ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಮೊದಲ ವಿಶ್ವ ಕನ್ನಡ ಸಮ್ಮೇಳನ ನನ್ನ ಪಾಲಿಗೆ ಒಂದು ಮಧುರ ನೆನಪು. ನಮ್ಮ ಹಿರಿಯರು ನಮ್ಮೊಂದಿಗೆ ಗತ ಕಾಲದ ಹಿರಿಮೆಯನ್ನು ಬಣ್ಣಿಸುವಂತೆ ನಾನು ನನ್ನ ಮಗಳಿಗೆ ಹೇಳುತ್ತಿದ್ದೆ : ವೇದಿಕೆಯ ಮೇಲೆ ಕುವೆಂಪು ಮತ್ತು ಶಿವರಾಮ ಕಾರಂತರು ಇಬ್ಬರೂ ಇದ್ದರು ಗೊತ್ತಾ; ಸಿಂಹದ ಅಯಾಲಿನಂತೆ ಇಳಿ ಬಿದ್ದ ಕೂದಲಿನ ಕಾರಂತರನ್ನ ಹತ್ತಿರದಿಂದ ನೋಡುವುದೇ ಒಂದು ಖುಷಿ. ಇನ್ನು ಕುವೆಂಪುರವರಂತೂ ಆ ಚಳಿಗಾಲದ ಸೂರ್ಯನೂ ನಾಚುವಂತೆ ಕಂಗೊಳಿಸುತ್ತಿದ್ದರು. ಅರಮನೆಯ ಆವರಣದಲ್ಲಿ ಸಿದ್ಧಪಡಿಸಿದ ವೇದಿಕೆಯ ಮುಂದೆ ನಾನು ಮೊದಲ ಸಾಲಿನಲ್ಲಿಯೇ ಕುಳಿತಿದ್ದೆ.

ನಮಗೆ ತೀರಾ ಅಂದರೆ ತೀರಾ ಸಮೀಪದ ವಿವಿಐಪಿ ಗ್ಯಾಲರಿಯಲ್ಲಿ ಕೇವಲ ನಾಲ್ಕು ಮಾರು ದೂರದಲ್ಲಿ ವರನಟ ರಾಜಕುಮಾರ್. ಅವರೂ ನಮ್ಮಂತೆಯೇ ತದೇಕಚಿತ್ತರಾಗಿ ಕುವೆಂಪು ಮತ್ತು ಕಾರಂತರನ್ನ ಕುತೂಹಲದಿಂದ, ಪ್ರೀತಿಯಿಂದ ಕಣ್ಣಲ್ಲಿ ತುಂಬಿಕೊಳ್ಳುವಂತೆ ನೋಡುತ್ತಿದ್ದರು. ನಮ್ಮ ಹಿಂದೆ ಜನಸಾಗರ.

ಅದಾದ ನಂತರ ಕಲಾಭವನದಲ್ಲಿ ಕುವೆಂಪುರವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ. ಅಲ್ಲಿಯೂ ನಾನು ಮೊದಲ ಸಾಲಿನಲ್ಲಿಯೇ ಕುಳಿತಿದ್ದೆ… ಹುಂನಪ್ಪಾ… ರಾಜ್  ರವರು ಉದ್ಘಾಟನಾ ಕಾರ್ಯಕ್ರಮದ ವೇದಿಕೆಯ ಮೇಲೆ ಇರಲಿಲ್ಲ. ಮರುದಿನ ನಡೆದ `ಕರ್ನಾಟಕ ವೈಜಯಂತ’ ಎಂಬ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವರು ಛೀಫ್ ಗೆಸ್ಟ್ . ಇದೆಲ್ಲಕ್ಕಿಂತ ಮಜಾ ಗೊತ್ತಾ? ಸಮ್ಮೇಳನದ ಹಿಂದಿನ ದಿನ ನಾನು ರಾಷ್ಟ್ರಕವಿ ಕುವೆಂಪುರವರನ್ನ ಅವರ ಮನೆಯಲ್ಲಿಯೇ ಸಂದರ್ಶನ ಮಾಡಿದೆ.

ಮಗಳು ಮಧ್ಯ ಬಾಯಿ ಹಾಕಿದಳು : “ನೀನು ಅವರ Date of Birth ಶೇರ್ ಮಾಡಿರೋದನ್ನ ಹೇಳಿದೆಯಾ?”

“ಇಲ್ಲಪ್ಪಾ ನನಗೆ ಅದು ಹೊಳೆಯಲೇ ಇಲ್ಲ. ಜೊತೆಗೆ ಕುವೆಂಪು, ಕಾರಂತರು ಅಂದರೆ ಏನಂದ್ಕೊಂಡಿದೀಯಾ? ಅವರ ಹತ್ತಿರ ಹಾಗೆಲ್ಲ ಮಾತಾಡೋಕ್ಕೆ ಆಗ್ತಿರಲಿಲ್ಲ…”

“ಕುವೆಂಪು ಏನು ಹೇಳಿದ್ರು?”

