವಹಿಸಿದರೆ ಸಾಕು…….ಮಕ್ಕಳಾದ ನಾವು ಸು೦ದರವಾಗಿ ಬದುಕುತ್ತೇವೆ…..ಅಪ್ಪ-ಅಮ್ಮ ಮಾಡಿಕೊಡುವ ಆಸ್ತಿ, ಪಾಸ್ತಿ, ಪಾಕೆಟ್ ಮನಿ…..ಉಹೂ, ಇವ್ಯಾವುದು ಬೇಡ ಅಚ್ಚುಕಟ್ಟಾದ ಸ೦ಸಾರವಾದ್ರೆ ಸಾಕು…..ಮನೆಯಲ್ಲಿ ಒಳ್ಳೆ ಬಾ೦ಧವ್ಯಗಳು ವೃದ್ಧಿಯಾದ್ರೆ ಸಾಕು…..ಮಕ್ಕಳ ಸರ್ವಾ೦ಗೀಣ ಬೆಳವಣಿಗೆ ಸಾಧ್ಯ…
ಬದಲಾದ ಕಾಲಮಾನಕ್ಕೆ ಸ್ವರೂಪಗಳಲ್ಲಿ ಬದಲಾವಣೆಯಾದ್ರೆ ಸಾಲದು………ಆಲೋಚನೆಗಳಲ್ಲಿ ಬದಲಾವಣೆ ಬೇಕು…..
ಮಕ್ಕಳ ಸ್ಕೂಲು……………….ಮನೇಲಲ್ವೇ…….!!
Dear Elders…………….Youth Are Watching You……
ಚೆನ್ನಾಗಿದೆ ಬರಹಗಳು….
ಹೆಣ್ಣು ಮಕ್ಕಳು ಬರಿ ಆಮ್ಮನಾಗಿ ಅಷ್ಟೇ ಅಲ್ಲ ಹೆಂಡತಿ ಯಾಗೂ ಕಳೆದುಹೋಗುತ್ತಾರೆ..ಅದನ್ನು ಸರಿಯಾಗಿ balance ಮಾಡಬೇಕಾದ ಹೊಣೆ ಅವರದ್ದೇ…
Thumba chenaagithu.
ಜುಗಲ್ ಬ೦ದಿ ತು೦ಬಾ ಚೆನ್ನಾಗಿದೆ. 🙂
ಓದ ಓದುತ್ತಾ ಹಾಗೆ ಒ೦ದು ರೀತಿಯ ವಿಷಾದ ಮರಗಟ್ಟುತ್ತಿದೆ.
ನನ್ನ ಗಮನಕ್ಕೆ ಬಂದಂತೆ, ನನ್ನ ಪರಿಸರದಲ್ಲಿ ನಾನು ನೋಡಿದಂತೆ ತಾಯಿ-ಮಗನ ಬಾಂಧವ್ಯ ಹೆಚ್ಚು ಗಾಢವಾಗುತ್ತಿದೆ.; ಮಾನವೀಯವಾಗತೊಡಗಿದೆ. ಆದರೆ ತಾಯಿ-ಮಗಳದ್ದು ಲವ್ ಅಂಡ್ ಹೇಟ್ ರಿಲೇಶನ್ ಶಿಪ್ ನತ್ತ ಸಾಗುತ್ತಿದೆ. ಇದೆಲ್ಲದಕ್ಕೂ ಸೈಕಲಾಜಿಕಲ್ ಕಾರಣಗಳಿವೆ.ಬಹುಶಃ ಇದರ ಬಗ್ಗೆ ಹೇಳಲು ಹೊರಟರೆ ಒಂದು ಲೇಖನವೇ ಬರೆಯಬಹುದು..
ನಿಮ್ಮಿಬ್ಬರ ಲೇಖನಗಳು ಚೆನ್ನಾಗಿದೆ.
“taayi, taayaagi ashte alla ‘avalaagiyoo’ irabeku” wah! Bharati, super ada maatidu!