“ಅದೆಲ್ಲಾ ನಿನಗೆ ಅರ್ಥ ಆಗಲ್ಲ. ಇರಲಿ ಒಂದು ವಿಷಯ ಹೇಳ್ತೀನಿ. ಬರುವಾಗ ನಾನು `ಸರ್ ನೀವು ಈಚೆಗೆ ಏನೂ ಬರೆದಿಲ್ಲ’ ಎಂದೆ. ಅವರು ನಗುತ್ತಾ `ನಾನು ಇದುವರೆಗೆ ಬರೆದಿರೋದನ್ನ ಓದುಗರು ಅರಗಿಸಿಕೊಳ್ಳಲಿ’ ಅಂದರು.”

“ವಾಹ್ ಆ ಥರಾ ಇರಬೇಕಲ್ವ.”

ಮತ್ತೊಂದು ಪ್ರಶ್ನೆಗೆ “ಬೊಮ್ಮನಹಳ್ಳಿಯ ಕಿಂದರಿಜೋಗಿಯಿಂದ ರಾಮಾಯಣ ದರ್ಶನಂವರೆಗೆ ನನ್ನ ಎಲ್ಲ ಕೃತಿಗಳ ಬಗ್ಗೆಯೂ ನನಗೆ ಒಂದೇ ಭಾವನೆ ಇದೆ. ಯಾವುದು ಹೆಚ್ಚು, ಯಾವುದು ಕಡಿಮೆ ಎನಿಸಿಲ್ಲ” ಎಂದಿದ್ದರು.

ಈಗ ವೃದ್ಧಾಪ್ಯದಲ್ಲಿರುವ ನೀವು ಬಾಲ್ಯ, ಯೌವನ, ವೃದ್ಧಾಪ್ಯದಲ್ಲಿ ಯಾವುದನ್ನು ಮನಸಾರೆ ಪ್ರೀತಿಸಿದ್ದೀರಿ ಎಂದು ಕೇಳಿದರೆ ಅವರ ರಾಮಾಯಣ ದರ್ಶನಂನಲ್ಲಿ ಬರುವ ಅಧ್ಯಾಯವೊಂದರ ಕಡೆಯ ಸಾಲುಗಳನ್ನ ಹೇಳಿ “ಬಾಳನ್ನು ಪರಿಪೂರ್ಣವಾಗಿ ಸವಿದ ವ್ಯಕ್ತಿಯೊಬ್ಬ ಬಾಳ ಸಂಧ್ಯೆಯಲ್ಲಿ ನಿಂತು ತಾನು ಬಾಲ್ಯದಲ್ಲಿ ಆಡಿದ ಮರಕೋತಿ ಆಟ ಎಂಥ ಖುಷಿ ನೀಡಿತ್ತು ಅಂದುಕೊಳ್ಳುತ್ತಾನೆ… ನೀವೇ ಅರ್ಥ ಮಾಡಿಕೊಳ್ಳಿ” ಎಂದು ಮಗುವಿನಂತೆ ನಕ್ಕಿದ್ದರು.

“ಮರೆತಿದ್ದೆ. ಮಾರನೆಯ ದಿನ ರಾಜೀವ್ ಗಾಂಧಿ ಬಂದಿದ್ದರು. ಅವರು ಸಖತ್ ಸ್ಮಾರ್ಟ್  ತುಂಬಾ ಮುದ್ದಾಗಿ ಕಾಣ್ತಿದ್ದರು. ಅವರು ಒಂಥರಾ family man.”

“ನಿನ್ನ ಥರಾನಾ”

“ಅಂದರೆ ಸ್ಮಾರ್ಟಾ  ?”

“ಅಲ್ಲಪ್ಪಾ Family man”

“ಹುಂ. ಆದರೆ ಅವರ ಅಮ್ಮ, ತಾತನಷ್ಟೆ charishmatic ಆಗಿ ಕಾಣುತ್ತಿರಲಿಲ್ಲ. ಕನ್ನಡಕ್ಕೆ ಎಷ್ಟೊಂದು ಜ್ಞಾನಪೀಠ ಬಂದಿದೆ ಅಂತ ಹೊಗಳಿದರು.”

“ಅವತ್ತೂ ನೀನು ಮೊದಲ ಸಾಲಿನಲ್ಲಿಯೇ ಕುಳಿತಿದ್ದೆಯಾ”

“ಹುಂ” – ಹೀಗೆ ಮಗಳೆದುರು ಅಂದ ನಾನು ಕಂಡಿದ್ದನ್ನು ಹೆಮ್ಮೆಯಿಂದ ಬಣ್ಣಿಸಿದೆ.