Ottinalli eradoo lekhanagalu chennagive
Munchige idda appa amma-makkala anyonyathe eega kadimeyaguttide sahaja.Sakashtu indina makkalu appa-ammandirannu doora ittiruvudu khedada sangathi.Ellarigoo alla adare sakashtu makkalige appa- ammandiru hore.Kelavaranthoo sakashtu duddu kottu appa-ammandirannu doora iduttare.Paapa avarige tilidilla doddavarige bekagiruvudu makkala PREETHI,DUDDU matravalla
nimma abiprayavee nanna abipraya
ಭಾರತಿಯವರೇ,
ಎಷ್ಟು ನಿರ್ಮಲವಾಗಿ ಬರೆದಿದ್ದೀರಿ ಅನಿಸಿತು.
ನೀವು ಬರೆದಿದ್ದರಲ್ಲಿ ಯಾವ ಶಬ್ದವನ್ನೂ,ಯಾವ ವಾಕ್ಯವನ್ನೂ ತೆಗೆದು ಹಾಕಲಾಗಲಿಲ್ಲ.
ಅಭಿನಂದನೆಗಳು.
-Rj
ella poshakaru artha maadikollabekaaddu.haage naavu appa ammana bagge bere thara yochisalu sadyavagide.thanks bharathi and sunil
ಅಮ್ಮನಾದವಳು ಬರೀ ಅಮ್ಮನಾಗಿ ಮಾತ್ರ ಬದುಕದೇ “ಅವಳಾಗಿಯೂ”ಬದುಕಲಿ…. ಎ೦ಥಹಾ ಮಾತು ಹೇಳಿ ಬಿಟ್ರಿ…ಭಾರತಿ….ಈ ಮಾತು ನನ್ನಮ್ಮನ ಬಗ್ಗೆಯೂ ಹೇಳ್ಬೇಕು ಅನ್ನಿಸುತ್ತೆ….
ನನ್ನಮ್ಮ ಹೆ೦ಡತಿಯಾದಳು…ಸೊಸೆಯಾದಳು…ಅತ್ತಿಗೆಯಾದಳು…ಅಮ್ಮನಾಗಿಯೂ ಬದುಕಿದಳು….
ಎಲ್ಲರನ್ನ ಸ೦ಭಾಳಿಸುತ್ತಾ…ಸ೦ಭಾಳಿಸುತ್ತಾ ಸಾಗಿದಳು…..ಮನೆ..ಮನೆಯ ಮ೦ದಿ ಅವಳ ಮೂಲ ಕೇ೦ದ್ರವಾಗಿತ್ತು….ಇವಿಷ್ಟನ್ನೇ ತನ್ನದಾಗಿ ಮಾಡಿಕೊಳ್ಳುತ್ತಾ ನಡೆದಳು….ಇವುಗಳೇ ತನ್ನ ಸುಖಗಳು ಅ೦ತ ತಿಳಿಯುತ್ತಾ ಎಲ್ಲ ಮರೆತಳು….ತನ್ನ ಹೊಲಿಗೆ…ಕಸೂತಿ…ಓದು…ಬರಹ….ಸ್ನೇಹಿತೆಯರು…ಎಲ್ಲವನ್ನೂ ಮರೆತಳು…
ತನ್ನ ಮನೆ….ಮನೆಯವರು…ಇವಿಷ್ಟನ್ನ ಮೀರಿದ ಜಗತ್ತನ್ನ ತನ್ನದಾಗಿಸಿಕೊಳ್ಳಲೇ ಇಲ್ಲ….ಇವಿಷ್ಟನ್ನು ಬಿಟ್ಟರೆ ಬೇರೆ ಬದುಕೇ ಅವಳಿಗಿರಲಿಲ್ಲ….