***

1985ರ ಡಿಸೆಂಬರ್ನಲ್ಲಿ ನಡೆದ ವಿಶ್ವ ಕನ್ನಡ ಮೇಳದ ಪ್ರಧಾನ ವರದಿ-ಸಂದರ್ಶನ ನನ್ನದೇ. ಅದ್ಯಾಕೋ ಗೊತ್ತಿಲ್ಲ ಮೈಸೂರಿನಲ್ಲಿ ರಾಮದಾಸ್, ಮಂಡ್ಯದಲ್ಲಿ ಕೇಶವಮೂರ್ತಿಯವರಿದ್ದರೂ ಲಂಕೇಶರು ಆ ದೊಡ್ಡ ಹೊಣೆಯನ್ನ ನನಗೆ ವಹಿಸಿದ್ದರು. ಹಿಂದೆಯೇ ಸಿದ್ದಪ್ಪನನ್ನ ಕಳಿಸಿದ್ದರು : ಆ ಆಲೂರ್ ಗೆ ತುಂಬಾ ಸಂಕೋಚ. ಎಲ್ಲ ಕಡೆ ಟ್ಯಾಕ್ಸಿಯಲ್ಲಿ ಓಡಾಡೊಕ್ಕೆ ಹೇಳು ಎಂದು. ಮೈಸೂರಿನಲ್ಲಿ ಅದೂ ಇಪ್ಪತ್ತೈದು ವರ್ಷಗಳ ಹಿಂದಿನ ಮೈಸೂರಿನಲ್ಲಿ ಟ್ಯಾಕ್ಸಿಯಲ್ಲಿ ಓಡಾಡುವ ಅವಶ್ಯಕತೆಯಾದರೂ ಏನಿತ್ತು!

ಅರಮನೆಯಿಂದ, ಕಲಾಭವನಕ್ಕೆ, ಅಲ್ಲಿಂದ ಕಾರ್ಯಕ್ರಮ ನಡೆಯುತ್ತಿದ್ದ ಇತರ ಸಭಾಂಗಣಗಳಿಗೆ ಓಡಾಡುವುದೇ ಒಂದು ಖುಷಿ. ಎಲ್ಲೆಡೆ ಜನಸಾಗರ. ಹೊಸದಾಗಿ ಉದ್ಘಾಟನೆಗೊಂಡ ವಿಶಾಲವಾದ ಕಲಾಭವನದ ಒಳಗೆ ಹೋಗುವುದೇ ದುಸ್ತರವಾಗಿತ್ತು. ಆ ಹುಡುಗಿ ಬೇರೆ ನನ್ನ ಹಿಂದೆ ಬಿದ್ದಿದ್ದಳು. ಆ ಜನಪ್ರವಾಹದಲ್ಲಿ ಅವಳನ್ನ ಕಲಾಭವನಕ್ಕೆ ಕರೆದೊಯ್ಯುವುದಕ್ಕೆ ಹರಸಾಹಸ ಪಡಬೇಕಾಯ್ತು.

ಹಠಾತ್ತನೆ ಆ ಮಲ್ಲಿಗೆಯ ಕಂಪು ನನ್ನನ್ನ ಆವರಿಸುತ್ತಿದೆ. ನಾನು ಮೊದಲ ದಿನ ಮೈಸೂರಿನ ಮಾಧ್ಯಮ ಕೇಂದ್ರದಿಂದ ಹೊರ ಬಂದು ಅರಮನೆ ಮೈದಾನದ ಕಡೆ ಹೋಗಲು ಆಟೋಗೆ ಪ್ರಯತ್ನಿಸುತ್ತಿದ್ದಾಗಲೇ ಆ ಹುಡುಗಿ “ನೀವು ಚಂದ್ರು ಅಲ್ಲವಾ” ಎಂದಳು.

“ಹುಂ”

“ನಮಸ್ತೆ ನಾನು ನಿಮ್ಮ ಬರಹಗಳ ಅಭಿಮಾನಿ. ಗಂಗೋತ್ರಿಯಲ್ಲಿ ಪತ್ರಿಕೋದ್ಯಮ ಓದ್ತಿದೀನಿ. ಈ ಸಮ್ಮೇಳನದಲ್ಲಿ ಓಡಾಡಿ ವರದಿ ಸಿದ್ಧಪಡಿಸುವುದು ನನ್ನ ಅಸೈನ್ಮೆಂಟ್”

“ಹುಂ”

“ನಿಮ್ಮನ್ನ ಭೆಟ್ಟಿಯಾಗಿದ್ದು ನನ್ನ ಭಾಗ್ಯ. ನೀವು ನನಗೆ ಗೈಡ್ ಮಾಡಬೇಕು. ಮೂರು ದಿನ ನಿಮ್ಮ ಹಿಂದೆಯೇ ಓಡಾಡುತ್ತೇನೆ, ನಿಮಗೆ ತೊಂದರೆ ಕೊಡಲ್ಲ. ನಾನೇ ಎಲ್ಲ ನೋಟ್ಸ್ ಮಾಡಿಕೊಳ್ಳುತ್ತೇನೆ. ಅದನ್ನು ಒಮ್ಮೆ ನೋಡಿ ನೀವು ತಿದ್ದಿ ಕೊಟ್ಟರೆ ಸಾಕು… ವಾಹ್ ಎಂಥ ಲಕ್ ಅಲ್ವಾ ನಂದು! ನನಗೇ first place ಗ್ಯಾರಂಟಿ.”

ನಾನೊಮ್ಮೆ ಆಕೆಯನ್ನೆ ದಿಟ್ಟಿಸಿ ನೋಡಿದೆ : ನಿಜಕ್ಕೂ ಸುರದ್ರೂಪಿ, ತೆಳ್ಳಗೆ ಕಬ್ಬಿನ ಜಲ್ಲೆಯಂತಿದ್ದರೂ ಮುಖದಲ್ಲಿ ತೇಜಸ್ಸಿತ್ತು. ಮಾಮೂಲಿ ಕಾಲೇಜು ಹುಡುಗಿಯರಂತೆ ಚೂಡಿದಾರ್ ಹಾಕದೆ ಸೀರೆ ಉಟ್ಟಿದ್ದಳು ಮತ್ತು ಮೂರು ದಿನವೂ ಸುಂದರವಾದ ಪ್ರಿಂಟ್ಸ್ನ ಕಾಟನ್ ಸೀರೆ ಉಟ್ಟುಕೊಂಡು ಬಂದಿದ್ದಳು ಎಂದು ನೆನಪು.

“sorry ನನ್ನಿಂದ ನಿಮಗೆ ಅಂಥ ಸಹಾಯ ಆಗಲ್ಲ. ನನಗೆ ಪತ್ರಿಕೋದ್ಯಮದ ಎಬಿಸಿಡಿ ತಿಳಿದಿಲ್ಲ. ನಾನು unconventional writer.. ಅಲ್ಲದೇ ನಾನೇ ಇನ್ನೂ ಸ್ಟೂಡೆಂಟು. ನನ್ನ ಹಿಂದೆ ಬಂದರೆ ನೀವು ಬರೋ ಮಾರ್ಕ್ಸೂ ಕಳೆದುಕೊಳ್ತೀರಿ…”

“ಪರವಾಗಿಲ್ಲ. ನಿಮ್ಮ ಬರವಣಿಗೆ ನನಗೆ ತುಂಬಾ ಇಷ್ಟ. ಈ ಕ್ಷಣದಿಂದ I am your student, unconventional ಶಿಷ್ಯೆ… ನಿಮ್ಮನ್ನ ಸರ್ ಅನ್ನಲ್ಲ”

“Fine,, ನಾನು ಅರಮನೆಯ ಬಳಿ ಹೋಗಿರ್ತೀನಿ. ಅಲ್ಲಿ ಸಿಕ್ಕೋಣ” ಎಂದು ನಾನು ಆಟೋ ಕೂಗಿದೆ.

“ಅರೇ ಇದೇನು ಬೆಂಗಳೂರಾ. ಮೂರು ನಿಮಿಷದಲ್ಲಿ ಅರಮನೆ ತಲುಪಬಹುದು, ನಡೆದೇ ಹೋಗೋಣ ಬನ್ನಿ” ಎಂದಳು.

ದಾರಿಯಲ್ಲಿ ಆಕೆ ಥೇಟ್ ವಿದ್ಯಾರ್ಥಿನಿಯಂತೆ “ದಿನಪತ್ರಿಕೆಗಳಿಗೆ ವರದಿ ಮಾಡುವುದಕ್ಕೂ ವಾರಪತ್ರಿಕೆಗೆ ವರದಿ ಮಾಡುವುದಕ್ಕೂ ಏನು ವ್ಯತ್ಯಾಸ…” ಮುಂತಾಗಿ ಕೇಳುತ್ತಾ ನಾನು ಹೇಳಿದ್ದನ್ನ ಗಂಭೀರವಾಗಿ ಆಲಿಸುತ್ತ ನಡೆದಳು. ನನ್ನ ಪಕ್ಕದಲ್ಲಿಯೇ ಮುಂದಿನ ಸಾಲಿನಲ್ಲಿಯೇ ಕುಳಿತು ಉದ್ಘಾಟನಾ ಕಾರ್ಯಕ್ರಮದ ಪ್ರತಿಯೊಬ್ಬರ ಭಾಷಣವನ್ನೂ ನೀಟಾಗಿ ಬರೆದುಕೊಂಡಳು. ನೀವು ನೋಟ್ಸ್ ಮಾಡಿಕೊಳ್ಳಲ್ವಾ ಎಂದು ಬರಿಗೈಯಲ್ಲಿ ಕುಳಿತಿದ್ದ ನನ್ನನ್ನ ಕೇಳಿದಳು. ನಂತರ ಪರೀಕ್ಷೆಯಲ್ಲಿ ಪಕ್ಕದ ವಿದ್ಯಾರ್ಥಿಗೆ ಸಹಾಯ ಮಾಡುವ ವಿದ್ಯಾರ್ಥಿನಿಯಂತೆ ಕಳಕಳಿಯಿಂದ ಅವಳ ನೋಟ್ ಬುಕ್ಕಿನಲ್ಲಿ ಮಧ್ಯದ ನಾಲ್ಕು ಹಾಳೆ ಹರಿದು ಒಂದು ಪೆನ್ನನ್ನೂ ಕೊಟ್ಟಳು.