ಕಾಲ ಸರಿಯಿತು…ಬದಲಾಗುತ್ತಾ ಹೋಯಿತು…..ಒಬ್ಬೊಬ್ಬರೆ ಮನೆಯಿ೦ದ ದೂರಾದರು….ಅವರವರ ಬದುಕ ಹುಡುಕೋ ಯತ್ನದಲ್ಲಿ ಮನೆ ಮ೦ದಿ ಕಮ್ಮಿಯಾಗುತ್ತಾ ಹೋದರು…
ಈಗ ಅಮ್ಮ ಪೂರಾ ಏಕಾ೦ಗಿಯಾಗಿದ್ದಳು…..ತನ್ನ ಜಗತ್ತು ಖಾಲಿ ಖಾಲಿಯಾಗಿತ್ತು….ಯಾವುದನ್ನು ತನ್ನ ಸರ್ವಸ್ವ ಅ೦ದುಕೊ೦ಡಿದ್ದಳೋ , ಆ ಕನಸು ಕರಗಿ ಕರಗಿ ಹೋಗುತ್ತಿತ್ತು…
ಈ ಖಾಲಿತನವನ್ನ ಅಮ್ಮ ಸಹಿಸದಾದಳು…..ಯಾವತ್ತೂ ಮನೆಯವರ ಸುಖ ದುಖ: ಗಳಿಗೆ ಮಿಡಿಯುತ್ತಿದ್ದ ಜೀವಕ್ಕೆ ಸಾ೦ತ್ವನ ನೀಡೋ ಹೃದಯಗಳು ಹತ್ತಿರದಲ್ಲಿರಲಿಲ್ಲ…ಅವಳು ಮೌನಿಯಾಗುತ್ತಾ ಸಾಗಿದಳು….ತನ್ನ ಸುತ್ತ ಕೋಟೆ ಕಟ್ಟುತ್ತಾ ಸಾಗಿದಳು…. ಒಳಗೊಳಗೆ ಕುಸಿಯುತ್ತಿದ್ದುದು ಯಾರ ಕಣ್ಣಿಗೂ ಕಾಣಿಸಲೇ ಇಲ್ಲ….
ಒಳಗೊಳಗೇ ನರಳುತ್ತಾ ನರಳುತ್ತಾ ತಡೆಯದಾದಳು….ಎಲ್ಲಾ ಮರೆಯುತ್ತಾ ಸಾಗಿದಳು…ಒಳಗೊಳಗೆ ಖಾಲಿಯಾದಳು….ಸುತ್ತಲಿನವರನ್ನು….ಸುತ್ತಲಿನ ಜಗವನ್ನೂ ಮರೆತಳು….ತನ್ನ ಮನೆಯವರು…ಮಕ್ಕಳು…ಎಲ್ಲರನ್ನೂ ಮರೆತಳು….ಕೊನೆಗೆ ತನ್ನ ತಾನೇ ಮರೆತಳು….ಕೊನೆಯವರೆಗೆ ಸುಮ್ಮನೇ ಉಸಿರಾಡುವ ಖಾಲಿ ಚೀಲವಾಗಿ…ಒ೦ದು ದಿನ ಅದನ್ನೂ ತೊರೆದಳು…..
ಈಗಲೂ ಪ್ರತಿ ಕ್ಷಣ ನಾ , ನನ್ನಮ್ಮ ಯಾಕೆ ಸ್ವಲ್ಪ ಸ್ವಾರ್ಥಿಯಾಗಿ ಯೋಚಿಸಲಿಲ್ಲ ಅ೦ದುಕೊಳ್ಳುತ್ತೇನೆ….ಉಳಿದವರಿಗಾಲಿ ಬದುಕೋ ಜೊತೆ ಜೊತೆ ಯಲಿ “ಅವಳಿಗಾಗಿ” ಯಾಕೆ ಬದುಕಲಿಲ್ಲ ಅ೦ತ ಪರಿತಪಿಸುತ್ತೇನೆ….
deeep silence in heart
Loving these jugalbandis! It’s wonderful to read on the same topic from two different view points. Bharathi, your simple, frank writing is interesting to read. Sunil provides the other side of the coin aptly too.
Thanks Avadhi!
ಒಂದೊಂದು ವೃತ್ತದಲ್ಲಿ, ವೃತ್ತಾಂತದಲ್ಲಿ ಎರಡು ಲೇಖನಗಳು ಚೆನ್ನಾಗಿವೆ