ಎಂದೂ ನೋಟ್ಸ್ ಮಾಡಿಕೊಂಡು ಅಭ್ಯಾಸವಿರದ ನಾನು ಇದೊಳ್ಳೆ ರಗಳೆಯಾಯ್ತಲ್ಲ ಎಂದುಕೊಂಡು ಒಂದೆರಡು ಸಲ ಸುಮ್ಮನೆ ಬರೆಯುವವನಂತೆ ನಟಿಸಿದೆ. ಆಗಲೇ ಬೆಂಗಳೂರಿನಿಂದ ಬಂದಿದ್ದ, ನನಗೆ ಅಷ್ಟಾಗಿ ಪರಿಚಯವಿರದ ಪತ್ರಕರ್ತರು ನನ್ನತ್ತ ಪ್ರಶ್ನಾರ್ಥಕವಾಗಿ ನೋಡುತ್ತಿದ್ದುದನ್ನ ಗಮನಿಸಿ ಕೊಂಚ ಕಸಿವಿಸಿಯಾಯ್ತು. ಹೇಗೂ ಜನರ ಗದ್ದಲವಿದೆ, ಉದ್ಘಾಟನಾ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಈಕೆಯಿಂದ ತಪ್ಪಿಸಿಕೊಳ್ಳಬೇಕು ಎಂದು ಹೊರದಾರಿಗಳನ್ನ ಹುಡುಕಲಾರಂಭಿಸಿದೆ. (ಯಾಕೆ ಹಾಗೆ ಪೆದ್ದು ಪೆದ್ದಾಗಿ ಹಠಯೋಗಿಯಂತೆ ವರ್ತಿಸುತ್ತಿದ್ದೆ? ಈಗ ನಗು ಬರುತ್ತಿದೆ!)

ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ನಮ್ಮ ಪಕ್ಕದಲ್ಲಿದ್ದ ರಾಜ್ ರೆಡೆಗೆ ಸಭಿಕರು ನುಗ್ಗಲಾರಂಭಿಸಿದ್ದರಿಂದ ಅಲ್ಲೊಂದು ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಯ್ತು. ನಾನು ಮನದಲ್ಲಿಯೇ ಆ ಹುಡುಗಿಗೆ `ಸಾರಿ’ ಹೇಳಿ ಕ್ಷಣಾರ್ಧದಲ್ಲಿ ಅಲ್ಲಿಂದ ತಪ್ಪಿಸಿಕೊಂಡು, ಹೊರಬಂದು, ಒಂದು ಆಟೋ ಹಿಡಿದು ಕಲಾಭವನಕ್ಕೆ ಹೊರಟೆ. ಒಂದೆರಡು ನಿಮಿಷ ಕಾಡಿದ ಅಪರಾಧಿ  ಪ್ರಜ್ಞೆಯನ್ನ ದೂರ ತಳ್ಳಿ ಸಮ್ಮೇಳನದ ವರದಿಯನ್ನ ಹೇಗೆ different ಆಗಿ ಮಾಡುವುದು ಎಂಬ ಆಲೋಚನೆಯಲ್ಲಿ ಮುಳುಗಿದೆ.

ಅಲ್ಲಿ ಕಲಾಮಂದಿರದ ಮುಂದೆ ಕಮ್ಮಿ ಎಂದರೆ ಹತ್ತು ಸಾವಿರ ಜನ ಏಕಕಾಲದಲ್ಲಿ ಕಲಾಮಂದಿರ ಪ್ರವೇಶಿಸಲು ಯತ್ನಿಸುತ್ತಿದ್ದರು. ಇದರಿಂದ ರೋಸಿ ಹೋದ ಪೊಲೀಸರು ಮುಖ್ಯ ಧ್ವಾರವನ್ನೇ ಬಂದ್ ಮಾಡಿಬಿಟ್ಟರು. ನಾನೇನೂ ದಿನಪತ್ರಿಕೆಗೆ ವರದಿ ಮಾಡಬೇಕಿಲ್ಲವಲ್ಲ. ಇಲ್ಲಿಯೇ ಹೊರಗೆ ದೂರದೂರುಗಳಿಂದ ಬಂದ ಜನರನ್ನು ಮಾತಾಡಿಸೋಣ ಅಂದುಕೊಂಡು ಆವರಣದಿಂದ ಹೊರಬಂದು ತಳ್ಳುಗಾಡಿಯವನ ಬಳಿ ಟೀ ಕುಡಿಯುತ್ತಾ ನಿಂತೆ. ಅದೇ ಸಮಯಕ್ಕೆ ಸರಿಯಾಗಿ ನನ್ನ ಸ್ಟೂಡೆಂಟ್ ಎದುರಿಗೇ ಪ್ರತ್ಯಕ್ಷವಾದಳು. “ನಾನು ಅಲ್ಲೆಲ್ಲ ನಿಮ್ಮನ್ನು ಹುಡುಕಿದೆ. ಕಡೆಗೆ ನೀವು ಇಲ್ಲಿಗೆ ಬಂದಿರ್ತೀರಾ ಅಂದ್ಕೊಂಡು ಬಂದೆ…” “ಟೀ ಕುಡೀತೀರಾ” ಎಂದರೆ ಅದೊಂದು ಮಾದಕ ಪಾನೀಯವೇನೋ ಎಂಬಂತೆ” ಛಿ ಇಲ್ಲಪ್ಪಾ. ನಾನು ಕಾಫಿ, ಟೀ ಏನೂ ಕುಡಿಯಲ್ಲ” ಎಂದು “ಕಲಾಮಂದಿರದ ಹಿಂಭಾಗದಲ್ಲಿ ಒಂದು entrance ಇದೆ. ಅಲ್ಲಿಂದ ಸುಲಭವಾಗಿ ಹೋಗಬಹುದು ಬನ್ನಿ ನಾನು ಕರೆದುಕೊಂಡು ಹೋಗ್ತೀನಿ” ಎಂದಳು.

ಅಲ್ಲಿ ನೋಡಿದರೆ ಒಂದು ಪುಟ್ಟ side entranceದಲ್ಲಿ ಅಕ್ಷರಶಃ ಸಾವಿರಾರು ಜನ ಒಟ್ಟಿಗೇ ಒಳ ನುಗ್ಗಲು ಯತ್ನಿಸುತ್ತಿದ್ದರು. “ಬೇಡಾರಿ” ಎಂದೆ. “ಇರಲಿ ಟ್ರೈ ಮಾಡೋಣ ಬನ್ನಿ” ಎಂದು ಮುಂದೆ ಹೊರಟೇ ಬಿಟ್ಟಳು. ಈಕೆಯನ್ನು ಜೋಪಾನವಾಗಿ ಒಳಗೆ ಕರೆದುಕೊಂಡು ಹೋಗಬೇಕು ಎಂಬ ನೈತಿಕಪ್ರಜ್ಞೆ ಕಾಡಲಾರಂಭಿಸಿ ಜೊತೆಗೂಡಿದೆ. ಮಧ್ಯದಲ್ಲಿ ಉಸಿರು ಕಟ್ಟಿಸುವಂಥ ಅನುಭವ. ಆ ಜನ ಪ್ರವಾಹವೇ ನಮ್ಮನ್ನ ಒಳಗೆ ತೇಲಿಸಿಕೊಂಡು ಬಿಟ್ಟಿತು. ಪತ್ರಕರ್ತರಿಗೆ ಮೀಸಲಾದ ಖುರ್ಚಿಗಳನ್ನ ಯಾರೋ ಪೊಲೀಸರು ಕಾಯುತ್ತಿದ್ದರು. ಹೀಗಾಗಿ ಇನ್ನೂ ಹತ್ತಾರು ಖುರ್ಚಿಗಳು ಖಾಲಿ ಇದ್ದವು. ಕಾರ್ಯಕ್ರಮ ಶುರುವಾಗುವುದು ತಡವಾದ್ದರಿಂದ “ಆಕೆ ತನ್ನ ನೋಟ್ಸ್ ಕೊಟ್ಟು ಯಾವುದಾದರೂ ಪಾಯಿಂಟ್ ಮಿಸ್ ಆಗಿದೆಯಾ ನೋಡಿ” ಎಂದಳು. ನಾನು ಗುರುವಿನಂತೆಯೇ glance ಮಾಡಿ ` “”good,` ತುಂಬಾ ಚೆನ್ನಾಗಿ ಬರ್ದಿದೀರಿ” ಎಂದು ಆಕೆಗೆ ಕೊಟ್ಟೆ. ಆಕೆಯ ಮುಖದಲ್ಲಿ ನಿಜಕ್ಕೂ ಕೃತಾರ್ಥ ಭಾವವೊಂದು ಮೂಡಿತು.

 

ಕಲಾಮಂದಿರದ ಉದ್ಘಾಟನಾ ಕಾರ್ಯಕ್ರಮದ ನಂತರ ಕುವೆಂಪುರವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ. ಜಗತ್ತಿನ ಯಾವ ಕವಿಗೋಷ್ಠಿಯಲ್ಲೂ ಸೇರಿರದಷ್ಟು ಜನ ಅಲ್ಲಿ ಸೇರಿದ್ದರು. ರಂಗಮಂದಿರದ ಇಕ್ಕೆಲಗಳಲ್ಲಿ, ಲಾಂಜಿನಲ್ಲಿ… ಎಲ್ಲೆಡೆ ಜನ. ನನ್ನ `ಶಿಷ್ಯೆ’ ಎಲ್ಲ ಕವಿಗಳ ಹೆಸರುಗಳನ್ನ, ಕವಿತೆಯ ಮೊದಲ ಸಾಲನ್ನ, ಕವಿಯ ಬಗ್ಗೆ ಪೀಠಿಕೆಯಾಗಿ ಹೇಳುತ್ತಿದ್ದ ಮಾತುಗಳನ್ನ ದುಂಡಾದ ಅಕ್ಷರಗಳಲ್ಲಿ ಶ್ರದ್ಧೆಯಿಂದ ಬರೆದುಕೊಳ್ಳುತ್ತಿದ್ದಳು. ಬಹುಶಃ ಕುವೆಂಪುರವರ ಕಾರಣಕ್ಕೇನೋ ಅಲ್ಲಿ ಒಂದು ಬಗೆಯ charged atmosphere ಇತ್ತು. ಕವಿಗಳೂ ತಮ್ಮ `the best’ ಕವನಗಳನ್ನೇ ವಾಚನ ಮಾಡಿದರು. ಪ್ರತಿ ಕವನಕ್ಕೂ ರಾಜ್ ಹಾಡಿಗೆ ಸಿಕ್ಕುವಂಥ ಚಪ್ಪಾಳೆ.

ಕವಿಗೋಷ್ಠಿ ಮುಗಿಸಿ ಹೊರ ಬಂದರೆ ಹೊಸ ರಂಗಮಂದಿರ ನೋಡಲು ಕಾತುರರಾಗಿದ್ದ ಸಾವಿರಾರು ಜನ ಹೊರಗೆ ಕ್ಯೂ ನಿಂತಿದ್ದರು. ನಂತರ ರಂಗಮಂದಿರದಲ್ಲಿ ನಡೆಯಬೇಕಿದ್ದ ರಂಗರಂಜನಿ ಎಂಬ ಕಾರ್ಯಕ್ರಮವನ್ನ ಮುಂದೂಡಿದ್ದರೂ ಜನ ನಿಂತಿದ್ದರು. ನಾವು ಅರಮನೆಯ ಆವರಣಕ್ಕೆ ಹೊರಟೆವು. ಅಲ್ಲಿ ಕರ್ನಾಟಕ ವೈಜಯಂತ ಎಂಬ ಸಾಂಸ್ಕೃತಿಕ ಕಾರ್ಯಕ್ರಮ. ಮುಖ್ಯ ಅತಿಥಿಯಾಗಿ ಬಂದಿದ್ದ ರಾಜ್, ಕಾರಂತರ ಸರಳತೆಯನ್ನ ಬಹುವಾಗಿ ಮೆಚ್ಚಿಕೊಂಡು ಮಾತಾಡಿದ್ದು ನೆನಪು.

***

ಮರುದಿನ ಕಲಾಮಂದಿರದಲ್ಲಿ ರಾಜೀವ್ ಗಾಂಧಿಯವರ ಕಾರ್ಯಕ್ರಮ. ಬಿಗಿಯಾದ ಪೊಲೀಸ್ ಬಂದೋಬಸ್ತ್. ನನ್ನ ಶಿಷ್ಯೆ ಮೊದಲೇ ಹೋಗಿ ಒಂದು ಸೀಟ್ ಹಿಡಿದುಕೊಂಡು ಕುಳಿತಿದ್ದಳು, ಅಲ್ಲ ನಿಂತಿದ್ದಳು. ಅವಳ ಬಳಿ ಹೋಗುತ್ತಿದ್ದಂತೆಯೇ ಮಲ್ಲಿಗೆಯ ಕಂಪು ಧಿಗ್ಗೆಂದು ಬಡಿಯಿತು. ಒಂದು ರಾಶಿ ಮಲ್ಲಿಗೆ ಹೂ ಮುಡಿದು ಬಂದಿದ್ದಳು. ಏನ್ರೀ ಮೈಸೂರಲ್ಲಿ ಬೇರೆಯವರಿಗೂ ಮಲ್ಲಿಗೆ ಉಳಿಸಿದ್ದೀರಾ ಹೇಗೆ ಎಂದು ಜೋಕ್ ಮಾಡಿ ಅವಳ ಮಲ್ಲಿಗೆಯ ಮುಗುಳನ್ನು ನೋಡುತ್ತಾ ಕುಳಿತುಕೊಂಡೆ.

ಮೈಸೂರು ಪೇಟ ಧರಿಸಿ ವೇದಿಕೆಗೆ ಬಂದ ರಾಜೀವ್ ಥೇಟ್ ಯುವರಾಜನಂತೆ ಕಾಣುತ್ತಿದ್ದರು. ವೇದಿಕೆಯ ಮೇಲೆ ಹಲವಾರು ಮಂತ್ರಿ ಮಹೋದಯರು ಇದ್ದರೂ ಅವರನ್ನೆಲ್ಲ ಹಿಂದಕ್ಕೆ ತಳ್ಳಿ ಶಿವರಾಮ ಕಾರಂತರು ಹಾಗೂ ಪಂಡಿತ ಮಲ್ಲಿಕಾರ್ಜುನ ಮನ್ಸೂರರನ್ನ ಮಾತ್ರ ರಾಜೀವ್ ರಿಗೆ ಪರಿಚಯಿಸಿದ್ದು, ಆ ಕಾರಣಕ್ಕಾಗಿಯೇ ನನ್ನ ನೆನಪಿನಲ್ಲಿದೆ. ಅಂದು ಸೋಮವಾರ ಹಾಗೂ ಮರುದಿನ ಮಂಗಳವಾರ ಕೂಡ ವಿಚಾರ ಸಂಕಿರಣ, ಗೋಷ್ಠಿಗಳು ನಡೆಯುತ್ತಿದ್ದ ಎಲ್ಲ ಎಂಟು ಸ್ಥಳಗಳೂ ಕಿಕ್ಕಿರಿದು ತುಂಬಿದ್ದವು.

ಈ ಕಾರಣಕ್ಕೆ, ಇಂಥ ಮೇಳಗಳ ನಿರರ್ಥಕತೆಯ ಬಗ್ಗೆ ಎಷ್ಟೇ ಹೇಳಿದರೂ ಒಂದು ಭಾಷೆಯನ್ನಾಡುವ ಜನ ಭಾವನಾತ್ಮಕವಾಗಿ ಒಗ್ಗೂಡಲು ಇಂಥ ಮೇಳಗಳು ನೆರವಾಗುತ್ತವೆ ಎಂದು ನನ್ನ ವರದಿಯ ಕಡೆಯಲ್ಲಿ ಬರೆದಿದ್ದ ನೆನಪು. ಮಂಗಳವಾರ ಸಂಜೆಯ ಕಾರ್ಯಕ್ರಮ ಮುಗಿಸಿ ಹೊರಟಾಗ ನನ್ನ ಶಿಷ್ಯೆ ಕಣ್ಣಲ್ಲಿ ಹನಿದುಂಬಿಕೊಂಡು ವಿದಾಯ ಹೇಳಿ ಒಂದು ಉಡುಗೊರೆಯನ್ನೂ (ಬೆಲೆ ಬಾಳುವ ಹೀರೊ ಪೆನ್ನು) ನೀಡಿದಳು. ಏನನ್ನಾದರೂ ತರಲು ನನಗೆ ಹೊಳೆಯಲೇ ಇಲ್ಲವಲ್ಲ ಎಂದುಕೊಂಡು ಸಂಕೋಚದಿಂದ ಅದನ್ನು ನಾನು ಸ್ವೀಕರಿಸಿ ಆಕೆಗೆ wish you all the very best ಎಂದಷ್ಟೆ ಹೇಳಿದೆ.

ಬೆಂಗಳೂರಿಗೆ ಬಂದು ವರದಿ ಸಿದ್ಧಪಡಿಸುವ ಭರದಲ್ಲಿ ಆಕೆಯನ್ನ ಮರೆತೇಬಿಟ್ಟೆ. ಮೂರು ದಿನದ ನಂತರ ಗೆಳೆಯ ಸತ್ಯ ಹೇಳಿದ ; “ಏನಪ್ಪ ವಿಶ್ವ ಕನ್ನಡ ಮೇಳದ ವಿಡಿಯೋದಲ್ಲೆಲ್ಲ ನೀನೇ ಮಿಂಚಿಂಗ್ ಅಂತೆ. ಯಾರೋ ಇಂಗ್ಲಿಷ್ ಪತ್ರಕರ್ತರು ಫೋನ್ ಮಾಡಿದ್ದರು.” ಹೌದಾ ಭಾನುವಾರ ಮೇಷ್ಟ್ರು (ಲಂಕೇಶ್) ಫಂಕ್ಷನ್ಗೆ ಬಂದಿದ್ದರಲ್ಲ. ಅವರ ಹತ್ತಿರ ನೋಡಿರಬೇಕು ಎಂದು ಮಾತು ಹಾರಿಸಿದೆ. ಮತ್ತೆಂದೂ ಆಕೆಯನ್ನ ನೋಡಲಿಲ್ಲ, ಮಾತಾಡಿಸಲಿಲ್ಲ. ಅವಳ ಹೆಸರೂ ಕ್ರಮೇಣ ಮರೆತು ಹೋಯ್ತು. ಇಪ್ಪತ್ತೈದು ವರ್ಷಗಳ ನಂತರವಷ್ಟೆ ಆ ಮಲ್ಲಿಗೆಯ ಕಂಪು ನನ್ನನ್ನ ಬೆಚ್ಚಿ ಬೀಳಿಸಿದ್ದು. ಆದರೆ ನನ್ನ ಮೊದಲ ಹಾಗೂ ಕಡೆಯ ಶಿಷ್ಯೆ ಪತ್ರಿಕೋದ್ಯಮಕ್ಕೆ ಬಂದಂತೆ ಕಾಣಲಿಲ್ಲ!